Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 78:1-7

ರಚನೆಗಾರ: ಆಸಾಫ.

78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
    ನನ್ನ ನುಡಿಗಳನ್ನು ಲಾಲಿಸಿರಿ.
ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
    ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
    ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
ನಾವು ಅವುಗಳನ್ನು ಮರೆಯುವುದೇ ಇಲ್ಲ.
    ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
    ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
ಆತನು ಯಾಕೋಬನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
    ಆತನು ಇಸ್ರೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
    ಆತನು ನಮ್ಮ ಪೂರ್ವಿಕರಿಗೆ ಆಜ್ಞೆಗಳನ್ನು ಕೊಟ್ಟನು.
    ನಿಮ್ಮ ಸಂತತಿಗಳವರಿಗೆ ಧರ್ಮಶಾಸ್ತ್ರವನ್ನು ಉಪದೇಶಿಸಿರಿ ಎಂದು ಆತನು ನಮ್ಮ ಪೂರ್ವಿಕರಿಗೆ ಹೇಳಿದನು.
ಹೊಸ ತಲೆಮಾರುಗಳವರು ಬೆಳೆದು ದೊಡ್ಡವರಾದಾಗ ತಮ್ಮ ಮಕ್ಕಳಿಗೆ ಅವುಗಳನ್ನು ಹೇಳಿಕೊಡುವರು.
    ಹೀಗೆ ಜನರು ಕೊನೆಯ ತಲೆಮಾರಿನವರೆಗೂ ಧರ್ಮಶಾಸ್ತ್ರವನ್ನು ತಿಳಿದಿರುವರು.
ಆಗ ಅವರೆಲ್ಲರೂ ದೇವರಲ್ಲಿ ಭರವಸೆ ಇಡುವರು.
    ದೇವರ ಮಹತ್ಕಾರ್ಯಗಳನ್ನು ಅವರು ಮರೆಯುವುದೇ ಇಲ್ಲ.
    ಅವರು ಜಾಗ್ರತೆಯಿಂದ ದೇವರ ಆಜ್ಞೆಗಳಿಗೆ ವಿಧೇಯರಾಗುವರು.

ಯೆಹೋಶುವನು 5:10-12

10 ಇಸ್ರೇಲರು ಇನ್ನೂ ಗಿಲ್ಗಾಲಿನಲ್ಲಿಯೇ ಇಳಿದುಕೊಂಡಿದ್ದಾಗ ಜೆರಿಕೊವಿನ ಮೈದಾನಗಳಲ್ಲಿ ಅವರು ಆ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಪಸ್ಕಹಬ್ಬವನ್ನು ಆಚರಿಸಿದರು. 11 ಪಸ್ಕಹಬ್ಬದ ಮರುದಿನ ಮುಂಜಾನೆಯಲ್ಲಿ ಅವರು ಆ ಭೂಮಿಯಲ್ಲಿ ಬೆಳೆದ ಆಹಾರವನ್ನು ಊಟಮಾಡಿದರು; ಅವರು ಹುಳಿ ರಹಿತವಾದ ರೊಟ್ಟಿಯನ್ನು ಮತ್ತು ಹುರಿದ ಕಾಳುಗಳನ್ನು ಊಟ ಮಾಡಿದರು. 12 ಮೂರನೆಯ ದಿನ ಮುಂಜಾನೆ ಪರಲೋಕದಿಂದ ಬರುತ್ತಿದ್ದ ವಿಶಿಷ್ಟ ಆಹಾರವಾದ ಮನ್ನವು ನಿಂತುಹೋಯಿತು. ಜನರು ಕಾನಾನ್ ಪ್ರದೇಶದಲ್ಲಿ ಬೆಳೆದ ಆಹಾರವನ್ನು ತಿಂದ ದಿನದಿಂದ ಹೀಗಾಯಿತು. ಅಂದಿನಿಂದ ಇಸ್ರೇಲರು ಪರಲೋಕದ ವಿಶಿಷ್ಟವಾದ ಆಹಾರವನ್ನು ಪಡೆಯಲಿಲ್ಲ.

ಪ್ರಕಟನೆ 8:6-9:12

ಏಳು ತುತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು

ನಂತರ ಆ ಏಳು ಮಂದಿ ದೇವದೂತರು ಏಳು ತುತೂರಿಗಳನ್ನು ಊದಲು ಸಿದ್ಧರಾದರು.

ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ರಕ್ತದಲ್ಲಿ ಕಲಸಿದ್ದ ಆಲಿಕಲ್ಲುಗಳ ಮತ್ತು ಬೆಂಕಿಯ ಮಳೆಯು ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರನೆಯ ಒಂದು ಭಾಗ ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋದವು; ಮತ್ತು ಮರಗಳಲ್ಲಿ ಮೂರನೆಯ ಒಂದು ಭಾಗ ಸುಟ್ಟುಹೋದವು.

ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿದ್ದ ದೊಡ್ಡ ಬೆಟ್ಟವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರದೊಳಕ್ಕೆ ಎಸೆಯಲಾಯಿತು. ಆಗ ಸಮುದ್ರದ ಮೂರನೆಯ ಒಂದು ಭಾಗ ರಕ್ತವಾಯಿತು. ಸಮುದ್ರದಲ್ಲಿದ್ದ ಜೀವಿಗಳಲ್ಲಿ ಮೂರನೆಯ ಒಂದು ಭಾಗ ಸತ್ತುಹೋದವು ಮತ್ತು ಹಡಗುಗಳಲ್ಲಿ ಮೂರನೆಯ ಒಂದು ಭಾಗ ನಾಶವಾದವು.

10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಕೆಳಗೆ ಬಿತ್ತು. ಆ ನಕ್ಷತ್ರವು ನದಿಗಳಲ್ಲಿ ಮತ್ತು ನೀರಿನ ಬುಗ್ಗೆಗಳಲ್ಲಿ ಮೂರನೆಯ ಒಂದು ಭಾಗದ ಮೇಲೆ ಬಿದ್ದಿತು. 11 ಆ ನಕ್ಷತ್ರಕ್ಕೆ “ಕಹಿ ಮರ”[a] ಎಂದು ಹೆಸರು. ನೀರಿನಲ್ಲಿ ಮೂರನೆಯ ಒಂದು ಭಾಗವು ಕಹಿಯಾಯಿತು. ಈ ಕಹಿಯಾದ ನೀರನ್ನು ಕುಡಿದು ಅನೇಕ ಜನರು ಸತ್ತುಹೋದರು.

12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಸೂರ್ಯನಲ್ಲಿ ಮೂರನೆಯ ಒಂದು ಭಾಗ, ಚಂದ್ರನಲ್ಲಿ ಮೂರನೆಯ ಒಂದು ಭಾಗ ಮತ್ತು ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗ ಬಡಿಯಲ್ಪಟ್ಟು ಅವುಗಳಲ್ಲಿ ಮೂರನೆಯ ಒಂದು ಭಾಗ ಕತ್ತಲಾಯಿತು. ಹಗಲಿನಲ್ಲಿಯೂ ರಾತ್ರಿಯಲ್ಲಿಯೂ ಮೂರನೆಯ ಒಂದು ಭಾಗಕ್ಕೆ ಬೆಳಕಿಲ್ಲದಂತಾಯಿತು.

13 ನಾನು ನೋಡುತ್ತಿದ್ದಂತೆ, ವಾಯುಮಂಡಲದ ಅತಿ ಎತ್ತರದಲ್ಲಿ ಗರುಡ ಪಕ್ಷಿಯೊಂದು ಹಾರಾಡುತ್ತಿರುವುದನ್ನು ಕಂಡೆನು. ಆ ಪಕ್ಷಿಯು ಗಟ್ಟಿಯಾದ ಧ್ವನಿಯಲ್ಲಿ, “ತೊಂದರೆ! ತೊಂದರೆ! ಭೂಮಿಯ ಮೇಲೆ ವಾಸಿಸುವ ಜನರಿಗೆ ತೊಂದರೆ! ಇತರ ಮೂರು ಮಂದಿ ದೇವದೂತರು ತಮ್ಮ ತುತೂರಿಗಳನ್ನು ಊದಿದಾಗ ವಿಪತ್ತುಗಳು ಆರಂಭವಾಗುತ್ತವೆ” ಎಂದು ಕೂಗಿತು.

ಐದನೆಯ ತುತೂರಿ—ಮೊದಲನೆ ವಿಪತ್ತು

ಐದನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಒಂದು ನಕ್ಷತ್ರವು ಆಕಾಶದಿಂದ ಭೂಮಿಯ ಮೇಲೆ ಬಿದ್ದದ್ದನ್ನು ನಾನು ನೋಡಿದೆನು. ಆ ನಕ್ಷತ್ರಕ್ಕೆ ತಳವಿಲ್ಲದ ಆಳವಾದ ಕೂಪಕ್ಕೆ[b] ಹೋಗುವ ಬೀಗದ ಕೈ ಕೊಡಲ್ಪಟ್ಟಿತು. ನಂತರ ಆ ನಕ್ಷತ್ರವು ತಳವಿಲ್ಲದ ಆಳವಾದ ಕೂಪವನ್ನು ತೆರೆಯಿತು. ದೊಡ್ಡ ಕುಲುಮೆಯಿಂದ ಹೊಗೆಯು ಬರುವಂತೆ ಆ ಕೂಪದಿಂದ ಹೊಗೆ ಮೇಲಕ್ಕೆ ಬಂದಿತು. ಆ ಕೂಪದಿಂದ ಬಂದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾದವು.

ನಂತರ ಮಿಡತೆಗಳು ಹೊಗೆಯೊಳಗಿಂದ ಭೂಮಿಯ ಮೇಲಕ್ಕೆ ಬಂದಿಳಿದವು. ಅವುಗಳಿಗೆ ಚೇಳುಗಳಂತೆ ಕುಟುಕುವ ಶಕ್ತಿಯನ್ನು ಕೊಡಲಾಯಿತು. ಭೂಮಿಯ ಮೇಲಿನ ಹುಲ್ಲಿಗಾಗಲಿ ಸಸ್ಯಕ್ಕಾಗಲಿ ಮರಕ್ಕಾಗಲಿ ಹಾನಿ ಮಾಡದಂತೆ ಆ ಮಿಡತೆಗಳಿಗೆ ತಿಳಿಸಲಾಯಿತು. ತಮ್ಮ ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದ ಜನರನ್ನು ಹಿಂಸಿಸಲು ಅವುಗಳಿಗೆ ತಿಳಿಸಲಾಯಿತು. ಜನಗಳಿಗೆ ಐದು ತಿಂಗಳ ಕಾಲ ನೋವು ಉಂಟುಮಾಡುವಂತಹ ಶಕ್ತಿಯನ್ನು ಈ ಮಿಡತೆಗಳಿಗೆ ಕೊಡಲಾಯಿತು. ಆದರೆ ಜನರನ್ನು ಕೊಲ್ಲುವ ಶಕ್ತಿಯನ್ನು ಮಿಡತೆಗಳಿಗೆ ಕೊಡಲಿಲ್ಲ. ಈ ಮಿಡತೆಗಳು ಕುಟುಕಿದಾಗ ಚೇಳು ಕುಟುಕಿದಷ್ಟೇ ನೋವಾಗುತ್ತಿತ್ತು. ಆ ದಿನಗಳಲ್ಲಿ ಜನರು ಸಾಯುವುದಕ್ಕೆ ಮಾರ್ಗವನ್ನು ಹುಡುಕಿದರೂ ಅವರಿಗೆ ಸಿಕ್ಕುವುದಿಲ್ಲ. ಅವರು ಮರಣವನ್ನು ಬಯಸಿದರೂ ಮರಣವು ಅವರಿಗೆ ಮರೆಯಾಗುತ್ತದೆ.

ಮಿಡತೆಗಳು ಯುದ್ಧಕ್ಕೆ ಸಿದ್ಧಪಡಿಸಿದ ಕುದುರೆಗಳಂತೆ ಕಾಣುತ್ತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಎನೋ ಇದ್ದವು; ಅವುಗಳ ಮುಖಗಳು ಮಾನವರ ಮುಖಗಳಂತಿದ್ದವು. ತಲೆಕೂದಲು ಸ್ತ್ರೀಯರ ತಲೆಕೂದಲಂತಿತ್ತು; ಹಲ್ಲುಗಳು ಸಿಂಹಗಳ ಹಲ್ಲುಗಳಂತಿದ್ದವು. ಎದೆಗಳು ಉಕ್ಕಿನ ಕವಚಗಳಂತೆ ಇದ್ದವು; ರೆಕ್ಕೆಗಳ ಶಬ್ದವು ಯುದ್ಧದಲ್ಲಿ ಆತುರದಿಂದ ಓಡುವ ಅನೇಕ ಕುದುರೆಗಳ ಮತ್ತು ರಥಗಳ ಶಬ್ದದಂತಿತ್ತು. 10 ಚೇಳುಗಳಿಗಿರುವಂತೆ ಬಾಲಗಳೂ ಕೊಂಡಿಗಳೂ ಇದ್ದವು; ಜನರಿಗೆ ಐದುತಿಂಗಳ ಕಾಲ ನೋವುಂಟುಮಾಡುವ ಶಕ್ತಿಯು ಅವುಗಳ ಬಾಲಗಳಲ್ಲಿ ಇತ್ತು. 11 ಮಿಡತೆಗಳಿಗೆ ಒಬ್ಬ ರಾಜನಿದ್ದನು. ತಳವಿಲ್ಲದ ಕೂಪದ ದೂತನೇ ಅವುಗಳ ರಾಜನಾಗಿದ್ದನು. ಅವನಿಗೆ ಹಿಬ್ರೂ ಭಾಷೆಯಲ್ಲಿ “ಅಬದ್ದೋನ್” ಎಂಬ ಹೆಸರಿತ್ತು. ಗ್ರೀಕ್ ಭಾಷೆಯಲ್ಲಿ “ಅಪೊಲ್ಲುವೋನ್” (ವಿನಾಶಕರ) ಎಂದೂ ಹೆಸರಿತ್ತು.

12 ಮೊದಲನೆಯ ಮಹಾವಿಪತ್ತು ಕಳೆದುಹೋಯಿತು. ಇನ್ನೂ ಎರಡು ಮಹಾವಿಪತ್ತುಗಳು ಬರಲಿದ್ದವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International