Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 128

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

128 ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ
    ಆತನ ಚಿತ್ತಾನುಸಾರವಾಗಿ ಜೀವಿಸುವವರೆಲ್ಲರು ಧನ್ಯರಾಗಿದ್ದಾರೆ.

ನೀನು ದುಡಿದು ಸಂಪಾದಿಸಿದ್ದನ್ನು ನೀನೇ ಅನುಭವಿಸುವೆ.
    ನೀನು ಸಂತೋಷದಿಂದಿರುವೆ.
    ನಿನಗೆ ಒಳ್ಳೆಯದಾಗುವುದು.
ಮನೆಯಲ್ಲಿರುವ ನಿನ್ನ ಹೆಂಡತಿ ಫಲಭರಿತವಾದ ದ್ರಾಕ್ಷಿಬಳ್ಳಿಯಂತಿರುವಳು.
    ಊಟದ ಮೇಜಿನ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ನೀನು ನೆಟ್ಟ ಆಲಿವ್ ಮರಗಳಂತಿರುವರು.
ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಹೀಗೆಯೇ ಆಶೀರ್ವದಿಸುವನು.
ಯೆಹೋವನು ನಿನ್ನನ್ನು ಚೀಯೋನಿನಿಂದ ಆಶೀರ್ವದಿಸಲಿ.
    ನಿನ್ನ ಜೀವಮಾನವೆಲ್ಲಾ ನೀನು ಜೆರುಸಲೇಮಿನಲ್ಲಿ ಆಶೀರ್ವಾದಗಳನ್ನು ಅನುಭವಿಸುವಂತಾಗಲಿ.
ನೀನು ಜೀವದಿಂದಿದ್ದು ನಿನ್ನ ಮೊಮ್ಮಕ್ಕಳನ್ನು ಕಾಣುವಂತಾಗಲಿ.

ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.

ಯೆಹೋಶುವನು 6:1-16

ಜೆರಿಕೊ ಪಟ್ಟಣದ ಬಾಗಿಲನ್ನು ಮುಚ್ಚಲಾಗಿತ್ತು. ಇಸ್ರೇಲರು ಸಮೀಪದಲ್ಲೇ ಇದ್ದುದರಿಂದ ಪಟ್ಟಣದ ಜನರು ಹೆದರಿಕೊಂಡಿದ್ದರು. ಒಬ್ಬರಾದರೂ ಪಟ್ಟಣದಲ್ಲಿ ಪ್ರವೇಶ ಮಾಡಲಿಲ್ಲ; ಒಬ್ಬರಾದರೂ ಪಟ್ಟಣದಿಂದ ಹೊರ ಬರಲಿಲ್ಲ.

ಆಗ ಯೆಹೋವನು ಯೆಹೋಶುವನಿಗೆ, “ಇಗೋ ನೋಡು, ನೀನು ಜೆರಿಕೊ ನಗರವನ್ನು ಗೆಲ್ಲುವಂತೆ ಮಾಡುತ್ತೇನೆ. ನೀನು ಅರಸನನ್ನು ಮತ್ತು ನಗರದ ಎಲ್ಲ ಯೋಧರನ್ನು ಸೋಲಿಸುವೆ. ಪ್ರತಿ ನಿತ್ಯ ಒಂದು ಸಲ ನಿನ್ನ ಸೇನೆಯೊಂದಿಗೆ ನಗರದ ಸುತ್ತಲೂ ಸುತ್ತಬೇಕು. ಹೀಗೆ ಆರು ದಿನಗಳವರೆಗೆ ಸುತ್ತಬೇಕು. ಏಳು ಮಂದಿ ಯಾಜಕರಿಗೆ ಟಗರಿನ ಕೊಂಬಿನಿಂದ ಮಾಡಿದ ತುತ್ತೂರಿಗಳನ್ನು ಹಿಡಿದುಕೊಂಡು ಪವಿತ್ರ ಪೆಟ್ಟಿಗೆಯ ಮುಂದೆ ಹೋಗಲು ಹೇಳು. ಏಳನೆಯ ದಿನದಲ್ಲಿ ನಗರದ ಸುತ್ತಲೂ ನೀವು ಏಳುಸಲ ಸುತ್ತಬೇಕು. ಏಳನೆಯ ದಿನದಲ್ಲಿ ಸುತ್ತುವಾಗ ತುತ್ತೂರಿಯನ್ನು ಊದಬೇಕೆಂದು ಯಾಜಕರಿಗೆ ಹೇಳು. ಯಾಜಕರ ತುತ್ತೂರಿ ಧ್ವನಿಯನ್ನು ಕೇಳಿದಾಗ ಜನರು ಆರ್ಭಟಿಸಬೇಕು. ಆಗ ನಗರದ ಗೋಡೆಗಳು ಬೀಳುವವು; ಆಗ ನೀವು ನೇರವಾಗಿ ನಗರದೊಳಗೆ ಹೋಗಿರಿ” ಅಂದನು.

ಜೆರಿಕೊವನ್ನು ಸ್ವಾಧೀನಪಡಿಸಿಕೊಂಡದ್ದು

ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಒಟ್ಟಿಗೆ ಕರೆದು, ಅವರಿಗೆ, “ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿರಿ. ಏಳು ಮಂದಿ ಯಾಜಕರು ತುತ್ತೂರಿಗಳನ್ನು ತೆಗೆದುಕೊಂಡು ಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಹೇಳಿದನು.

ಬಳಿಕ ಯೆಹೋಶುವನು ಜನರಿಗೆ, “ಈಗ ನಗರದ ಸುತ್ತ ಪ್ರದಕ್ಷಿಣೆ ಹಾಕಿರಿ. ಆಯುಧಗಳನ್ನು ಹಿಡಿದುಕೊಂಡು ಯೋಧರು ಯೆಹೋವನ ಪವಿತ್ರಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಆಜ್ಞಾಪಿಸಿದನು.

ಯೆಹೋಶುವನು ಜನರೊಂದಿಗೆ ಮಾತನಾಡುವದನ್ನು ಮುಗಿಸಿದ ಮೇಲೆ, ಏಳು ಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಊದುತ್ತಾ ಯೆಹೋವನ ಮುಂದೆ ನಡೆಯಲು ಪ್ರಾರಂಭಿಸಿದರು. ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ಅವರನ್ನು ಹಿಂಬಾಲಿಸಿದರು. ಆಯುಧಗಳನ್ನು ಹಿಡಿದುಕೊಂಡ ಯೋಧರು ಯಾಜಕರ ಮುಂದೆ ನಡೆದರು. ಪವಿತ್ರ ಪೆಟ್ಟಿಗೆಯ ಹಿಂದೆ ಜನರು ಕ್ರಮಬದ್ಧವಾಗಿ ಹೆಜ್ಜೆಯನ್ನು ಹಾಕುತ್ತಾ ತಮ್ಮ ತುತ್ತೂರಿಗಳನ್ನು ಊದುತ್ತಿದ್ದರು. 10 ಯೆಹೋಶುವನು ಜನರಿಗೆ, “ಆರ್ಭಟಿಸಬೇಡಿರಿ, ನಾನು ಹೇಳುವ ದಿನದವರೆಗೆ ಒಂದು ಶಬ್ದವನ್ನೂ ಉಚ್ಚರಿಸಬೇಡಿರಿ. ಆಮೇಲೆ ನೀವು ಆರ್ಭಟಿಸಬಹುದು” ಎಂದು ಹೇಳಿದನು.

11 ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಒಂದು ಸಲ ನಗರವನ್ನು ಸುತ್ತಿದ ಮೇಲೆ ಪಾಳೆಯಕ್ಕೆ ಹಿಂತಿರುಗಿ ಬಂದು ಆ ರಾತ್ರಿ ಅಲ್ಲಿಯೇ ಉಳಿದುಕೊಂಡರು.

12 ಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಪುನಃ ಹೊತ್ತುಕೊಂಡು ಹೋದರು. 13 ಏಳುಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಯೆಹೋವನ ಪವಿತ್ರ ಪೆಟ್ಟಿಗೆಯ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ನಡೆದರು. ಆಯಧ ಸನ್ನದ್ಧರಾದ ಸೈನಿಕರು ಅವರ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ನಡೆದರು. ಯೆಹೋವನ ಪವಿತ್ರ ಪೆಟ್ಟಿಗೆಯ ಹಿಂಭಾಗದಲ್ಲಿ ಉಳಿದ ಜನರು ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ಪಟ್ಟಣದ ಸುತ್ತಲೂ ನಡೆದರು. 14 ಎರಡನೆಯ ದಿನ ಅವರೆಲ್ಲರು ನಗರವನ್ನು ಒಂದು ಸಲ ಕ್ರಮಬದ್ಧವಾಗಿ ಸುತ್ತಿ ಪಾಳೆಯಕ್ಕೆ ಹಿಂತಿರುಗಿದರು. ಹೀಗೆ ಅವರು ಆರು ದಿನಗಳವರೆಗೆ ಮಾಡಿದರು.

15 ಏಳನೆಯ ದಿನ ಸೂರ್ಯೋದಯವಾಗುತ್ತಲೇ ಅವರು ಎದ್ದರು. ಪಟ್ಟಣದ ಸುತ್ತಲು ಅವರು ಏಳು ಸಲ ಸುತ್ತಿದರು. ಅವರು ಮುಂಚಿನ ದಿನಗಳಲ್ಲಿ ನಡೆದ ಕ್ರಮದಲ್ಲಿಯೇ ನಡೆದರು. ಆದರೆ ಆ ದಿನ ಅವರು ನಗರದ ಸುತ್ತಲು ಏಳು ಸಲ ಸುತ್ತಿದರು. 16 ಏಳನೆಯ ಸಲ ಅವರು ನಗರವನ್ನು ಸುತ್ತುವಾಗ ಯಾಜಕರು ತುತ್ತೂರಿಗಳನ್ನು ಊದಿದರು. ಆಗ ಯೆಹೋಶುವನು ಜನರಿಗೆ, “ಈಗ ಆರ್ಭಟಿಸಿರಿ, ಯೆಹೋವನು ಈ ನಗರವನ್ನು ನಿಮಗೆ ಕೊಟ್ಟಿದ್ದಾನೆ.

ಯೆಹೋಶುವನು 6:20

20 ಯಾಜಕರು ತುತ್ತೂರಿಗಳನ್ನು ಊದಿದಾಗ ಜನರು ಆರ್ಭಟಿಸತೊಡಗಿದರು. ಆಗ ಗೋಡೆಗಳು ಬಿದ್ದವು; ಜನರು ನೇರವಾಗಿ ನಗರದೊಳಗೆ ನುಗ್ಗಿದರು. ಹೀಗೆ ಇಸ್ರೇಲರು ನಗರವನ್ನು ಸ್ವಾಧೀನಪಡಿಸಿಕೊಂಡರು.

ಅಪೊಸ್ತಲರ ಕಾರ್ಯಗಳು 13:1-12

ಬಾರ್ನಬ ಮತ್ತು ಸೌಲರಿಗೆ ವಹಿಸಲಾದ ವಿಶೇಷಕಾರ್ಯ

13 ಅಂತಿಯೋಕ್ಯದ ಸಭೆಯಲ್ಲಿ ಕೆಲವು ಪ್ರವಾದಿಗಳು ಮತ್ತು ಉಪದೇಶಕರಿದ್ದರು. ಅವರು ಯಾರೆಂದರೆ: ಬಾರ್ನಬ, ಸಿಮೆಯೋನ್ (ಇವನನ್ನು ನೀಗರ್ ಎಂತಲೂ ಕರೆಯುತ್ತಿದ್ದರು.) ಲೂಸಿಯಸ್ (ಸಿರೇನ್ ಪಟ್ಟಣದವನು) ಮೆನಹೇನ (ಹೆರೋದ ರಾಜನೊಂದಿಗೆ ಬೆಳೆದವನು) ಮತ್ತು ಸೌಲ. ಇವರೆಲ್ಲರು ಪ್ರಭುವಿನ ಸೇವೆ ಮಾಡುತ್ತಿದ್ದರು ಮತ್ತು ಉಪವಾಸ ಮಾಡುತ್ತಿದ್ದರು. ಪವಿತ್ರಾತ್ಮನು ಅವರಿಗೆ, “ನಾನು ವಿಶೇಷವಾದ ಕಾರ್ಯಕ್ಕಾಗಿ ಬಾರ್ನಬ ಮತ್ತು ಸೌಲರನ್ನು ಆರಿಸಿಕೊಂಡಿದ್ದೇನೆ. ಆ ಕಾರ್ಯಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ” ಎಂದು ಹೇಳಿದನು.

ಆದ್ದರಿಂದ ಸಭೆಯವರು ಉಪವಾಸವಿದ್ದು ಪ್ರಾರ್ಥನೆ ಮಾಡಿದರು. ಅವರು ಬಾರ್ನಬ ಮತ್ತು ಸೌಲರ ಮೇಲೆ ಹಸ್ತಾರ್ಪಣೆ ಮಾಡಿ ಅವರನ್ನು ಕಳುಹಿಸಿಕೊಟ್ಟರು.

ಸೈಪ್ರಸ್‌ನಲ್ಲಿ ಬಾರ್ನಬ ಮತ್ತು ಸೌಲರು

ಬಾರ್ನಬ ಮತ್ತು ಸೌಲರನ್ನು ಪವಿತ್ರಾತ್ಮನೇ ಕಳುಹಿಸಿಕೊಟ್ಟನು. ಅವರು ಸೆಲೂಸಿಯಾ ಪಟ್ಟಣಕ್ಕೆ ಹೋದರು. ಬಳಿಕ ಅವರು ಸೆಲೂಸಿಯಾದಿಂದ ಸೈಪ್ರಸ್ ದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣ ಮಾಡಿದರು. ಬಾರ್ನಬ ಮತ್ತು ಸೌಲರು ಸಲಾಮಿಸ್ ಪಟ್ಟಣಕ್ಕೆ ಬಂದಾಗ ಯೆಹೂದ್ಯರ ಸಭಾಮಂದಿರದಲ್ಲಿ ದೇವರ ಸಂದೇಶವನ್ನು ಸಾರಿದರು. (ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯ ಮಾಡುವುದಕ್ಕಾಗಿ ಅವರೊಂದಿಗಿದ್ದನು.)

ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣ ಮಾಡುತ್ತಾ ಪಾಫೋಸ್ ಎಂಬ ಊರಿಗೆ ಹೋದರು. ಮಂತ್ರತಂತ್ರಗಳನ್ನು ಮಾಡುತ್ತಿದ್ದ ಒಬ್ಬ ಯೆಹೂದ್ಯನನ್ನು ಅವರು ಪಾಫೋಸಿನಲ್ಲಿ ಕಂಡರು. ಅವನ ಹೆಸರು “ಬಾರ್ ಯೇಸು.” ಅವನೊಬ್ಬ ಸುಳ್ಳುಪ್ರವಾದಿ. ಸೆರ್ಗ್ಯಪೌಲನೆಂಬ ರಾಜ್ಯಪಾಲನ ಹತ್ತಿರದಲ್ಲೇ ಅವನು ಯಾವಾಗಲೂ ಇರುತ್ತಿದ್ದನು. ಸೆರ್ಗ್ಯಪೌಲನು ಜ್ಞಾನವಂತನಾಗಿದ್ದನು. ಅವನು ದೇವರ ವಾಕ್ಯವನ್ನು ಕೇಳಲು ಬಾರ್ನಬ ಮತ್ತು ಸೌಲರನ್ನು ಆಮಂತ್ರಿಸಿದನು. ಆದರೆ ಮಂತ್ರವಾದಿಯಾದ ಎಲಿಮನು ಬಾರ್ನಬ ಮತ್ತು ಸೌಲರಿಗೆ ವಿರೋಧವಾಗಿದ್ದನು. (ಬಾರ್ ಯೇಸುವನ್ನು ಗ್ರೀಕ್ ಭಾಷೆಯಲ್ಲಿ ಎಲಿಮ ಎಂದು ಕರೆಯುತ್ತಿದ್ದರು.) ರಾಜ್ಯಪಾಲನು ಯೇಸುವಿನಲ್ಲಿ ನಂಬಿಕೆ ಇಡದ ಹಾಗೆ ಮಾಡಲು ಎಲಿಮನು ಪ್ರಯತ್ನಿಸಿದನು. ಆದರೆ ಪೌಲನು (ಸೌಲನ ಮತ್ತೊಂದು ಹೆಸರು ಪೌಲ.) ಪವಿತ್ರಾತ್ಮಭರಿತನಾದನು. ಪೌಲನು ಎಲಿಮನನ್ನು ದಿಟ್ಟಿಸಿ ನೋಡಿ, 10 ಅವನಿಗೆ, “ನೀನು ಸೈತಾನನ ಮಗ! ಪ್ರತಿಯೊಂದು ಒಳ್ಳೆಯದಕ್ಕೂ ನೀನು ಶತ್ರು! ನೀನು ದುಷ್ಟತಂತ್ರಗಳಿಂದಲೂ ಸುಳ್ಳುಗಳಿಂದಲೂ ತುಂಬಿದವನಾಗಿರುವೆ. ಪ್ರಭುವಿನ ಸತ್ಯಗಳನ್ನು ಸುಳ್ಳುಗಳನ್ನಾಗಿ ಪರಿವರ್ತಿಸಲು ನೀನು ಯಾವಾಗಲೂ ಪ್ರಯತ್ನಿಸುತ್ತಿರುವೆ! 11 ಇಗೋ, ಪ್ರಭುವು ಕೈ ಎತ್ತಿದ್ದಾನೆ. ನೀನು ಕುರಡನಾಗಿ ಸ್ವಲ್ಪಕಾಲದವರೆಗೆ ಏನನ್ನೂ ನೋಡಲಾರೆ; ಸೂರ್ಯನ ಬೆಳಕನ್ನು ಸಹ ಕಾಣಲಾರೆ” ಎಂದನು.

ಆಗ ಎಲಿಮನಿಗೆ ಎಲ್ಲವೂ ಕತ್ತಲಾಯಿತು. ತನ್ನನ್ನು ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸುತ್ತಾ ಸುತ್ತಮುತ್ತ ನಡೆದನು. 12 ಇದನ್ನು ಕಂಡ ರಾಜ್ಯಪಾಲನು ಪ್ರಭುವನ್ನು ನಂಬಿಕೊಂಡನು. ಪ್ರಭುವಿನ ವಿಷಯವಾದ ಉಪದೇಶವನ್ನು ಕೇಳಿ ವಿಸ್ಮಿತನಾದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International