Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 100

ಕೃತಜ್ಞತಾ ಸ್ತುತಿಗೀತೆ.

100 ಸಮಸ್ತ ಭೂನಿವಾಸಿಗಳೇ,
    ಯೆಹೋವನಿಗೆ ಗಾಯನ ಮಾಡಿರಿ!
ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
    ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
    ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
    ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
    ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
    ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನು ಒಳ್ಳೆಯವನು!
    ಆತನ ಪ್ರೀತಿಯು ಶಾಶ್ವತವಾದದ್ದು,
    ಆತನ ನಂಬಿಗಸ್ತಿಕೆಯು ನಿರಂತರವಾದದ್ದು.

ಆದಿಕಾಂಡ 48:15-22

15 ಬಳಿಕ ಇಸ್ರೇಲನು ಯೋಸೇಫನನ್ನು ಆಶೀರ್ವದಿಸಿ ಹೀಗೆಂದನು:

“ನನ್ನ ಪೂರ್ವಿಕರಾದ ಅಬ್ರಹಾಮನೂ ಇಸಾಕನೂ ನಮ್ಮ ದೇವರನ್ನು ಆರಾಧಿಸಿದರು.
    ಆ ದೇವರೇ ನನ್ನನ್ನು ನನ್ನ ಜೀವಮಾನವೆಲ್ಲಾ ನಡೆಸಿದನು.
16 ನನ್ನನ್ನು ಎಲ್ಲಾ ತೊಂದರೆಗಳಿಂದ ಕಾಪಾಡಿದ ದೂತನೇ ಆತನು.
    ಈ ಹುಡುಗರನ್ನು ಆಶೀರ್ವದಿಸಬೇಕೆಂದು ನಾನು ಆತನಲ್ಲಿ ಪ್ರಾರ್ಥಿಸುವೆನು.
ಇಂದಿನಿಂದ ಈ ಮಕ್ಕಳು ನನ್ನ ಹೆಸರನ್ನೇ ಹೊಂದಿಕೊಳ್ಳುವರು.
    ನನ್ನ ಪೂರ್ವಿಕರಾದ ಅಬ್ರಹಾಮ್ ಮತ್ತು ಇಸಾಕರ ಹೆಸರನ್ನು ಇವರು ಹೊಂದಿಕೊಳ್ಳುವರು.
ಇವರು ಭೂಮಿಯ ಮೇಲೆ ಬೆಳೆದು ದೊಡ್ಡ ಕುಟುಂಬಗಳಾಗುವಂತೆಯೂ
    ದೊಡ್ಡ ಜನಾಂಗಗಳಾಗುವಂತೆಯೂ ನಾನು ಪ್ರಾರ್ಥಿಸುವೆನು.”

17 ಇಸ್ರೇಲನು ತನ್ನ ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲಿಟ್ಟಿದ್ದರಿಂದ ಯೋಸೇಫನು ಅಸಮಾಧಾನದಿಂದ ನೋಡಿ ತಂದೆಯ ಕೈಯನ್ನು ಹಿಡಿದುಕೊಂಡನು; ಅಲ್ಲದೆ ತಂದೆಯ ಕೈಯನ್ನು ಎಫ್ರಾಯೀಮನ ತಲೆಯ ಮೇಲಿಂದ ತೆಗೆದುಕೊಂಡು ಮನಸ್ಸೆಯ ತಲೆಯ ಮೇಲೆ ಇಡಬೇಕೆಂದಿದ್ದನು. 18 ಯೋಸೇಫನು ತನ್ನ ತಂದೆಗೆ, “ನೀನು ನಿನ್ನ ಬಲಗೈಯನ್ನು ತಪ್ಪಾಗಿ ಎಫ್ರಾಯೀಮನ ಮೇಲೆ ಇಟ್ಟಿರುವೆ. ಮೊದಲು ಹುಟ್ಟಿದವನು ಮನಸ್ಸೆ” ಎಂದು ಹೇಳಿದನು.

19 ಅದಕ್ಕೆ ಅವನ ತಂದೆಯು, “ನನಗೆ ಗೊತ್ತು ಮಗನೇ, ನನಗೆ ಗೊತ್ತು. ಮನಸ್ಸೆ ಮೊದಲು ಹುಟ್ಟಿದವನು. ಅವನು ಮಹಾವ್ಯಕ್ತಿಯಾಗುವನು. ಅವನು ಅನೇಕ ಜನರಿಗೆ ತಂದೆಯಾಗುವನು. ಆದರೆ ತಮ್ಮನು ಅಣ್ಣನಿಗಿಂತ ಮಹಾವ್ಯಕ್ತಿಯಾಗುವನು. ಅವನ ಕುಟುಂಬವು ತುಂಬ ದೊಡ್ಡದಾಗುವುದು” ಎಂದು ಹೇಳಿದನು.

20 ಅಂದು ಇಸ್ರೇಲನು ಅವರನ್ನು ಆಶೀರ್ವದಿಸಿ,

“ಇಸ್ರೇಲರು ನಿಮ್ಮ ಹೆಸರುಗಳ ಮೂಲಕ
    ಬೇರೆಯವರನ್ನು ಆಶೀರ್ವದಿಸುವರು.
‘ದೇವರು ನಿನ್ನನ್ನು ಎಫ್ರಾಯೀಮನಂತೆಯೂ
    ಮನಸ್ಸೆಯಂತೆಯೂ ಮಾಡಲಿ’ ಎಂದು ಹೇಳುವರು” ಎಂದನು.

ಹೀಗೆ, ಇಸ್ರೇಲನು ಎಫ್ರಾಯೀಮನನ್ನು ಮನಸ್ಸೆಗಿಂತ ದೊಡ್ಡವನನ್ನಾಗಿ ಮಾಡಿದನು.

21 ಬಳಿಕ ಇಸ್ರೇಲನು ಯೋಸೇಫನಿಗೆ, “ನೋಡು, ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ದೇವರು ಇನ್ನೂ ನಿನ್ನ ಸಂಗಡವಿರುವನು. ಅವನು ನಿನ್ನನ್ನು ನಿನ್ನ ಪೂರ್ವಿಕರ ದೇಶಕ್ಕೆ ಹಿಂತಿರುಗಿಸುವನು. 22 ನಾನು ನಿನ್ನ ಸಹೋದರರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ಬೇರೊಂದನ್ನು ನಿನಗೆ ಕೊಟ್ಟಿದ್ದೇನೆ. ನಾನು ಅಮೋರಿಯರಿಂದ ಗೆದ್ದುಕೊಂಡಿರುವ ಬೆಟ್ಟವನ್ನು ನಿನಗೆ ಕೊಡುವೆನು. ನಾನು ಅವರೊಂದಿಗೆ ಖಡ್ಗಗಳಿಂದಲೂ ಬಿಲ್ಲುಗಳಿಂದಲೂ ಹೋರಾಡಿ ಆ ಬೆಟ್ಟವನ್ನು ವಶಪಡಿಸಿಕೊಂಡಿದ್ದೇನೆ” ಎಂದು ಹೇಳಿದನು.

ಪ್ರಕಟನೆ 14:1-11

ರಕ್ಷಣೆ ಹೊಂದಿದವರ ಉತ್ಸವ ಗೀತೆ

14 ನಂತರ ನಾನು ನೋಡಿದಾಗ, ನನ್ನ ಎದುರಿನಲ್ಲಿಯೇ ಕುರಿಮರಿಯಾದಾತನು ಇದ್ದನು. ಆತನು ಚೀಯೋನ್ ಪರ್ವತದ ಮೇಲೆ ನಿಂತಿದ್ದನು. ಆತನ ಜೊತೆಯಲ್ಲಿ 1,44,000 ಜನರಿದ್ದರು. ಅವರ ಹಣೆಗಳ ಮೇಲೆ ಆತನ ಹೆಸರನ್ನು ಮತ್ತು ಆತನ ತಂದೆಯ ಹೆಸರನ್ನು ಬರೆಯಲಾಗಿತ್ತು.

ನಾನು ಪರಲೋಕದಿಂದ ಒಂದು ಶಬ್ದವನ್ನು ಕೇಳಿಸಿಕೊಂಡೆನು. ಅದು ನೀರಿನ ಪ್ರವಾಹದಂತೆ ಭೋರ್ಗರೆಯುವ ಶಬ್ದದಂತೆ ಮತ್ತು ಗುಡುಗಿನ ಧ್ವನಿಯಂತೆ ಇದ್ದಿತು. ಜನರು ತಮ್ಮ ತಂತಿವಾದ್ಯಗಳನ್ನು ಬಾರಿಸುತ್ತಿರುವರೋ ಎಂಬಂತೆ ಆ ಶಬ್ದವು ನನಗೆ ಕೇಳಿಸಿತು. ಜನರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸನ್ನಿಧಿಯಲ್ಲಿ ಹೊಸ ಹಾಡನ್ನು ಹಾಡಿದರು. ಈ ಲೋಕದಿಂದ ಬಿಡುಗಡೆ ಹೊಂದಿದ್ದ 1,44,000 ಜನರು ಮಾತ್ರ ಈ ಹಾಡನ್ನು ಕಲಿಯಲು ಶಕ್ತರಾಗಿದ್ದರು. ಈ ಹಾಡನ್ನು ಬೇರೆ ಯಾರೂ ಕಲಿಯಲಾಗುತ್ತಿರಲಿಲ್ಲ.

ಇವರು ಸ್ತ್ರೀ ಸಹವಾಸದಿಂದ ಮಲಿನರಾಗದೆ ಕನ್ನಿಕೆಯರಂತೆ ಉಳಿದಿದ್ದರು. ಕುರಿಮರಿಯಾದಾತನು ಹೋದಕಡೆಯಲ್ಲೆಲ್ಲಾ ಅವರು ಆತನನ್ನು ಹಿಂಬಾಲಿಸುತ್ತಾರೆ. ಭೂಲೋಕದ ಜನರ ಮಧ್ಯದಿಂದ ಬಿಡುಗಡೆ ಹೊಂದಿದವರೇ 1,44,000 ಮಂದಿ. ದೇವರಿಗೂ ಕುರಿಮರಿಯಾದಾತನಿಗೂ ಅರ್ಪಿತರಾದವರಲ್ಲಿ ಇವರೇ ಮೊದಲಿಗರಾಗಿದ್ದರು. ಈ ಜನರು ಸುಳ್ಳುಗಾರರಾಗಿರಲಿಲ್ಲ. ಇವರು ನಿರ್ದೋಷಿಗಳಾಗಿದ್ದರು.

ಮೂರು ಮಂದಿ ದೇವದೂತರು

ನಂತರ ಇನ್ನೊಬ್ಬ ದೇವದೂತನು ವಾಯುಮಂಡಲದಲ್ಲಿ ಅತಿ ಎತ್ತರದಲ್ಲಿ ಹಾರುತ್ತಿರುವುದನ್ನು ನಾನು ನೋಡಿದೆನು. ಭೂಮಿಯ ಮೇಲೆ ವಾಸಿಸುವ ಸಕಲ ಜನಾಂಗ, ಕುಲ, ಪ್ರಜೆ, ಭಾಷೆಗಳ ಜನರಿಗೆಲ್ಲಾ ಬೋಧಿಸುವುದಕ್ಕೆ ನಿತ್ಯವಾದ ಸುವಾರ್ತೆಯು ಆ ದೇವದೂತನಲ್ಲಿತ್ತು. ಆ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ದೇವರಿಗೆ ಭಯಪಡಿರಿ. ಆತನನ್ನು ಸ್ತುತಿಸಿರಿ. ಜನರಿಗೆಲ್ಲ ದೇವರು ತೀರ್ಪು ನೀಡುವ ಸಮಯವು ಹತ್ತಿರ ಬಂದಿದೆ. ದೇವರನ್ನು ಆರಾಧಿಸಿರಿ. ಪರಲೋಕವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಸೃಷ್ಟಿಸಿದವನು ಆತನೇ” ಎಂದು ಹೇಳಿದನು.

ನಂತರ ಎರಡನೆಯ ದೇವದೂತನು ಮೊದಲನೆಯ ದೇವದೂತನನ್ನು ಹಿಂಬಾಲಿಸುತ್ತಾ, “ಅವಳು ನಾಶವಾದಳು! ಬಾಬಿಲೋನ್ ಎಂಬ ನಗರಿಯು ನಾಶವಾದಳು! ಆಕೆಯು ಸಕಲ ಜನಾಂಗಗಳಿಗೆ ತನ್ನ ಜಾರತ್ವವೆಂಬ ಮತ್ತು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.

ಮೂರನೆಯ ದೇವದೂತನು ಮೊದಲ ಇಬ್ಬರು ದೇವದೂತರನ್ನು ಹಿಂಬಾಲಿಸಿದನು. ಈ ಮೂರನೆಯ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ ಹೀಗೆ ಹೇಳಿದನು: “ಮೃಗವನ್ನೂ ಮೃಗದ ವಿಗ್ರಹವನ್ನೂ ಆರಾಧಿಸುವವನಿಗೆ ಮತ್ತು ಮೃಗದ ಗುರುತನ್ನು ಹಣೆಯ ಮೇಲಾಗಲಿ ಇಲ್ಲವೆ ತನ್ನ ಕೈಗಳ ಮೇಲಾಗಲಿ ಹಾಕಿಸಿಕೊಳ್ಳುವವನಿಗೆ ಕೇಡಾಗುವುದು. 10 ಅವನು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುತ್ತಾನೆ. ದೇವರ ಕೋಪವೆಂಬ ಬಟ್ಟಲಿನಲ್ಲಿ ಈ ದ್ರಾಕ್ಷಾರಸವನ್ನು ಅದರ ಪೂರ್ಣಶಕ್ತಿಯ ಸಮೇತವಾಗಿ ತಯಾರಿಸಲಾಗಿದೆ. ಅವನನ್ನು ಪರಿಶುದ್ಧ ದೇವದೂತರ ಮತ್ತು ಕುರಿಮರಿಯಾದಾತನ ಮುಂದೆ ಉರಿಯುವ ಗಂಧಕದಿಂದ ಯಾತನೆಪಡಿಸಲಾಗುವುದು. 11 ಅವರ ಯಾತನೆಯೆಂಬ ಹೊಗೆಯು ಸದಾ ಏಳುತ್ತಲೇ ಇರುವುದು. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವ ಮತ್ತು ಅದರ ಹೆಸರನ್ನು ಗುರುತು ಹಾಕಿಸಿಕೊಳ್ಳುವ ಜನರಿಗೆ ಹಗಲಲ್ಲೂ ರಾತ್ರಿಯಲ್ಲೂ ವಿಶ್ರಾಂತಿಯೆಂಬುದೇ ಇರುವುದಿಲ್ಲ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International