Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
83 ದೇವರೇ, ಸುಮ್ಮನಿರಬೇಡ!
ನಿನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಡ.
ದೇವರೇ, ದಯವಿಟ್ಟು ಮಾತನಾಡು.
2 ದೇವರೇ, ನಿನ್ನ ಶತ್ರುಗಳು ನಿನಗೆ ವಿರೋಧವಾಗಿ ಸಂಚು ಮಾಡುತ್ತಿದ್ದಾರೆ.
ಬಹುಬೇಗನೆ ಅವರು ಆಕ್ರಮಣ ಮಾಡಲಿದ್ದಾರೆ.
3 ನಿನ್ನ ಜನರಿಗೆ ವಿರೋಧವಾಗಿ ರಹಸ್ಯ ಯೋಜನೆಗಳನ್ನು ಮಾಡುತ್ತಿದ್ದಾರೆ.
ನಿನ್ನ ಪ್ರಿಯರ ವಿರೋಧವಾಗಿ ಅವರು ಸಂಚು ಮಾಡುತ್ತಿದ್ದಾರೆ.
4 ಅವರು ಹೀಗೆಂದುಕೊಳ್ಳುತ್ತಿದ್ದಾರೆ: “ಬನ್ನಿರಿ, ಅವರನ್ನು ಸಂಪೂರ್ಣವಾಗಿ ನಾಶಮಾಡೋಣ.
ಆಗ ‘ಇಸ್ರೇಲ್’ ಎಂಬ ಹೆಸರೇ ಅಳಿದುಹೋಗುವುದು.”
9 ನೀನು ಮಿದ್ಯಾನ್ಯರನ್ನೂ ಕೀಷೋನ್ ನದಿಯ ಸಮೀಪದಲ್ಲಿ
ಸೀಸೆರನನ್ನೂ ಯಾಬೀನನನ್ನೂ ಸೋಲಿಸಿದಂತೆ ಅವರನ್ನು ಸೋಲಿಸು.
10 ನೀನು ಅವರನ್ನು ಎಂದೋರಿನಲ್ಲಿ ಸೋಲಿಸಿದೆ.
ಅವರ ದೇಹಗಳು ನೆಲದ ಮೇಲೆ ಕೊಳೆತುಹೋದವು.
17 ಅವರನ್ನು ಭಯವೂ ನಾಚಿಕೆಯೂ ಕವಿದುಕೊಂಡೇ ಇರಲಿ.
ಅವರು ಅವಮಾನಗೊಂಡು ನಾಶವಾಗಲಿ.
18 ಆಗ ಅವರು ನೀನೊಬ್ಬನೇ ದೇವರೆಂದೂ
ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು.
ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ
ದೇವರೆಂದು ಅವರು ಅರಿತುಕೊಳ್ಳುವರು.
ಹಾಮಾನನು ಗಲ್ಲಿಗೇರಿಸಲ್ಪಟ್ಟನು
7 ಅರಸನೂ ಹಾಮಾನನೂ ರಾಣಿಯ ಅರಮನೆಗೆ ಔತಣಕ್ಕಾಗಿ ಹೋದರು. 2 ಈ ಔತಣ ಸಮಾರಂಭದ ಎರಡನೆಯ ದಿನದಂದು ಅವರಿಬ್ಬರೂ ದ್ರಾಕ್ಷಾರಸ ಸೇವನೆ ಮಾಡುತ್ತಿರುವಾಗ ತಿರಿಗಿ ರಾಜನು ತನ್ನ ರಾಣಿಯನ್ನು ಪ್ರಶ್ನಿಸಿದನು, “ಎಸ್ತೇರ್ ರಾಣಿಯೇ, ನಿನಗೆ ಬೇಕಾದದ್ದನ್ನು ಕೇಳಿಕೊ. ನಾನು ಕೊಡುವೆನು; ಅರ್ಧ ರಾಜ್ಯ ಬೇಕಾದರೂ ನಾನು ಕೊಡುತ್ತೇನೆ” ಎಂದನು.
3 ಆಗ ಎಸ್ತೇರ್ ರಾಣಿಯು, “ರಾಜನೇ, ನೀನು ನನ್ನನ್ನು ಮೆಚ್ಚಿ ಪ್ರೀತಿಸುವದಾದರೆ ದಯಮಾಡಿ ನಾನು ಬದುಕುವಂತೆ ಮಾಡು. ಅಲ್ಲದೇ ನನ್ನ ಜನರನ್ನು ಉಳಿಸು. ಇದೇ ನನ್ನ ಬಿನ್ನಹ. 4 ಯಾಕೆಂದರೆ ನಾನು, ನನ್ನ ಜನರೂ ಕೊಲ್ಲಲ್ಪಡಲು, ನಾಶವಾಗಲು, ಸಂಪೂರ್ಣವಾಗಿ ನಿರ್ಮೂಲವಾಗಲು ಮಾರಲ್ಪಟ್ಟಿರುತ್ತೇವೆ. ನಾವು ಬರೇ ಗುಲಾಮರಾಗಿ ಮಾರಲ್ಪಟ್ಟಿದರೆ ನಾನು ಸುಮ್ಮನಿರುತ್ತಿದ್ದೆ. ಯಾಕೆಂದರೆ ಅದು ರಾಜನನ್ನು ತೊಂದರೆಪಡಿಸುವಂಥ ದೊಡ್ಡ ವಿಷಯವಲ್ಲ” ಎಂದು ಉತ್ತರಿಸಿದಳು.
5 ಆಗ ರಾಜನು ಎಸ್ತೇರಳಿಗೆ, “ಹೀಗೆ ನಿನಗೆ ಯಾರು ಮಾಡಿದರು? ನಿನ್ನ ಜನರಿಗೆ ಇಂಥಾ ಕೆಲಸವನ್ನು ಮಾಡಲು ಯಾರಿಗೆ ಧೈರ್ಯವಾಯಿತು?” ಎಂದು ಕೇಳಿದನು.
6 ಎಸ್ತೇರಳು ಉತ್ತರಿಸುತ್ತಾ, “ನಮ್ಮನ್ನು ದ್ವೇಷಿಸುವ ಮನುಷ್ಯನು ಈ ಕೆಟ್ಟ ಹಾಮಾನನೇ” ಎಂದು ಹೇಳಿದಳು.
ಆಗ ಹಾಮಾನನು ಭಯದಿಂದ ನಡುಗಿದನು. 7 ಅರಸನು ಕೋಪೋದ್ರಿಕ್ತನಾಗಿ, ಪಾನಪಾತ್ರೆಯನ್ನು ಅಲ್ಲಿಯೇ ಬಿಟ್ಟು ಎದ್ದು ಹೂತೋಟಕ್ಕೆ ಹೋದನು. ಹಾಮಾನನು ಕೋಣೆಯಲ್ಲಿಯೇ ಉಳಿದು ತನ್ನ ಪ್ರಾಣವನ್ನು ಉಳಿಸಬೇಕೆಂದು ಎಸ್ತೇರ್ ರಾಣಿಯನ್ನು ಬೇಡುತ್ತಿದ್ದನು. ಯಾಕೆಂದರೆ ರಾಜನು ತನ್ನನ್ನು ಕೊಲ್ಲಲು ತೀರ್ಮಾನಿಸಿರುವುದು ಅವನಿಗೆ ಅರಿವಾಯಿತು. 8 ಅರಸನು ಹೂತೋಟದಿಂದ ಹಿಂದಿರುಗಿ ಕೋಣೆಯೊಳಗೆ ಬಂದಾಗ ಹಾಮಾನನು ಆಸನದ ಮೇಲೆ ಒರಗಿದ್ದ ಎಸ್ತೇರ್ ರಾಣಿಯ ಆಸನದ ಮೇಲೆ ಬೀಳುವದನ್ನು ಕಂಡನು. ಅರಸನು ಸಿಟ್ಟು ತುಂಬಿದವನಾಗಿ, “ನನ್ನ ಮುಂದೆಯೇ ನೀನು ರಾಣಿಯ ಮೇಲೆ ಕೈಮಾಡುತ್ತೀಯಾ?” ಎಂದು ಕೇಳಿದನು.
9 ಇದನ್ನು ಹೇಳಿದೊಡನೆಯೇ ಹತ್ತಿರದಲ್ಲಿದ್ದ ಸೇವಕರು ಬಂದು ಹಾಮಾನನ ಮುಖಕ್ಕೆ ಮುಸುಕುಹಾಕಿದರು. ಅವರಲ್ಲಿದ್ದ ಹರ್ಬೋನ ಎಂಬ ಕಂಚುಕಿಯು, “ಹಾಮಾನನು ತನ್ನ ಮನೆಯ ಬಳಿಯಲ್ಲಿ ಎಪ್ಪತ್ತೈದು ಅಡಿ ಎತ್ತರದ ಗಲ್ಲುಮರವನ್ನು ಮೊರ್ದೆಕೈಗೋಸ್ಕರ ಮಾಡಿಸಿದ್ದಾನೆ. ನಿನ್ನನ್ನು ಕೊಲ್ಲಲು ನಡೆಸಿದ್ದ ಸಂಚನ್ನು ನಿನಗೆ ತಿಳಿಸಿ ನಿನ್ನನ್ನು ಕಾಪಾಡಿದವನೇ ಮೊರ್ದೆಕೈ” ಎಂದು ಹೇಳಿದನು.
ಅದಕ್ಕೆ ರಾಜನು, “ಹಾಮಾನನನ್ನು ಅದೇ ಗಲ್ಲುಮರಕ್ಕೆ ತೂಗುಹಾಕಿರಿ” ಎಂದನು.
10 ಮೊರ್ದೆಕೈಗೋಸ್ಕರ ಸಿದ್ಧಮಾಡಿದ್ದ ಗಲ್ಲುಮರಕ್ಕೆ ಸೇವಕರು ಹಾಮಾನನನ್ನು ತೂಗುಹಾಕಿದರು. ಅನಂತರ ರಾಜನ ಸಿಟ್ಟು ಇಳಿಯಿತು.
ಒಳ್ಳೆಯ ಸೇವಕ ಮತ್ತು ದುಷ್ಟ ಸೇವಕ
(ಮಾರ್ಕ 13:33-37; ಲೂಕ 12:41-48)
45 “ವಿವೇಕಿಯೂ ನಂಬಿಗಸ್ತನೂ ಆದ ಸೇವಕನು ಯಾರು? ಇತರ ಸೇವಕರಿಗೆ ಆಹಾರವನ್ನು ತಕ್ಕ ಸಮಯದಲ್ಲಿ ಕೊಡುವುದಕ್ಕಾಗಿ ಯಜಮಾನನು ಯಾವ ಸೇವಕನ ಮೇಲೆ ಭರವಸೆಯಿಡುತ್ತಾನೋ ಅವನೇ. 46 ತನಗೆ ಕೊಟ್ಟ ಕೆಲಸವನ್ನು ಮಾಡುತ್ತಿರುವಾಗ ಯಜಮಾನನು ಬಂದರೆ ಆ ಸೇವಕನಿಗೆ ಬಹಳ ಸಂತೋಷವಾಗುತ್ತದೆ. 47 ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ಆ ಯಜಮಾನನು ತನ್ನ ಆಸ್ತಿಗೆಲ್ಲಾ ಆ ಸೇವಕನನ್ನು ಮೇಲ್ವಿಚಾರಕನನ್ನಾಗಿ ನೇಮಿಸುವನು.
48 “ಆದರೆ ಸೇವಕನು ದುಷ್ಟನಾಗಿದ್ದರೆ ಮತ್ತು ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದು ನೆನಸಿಕೊಂಡಿದ್ದರೆ ಅವನಿಗೆ ಏನು ಸಂಭವಿಸುತ್ತದೆ? 49 ಆ ಸೇವಕನು ಇತರ ಸೇವಕರನ್ನು ಹೊಡೆಯುತ್ತಾ ತನ್ನಂಥ ಜನರೊಂದಿಗೆ ಸೇರಿಕೊಂಡು ತಿನ್ನುತ್ತಾ ಕುಡಿಯುತ್ತಾ ಇರುವನು. 50 ಹೀಗೆ ಅವನಿನ್ನೂ ಸಿದ್ಧನಾಗಿಲ್ಲದಿರುವಾಗ ಯಜಮಾನನು ಅನಿರೀಕ್ಷಿತವಾಗಿ ಬಂದು 51 ಅವನನ್ನು ಶಿಕ್ಷಿಸಿ ಕಪಟಿಗಳಿರುವ ಸ್ಥಳಕ್ಕೆ ನೂಕಿಸುವನು. ಆ ಸ್ಥಳದಲ್ಲಿ ಜನರು ಬಾಧೆಯಿಂದ ಗೋಳಾಡುತ್ತಾ ತಮ್ಮ ಹಲ್ಲುಗಳನ್ನು ಕಡಿಯುತ್ತಾ ಇರುವರು.
Kannada Holy Bible: Easy-to-Read Version. All rights reserved. © 1997 Bible League International