Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 78:1-7

ರಚನೆಗಾರ: ಆಸಾಫ.

78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
    ನನ್ನ ನುಡಿಗಳನ್ನು ಲಾಲಿಸಿರಿ.
ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
    ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
    ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
ನಾವು ಅವುಗಳನ್ನು ಮರೆಯುವುದೇ ಇಲ್ಲ.
    ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
    ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
ಆತನು ಯಾಕೋಬನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
    ಆತನು ಇಸ್ರೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
    ಆತನು ನಮ್ಮ ಪೂರ್ವಿಕರಿಗೆ ಆಜ್ಞೆಗಳನ್ನು ಕೊಟ್ಟನು.
    ನಿಮ್ಮ ಸಂತತಿಗಳವರಿಗೆ ಧರ್ಮಶಾಸ್ತ್ರವನ್ನು ಉಪದೇಶಿಸಿರಿ ಎಂದು ಆತನು ನಮ್ಮ ಪೂರ್ವಿಕರಿಗೆ ಹೇಳಿದನು.
ಹೊಸ ತಲೆಮಾರುಗಳವರು ಬೆಳೆದು ದೊಡ್ಡವರಾದಾಗ ತಮ್ಮ ಮಕ್ಕಳಿಗೆ ಅವುಗಳನ್ನು ಹೇಳಿಕೊಡುವರು.
    ಹೀಗೆ ಜನರು ಕೊನೆಯ ತಲೆಮಾರಿನವರೆಗೂ ಧರ್ಮಶಾಸ್ತ್ರವನ್ನು ತಿಳಿದಿರುವರು.
ಆಗ ಅವರೆಲ್ಲರೂ ದೇವರಲ್ಲಿ ಭರವಸೆ ಇಡುವರು.
    ದೇವರ ಮಹತ್ಕಾರ್ಯಗಳನ್ನು ಅವರು ಮರೆಯುವುದೇ ಇಲ್ಲ.
    ಅವರು ಜಾಗ್ರತೆಯಿಂದ ದೇವರ ಆಜ್ಞೆಗಳಿಗೆ ವಿಧೇಯರಾಗುವರು.

ಯೆಹೋಶುವನು 8:30-35

ಆಶೀರ್ವಾದಗಳ ಮತ್ತು ಶಾಪಗಳ ವಚನ

30 ಆಗ ಇಸ್ರೇಲಿನ ದೇವರಾದ ಯೆಹೋವನಿಗಾಗಿ ಯೆಹೋಶುವನು ಒಂದು ಯಜ್ಞವೇದಿಕೆಯನ್ನು ಏಬಾಲ್ ಬೆಟ್ಟದ ಮೇಲೆ ಕಟ್ಟಿಸಿದನು. 31 ಯಜ್ಞವೇದಿಕೆಯನ್ನು ಹೇಗೆ ಕಟ್ಟಬೇಕೆಂಬುದನ್ನು ಯೆಹೋವನ ಸೇವಕನಾದ ಮೋಶೆಯು ಇಸ್ರೇಲರಿಗೆ ಹೇಳಿ ಕೊಟ್ಟಿದ್ದನು. ಆದ್ದರಿಂದ ಮೋಶೆಯ ಧರ್ಮಶಾಸ್ತ್ರದ ಗ್ರಂಥದಲ್ಲಿ ವಿವರಿಸಿದಂತೆ ಯೆಹೋಶುವನು ಯಜ್ಞವೇದಿಕೆಯನ್ನು ಕಟ್ಟಿಸಿದನು. ಯಜ್ಞವೇದಿಕೆಯನ್ನು ಕಡಿಯದ ಕಲ್ಲುಗಳಿಂದ ಮಾಡಲಾಯಿತು. ಆ ಕಲ್ಲುಗಳ ಮೇಲೆ ಯಾವ ಉಪಕರಣವನ್ನೂ ಉಪಯೋಗಿಸಿರಲಿಲ್ಲ. ಯೆಹೋವನಿಗೆ ಆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದರು.

32 ಆ ಸ್ಥಳದಲ್ಲಿ ಯೆಹೋಶುವನು ಮೋಶೆಯ ಧರ್ಮಶಾಸ್ತ್ರವನ್ನು ಕಲ್ಲಿನ ಹಲಗೆಗಳ ಮೇಲೆ ಬರೆಸಿದನು. ಇಸ್ರೇಲರೆಲ್ಲರೂ ಅದನ್ನು ನೋಡಬೇಕೆಂಬುದೇ ಅದರ ಉದ್ದೇಶವಾಗಿತ್ತು. 33 ಹಿರಿಯರು, ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಇಸ್ರೇಲರೆಲ್ಲರು ಪವಿತ್ರ ಪೆಟ್ಟಿಗೆಯ ಸುತ್ತಲೂ ನಿಂತುಕೊಂಡಿದ್ದರು. ಯೆಹೋವನ ಒಡಂಬಡಿಕೆಯ ಪವಿತ್ರ ಪೆಟ್ಟಿಗೆಯನ್ನು ಹೊತ್ತುತಂದ ಲೇವಿಯರ ಎದುರುಗಡೆ ಅವರು ನಿಂತುಕೊಂಡಿದ್ದರು. ಅರ್ಧಜನರು ಏಬಾಲ್ ಬೆಟ್ಟದ ಎದುರಿಗೂ ಮತ್ತು ಇನ್ನುಳಿದ ಅರ್ಧಜನರು ಗೆರಿಜ್ಜೀಮ್ ಬೆಟ್ಟದ ಎದುರಿಗೂ ನಿಂತುಕೊಂಡಿದ್ದರು. ಆಶೀರ್ವಾದವನ್ನು ಹೊಂದಿಕೊಳ್ಳಲು ಹೀಗೆ ಮಾಡಬೇಕೆಂದು ಯೆಹೋವನ ಸೇವಕನಾದ ಮೋಶೆಯು ಜನರಿಗೆ ಹೇಳಿದ್ದನು.

34 ಆಗ ಯೆಹೋಶುವನು ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದಗಳನ್ನು ಮತ್ತು ಶಾಪದ ವಾಕ್ಯಗಳನ್ನು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೇ ಓದಿದನು. 35 ಅಲ್ಲಿ ಇಸ್ರೇಲಿನ ಎಲ್ಲ ಜನರು ಸೇರಿ ಬಂದಿದ್ದರು. ಎಲ್ಲ ಹೆಂಗಸರು ಮತ್ತು ಮಕ್ಕಳು ಮತ್ತು ಇಸ್ರೇಲಿನ ಜನರೊಂದಿಗೆ ಇದ್ದ ಎಲ್ಲ ವಿದೇಶಿಯರು ಅಲ್ಲಿ ಇದ್ದರು. ಅವರೆಲ್ಲರಿಗೆ ಕೇಳಿಸುವಂತೆ ಮೋಶೆಯು ಕೊಟ್ಟಿದ್ದ ಪ್ರತಿಯೊಂದು ಆಜ್ಞೆಯನ್ನು ಯೆಹೋಶುವನು ಓದಿದನು.

ಪ್ರಕಟನೆ 9:13-21

ಆರನೇ ತುತೂರಿಯ ಪ್ರಾರಂಭ

13 ಆರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೇವರ ಸನ್ನಿಧಿಯಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲಿನ ಕೊಂಬುಗಳಿಂದ ಬರುತ್ತಿರುವ ಧ್ವನಿಯನ್ನು ನಾನು ಕೇಳಿದೆನು. 14 ಆ ಧ್ವನಿಯು ತುತೂರಿಯಿದ್ದ ಆರನೆಯ ದೇವದೂತನಿಗೆ, “ಯೂಫ್ರಟಿಸ್ ಎಂಬ ಮಹಾನದಿಯ ಬಳಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು. 15 ಈ ನಾಲ್ಕು ಮಂದಿ ದೇವದೂತರನ್ನು ಇದೇ ವರ್ಷ, ಇದೇ ತಿಂಗಳು, ಇದೇ ದಿನ, ಇದೇ ತಾಸಿಗಾಗಿ ಸಿದ್ಧಪಡಿಸಲಾಗಿತ್ತು. ಭೂಮಿಯ ಮೇಲಿರುವ ಜನರಲ್ಲಿ ಮೂರನೆಯ ಒಂದು ಭಾಗವನ್ನು ಸಂಹರಿಸಲು ಇವರನ್ನು ಬಿಡುಗಡೆ ಮಾಡಲಾಯಿತು. 16 ಅವರಲ್ಲಿದ್ದ ಅಶ್ವದಳದ ಸೈನಿಕರ ಸಂಖ್ಯೆ ಇಪ್ಪತ್ತುಕೋಟಿ ಎಂದು ನನಗೆ ಕೇಳಿಸಿತು.

17 ನಾನು ದರ್ಶನದಲ್ಲಿ ಕುದುರೆಗಳನ್ನೂ ಕುದುರೆಗಳ ಮೇಲಿದ್ದ ಸವಾರರನ್ನೂ ನೋಡಿದೆನು. ಅವರು ಹೀಗೆ ಕಾಣುತ್ತಿದ್ದರು: ಅವರು ಬೆಂಕಿಯಂತೆ ಕೆಂಪಾದ, ಕಪ್ಪಾದ, ನೀಲಿಯ ಮತ್ತು ಗಂಧಕದಂತೆ ಹಳದಿಯಾದ ಕವಚಗಳನ್ನು ಹೊಂದಿದ್ದರು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತೆ ಕಾಣುತ್ತಿದ್ದವು. ಕುದುರೆಗಳ ಬಾಯಿಂದ ಬೆಂಕಿ, ಹೊಗೆ ಮತ್ತು ಗಂಧಕಗಳು ಬರುತ್ತಿದ್ದವು. 18 ಭೂಮಿಯ ಮೇಲಿನ ಜನರಲ್ಲಿ ಮೂರನೆಯ ಒಂದು ಭಾಗವು ಕುದುರೆಗಳ ಬಾಯಿಂದ ಹೊರಬಂದ ಬೆಂಕಿ, ಹೊಗೆ ಮತ್ತು ಗಂಧಕಗಳ ಉಪದ್ರವಗಳಿಂದ ಕೊಲ್ಲಲ್ಪಟ್ಟಿತು. 19 ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇತ್ತು. ಅವುಗಳ ಬಾಲಗಳು ಜನರನ್ನು ಕಚ್ಚಬಲ್ಲ ಹೆಡೆಗಳುಳ್ಳ ಸರ್ಪಗಳಂತೆ ಇದ್ದವು.

20 ಈ ಉಪದ್ರವಗಳಿಂದ ಸಾಯದೆ ಉಳಿದ ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಲಿಲ್ಲ. ತಮ್ಮ ಸ್ವಂತ ಕೈಗಳಿಂದ ನಿರ್ಮಿಸಿದ ವಿಗ್ರಹಗಳನ್ನು ತೊರೆದುಬಿಡಲಿಲ್ಲ. ಅವರು ದೆವ್ವಗಳ ಆರಾಧನೆಯನ್ನು ನಿಲ್ಲಿಸಲಿಲ್ಲ. ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳಿಂದ ಮಾಡಲ್ಪಟ್ಟು, ನಡೆಯಲಾರದ, ನೋಡಲಾರದ ಮತ್ತು ಕೇಳಲಾರದ ವಿಗ್ರಹಗಳನ್ನು ಪೂಜಿಸುವುದನ್ನು ಅವರು ನಿಲ್ಲಿಸಲಿಲ್ಲ. 21 ಈ ಜನರು ತಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಪರಿವರ್ತಿಸಿಕೊಳ್ಳಲಿಲ್ಲ ಮತ್ತು ಇತರರನ್ನು ಕೊಲ್ಲುವುದನ್ನು ಬಿಟ್ಟುಬಿಡಲಿಲ್ಲ. ಅವರು ತಾವು ನಡೆಸುತ್ತಿದ್ದ ಮಾಟಮಂತ್ರಗಳನ್ನು, ಲೈಂಗಿಕ ಪಾಪಗಳನ್ನು ಮತ್ತು ಕಳ್ಳತನವನ್ನು ತೊರೆದುಬಿಡಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International