Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
128 ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ
ಆತನ ಚಿತ್ತಾನುಸಾರವಾಗಿ ಜೀವಿಸುವವರೆಲ್ಲರು ಧನ್ಯರಾಗಿದ್ದಾರೆ.
2 ನೀನು ದುಡಿದು ಸಂಪಾದಿಸಿದ್ದನ್ನು ನೀನೇ ಅನುಭವಿಸುವೆ.
ನೀನು ಸಂತೋಷದಿಂದಿರುವೆ.
ನಿನಗೆ ಒಳ್ಳೆಯದಾಗುವುದು.
3 ಮನೆಯಲ್ಲಿರುವ ನಿನ್ನ ಹೆಂಡತಿ ಫಲಭರಿತವಾದ ದ್ರಾಕ್ಷಿಬಳ್ಳಿಯಂತಿರುವಳು.
ಊಟದ ಮೇಜಿನ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ನೀನು ನೆಟ್ಟ ಆಲಿವ್ ಮರಗಳಂತಿರುವರು.
4 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಹೀಗೆಯೇ ಆಶೀರ್ವದಿಸುವನು.
5 ಯೆಹೋವನು ನಿನ್ನನ್ನು ಚೀಯೋನಿನಿಂದ ಆಶೀರ್ವದಿಸಲಿ.
ನಿನ್ನ ಜೀವಮಾನವೆಲ್ಲಾ ನೀನು ಜೆರುಸಲೇಮಿನಲ್ಲಿ ಆಶೀರ್ವಾದಗಳನ್ನು ಅನುಭವಿಸುವಂತಾಗಲಿ.
6 ನೀನು ಜೀವದಿಂದಿದ್ದು ನಿನ್ನ ಮೊಮ್ಮಕ್ಕಳನ್ನು ಕಾಣುವಂತಾಗಲಿ.
ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.
ಜನರಿಗೆ ನೆನಪನ್ನು ತರುವ ಕಲ್ಲುಗಳು
4 ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿದರು. ಆಗ ಯೆಹೋವನು ಯೆಹೋಶುವನಿಗೆ, 2 “ಪ್ರತಿಯೊಂದು ಕುಲದಿಂದ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸು. 3 ನದಿಯಲ್ಲಿ ಯಾಜಕರು ನಿಂತುಕೊಂಡಿದ್ದ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಹುಡುಕಿ ತೆಗೆದುಕೊಂಡು ಬರುವುದಕ್ಕೆ ಅವರಿಗೆ ಹೇಳು. ನೀವು ಈ ರಾತ್ರಿ ಇಳಿದುಕೊಳ್ಳುವ ಸ್ಥಳದಲ್ಲಿ ಆ ಕಲ್ಲುಗಳನ್ನು ನಿಲ್ಲಿಸಿರಿ” ಎಂದು ಹೇಳಿದನು.
4 ಆದ್ದರಿಂದ ಯೆಹೋಶುವನು ಪ್ರತಿಯೊಂದು ಕುಲದಿಂದ ಒಬ್ಬೊಬ್ಬನನ್ನು ಆರಿಸಿದನು. ಆಮೇಲೆ ಆ ಹನ್ನೆರಡು ಜನರನ್ನು ಒಟ್ಟಿಗೆ ಕರೆದು ಅವರಿಗೆ, 5 “ನದಿಯಲ್ಲಿ ನಿಮ್ಮ ದೇವರಾದ ಯೆಹೋವನ ಪವಿತ್ರ ಪೆಟ್ಟಿಗೆ ಇರುವ ಸ್ಥಳಕ್ಕೆ ಹೋಗಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿರಿ. 6 ಈ ಕಲ್ಲುಗಳು ನಿಮ್ಮ ಮಧ್ಯದಲ್ಲಿ ಗುರುತಾಗಿರುವವು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳು ಏನು ಸೂಚಿಸುತ್ತವೆ?’ ಎಂದು ಕೇಳುತ್ತಾರೆ. 7 ಅದಕ್ಕೆ ನೀವು, ‘ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಜೋರ್ಡನ್ ನದಿಯನ್ನು ದಾಟುತ್ತಿರುವಾಗ ಹರಿಯುವ ನೀರು ನಿಂತುಹೋಯಿತು’ ಎಂದು ಹೇಳಿರಿ. ಆ ಕಲ್ಲುಗಳು ಇಸ್ರೇಲರಿಗೆ ಸದಾಕಾಲ ಸಾಕ್ಷಿಗಳಾಗಿರುತ್ತವೆ” ಎಂದು ಹೇಳಿದನು.
8 ಇಸ್ರೇಲರು ಯೆಹೋಶುವನ ಆಜ್ಞೆಯಂತೆ ಜೋರ್ಡನ್ ನದಿಯ ಮಧ್ಯಭಾಗದಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು ಬಂದರು. ಇಸ್ರೇಲಿನ ಹನ್ನೆರಡು ಕುಲಗಳಿಗೆ ಸರಿಯಾಗಿ ಹನ್ನೆರಡು ಕಲ್ಲುಗಳಿದ್ದವು. ಯೆಹೋವನು ಯೆಹೋಶುವನಿಗೆ ಹೇಳಿದಂತೆಯೇ ಅವರು ಕಲ್ಲುಗಳನ್ನು ತಮ್ಮ ಸಂಗಡ ತೆಗೆದುಕೊಂಡು ಬಂದು ತಾವು ಇಳಿದುಕೊಂಡಿದ್ದ ಸ್ಥಳದಲ್ಲಿ ಆ ಕಲ್ಲುಗಳನ್ನು ಇಟ್ಟರು. 9 (ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ಜೋರ್ಡನ್ ನದಿಯ ಮಧ್ಯದಲ್ಲಿ ಅಂದರೆ ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುವಾಗ ಯಾಜಕರು ನಿಂತಿದ್ದ ಸ್ಥಳದಲ್ಲಿ ಇಟ್ಟನು. ಆ ಕಲ್ಲುಗಳು ಇಂದಿಗೂ ಆ ಸ್ಥಳದಲ್ಲಿವೆ.)
10 ಮೋಶೆಯು ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ. ಯೆಹೋವನ ಅಪ್ಪಣೆಗಳನ್ನೆಲ್ಲ ಅವರು ಕೈಗೊಳ್ಳುವವರೆಗೆ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ನದಿಯ ಮಧ್ಯದಲ್ಲಿ ನಿಂತುಕೊಂಡೇ ಇದ್ದರು. ಜನರು ತ್ವರಿತಗತಿಯಿಂದ ನದಿಯನ್ನು ದಾಟಿದರು. 11 ಜನರು ನದಿ ದಾಟಿದ ಮೇಲೆ ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಜನರ ಮುಂದಗಡೆಯಲ್ಲಿ ತೆಗೆದುಕೊಂಡು ಹೋದರು.
12 ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆ ಕುಲದ ಅರ್ಧಜನರು ಮೋಶೆಯ ಆಜ್ಞೆಯನ್ನು ಪಾಲಿಸಿದರು. ಇವರು ಬೇರೆಯವರಿಗಿಂತ ಮುಂಚೆಯೇ ನದಿಯನ್ನು ದಾಟಿದರು. ಯೆಹೋವನು ವಾಗ್ದಾನ ಮಾಡಿದ ದೇಶವನ್ನು ಪಡೆಯಲು ಇಸ್ರೇಲರಿಗೆ ಸಹಾಯ ಮಾಡಲು ಇವರು ಯುದ್ಧಸನ್ನದ್ಧರಾಗಿ ಹೋಗುತ್ತಿದ್ದರು. 13 ಯುದ್ಧಸನ್ನದ್ಧರಾದ ಸುಮಾರು ನಲವತ್ತು ಸಾವಿರ ಭಟರು ಯೆಹೋವನ ಮುಂದೆ ಜೆರಿಕೊವಿನ ಬಯಲಿನ ಕಡೆಗೆ ಹೋದರು.
14 ಯೆಹೋವನು ಆ ದಿನ ಇಸ್ರೇಲಿನ ಎಲ್ಲಾ ಜನರ ದೃಷ್ಟಿಯಲ್ಲಿ ಯೆಹೋಶುವನನ್ನು ಘನವಂತನನ್ನಾಗಿ ಮಾಡಿದನು. ಆ ಹೊತ್ತಿನಿಂದ ಜನರು ಯೆಹೋಶುವನನ್ನು ಗೌರವಿಸತೊಡಗಿದರು. ಅವರು ಮೋಶೆಯನ್ನು ಗೌರವಿಸಿದಂತೆ ಯೆಹೋಶುವನನ್ನು ಅವನ ಜೀವಮಾನವೆಲ್ಲಾ ಗೌರವಿಸಿದರು.
15 ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ಇನ್ನೂ ನದಿಯಲ್ಲಿ ಇದ್ದಾಗ ಯೆಹೋವನು ಯೆಹೋಶುವನಿಗೆ, 16 “ನದಿಯಿಂದ ಹೊರಬರಲು ಯಾಜಕರಿಗೆ ಆಜ್ಞಾಪಿಸು” ಎಂದು ಹೇಳಿದನು.
17 ಯೆಹೋಶುವನು ಯಾಜಕರಿಗೆ, “ಜೋರ್ಡನ್ ನದಿಯಿಂದ ಹೊರಗೆ ಬನ್ನಿರಿ” ಎಂದು ಆಜ್ಞಾಪಿಸಿದನು.
18 ಯಾಜಕರು ಯೆಹೋಶುವನ ಆಜ್ಞೆಯಂತೆ ಪವಿತ್ರ ಪೆಟ್ಟಿಗೆಯನ್ನು ತಮ್ಮ ಸಂಗಡ ತೆಗೆದುಕೊಂಡು ನದಿಯಿಂದ ಹೊರಗಡೆ ಬಂದರು. ಯಾಜಕರ ಪಾದಗಳು ನದಿಯ ಆಚೆದಡದ ನೆಲವನ್ನು ಮುಟ್ಟಿದ ಕೂಡಲೇ ನದಿಯ ನೀರು ಮತ್ತೆ ಹರಿಯುವುದಕ್ಕೆ ಆರಂಭಿಸಿತು. ಜನರು ದಾಟುವುದಕ್ಕಿಂತ ಮುಂಚೆ ಹರಿಯುತ್ತಿದ್ದಂತೆ ನೀರು ಮತ್ತೆ ದಡಮೀರಿ ಹರಿಯಿತು.
19 ಅವರು ಜೋರ್ಡನ್ ನದಿಯನ್ನು ಮೊದಲನೆಯ ತಿಂಗಳಿನ ಹತ್ತನೆಯ ದಿನ ದಾಟಿದರು. ಅವರು ಜೆರಿಕೊವಿನ ಪೂರ್ವಕ್ಕಿರುವ ಗಿಲ್ಗಾಲಿನಲ್ಲಿ ಇಳಿದುಕೊಂಡಿದ್ದರು. 20 ಅವರು ಜೋರ್ಡನ್ ನದಿಯಿಂದ ತೆಗೆದುಕೊಂಡು ಬಂದ ಆ ಹನ್ನೆರಡು ಕಲ್ಲುಗಳನ್ನು ತಮ್ಮ ಸಂಗಡ ತೆಗೆದುಕೊಂಡು ಹೋದರು. ಯೆಹೋಶುವನು ಆ ಕಲ್ಲುಗಳನ್ನು ಗಿಲ್ಗಾಲಿನಲ್ಲಿ ನಿಲ್ಲಿಸಿದನು. 21 ಅನಂತರ ಯೆಹೋಶುವನು ಜನರಿಗೆ, “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳು ಏನು ಸೂಚಿಸುತ್ತವೆ?’ ಎಂದು ಕೇಳುವಾಗ ನೀವು ಹೀಗೆ ಹೇಳಬೇಕು: 22 ‘ಇಸ್ರೇಲಿನ ಜನರು ಜೋರ್ಡನ್ ನದಿಯನ್ನು ಒಣನೆಲದ ಮೇಲೆ ಹೇಗೆ ದಾಟಿದರು ಎಂಬುದನ್ನು ನಮ್ಮ ನೆನಪಿಗೆ ತರಲು ಈ ಕಲ್ಲುಗಳು ಸಹಾಯಕವಾಗಿವೆ.’ 23 ನಿಮ್ಮ ದೇವರಾದ ಯೆಹೋವನು ಜೋರ್ಡನ್ ನದಿಯ ನೀರಿನ ಚಲನೆಯನ್ನು ನಿಲ್ಲಿಸಿದನು. ಕೆಂಪುಸಮುದ್ರದ ಹಾಗೆ ಈ ನದಿಯೂ ಸಹ ಜನರೆಲ್ಲರೂ ದಾಟುವವರೆಗೆ ಬತ್ತಿಹೋಗಿತ್ತು. ಜನರು ದಾಟಲು ಸಾಧ್ಯವಾಗುವಂತೆ ಕೆಂಪುಸಮುದ್ರದ ನೀರಿನ ಚಲನೆಯನ್ನು ಸಹ ಯೆಹೋವನು ತಡೆದಿದ್ದನೆಂಬುದನ್ನು ಸ್ಮರಿಸಿಕೊಳ್ಳಿ ಎಂದು ನೀವು ಮಕ್ಕಳಿಗೆ ಹೇಳಬೇಕು. 24 ಈ ಭೂಲೋಕದ ಜನರೆಲ್ಲರೂ ಯೆಹೋವನೇ ಸರ್ವಶಕ್ತನೆಂದು ತಿಳಿದುಕೊಳ್ಳಬೇಕೆಂದು ಆತನು ಹೀಗೆ ಮಾಡಿದನು. ಹೀಗೆ ಅವರು ನಿಮ್ಮ ದೇವರಾದ ಯೆಹೋವನಿಗೆ ಯಾವಾಗಲೂ ಭಯಪಡುವರು” ಅಂದನು.
13 ನೀವು ದೇವರ ಸಂದೇಶವನ್ನು ಸ್ವೀಕರಿಸಿಕೊಂಡದ್ದಕ್ಕಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನೀವು ಆ ಸಂದೇಶವನ್ನು ನಮ್ಮಿಂದ ಕೇಳಿ, ಅದನ್ನು ದೇವರ ವಾಕ್ಯದಂತೆ ಒಪ್ಪಿಕೊಂಡಿರೇ ಹೊರತು ಮಾನವನ ವಾಕ್ಯಗಳೆಂದಲ್ಲ. ಅದು ನಿಜವಾಗಿಯೂ ದೇವರ ಸಂದೇಶ. ಆ ಸಂದೇಶವು ನಂಬುವವರಾದ ನಿಮ್ಮಲ್ಲಿ ಕಾರ್ಯಮಾಡುತ್ತದೆ. 14 ಸಹೋದರ ಸಹೋದರಿಯರೇ, ನೀವು ಜುದೇಯದಲ್ಲಿರುವ ದೇವರ ಸಭೆಗಳಂತಿದ್ದೀರಿ. ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಅವರು ಇತರ ಯೆಹೂದ್ಯರಿಂದ ಹಿಂಸಿಸಲ್ಪಟ್ಟರು. ಅದೇ ರೀತಿಯಲ್ಲಿ ನೀವೂ ನಿಮ್ಮ ದೇಶದ ಇತರ ಜನರಿಂದ ಹಿಂಸಿಸಲ್ಪಟ್ಟವರಾಗಿದ್ದೀರಿ. 15 ಆ ಯೆಹೂದ್ಯರು ಪ್ರಭುವಾದ ಯೇಸುವನ್ನೂ ಪ್ರವಾದಿಗಳನ್ನೂ ಕೊಂದುಹಾಕಿದರು. ತಮ್ಮ ದೇಶದಿಂದ (ಜುದೇಯ) ನಮ್ಮನ್ನು ಬಲವಂತವಾಗಿ ಹೊರಗಟ್ಟಿದರು. ಅವರು ದೇವರಿಗೆ ಮೆಚ್ಚಿಕೆಯಾದವರಾಗಿಲ್ಲ ಮತ್ತು ಜನರೆಲ್ಲರ ವಿರುದ್ಧವಾಗಿದ್ದಾರೆ. 16 ಹೌದು, ಯೆಹೂದ್ಯರಲ್ಲದವರಿಗೆ ರಕ್ಷಣೆ ನೀಡುವ ಸುವಾರ್ತೆಯನ್ನು ನಾವು ಉಪದೇಶಿಸದಂತೆ ನಮ್ಮನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಹೀಗೆ ಅವರು ತಮ್ಮ ಪಾಪಗಳಿಗೆ ಮತ್ತಷ್ಟು ಪಾಪಗಳನ್ನು ಕೂಡಿಸುತ್ತಿದ್ದಾರೆ. ಕೊನೆಗೆ, ದೇವರ ಕೋಪವು ಅವರ ಮೇಲೆ ಬರುತ್ತದೆ.
ಥೆಸಲೋನಿಕದವರನ್ನು ಮತ್ತೆ ನೋಡಲು ಪೌಲನ ಆಸೆ
17 ಸಹೋದರ ಸಹೋದರಿಯರೇ, ನಿಮ್ಮಿಂದ ಸ್ವಲ್ಪಕಾಲ ಅಗಲಿ ಹೋಗಿದ್ದೆವು. (ನಾವು ನಿಮ್ಮೊಡನೆ ಇರಲಿಲ್ಲ. ಆದರೆ ನಮ್ಮ ಆಲೋಚನೆಗಳು ನಿಮ್ಮೊಡನೆ ಇನ್ನೂ ಇವೆ.) ನಿಮ್ಮನ್ನು ನೋಡಲು ಅತ್ಯಾಸೆಯಿಂದ ಬಹಳ ಪ್ರಯತ್ನಪಟ್ಟೆವು. 18 ಹೌದು, ನಾವು ನಿಮ್ಮಲ್ಲಿಗೆ ಬರಬೇಕೆಂದಿದ್ದೆವು. ಪೌಲನಾದ ನಾನು, ನಿಜವಾಗಿಯೂ ಅನೇಕ ಸಲ ಬರಲು ಪ್ರಯತ್ನಿಸಿದೆನು, ಆದರೆ ನಮ್ಮನ್ನು ಸೈತಾನನು ನಿಲ್ಲಿಸಿದನು. 19 ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಾವು ಹೊಗಳಿಕೊಳ್ಳುವ ನಮ್ಮ ನಿರೀಕ್ಷೆ, ನಮ್ಮ ಸಂತೋಷ, ನಮ್ಮ ಕಿರೀಟ ನೀವೇ ಆಗಿದ್ದೀರಿ. 20 ನಿಜವಾಗಿಯೂ ನೀವೇ ನಮ್ಮ ಸಂತೋಷ ಮತ್ತು ಗೌರವವಾಗಿದ್ದೀರಿ.
Kannada Holy Bible: Easy-to-Read Version. All rights reserved. © 1997 Bible League International