Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 123

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

ನ್ಯಾಯಸ್ಥಾಪಕರು 2:6-15

ಅವಿಧೇಯತೆ ಮತ್ತು ಸೋಲು

ಯೆಹೋಶುವನು ಜನರನ್ನು ತಮ್ಮ ಮನೆಗಳಿಗೆ ಹೋಗಲು ಹೇಳಿದನು. ಪ್ರತಿಯೊಂದು ಕುಲದವರು ವಾಸಮಾಡಲು ತಮ್ಮತಮ್ಮ ಪ್ರದೇಶಕ್ಕೆ ಹೋದರು. ಯೆಹೋಶುವನು ಜೀವಂತವಿರುವವರೆಗೆ ಇಸ್ರೇಲರು ಯೆಹೋವನನ್ನು ಸೇವಿಸಿದರು. ಯೆಹೋಶುವನ ಮರಣಾನಂತರ ಬದುಕಿದ್ದ ಹಿರಿಯರ ಜೀವಮಾನದಲ್ಲಿಯೂ ಇಸ್ರೇಲರು ಯೆಹೋವನ ಸೇವೆಯನ್ನು ಮುಂದುವರಿಸಿಕೊಂಡು ಬಂದರು. ಈ ಹಿರಿಯರು ಇಸ್ರೇಲರಿಗಾಗಿ ಯೆಹೋವನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ನೋಡಿದ್ದರು. ನೂನನ ಮಗನಾದ ಮತ್ತು ಯೆಹೋವನ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಬದುಕಿ ಮರಣ ಹೊಂದಿದನು. ಇಸ್ರೇಲರು ಯೆಹೋಶುವನನ್ನು ಅವನ ಸ್ವಾಸ್ತ್ಯ ಭೂಮಿಯಲ್ಲಿ ಸಮಾಧಿ ಮಾಡಿದರು. ಅದು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿ ತಿಮ್ನತ್ ಹೆರೆಸಿನಲ್ಲಿತ್ತು.

10 ಈ ಪೀಳಿಗೆಯವರೆಲ್ಲರು ಸತ್ತುಹೋದ ಮೇಲೆ ಮುಂದಿನ ಪೀಳಿಗೆಯು ಬೆಳೆಯಿತು. ಈ ಹೊಸ ಪೀಳಿಗೆಗೆ ಯೆಹೋವನ ಬಗ್ಗೆ ಮತ್ತು ಯೆಹೋವನು ಇಸ್ರೇಲಿನ ಜನರಿಗಾಗಿ ಮಾಡಿದ ಮಹತ್ಕಾರ್ಯಗಳ ಬಗ್ಗೆ ಏನೂ ಗೊತ್ತಿರಲಿಲ್ಲ. 11 ಇಸ್ರೇಲಿನ ಜನರು ದುಷ್ಕೃತ್ಯಗಳನ್ನು ಮಾಡಿದರು ಮತ್ತು ಸುಳ್ಳುದೇವರಾದ ಬಾಳನ ಸೇವೆ ಮಾಡಿದರು. ಯೆಹೋವನು ಇಸ್ರೇಲರ ಈ ದುಷ್ಕೃತ್ಯಗಳನ್ನು ನೋಡಿದನು. 12 ಯೆಹೋವನು ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಿದ್ದನು. ಅವರ ಪೂರ್ವಿಕರು ಯೆಹೋವನನ್ನು ಆರಾಧಿಸುತ್ತಿದ್ದರು. ಆದರೆ ಇಸ್ರೇಲರು ಯೆಹೋವನನ್ನು ಅನುಸರಿಸದೆ ತಮ್ಮ ಸುತ್ತಮುತ್ತಲಿನ ಜನರ ಸುಳ್ಳುದೇವರುಗಳನ್ನು ಪೂಜಿಸಲು ಆರಂಭಿಸಿದರು. ಆದ್ದರಿಂದ ಯೆಹೋವನಿಗೆ ಕೋಪ ಬಂತು. 13 ಇಸ್ರೇಲರು ಯೆಹೋವನನ್ನು ಅನುಸರಿಸದೆ ಬಾಳ್ ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ಪೂಜಿಸತೊಡಗಿದರು.

14 ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡನು. ಶತ್ರುಗಳು ಇಸ್ರೇಲರ ಮೇಲೆ ಧಾಳಿಮಾಡಿ ಅವರ ಸ್ವತ್ತನ್ನು ತೆಗೆದುಕೊಳ್ಳುವಂತೆ ಯೆಹೋವನು ಮಾಡಿದನು. ಸುತ್ತಮುತ್ತಲಿದ್ದ ಅವರ ಶತ್ರುಗಳು ಅವರನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಇಸ್ರೇಲರು ಶತ್ರುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಗಲಿಲ್ಲ. 15 ಇಸ್ರೇಲರು ಯುದ್ಧಕ್ಕೆ ಹೋದಾಗಲೆಲ್ಲಾ ಸೋಲನ್ನನುಭವಿಸಿದರು; ಏಕೆಂದರೆ ಯೆಹೋವನು ಅವರ ಸಂಗಡವಿರಲಿಲ್ಲ. ಸುತ್ತಮುತ್ತಲಿನ ಜನರ ದೇವತೆಗಳನ್ನು ಪೂಜಿಸಿದರೆ ಸೋಲಾಗುವುದೆಂದು ಈಗಾಗಲೇ ಯೆಹೋವನು ಇಸ್ರೇಲರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದನು. ಇಸ್ರೇಲರು ಹೆಚ್ಚಿನ ಕಷ್ಟನಷ್ಟಗಳನ್ನು ಅನುಭವಿಸಿದರು.

ಪ್ರಕಟನೆ 16:1-7

ದೇವರ ಕೋಪದಿಂದ ತುಂಬಿದ್ದ ಪಾತ್ರೆಗಳು

16 ನಂತರ ಆಲಯದಿಂದ ಒಂದು ಮಹಾಶಬ್ದವು ನನಗೆ ಕೇಳಿಸಿತು. ಆ ಶಬ್ದವು ಏಳು ದೇವದೂತರಿಗೆ, “ನೀವು ಹೋಗಿ ಏಳು ಪಾತ್ರೆಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿದುಬಿಡಿ” ಎಂದು ಹೇಳಿತು.

ಮೊದಲನೆಯ ದೇವದೂತನು ಹೊರಟನು. ಅವನು ತನ್ನ ಪಾತ್ರೆಯಲ್ಲಿದ್ದುದನ್ನು ಭೂಮಿಯ ಮೇಲೆ ಸುರಿದನು. ಆಗ ಮೃಗದ ಗುರುತನ್ನು ಹೊಂದಿದ್ದ ಮತ್ತು ಅದರ ವಿಗ್ರಹವನ್ನು ಆರಾಧಿಸುತ್ತಿದ್ದ ಜನರೆಲ್ಲರಿಗೂ ಅಸಹ್ಯವಾದ ಹಾಗೂ ನೋವಿನಿಂದ ಕೂಡಿದ ಹುಣ್ಣುಗಳಾದವು.

ಎರಡನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸಮುದ್ರದ ಮೇಲೆ ಸುರಿದನು. ಆಗ ಸಮುದ್ರವು ಸತ್ತ ಮನುಷ್ಯನ ರಕ್ತದಂತಾಯಿತು. ಸಮುದ್ರದಲ್ಲಿದ್ದ ಜೀವಜಂತುಗಳೆಲ್ಲ ಸತ್ತುಹೋದವು.

ಮೂರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ ನದಿಗಳು ಮತ್ತು ನೀರಿನ ಬುಗ್ಗೆಗಳೆಲ್ಲ ರಕ್ತವಾಗಿ ಪರಿಣಮಿಸಿದವು. ಆಗ ನೀರಿನ ಅಧಿಪತಿಯಾದ ದೂತನು ದೇವರಿಗೆ ಹೇಳಿದ್ದು ನನಗೆ ಕೇಳಿಸಿತು:

“ನೀನೇ ವರ್ತಮಾನ ಕಾಲದಲ್ಲಿರುವಾತನು.
ನೀನೊಬ್ಬನೇ ಪರಿಶುದ್ಧನು.
ನೀನು ನೀಡಿದ ಈ ತೀರ್ಪುಗಳಲ್ಲೆಲ್ಲಾ ನೀನು ನ್ಯಾಯವಂತನಾಗಿರುವೆ.
ಆ ಜನರು ನಿನ್ನ ಪರಿಶುದ್ಧ ಜನರ ಮತ್ತು ನಿನ್ನ ಪ್ರವಾದಿಗಳ ರಕ್ತವನ್ನು ಸುರಿಸಿದರು.
ಈಗ ನೀನು ಅವರಿಗೆ ಕುಡಿಯಲು ರಕ್ತವನ್ನೇ ನೀಡಿರುವೆ.
    ಅವರು ಇದಕ್ಕೆ ಪಾತ್ರರಾಗಿದ್ದಾರೆ.”

ಯಜ್ಞವೇದಿಕೆಯಿಂದ ಹೀಗೆ ಹೇಳುವುದನ್ನೂ ನಾನು ಕೇಳಿಸಿಕೊಂಡೆನು:

“ಹೌದು, ದೇವರಾದ ಪ್ರಭುವೇ, ಸರ್ವಶಕ್ತನೇ,
    ನಿನ್ನ ತೀರ್ಪುಗಳೆಲ್ಲಾ ಸತ್ಯವಾಗಿವೆ ಮತ್ತು ನ್ಯಾಯವಾಗಿವೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International