Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 123

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

ನ್ಯಾಯಸ್ಥಾಪಕರು 2:16-23

16 ಆಗ ಯೆಹೋವನು ನ್ಯಾಯಾಧೀಶರೆಂಬ ಕೆಲವು ನಾಯಕರನ್ನು ಆರಿಸಿದನು. ಈ ನಾಯಕರು ಇಸ್ರೇಲರನ್ನು ಅವರ ವೈರಿಗಳಿಂದ ಕಾಪಾಡಿದರು. 17 ಆದರೆ ಇಸ್ರೇಲರು ನ್ಯಾಯಾಧೀಶರ ಮಾತನ್ನು ಕೇಳಲಿಲ್ಲ. ಅವರು ಯೆಹೋವನಿಗೆ ನಂಬಿಗಸ್ತರಾಗಿರದೆ ಬೇರೆಬೇರೆ ದೇವರುಗಳನ್ನು ಅನುಸರಿಸಿದರು. ಹಿಂದೆ ಇಸ್ರೇಲರ ಪೂರ್ವಿಕರು ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಿದ್ದರು. ಆದರೆ ಈಗ ಇಸ್ರೇಲರು ಬದಲಾಗಿ ಯೆಹೋವನ ಆಜ್ಞಾಪಾಲನೆಯನ್ನು ನಿಲ್ಲಿಸಿಬಿಟ್ಟರು.

18 ಅನೇಕ ಸಲ ಶತ್ರುಗಳು ಇಸ್ರೇಲರಿಗೆ ತುಂಬ ಕಷ್ಟಗಳನ್ನು ಉಂಟು ಮಾಡುತ್ತಿದ್ದರು. ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಿದ್ದರು; ಪ್ರತಿಸಲವೂ ಯೆಹೋವನು ಅವರ ಗೋಳಾಟವನ್ನು ಕೇಳಿ ಮರುಕಪಡುತ್ತಿದ್ದನು. ಪ್ರತಿಸಲವೂ ಅವರನ್ನು ಶತ್ರುಗಳಿಂದ ರಕ್ಷಿಸಲು ಒಬ್ಬ ನ್ಯಾಯಾಧೀಶನನ್ನು ಕಳುಹಿಸಿ ಕೊಡುತ್ತಿದ್ದನು. ಯೆಹೋವನು ಆ ನ್ಯಾಯಾಧೀಶರ ಜೊತೆಯಲ್ಲಿಯೇ ಇರುತ್ತಿದ್ದನು. ಹೀಗಾಗಿ ಪ್ರತಿಸಲವೂ ಇಸ್ರೇಲರನ್ನು ಅವರ ಶತ್ರುಗಳಿಂದ ರಕ್ಷಿಸಲಾಯಿತು. 19 ಆದರೆ ಪ್ರತಿಯೊಬ್ಬ ನ್ಯಾಯಾಧೀಶನು ಮರಣಹೊಂದಿದಾಗ ಇಸ್ರೇಲರು ಪುನಃ ಪಾಪ ಮಾಡುತ್ತಿದ್ದರು ಮತ್ತು ತಮ್ಮ ಪೂರ್ವಿಕರಿಗಿಂತಲೂ ಭ್ರಷ್ಠರಾಗಿ ಸುಳ್ಳುದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬೀಳಲಾರಂಭಿಸುತ್ತಿದ್ದರು. ಇಸ್ರೇಲರು ತುಂಬ ಮೊಂಡರಾಗಿದ್ದು ತಮ್ಮ ದುರ್ನಡತೆಗಳನ್ನು ಬಿಡಲು ಸಿದ್ಧರಾಗಿರಲಿಲ್ಲ.

20 ಹೀಗಾಗಿ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡು, “ಈ ಜನಾಂಗದವರು ಅವರ ಪೂರ್ವಿಕರ ಸಂಗಡ ನಾನು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದಿದ್ದಾರೆ. ಇವರು ನನ್ನ ಮಾತನ್ನು ಕೇಳಲಿಲ್ಲ. 21 ಆದ್ದರಿಂದ ಇನ್ನುಮುಂದೆ ನಾನು ಬೇರೆ ಜನಾಂಗಗಳನ್ನು ಸೋಲಿಸಿ ಇಸ್ರೇಲರ ಮಾರ್ಗವನ್ನು ಸರಾಗಮಾಡುವುದಿಲ್ಲ. ಯೆಹೋಶುವನು ಮರಣ ಹೊಂದಿದಾಗ ಆ ಜನಾಂಗದವರು ಇನ್ನೂ ಈ ಪ್ರದೇಶದಲ್ಲಿದ್ದರು. ಈ ಪ್ರದೇಶದಲ್ಲಿ ವಾಸಿಸಲು ಆ ಜನಾಂಗಗಳಿಗೆ ಇನ್ನು ಮೇಲೆಯೂ ಆಸ್ಪದಕೊಡುತ್ತೇನೆ. 22 ಇಸ್ರೇಲರು ತಮ್ಮ ಪೂರ್ವಿಕರಂತೆ ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಾರೆಯೇ ಎಂಬುದನ್ನು ನಾನು ಆ ಜನಾಂಗಗಳ ಮೂಲಕ ಪರೀಕ್ಷಿಸಿ ನೋಡುತ್ತೇನೆ” ಎಂದನು. 23 ಯೆಹೋವನು ಆ ಜನಾಂಗಗಳನ್ನು ಆ ಪ್ರದೇಶದಲ್ಲಿ ಇರುವುದಕ್ಕೆ ಬಿಟ್ಟನು. ಆ ಜನಾಂಗಗಳು ಈ ದೇಶವನ್ನು ಬಿಟ್ಟು ಹೋಗುವಂತೆ ಯೆಹೋವನು ಒತ್ತಾಯಪಡಿಸಲಿಲ್ಲ. ಅವರನ್ನು ಸೋಲಿಸಲು ಯೆಹೋಶುವನ ಸೈನ್ಯಕ್ಕೆ ಸಹಾಯ ಮಾಡಲಿಲ್ಲ.

ಪ್ರಕಟನೆ 16:8-21

ನಾಲ್ಕನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸೂರ್ಯನ ಮೇಲೆ ಸುರಿದನು. ಜನರನ್ನು ಕಡುಬಿಸಿಲಿನಿಂದ ಕಂದಿಸುವ ಅಧಿಕಾರವನ್ನು ಸೂರ್ಯನಿಗೆ ಕೊಡಲಾಯಿತು. ಜನರು ಕುಡುಬಿಸಿಲಿನಿಂದ ಕಂದಿಹೋಗಿ ದೇವರ ಹೆಸರನ್ನು ಶಪಿಸಿದರು. ಈ ಉಪದ್ರವಗಳನ್ನು ದೇವರೊಬ್ಬನೇ ನಿಯಂತ್ರಿಸ ಬಲ್ಲವನಾಗಿದ್ದಾನೆ. ಆದರೆ ಜನರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಪರಿವರ್ತಿಸಿಕೊಳ್ಳಲಿಲ್ಲ. ದೇವರನ್ನು ಮಹಿಮೆಪಡಿಸಲು ಒಪ್ಪಿಕೊಳ್ಳಲಿಲ್ಲ.

10 ಐದನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಆ ಮೃಗದ ಸಿಂಹಾಸನದ ಮೇಲೆ ಸುರಿದನು. ಮೃಗದ ರಾಜ್ಯದಲ್ಲಿ ಅಂಧಕಾರವು ಕವಿಯಿತು. ಜನರು ನೋವಿನಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡರು. 11 ಜನರು ತಮಗಾದ ಹುಣ್ಣುಗಳಿಂದ ಮತ್ತು ನೋವಿನಿಂದ ಪರಲೋಕದ ದೇವರನ್ನು ದೂಷಿಸಿದರು. ಆದರೆ ಜನರು ತಾವು ಮಾಡುವ ಕೆಟ್ಟಕಾರ್ಯಗಳನ್ನು ತೊರೆದುಬಿಟ್ಟು ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಳ್ಳಲು ಒಪ್ಪಲಿಲ್ಲ.

12 ಆರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಯೂಫ್ರಟಿಸ್ ಮಹಾನದಿಯ ಮೇಲೆ ಸುರಿಸಿದನು. ನದಿಯಲ್ಲಿದ್ದ ನೀರು ಬತ್ತಿಹೋಯಿತು. ಇದರಿಂದ ಪೂರ್ವದಲ್ಲಿದ್ದ ರಾಜರುಗಳು ಬರಲು ಮಾರ್ಗವು ಸಿದ್ಧವಾಯಿತು. 13 ಆಗ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳನ್ನು ನಾನು ನೋಡಿದೆನು. ಅವು ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಹೊರಗೆ ಬಂದವು. 14 ಈ ಅಶುದ್ಧಾತ್ಮಗಳು ಸೈತಾನನ ಆತ್ಮಗಳಾಗಿವೆ. ಅವುಗಳಿಗೆ ಮಹಾ ಅದ್ಭುತಗಳನ್ನು ಮಾಡಲು ಶಕ್ತಿಯಿದೆ. ಈ ಅಶುದ್ಧಾತ್ಮಗಳು ಸರ್ವಶಕ್ತನಾದ ದೇವರ ಮಹಾದಿನದಂದು ನಡೆಯುವ ಯುದ್ಧಕ್ಕೆ, ಲೋಕದಲ್ಲೆಲ್ಲಾ ಇರುವ ರಾಜರನ್ನು ಒಟ್ಟುಗೂಡಿಸಲು ಹೊರಗೆ ಹೋಗುತ್ತವೆ.

15 “ಕೇಳಿರಿ! ನಾನು ಕಳ್ಳನಂತೆ ಬರುತ್ತೇನೆ. ಎಚ್ಚರವಾಗಿದ್ದು ತನ್ನ ಬಟ್ಟೆಗಳನ್ನು ಕಾಪಾಡಿಕೊಳ್ಳುವವನು ಭಾಗ್ಯವಂತನಾಗಿದ್ದಾನೆ. ಆಗ ಅವನು ಬಟ್ಟೆಯಿಲ್ಲದೆ ಹೊರಗೆ ಹೋಗಿ ತನ್ನನ್ನು ನಾಚಿಕೆಗೆ ಗುರಿಪಡಿಸಿಕೊಳ್ಳುವ ಅಗತ್ಯತೆವಿರುವುದಿಲ್ಲ.”

16 ಬಳಿಕ ಅಶುದ್ಧಾತ್ಮಗಳು ರಾಜರುಗಳನ್ನು ಹೀಬ್ರೂ ಭಾಷೆಯಲ್ಲಿ ಹರ್ಮೆಗದೋನ್ ಎಂಬ ಹೆಸರುಳ್ಳ ಸ್ಥಳದಲ್ಲಿ ಒಟ್ಟಾಗಿ ಸೇರಿಸಿದವು.

17 ಏಳನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಗಾಳಿಯಲ್ಲಿ ಸುರಿದನು. ಆಗ ಒಂದು ಮಹಾಧ್ವನಿಯು ಸಿಂಹಾಸನದಿಂದ ಆಲಯದ ಹೊರಕ್ಕೆ ಬಂದಿತು. ಆ ಧ್ವನಿಯು, “ಮುಗಿದುಹೋಯಿತು!” ಎಂದು ಹೇಳಿತು. 18 ಆಗ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಉಂಟಾದವು ಮತ್ತು ಭೂಕಂಪವೂ ಆಯಿತು. ಜನರು ಭೂಮಿಯ ಮೇಲೆ ಇರಲು ಆರಂಭಿಸಿದಂದಿನಿಂದ ಅಂತಹ ಭೀಕರ ಭೂಕಂಪವು ಎಂದೂ ಸಂಭವಿಸಿರಲಿಲ್ಲ. 19 ಆ ಮಹಾನಗರವು ಒಡೆದು ಮೂರು ಭಾಗವಾಯಿತು. ಜನಾಂಗಗಳ ನಗರಗಳು ನಾಶವಾದವು. ಮಹಾನಗರವಾದ ಬಾಬಿಲೋನನ್ನು ದೇವರು ದಂಡಿಸದೆ ಬಿಡಲಿಲ್ಲ. ಆತನು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕುಡಿಯಲು ಕೊಟ್ಟನು. 20 ಸಕಲ ದ್ವೀಪಗಳೂ ಅದೃಶ್ಯವಾದವು ಮತ್ತು ಬೆಟ್ಟಗಳೇ ಇಲ್ಲವಾದವು. 21 ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲುಗಳು ಬಿದ್ದವು. ಆ ಆಲಿಕಲ್ಲುಗಳು ನೂರು ಪೌಂಡುಗಳಷ್ಟು ಭಾರವಾಗಿದ್ದವು. ಈ ಉಪದ್ರವದ ಕಾಟದಿಂದ ಜನರು ದೇವರನ್ನು ದೂಷಿಸಿದರು. ಈ ಉಪದ್ರವವು ಬಹಳ ಭೀಕರವಾಗಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International