Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 83:1-4

ಸ್ತುತಿಗೀತೆ. ರಚನೆಗಾರ: ಆಸಾಫ.

83 ದೇವರೇ, ಸುಮ್ಮನಿರಬೇಡ!
    ನಿನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಡ.
    ದೇವರೇ, ದಯವಿಟ್ಟು ಮಾತನಾಡು.
ದೇವರೇ, ನಿನ್ನ ಶತ್ರುಗಳು ನಿನಗೆ ವಿರೋಧವಾಗಿ ಸಂಚು ಮಾಡುತ್ತಿದ್ದಾರೆ.
    ಬಹುಬೇಗನೆ ಅವರು ಆಕ್ರಮಣ ಮಾಡಲಿದ್ದಾರೆ.
ನಿನ್ನ ಜನರಿಗೆ ವಿರೋಧವಾಗಿ ರಹಸ್ಯ ಯೋಜನೆಗಳನ್ನು ಮಾಡುತ್ತಿದ್ದಾರೆ.
    ನಿನ್ನ ಪ್ರಿಯರ ವಿರೋಧವಾಗಿ ಅವರು ಸಂಚು ಮಾಡುತ್ತಿದ್ದಾರೆ.
ಅವರು ಹೀಗೆಂದುಕೊಳ್ಳುತ್ತಿದ್ದಾರೆ: “ಬನ್ನಿರಿ, ಅವರನ್ನು ಸಂಪೂರ್ಣವಾಗಿ ನಾಶಮಾಡೋಣ.
    ಆಗ ‘ಇಸ್ರೇಲ್’ ಎಂಬ ಹೆಸರೇ ಅಳಿದುಹೋಗುವುದು.”

ಕೀರ್ತನೆಗಳು 83:9-10

ನೀನು ಮಿದ್ಯಾನ್ಯರನ್ನೂ ಕೀಷೋನ್ ನದಿಯ ಸಮೀಪದಲ್ಲಿ
    ಸೀಸೆರನನ್ನೂ ಯಾಬೀನನನ್ನೂ ಸೋಲಿಸಿದಂತೆ ಅವರನ್ನು ಸೋಲಿಸು.
10 ನೀನು ಅವರನ್ನು ಎಂದೋರಿನಲ್ಲಿ ಸೋಲಿಸಿದೆ.
    ಅವರ ದೇಹಗಳು ನೆಲದ ಮೇಲೆ ಕೊಳೆತುಹೋದವು.

ಕೀರ್ತನೆಗಳು 83:17-18

17 ಅವರನ್ನು ಭಯವೂ ನಾಚಿಕೆಯೂ ಕವಿದುಕೊಂಡೇ ಇರಲಿ.
    ಅವರು ಅವಮಾನಗೊಂಡು ನಾಶವಾಗಲಿ.
18 ಆಗ ಅವರು ನೀನೊಬ್ಬನೇ ದೇವರೆಂದೂ
    ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು.
ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ
    ದೇವರೆಂದು ಅವರು ಅರಿತುಕೊಳ್ಳುವರು.

ನ್ಯಾಯಸ್ಥಾಪಕರು 4:8-24

ಆಗ ಬಾರಾಕನು ದೆಬೋರಳಿಗೆ, “ನೀನು ನನ್ನೊಂದಿಗೆ ಬಂದರೆ ನಾನು ಹೋಗುವೆನು; ನೀನು ನನ್ನೊಂದಿಗೆ ಬರದಿದ್ದರೆ ನಾನು ಹೋಗುವುದಿಲ್ಲ” ಎಂದನು.

ಅದಕ್ಕೆ ದೆಬೋರಳು, “ನಿಸ್ಸಂದೇಹವಾಗಿ ನಾನು ನಿನ್ನೊಂದಿಗೆ ಬರುತ್ತೇನೆ. ಆದರೆ ನಿನ್ನ ಈ ಮನೋಭಾವದಿಂದಾಗಿ ಸೀಸೆರನನ್ನು ಸೋಲಿಸಿದ ಗೌರವ ನಿನಗೆ ಸಲ್ಲುವುದಿಲ್ಲ. ಒಬ್ಬ ಹೆಂಗಸು ಸೀಸೆರನನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ” ಎಂದು ಉತ್ತರಿಸಿದಳು.

ದೆಬೋರಳು ಬಾರಾಕನ ಸಂಗಡ ಕೆದೆಷ್ ನಗರಕ್ಕೆ ಹೋದಳು. 10 ಕೆದೆಷ್ ನಗರದಲ್ಲಿ ಬಾರಾಕನು ಜೆಬುಲೂನ್ ಮತ್ತು ನಫ್ತಾಲಿ ಕುಲದವರನ್ನು ಒಟ್ಟಿಗೆ ಸೇರಿಸಿ ಆ ಕುಲಗಳಿಂದ ಹತ್ತು ಸಾವಿರ ಜನರನ್ನು ತನ್ನೊಂದಿಗೆ ಬರುವಂತೆ ಮಾಡಿದನು. ದೆಬೋರಳು ಸಹ ಬಾರಾಕನ ಸಂಗಡ ಹೋದಳು.

11 ಹೆಬೆರನೆಂಬ ಒಬ್ಬ ಮನುಷ್ಯನಿದ್ದನು. ಅವನು ಕೇನ್ಯರ ಕುಲದವನಾಗಿದ್ದನು. ಅವನು ಉಳಿದ ಕೇನ್ಯರನ್ನು ಬಿಟ್ಟು ಚಾನನ್ನೀಮ್ ಎಂಬ ಊರಲ್ಲಿ ಓಕ್ ವೃಕ್ಷದ ಬಳಿ ಮನೆ ಮಾಡಿಕೊಂಡಿದ್ದನು. (ಕೇನ್ಯರು ಹೋಬಾಬನ ಸಂತತಿಯವರಾಗಿದ್ದರು. ಹೋಬಾಬನು ಮೋಶೆಯ ಮಾವನಾಗಿದ್ದನು.) ಚಾನನ್ನೀಮ್ ಕೆದೆಷ್ ನಗರದ ಸಮೀಪದಲ್ಲಿತ್ತು.

12 ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟಕ್ಕೆ ಬಂದಿದ್ದಾನೆಂಬ ಸಮಾಚಾರ ಸೀಸೆರನಿಗೆ ತಿಳಿಯಿತು. 13 ಸೀಸೆರನು ತನ್ನ ಒಂಭೈನೂರು ಕಬ್ಬಿಣದ ರಥಗಳನ್ನು ಒಟ್ಟುಗೂಡಿಸಿದನು. ಸೀಸೆರನು ತನ್ನ ಎಲ್ಲಾ ಜನರನ್ನು ತನ್ನ ಜೊತೆ ಸೇರಿಸಿಕೊಂಡನು. ಅವರು ಹರೋಷೆತ್ ಹೆಗ್ಗೋಯಿಮ್‌ನಿಂದ ಕೀಷೋನ್ ನದಿಗೆ ನಡೆದರು.

14 ಆಗ ದೆಬೋರಳು ಬಾರಾಕನಿಗೆ, “ಈ ದಿನ ಯೆಹೋವನು ಸೀಸೆರನನ್ನು ಸೋಲಿಸಲು ನಿನಗೆ ಸಹಾಯ ಮಾಡುತ್ತಾನೆ. ಯೆಹೋವನು ನಿನಗಾಗಿ ದಾರಿಯನ್ನು ಸುಗಮಗೊಳಿಸಿದ್ದಾನೆಂಬುದು ನಿನಗೆ ಖಚಿತವಾಗಿ ಗೊತ್ತಿದೆ” ಎಂದು ಹೇಳಿದಳು. ಆದ್ದರಿಂದ ಬಾರಾಕನು ಹತ್ತು ಸಾವಿರ ಜನರೊಂದಿಗೆ ತಾಬೋರ್ ಬೆಟ್ಟದಿಂದ ಇಳಿದನು. 15 ಬಾರಾಕ ಮತ್ತು ಅವನ ಜನರು ಸೀಸೆರನ ಮೇಲೆ ಧಾಳಿ ಮಾಡಿದರು. ಯೆಹೋವನು ಸೀಸೆರನಲ್ಲಿ ಮತ್ತು ಅವನ ಸೈನ್ಯದಲ್ಲಿ ಮತ್ತು ಅವನ ರಥಗಳಲ್ಲಿ ಗಲಿಬಿಲಿ ಉಂಟುಮಾಡಿದನು. ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ. ಬಾರಾಕ ಮತ್ತು ಅವನ ಸೈನಿಕರು ಸೀಸೆರನ ಸೈನ್ಯವನ್ನು ಸೋಲಿಸಿದರು. ಆದರೆ ಸೀಸೆರನು ತನ್ನ ರಥವನ್ನು ಬಿಟ್ಟು ಓಡಿಹೋದನು. 16 ಬಾರಾಕ ಮತ್ತು ಅವನ ಜನರು ಸೀಸೆರನ ಸೈನ್ಯವನ್ನು ಮತ್ತು ರಥಗಳನ್ನು ಹರೋಷೆತ್ ಹಗ್ಗೋಯಿಮ್‌ನವರೆಗೆ ಬೆನ್ನಟ್ಟಿದರು. ಬಾರಾಕ ಮತ್ತು ಅವನ ಜನರು ಖಡ್ಗದಿಂದ ಸೀಸೆರನ ಜನರನ್ನು ಕೊಂದುಹಾಕಿದರು. ಸೀಸೆರನ ಜನರಲ್ಲಿ ಒಬ್ಬನನ್ನೂ ಜೀವಂತವಾಗಿ ಬಿಡಲಿಲ್ಲ.

17 ಆದರೆ ಸೀಸೆರನು ಓಡಿಹೋದನು. ಅವನು ಯಾಯೇಲ ಎಂಬ ಒಬ್ಬ ಮಹಿಳೆ ವಾಸವಾಗಿದ್ದ ಗುಡಾರಕ್ಕೆ ಬಂದನು. ಯಾಯೇಲಳು ಹೆಬೆರನ ಹೆಂಡತಿ. ಹೆಬೆರನು ಕೇನ್ಯನಾಗಿದ್ದನು. ಹಾಚೋರಿನ ಅರಸನಾದ ಯಾಬೀನ ಮತ್ತು ಕೇನ್ಯನಾದ ಹೆಬೆರನ ಕುಟುಂಬಗಳ ಮಧ್ಯೆ ಒಳ್ಳೆಯ ಸಮಾಧಾನವಿದ್ದಿತು. ಅದಕ್ಕಾಗಿ ಸೀಸೆರನು ಯಾಯೇಲಳ ಗುಡಾರಕ್ಕೆ ಓಡಿಹೋಗಿದ್ದನು. 18 ಸೀಸೆರನು ಬರುವುದನ್ನು ಯಾಯೇಲಳು ಕಂಡಳು. ಆದ್ದರಿಂದ ಅವನನ್ನು ಬರಮಾಡಿಕೊಳ್ಳಲು ಹೊರಗೆ ಬಂದಳು. ಯಾಯೇಲಳು ಸೀಸೆರನಿಗೆ, “ಸ್ವಾಮೀ, ನನ್ನ ಗುಡಾರದೊಳಗೆ ಬನ್ನಿ, ಭಯಪಡಬೇಡಿ” ಎಂದು ಕರೆದಳು. ಆದ್ದರಿಂದ ಸೀಸೆರನು ಗುಡಾರದೊಳಗೆ ಹೋದನು. ಅವಳು ಸೀಸೆರನ ಮೇಲೆ ಕಂಬಳಿಯನ್ನು ಹೊದಿಸಿದಳು.

19 ಸೀಸೆರನು ಯಾಯೇಲಳಿಗೆ, “ನನಗೆ ಬಾಯಾರಿಕೆಯಾಗಿದೆ. ದಯವಿಟ್ಟು ಕುಡಿಯಲು ಸ್ವಲ್ಪ ನೀರನ್ನು ಕೊಡು” ಎಂದು ಕೇಳಿದನು. ಯಾಯೇಲಳ ಬಳಿ ಪ್ರಾಣಿಗಳ ಚರ್ಮದಿಂದ ಮಾಡಿದ ಒಂದು ಚೀಲವಿತ್ತು. ಆಕೆಯು ಅದರಲ್ಲಿ ಹಾಲಿಟ್ಟಿದ್ದಳು. ಯಾಯೇಲಳು ಸೀಸೆರನಿಗೆ ಒಂದು ಗುಟುಕು ಹಾಲನ್ನೇ ಕೊಟ್ಟಳು. ನಂತರ ಅವಳು ಸೀಸೆರನನ್ನು ಮುಚ್ಚಿಬಿಟ್ಟಳು.

20 ಆಗ ಸೀಸೆರನು ಯಾಯೇಲಳಿಗೆ, “ಹೋಗಿ ಗುಡಾರದ ಬಾಗಿಲಿನ ಹತ್ತಿರ ನಿಂತುಕೊಂಡಿರು. ಯಾರಾದರೂ ಬಂದು ‘ಗುಡಾರದಲ್ಲಿ ಯಾರಾದರೂ ಇದ್ದಾರೆಯೇ?’ ಎಂದು ಕೇಳಿದರೆ, ‘ಇಲ್ಲ’ ಎಂದು ಹೇಳು” ಎಂದನು.

21 ಯಾಯೇಲಳು ಗುಡಾರದ ಗೂಟವನ್ನು ಮತ್ತು ಕೊಡತಿಯನ್ನು ತೆಗೆದುಕೊಂಡು ಶಬ್ದಮಾಡದೆ ಸೀಸೆರನ ಹತ್ತಿರ ಹೋದಳು. ಸೀಸೆರನು ಬಹಳ ದಣಿದಿದ್ದ ಕಾರಣ ಗಾಢನಿದ್ರೆ ಮಾಡುತ್ತಿದ್ದನು. ಯಾಯೇಲಳು ಗುಡಾರದ ಗೂಟವನ್ನು ಸೀಸೆರನ ತಲೆಯ ಒಂದು ಪಾರ್ಶ್ವದಲ್ಲಿ ಇಟ್ಟು ಕೊಡತಿಯಿಂದ ಬಲವಾಗಿ ಹೊಡೆದಳು. ಆ ಗುಡಾರದ ಗೂಟವು ಸೀಸೆರನ ತಲೆಯ ಮತ್ತೊಂದು ಪಾರ್ಶ್ವಕ್ಕೆ ತೂರಿಬಂದು ಭೂಮಿಯಲ್ಲಿ ಸೇರಿತು. ಸೀಸೆರನು ಸತ್ತನು.

22 ಅದೇ ಕ್ಷಣದಲ್ಲಿ ಬಾರಾಕನು ಯಾಯೇಲಳ ಗುಡಾರದ ಹತ್ತಿರಕ್ಕೆ ಬಂದನು. ಅವನನ್ನು ಬರಮಾಡಿಕೊಳ್ಳುವುದಕ್ಕಾಗಿ ಯಾಯೇಲಳು ಹೊರಗೆ ಬಂದು, “ಇಲ್ಲಿ ಒಳಗೆ ಬನ್ನಿ. ನೀನು ಹುಡುಕುತ್ತಿರುವ ಮನುಷ್ಯನನ್ನು ತೋರಿಸುತ್ತೇನೆ” ಎಂದಳು. ಬಾರಾಕನು ಯಾಯೇಲಳ ಜೊತೆ ಗುಡಾರವನ್ನು ಪ್ರವೇಶಿಸಿದನು. ಅಲ್ಲಿ ಬಾರಾಕನು ಕಣತಲೆಯಲ್ಲಿ ಗೂಟವನ್ನು ಜಡಿಸಿಕೊಂಡು ನೆಲದ ಮೇಲೆ ಸತ್ತು ಬಿದ್ದಿದ್ದ ಸೀಸೆರನನ್ನು ಕಂಡನು.

23 ಆ ದಿನ ದೇವರು ಇಸ್ರೇಲರಿಗಾಗಿ ಕಾನಾನ್ಯ ರಾಜನಾದ ಯಾಬೀನನನ್ನು ಸೋಲಿಸಿದನು. 24 ಆತನು ಇಸ್ರೇಲರನ್ನು ಬಲಪಡಿಸಿದ್ದರಿಂದ ಅವರು ಕಾನಾನ್ಯ ಅರಸನಾದ ಯಾಬೀನನನ್ನು ಸಂಪೂರ್ಣವಾಗಿ ಸೋಲಿಸಿ ಅವನನ್ನು ನಿರ್ನಾಮ ಮಾಡಿದರು.

ರೋಮ್ನಗರದವರಿಗೆ 2:1-11

ಯೆಹೂದ್ಯರು ಸಹ ಪಾಪಿಗಳು

“ಇತರ ಜನರಿಗೆ ತೀರ್ಪು ಮಾಡಬಲ್ಲೆವು” ಎಂದು ನಿಮ್ಮ ವಿಷಯದಲ್ಲಿ ಯೋಚಿಸಿಕೊಳ್ಳಬೇಡಿ. ಏಕೆಂದರೆ ನೀವು ಸಹ ಪಾಪಮಾಡಿ ಅಪರಾಧಿಗಳಾಗಿದ್ದೀರಿ. ನೀವೂ ಆ ಜನರಿಗೆ ತೀರ್ಪು ಮಾಡುತ್ತೀರಿ. ಆದರೆ ಅದೇ ಕಾರ್ಯಗಳನ್ನು ನೀವೂ ಮಾಡುತ್ತೀರಿ. ಆದ್ದರಿಂದ ನೀವು ಅವರಿಗೆ ತೀರ್ಪು ಮಾಡುವಾಗ, ನಿಜವಾಗಿಯೂ ನಿಮಗೇ ತೀರ್ಪು ಮಾಡಿಕೊಳ್ಳುವವರಾಗಿದ್ದೀರಿ. ಅಪರಾಧಗಳನ್ನು ಮಾಡುವ ಜನರಿಗೆ ದೇವರು ತೀರ್ಪು ಮಾಡುತ್ತಾನೆ. ಆತನ ತೀರ್ಪು ನ್ಯಾಯವಾದುದೆಂದು ನಮಗೆ ಗೊತ್ತಿದೆ. ಆ ಅಪರಾಧಗಳನ್ನು ಮಾಡುವ ಜನರಿಗೆ ನೀವು ಸಹ ತೀರ್ಪು ಮಾಡುತ್ತೀರಿ. ಆದರೆ ನೀವೇ ಆ ಅಪರಾಧಗಳನ್ನು ಮಾಡುತ್ತೀರಿ. ಹೀಗಿರಲು ದೇವರ ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿದೆ. ದೇವರು ನಿಮ್ಮ ವಿಷಯದಲ್ಲಿ ಬಹು ಕನಿಕರ ಉಳ್ಳವನಾಗಿದ್ದಾನೆ; ತಾಳ್ಮೆ ಉಳ್ಳವನಾಗಿದ್ದಾನೆ. ನೀವು ಮಾರ್ಪಾಟಾಗಬೇಕೆಂದು ದೇವರು ನಿಮಗಾಗಿ ಕಾದುಕೊಂಡಿದ್ದಾನೆ. ಆದರೆ ನೀವು ಆತನ ಕರುಣೆಯ ಬಗ್ಗೆ ಆಲೋಚಿಸುವುದೇ ಇಲ್ಲ. ನೀವು ನಿಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆಯೆಂದು ದೇವರ ಕನಿಕರವನ್ನು ಅರ್ಥಮಾಡಿಕೊಳ್ಳದೆ ಇದ್ದೀರಿ.

ನೀವು ಕಠಿಣರಾಗಿದ್ದೀರಿ ಮತ್ತು ಮೊಂಡರಾಗಿದ್ದೀರಿ. ಮಾರ್ಪಾಟಾಗಲು ನಿಮಗೆ ಇಷ್ಟವಿಲ್ಲ. ಆದ್ದರಿಂದ ನಿಮಗೆ ಬರಲಿರುವ ದಂಡನೆಯನ್ನು ನೀವು ಹೆಚ್ಚುಹೆಚ್ಚು ಮಾಡಿಕೊಳ್ಳುತ್ತಿದ್ದೀರಿ. ದೇವರು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ನಿಮಗೆ ಆ ದಂಡನೆಯಾಗುವುದು. ಆ ದಿನದಲ್ಲಿ ದೇವರ ನ್ಯಾಯವಾದ ತೀರ್ಪುಗಳನ್ನು ಜನರು ನೋಡುವರು.[a] ದೇವರು ಪ್ರತಿಯೊಬ್ಬರಿಗೂ ಅವರವರು ಮಾಡಿದ ಕಾರ್ಯಗಳಿಗಾಗಿ ಬಹುಮಾನವನ್ನಾಗಲಿ ದಂಡನೆಯನ್ನಾಗಲಿ ಕೊಡುವನು. ಕೆಲವು ಜನರು ಮಹಿಮೆಗಾಗಿ, ಘನತೆಗಾಗಿ ಮತ್ತು ಅಮರತ್ವಕ್ಕಾಗಿ ಯಾವಾಗಲೂ ಸತ್ಕಾರ್ಯಗಳನ್ನು ಮಾಡುತ್ತಾ ಜೀವಿಸುವರು. ದೇವರು ಆ ಜನರಿಗೆ ನಿತ್ಯಜೀವವನ್ನು ಕೊಡುವನು. ಆದರೆ ಉಳಿದ ಜನರು ಸ್ವಾರ್ಥಿಗಳಾಗಿದ್ದು, ಸತ್ಯವನ್ನು ಅನುಸರಿಸದೆ ದುಷ್ಟತ್ವವನ್ನು ಅನುಸರಿಸುವವರಾಗಿದ್ದಾರೆ. ಅವರ ಮೇಲೆ ದೇವರ ದಂಡನೆಯೂ ಕೋಪವೂ ಬರುತ್ತದೆ. ಕೆಟ್ಟದ್ದನ್ನು ನಡೆಸುವ ಪ್ರತಿಯೊಬ್ಬ ವ್ಯಕ್ತಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಕಷ್ಟಸಂಕಟಗಳನ್ನು ಕೊಡುತ್ತಾನೆ. 10 ಆದರೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಮಹಿಮೆಯನ್ನು, ಘನತೆಯನ್ನು ಮತ್ತು ಶಾಂತಿಯನ್ನು ಕೊಡುವನು. 11 ದೇವರು ಪಕ್ಷಪಾತ ಮಾಡದೆ ಎಲ್ಲರಿಗೂ ಒಂದೇ ರೀತಿಯಲ್ಲಿ ತೀರ್ಪು ಕೊಡುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International