Revised Common Lectionary (Semicontinuous)
ರಚನೆಗಾರ: ಆಸಾಫ.
78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
ನನ್ನ ನುಡಿಗಳನ್ನು ಲಾಲಿಸಿರಿ.
2 ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
3 ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
4 ನಾವು ಅವುಗಳನ್ನು ಮರೆಯುವುದೇ ಇಲ್ಲ.
ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
5 ಆತನು ಯಾಕೋಬನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
ಆತನು ಇಸ್ರೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ಆತನು ನಮ್ಮ ಪೂರ್ವಿಕರಿಗೆ ಆಜ್ಞೆಗಳನ್ನು ಕೊಟ್ಟನು.
ನಿಮ್ಮ ಸಂತತಿಗಳವರಿಗೆ ಧರ್ಮಶಾಸ್ತ್ರವನ್ನು ಉಪದೇಶಿಸಿರಿ ಎಂದು ಆತನು ನಮ್ಮ ಪೂರ್ವಿಕರಿಗೆ ಹೇಳಿದನು.
6 ಹೊಸ ತಲೆಮಾರುಗಳವರು ಬೆಳೆದು ದೊಡ್ಡವರಾದಾಗ ತಮ್ಮ ಮಕ್ಕಳಿಗೆ ಅವುಗಳನ್ನು ಹೇಳಿಕೊಡುವರು.
ಹೀಗೆ ಜನರು ಕೊನೆಯ ತಲೆಮಾರಿನವರೆಗೂ ಧರ್ಮಶಾಸ್ತ್ರವನ್ನು ತಿಳಿದಿರುವರು.
7 ಆಗ ಅವರೆಲ್ಲರೂ ದೇವರಲ್ಲಿ ಭರವಸೆ ಇಡುವರು.
ದೇವರ ಮಹತ್ಕಾರ್ಯಗಳನ್ನು ಅವರು ಮರೆಯುವುದೇ ಇಲ್ಲ.
ಅವರು ಜಾಗ್ರತೆಯಿಂದ ದೇವರ ಆಜ್ಞೆಗಳಿಗೆ ವಿಧೇಯರಾಗುವರು.
ಆಶ್ರಯನಗರಗಳು
20 ತರುವಾಯ ಯೆಹೋವನು ಯೆಹೋಶುವನಿಗೆ, 2 “ನಾನು ಮೋಶೆಯ ಮೂಲಕ ನಿನಗೆ ಆಜ್ಞಾಪಿಸಿದಂತೆ ಕೆಲವು ನಗರಗಳನ್ನು ವಿಶೇಷ ಆಶ್ರಯನಗರಗಳನ್ನಾಗಿ ಗೊತ್ತುಪಡಿಸು. 3 ನಿಮ್ಮಲ್ಲಿ ಒಬ್ಬನು ತಿಳಿಯದೆ ಆಕಸ್ಮಿಕವಾಗಿ ನರಹತ್ಯ ಮಾಡಿದರೆ ಅವನು ಯಾವುದಾದರೊಂದು ಆಶ್ರಯನಗರಕ್ಕೆ ಹೋಗಿ ಅಡಗಿಕೊಳ್ಳಲಿ.
4 “ಆಶ್ರಯನಗರಕ್ಕೆ ಓಡಿಹೋದವನು ಆ ಪಟ್ಟಣದ ಪ್ರವೇಶದ್ವಾರದಲ್ಲಿ ನಿಂತು ಅಲ್ಲಿಯ ಜನನಾಯಕರಿಗೆ ನಡೆದ ಸಂಗತಿಯನ್ನು ತಿಳಿಸಲಿ. ಆಗ ನಾಯಕರು ಅವನಿಗೆ ನಗರವನ್ನು ಪ್ರವೇಶಿಸಲು ಅನುಮತಿ ಕೊಡಲಿ; ತಮ್ಮ ಜೊತೆಯಲ್ಲಿ ವಾಸಿಸಲು ಒಂದು ಸ್ಥಳವನ್ನು ಕೊಡಲಿ. 5 ಆದರೆ ಅವನನ್ನು ಬೆನ್ನಟ್ಟಿಕೊಂಡು ಬಂದವನು ಆಶ್ರಯನಗರಕ್ಕೆ ಬಂದರೆ, ಆ ನಗರದ ನಾಯಕರು ಕೊಂದವನನ್ನು ಬೆನ್ನಟ್ಟಿ ಬಂದವನ ಕೈಗೆ ಒಪ್ಪಿಸಬಾರದು. ಆಶ್ರಯಕೋರಿ ಅವರಲ್ಲಿಗೆ ಬಂದ ವ್ಯಕ್ತಿಯನ್ನು ಅವರು ರಕ್ಷಿಸಬೇಕು. ಯಾಕೆಂದರೆ ಆ ನರಹತ್ಯವು ಆಕಸ್ಮಿಕವಾದದ್ದೇ ಹೊರತು ದ್ವೇಷದಿಂದ ಮಾಡಿದ್ದಲ್ಲ. 6 ಆ ನಗರದ ನ್ಯಾಯಾಸ್ಥಾನದಲ್ಲಿ ನ್ಯಾಯನಿರ್ಣಯವಾಗುವವರೆಗೂ ಮತ್ತು ಮಹಾಯಾಜಕನು ಜೀವದಿಂದ ಇರುವವರೆಗೂ ಅವನು ಅಲ್ಲಿಯೇ ಇರಬೇಕು. ತರುವಾಯ ಅವನು ತಾನು ಬಿಟ್ಟುಬಂದ ಊರಿನ ತನ್ನ ಮನೆಗೆ ಹೋಗಬಹುದು” ಎಂದು ಹೇಳಿದನು.
7 ಆದ್ದರಿಂದ ಇಸ್ರೇಲರು “ಆಶ್ರಯನಗರಗಳನ್ನಾಗಿ” ಕೆಲವು ನಗರಗಳನ್ನು ಆರಿಸಿದರು. ಅವು ಯಾವುವೆಂದರೆ: ನಫ್ತಾಲಿ ಕುಲದವರ ಪರ್ವತ ಪ್ರದೇಶವಾದ ಗಲಿಲಾಯ ಪ್ರಾಂತ್ಯದಲ್ಲಿನ ಕೆದೆಷ್; ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿನ ಶೆಕೆಮ್; ಯೆಹೂದ್ಯರ ಬೆಟ್ಟದ ಸೀಮೆಯಲ್ಲಿನ ಹೆಬ್ರೋನ್ ಎಂಬ ಕಿರ್ಯತರ್ಬ. 8 ಜೆರಿಕೊವಿನ ಹತ್ತಿರ ಜೋರ್ಡನ್ ನದಿಯ ಪೂರ್ವದಲ್ಲಿದ್ದ ರೂಬೇನ್ಯರ ಪ್ರಾಂತ್ಯದ ಅರಣ್ಯಪ್ರದೇಶದಲ್ಲಿನ ಬೆಚೆರ್, ಗಾದ್ಯರಿಗೆ ಸೇರಿದ ಗಿಲ್ಯಾದ್ ಪ್ರಾಂತ್ಯದಲ್ಲಿನ ರಾಮೋತ್; ಮನಸ್ಸೆಯವರಿಗೆ ಸೇರಿದ ಬಾಷಾನಿನಲ್ಲಿರುವ ಗೋಲಾನ್. ಇವೇ ಆ ಆಶ್ರಯನಗರಗಳು.
9 ಇಸ್ರೇಲಿನವನಾಗಲಿ ಅಥವಾ ಅವರೊಂದಿಗೆ ಇರುವ ಒಬ್ಬ ಪರದೇಶಿಯನಾಗಲಿ ಆಕಸ್ಮಿಕವಾಗಿ ನರಹತ್ಯೆ ಮಾಡಿದ್ದರೆ ಒಂದು ಆಶ್ರಯನಗರಕ್ಕೆ ಓಡಿಹೋಗಲು ಅವಕಾಶವಿತ್ತು. ಯಾವನೇ ಆಗಲಿ ಮತ್ತೊಬ್ಬನನ್ನು ಆಕಸ್ಮಿಕವಾಗಿ ಕೊಂದರೆ ಆ ಪಟ್ಟಣಗಳಲ್ಲಿ ಆಶ್ರಯ ಪಡೆಯಬಹುದಾಗಿತ್ತು; ಅಲ್ಲಿ ಸುರಕ್ಷಿತವಾಗಿ ವಾಸಿಸಬಹುದಾಗಿತ್ತು. ಬೆನ್ನಟ್ಟಿ ಬಂದವನು ಅವನನ್ನು ಕೊಲ್ಲಲು ಸಾಧ್ಯವಿರಲಿಲ್ಲ. ಕೊಲೆ ಮಾಡಿದವನಿಗೆ ಆ ಪಟ್ಟಣದ ನ್ಯಾಯಾಲಯವೇ ತೀರ್ಪು ನೀಡುತ್ತಿತ್ತು.
ನೆಲಸಮವಾಗಲಿರುವ ಮಹಾದೇವಾಲಯ
(ಮಾರ್ಕ 13:1-31; ಲೂಕ 21:5-33)
24 ಯೇಸು ದೇವಾಲಯದಿಂದ ಹೋಗುತ್ತಿದ್ದಾಗ ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲು ಆತನ ಬಳಿಗೆ ಬಂದರು. 2 ಆಗ ಯೇಸು “ಈ ಕಟ್ಟಡಗಳನ್ನೆಲ್ಲ ನೋಡುತ್ತಿದ್ದೀರಾ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇವುಗಳೆಲ್ಲಾ ನಾಶವಾಗುತ್ತವೆ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಎಲ್ಲಾ ಕಲ್ಲುಗಳು ಕೆಡವಲ್ಪಡುತ್ತವೆ” ಎಂದು ಹೇಳಿದನು.
3 ಬಳಿಕ ಯೇಸು ಆಲಿವ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ! ನೀನು ಈ ಲೋಕಕ್ಕೆ ಮತ್ತೊಮ್ಮೆ ಬರುವಾಗ ಮತ್ತು ಲೋಕದ ಸಮಾಪ್ತಿಯ ಸಮಯ ಬಂದಾಗ ಸೂಚನೆಗಾಗಿ ಏನು ಸಂಭವಿಸುವುದು? ನಮಗೆ ತಿಳಿಸು!” ಎಂದು ಕೇಳಿದರು.
4 ಯೇಸು ಅವರಿಗೆ ಕೊಟ್ಟ ಉತ್ತರವಿದು: “ಎಚ್ಚರವಾಗಿರಿ! ನಿಮ್ಮನ್ನು ಮೋಸಗೊಳಿಸಲು ಯಾರಿಗೂ ಅವಕಾಶ ಕೊಡಬೇಡಿ. 5 ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಪಡಿಸುವರು. 6 ನಿಮ್ಮ ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ದವನ್ನೂ ಬಹು ದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಹೆದರಬೇಡಿ. ಅಂತ್ಯವು ಬರುವುದಕ್ಕಿಂತ ಮುಂಚೆ ಇವುಗಳು ಸಂಭವಿಸಲೇಬೇಕು. 7 ಜನಾಂಗಗಳು ಬೇರೆ ಜನಾಂಗಗಳಿಗೆ ವಿರೋಧವಾಗಿ ಯುದ್ದ ಮಾಡುತ್ತವೆ. ರಾಜ್ಯಗಳು ಬೇರೆಬೇರೆ ರಾಜ್ಯಗಳಿಗೆ ವಿರೋಧವಾಗಿ ಯುದ್ಧ ಮಾಡುತ್ತವೆ. ಬರಗಾಲಗಳು ಬರುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಭೂಕಂಪಗಳು ಆಗುತ್ತವೆ. 8 ಇವೆಲ್ಲಾ ಪ್ರಸವವೇದನೆಯ ಆರಂಭವಷ್ಟೇ.
9 “ಆಗ ಜನರು ನಿಮ್ಮನ್ನು ಹಿಂಸಿಸಿ, ಮರಣದಂಡನೆ ವಿಧಿಸಲು ಅಧಿಕಾರಿಗಳಿಗೆ ಒಪ್ಪಿಸಿಕೊಡುವರು. ಜನರೆಲ್ಲರೂ ನಿಮ್ಮನ್ನು ವಿರೋಧಿಸುವರು. ನೀವು ನನ್ನಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ಇವುಗಳೆಲ್ಲಾ ನಿಮಗೆ ಸಂಭವಿಸುವವು. 10 ಆ ಸಮಯದಲ್ಲಿ ಅನೇಕ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವರು. ಅವರು ಒಬ್ಬರಿಗೊಬ್ಬರಿಗೆ ವಿರೋಧವಾಗಿ ತಿರುಗಿಕೊಂಡು ಒಬ್ಬರನ್ನೊಬ್ಬರು ದ್ವೇಷಿಸುವರು. 11 ಅನೇಕ ಸುಳ್ಳುಪ್ರವಾದಿಗಳು ಬಂದು ಎಷ್ಟೋ ಜನರನ್ನು ವಂಚಿಸುವರು. 12 ಲೋಕದಲ್ಲಿ ದುಷ್ಟತನವು ಹೆಚ್ಚಾಗಿ ಬಹುಜನ ವಿಶ್ವಾಸಿಗಳ ಪ್ರೀತಿಯು ಅಡಗಿಹೋಗುವುದು. 13 ಆದರೆ ಕಡೆಯವರೆಗೂ ದೃಢವಾಗಿರುವವನು ರಕ್ಷಣೆಹೊಂದುತ್ತಾನೆ. 14 ದೇವರ ರಾಜ್ಯದ ಶುಭವಾರ್ತೆಯನ್ನು ಲೋಕದಲ್ಲೆಲ್ಲಾ ಪ್ರತಿ ಜನಾಂಗಕ್ಕೂ ಸಾರಲಾಗುವುದು. ಆಗ ಅಂತ್ಯವು ಬರುತ್ತದೆ.
Kannada Holy Bible: Easy-to-Read Version. All rights reserved. © 1997 Bible League International