Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
128 ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ
ಆತನ ಚಿತ್ತಾನುಸಾರವಾಗಿ ಜೀವಿಸುವವರೆಲ್ಲರು ಧನ್ಯರಾಗಿದ್ದಾರೆ.
2 ನೀನು ದುಡಿದು ಸಂಪಾದಿಸಿದ್ದನ್ನು ನೀನೇ ಅನುಭವಿಸುವೆ.
ನೀನು ಸಂತೋಷದಿಂದಿರುವೆ.
ನಿನಗೆ ಒಳ್ಳೆಯದಾಗುವುದು.
3 ಮನೆಯಲ್ಲಿರುವ ನಿನ್ನ ಹೆಂಡತಿ ಫಲಭರಿತವಾದ ದ್ರಾಕ್ಷಿಬಳ್ಳಿಯಂತಿರುವಳು.
ಊಟದ ಮೇಜಿನ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ನೀನು ನೆಟ್ಟ ಆಲಿವ್ ಮರಗಳಂತಿರುವರು.
4 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಹೀಗೆಯೇ ಆಶೀರ್ವದಿಸುವನು.
5 ಯೆಹೋವನು ನಿನ್ನನ್ನು ಚೀಯೋನಿನಿಂದ ಆಶೀರ್ವದಿಸಲಿ.
ನಿನ್ನ ಜೀವಮಾನವೆಲ್ಲಾ ನೀನು ಜೆರುಸಲೇಮಿನಲ್ಲಿ ಆಶೀರ್ವಾದಗಳನ್ನು ಅನುಭವಿಸುವಂತಾಗಲಿ.
6 ನೀನು ಜೀವದಿಂದಿದ್ದು ನಿನ್ನ ಮೊಮ್ಮಕ್ಕಳನ್ನು ಕಾಣುವಂತಾಗಲಿ.
ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.
12 ಆ ದಿನ ಯೆಹೋವನ ಸಹಾಯದಿಂದ ಇಸ್ರೇಲರು ಅಮೋರಿಯರನ್ನು ಸೋಲಿಸಿದರು. ಅಂದು ಯೆಹೋಶುವನು ಎಲ್ಲ ಜನರ ಎದುರಿಗೆ ನಿಂತುಕೊಂಡು ಯೆಹೋವನಿಗೆ ಹೀಗೆ ಮೊರೆಯಿಟ್ಟನು:
“ಸೂರ್ಯನೇ, ಗಿಬ್ಯೋನಿನ ಆಕಾಶದಲ್ಲಿ ನಿಂತಿರು, ಚಲಿಸಬೇಡ.
ಚಂದ್ರನೇ, ಅಯ್ಯಾಲೋನ್ ಕಣಿವೆಯ ಆಕಾಶದಲ್ಲಿ ನಿಂತಿರು, ಚಲಿಸಬೇಡ.”
13 ಆದ್ದರಿಂದ ಅವರು ಶತ್ರುಗಳನ್ನು ಸೋಲಿಸುವವರೆಗೆ ಸೂರ್ಯನೂ ಚಲಿಸಲಿಲ್ಲ, ಚಂದ್ರನೂ ಚಲಿಸಲಿಲ್ಲ. ಈ ಕಥೆಯು ಯಾಷಾರ್ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಸೂರ್ಯನು ಆಕಾಶದ ಮಧ್ಯದಲ್ಲಿ ನಿಂತನು. ಅವನು ಇಡೀ ದಿನ ಚಲಿಸಲಿಲ್ಲ. 14 ಅದಕ್ಕಿಂತ ಮೊದಲೆಂದೂ ಹೀಗಾಗಿರಲಿಲ್ಲ; ಆಮೇಲೆಯೂ ಆಗಲಿಲ್ಲ. ಯೆಹೋವನು ಒಬ್ಬ ಮಾನವನ ಆಜ್ಞೆಯನ್ನು ಪಾಲಿಸಿದ ದಿನ ಅದಾಗಿತ್ತು. ಇಸ್ರೇಲರಿಗೋಸ್ಕರ ಯೆಹೋವನು ನಿಜವಾಗಿಯೂ ಯುದ್ಧಮಾಡುತ್ತಿದ್ದನು.
ದೇವರ ಆಜ್ಞೆ ಮತ್ತು ಮನುಷ್ಯರ ನಿಯಮ
(ಮಾರ್ಕ 7:1-23)
15 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಯೇಸುವಿನ ಬಳಿಗೆ ಬಂದು, 2 “ನಮ್ಮ ಪೂರ್ವಿಕರಿಂದ ಬಂದ ಸಂಪ್ರದಾಯಗಳಿಗೆ ನಿನ್ನ ಶಿಷ್ಯರು ಏಕೆ ವಿಧೇಯರಾಗಿರುವುದಿಲ್ಲ? ನಿನ್ನ ಶಿಷ್ಯರು ಊಟ ಮಾಡುವುದಕ್ಕೆ ಮುಂಚೆ ಕೈ ತೊಳೆಯುವುದಿಲ್ಲವೇಕೆ?” ಎಂದು ಕೇಳಿದರು.
3 ಯೇಸು, “ನಿಮ್ಮ ಸಂಪ್ರದಾಯಗಳನ್ನು ಅನುಸರಿಸಲು ದೇವರ ಆಜ್ಞೆಗೆ ಅವಿಧೇಯರಾಗುವುದೇಕೆ? 4 ‘ನಿಮ್ಮ ತಂದೆತಾಯಿಗಳಿಗೆ ಗೌರವ ನೀಡಿ’(A) ಎಂಬುದು ದೇವರ ಆಜ್ಞೆ. ‘ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೀನೈಸಿದರೆ ಅವನನ್ನು ಕೊಲ್ಲಬೇಕು’(B) ಎಂಬುದೂ ದೇವರ ಆಜ್ಞೆ. 5 ಆದರೆ ಒಬ್ಬ ವ್ಯಕ್ತಿಯು ತನ್ನ ತಂದೆಗಾಗಲಿ ತಾಯಿಗಾಗಲಿ ‘ನಿಮಗೆ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ, ಏಕೆಂದರೆ ನನ್ನಲ್ಲಿರುವ ಪ್ರತಿಯೊಂದು ದೇವರಿಗೆ ಪ್ರತಿಷ್ಠಿತವಾಗಿದೆ’ ಎಂದು ಹೇಳಿದರೆ, 6 ಅವನು ತನ್ನ ತಂದೆಯನ್ನು ಗೌರವಿಸಬೇಕಿಲ್ಲ ಎಂದು ನೀವು ಬೋಧಿಸುತ್ತೀರಿ. ಹೀಗಿರಲು ನಿಮ್ಮ ಸಂಪ್ರದಾಯವೇ ದೇವರ ಆಜ್ಞೆಯನ್ನು ತಳ್ಳಿಹಾಕಿದೆ. 7 ನೀವು ಕಪಟಿಗಳು. ಯೆಶಾಯನು ನಿಮ್ಮನ್ನು ಕುರಿತು ಸರಿಯಾಗಿ ಹೇಳಿದ್ದಾನೆ. ಅದೇನೆಂದರೆ:
8 ‘ಇವರು ನನ್ನನ್ನು ಮಾತಿನಿಂದ ಗೌರವಿಸುತ್ತಾರೆ.
ಇವರ ಮನಸ್ಸಾದರೋ ನನಗೆ ದೂರವಾಗಿದೆ.
9 ಇವರು ನನ್ನನ್ನು ಆರಾಧಿಸುವುದೂ ನಿರರ್ಥಕ.
ಇವರು ಮನುಷ್ಯರ ಕಟ್ಟಳೆಗಳನ್ನೇ ಉಪದೇಶಿಸುತ್ತಾರೆ.’(C)”
Kannada Holy Bible: Easy-to-Read Version. All rights reserved. © 1997 Bible League International