Revised Common Lectionary (Semicontinuous)
41 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
ನಿನ್ನ ವಾಗ್ದಾನದಂತೆ ನನ್ನನ್ನು ರಕ್ಷಿಸು.
42 ನನ್ನನ್ನು ಗೇಲಿಮಾಡುವ ಜನರಿಗೆ ಆಗ ನಾನು ಉತ್ತರ ಕೊಡುವೆನು.
ಯೆಹೋವನೇ, ನಿನ್ನ ಮಾತುಗಳಲ್ಲೇ ನಾನು ಭರವಸವಿಟ್ಟಿದ್ದೇನೆ.
43 ನಿನ್ನ ಸತ್ಯೋಪದೇಶಗಳನ್ನು ನಾನು ಯಾವಾಗಲೂ ಮಾತಾಡುವಂತಾಗಲಿ.
ನಿನ್ನ ಜ್ಞಾನದ ನಿರ್ಧಾರಗಳನ್ನೇ ನಾನು ಆಶ್ರಯಿಸಿಕೊಂಡಿದ್ದೇನೆ.
44 ನಿನ್ನ ಉಪದೇಶಗಳನ್ನು ಎಂದೆಂದಿಗೂ ಅನುಸರಿಸುವೆನು.
45 ಯಾಕೆಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು
ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು.
46 ರಾಜರುಗಳ ಮುಂದೆಯೂ
ಯೆಹೋವನ ಒಡಂಬಡಿಕೆಯ ಕುರಿತು ಚರ್ಚಿಸುವೆನು, ನಾಚಿಕೆಪಡುವುದಿಲ್ಲ.
47 ನಿನ್ನ ಆಜ್ಞೆಗಳಲ್ಲಿ ಆನಂದಿಸುವೆನು;
ಅವು ನನಗೆ ಇಷ್ಟವಾಗಿವೆ.
48 ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು.
ಅವು ನನಗೆ ಇಷ್ಟವಾಗಿವೆ.
ಮೋಶೆಯ ಹೊಳೆಯುವ ಮುಖ
29 ತರುವಾಯ ಮೋಶೆಯು ಸೀನಾಯಿ ಬೆಟ್ಟದಿಂದ ಇಳಿದು ಬಂದನು. ಒಡಂಬಡಿಕೆಯ ವಾಕ್ಯಗಳು ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಅವನು ಹಿಡಿದುಕೊಂಡಿದ್ದನು. ಯೆಹೋವನು ಅವನೊಡನೆ ಮಾತಾಡಿದ್ದರಿಂದ ಅವನ ಮುಖವು ಹೊಳೆಯುತ್ತಿತ್ತು. ಆದರೆ ಮೋಶೆಗೆ ಇದು ತಿಳಿದಿರಲಿಲ್ಲ. 30 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿರುವುದನ್ನು ಆರೋನನೂ ಇಸ್ರೇಲರೆಲ್ಲರೂ ನೋಡಿದರು. ಆದ್ದರಿಂದ ಅವನ ಬಳಿಗೆ ಹೋಗಲು ಅವರು ಭಯಪಟ್ಟರು. 31 ಆದರೆ ಮೋಶೆ ಅವರನ್ನು ಕರೆದನು. ಆದ್ದರಿಂದ ಆರೋನನೂ ಜನನಾಯಕರೆಲ್ಲರೂ ಮೋಶೆಯ ಬಳಿಗೆ ಹೋದರು. ಮೋಶೆಯು ಅವರೊಡನೆ ಮಾತಾಡಿದನು. 32 ಅದಾದನಂತರ, ಇಸ್ರೇಲರೆಲ್ಲರೂ ಮೋಶೆಯ ಬಳಿಗೆ ಬಂದರು. ಯೆಹೋವನು ಸೀನಾಯಿ ಬೆಟ್ಟದಲ್ಲಿ ತನಗೆ ಕೊಟ್ಟ ಆಜ್ಞೆಗಳನ್ನು ಮೋಶೆಯು ಅವರಿಗೆ ಕೊಟ್ಟನು.
33 ಮೋಶೆಯು ಜನರೊಡನೆ ಮಾತಾಡಿ ಮುಗಿಸಿದಾಗ, ತನ್ನ ಮುಖದ ಮೇಲೆ ಮುಸುಕನ್ನು ಹಾಕಿಕೊಂಡನು. 34 ಮೋಶೆಯು ಯೆಹೋವನೊಡನೆ ಮಾತಾಡಲು ಆತನ ಸನ್ನಿಧಿಗೆ ಹೋದಾಗಲೆಲ್ಲಾ ಮೋಶೆಯು ಮುಸುಕನ್ನು ತೆಗೆದಿಡುತ್ತಿದ್ದನು. ಬಳಿಕ ಮೋಶೆ ಹೊರಗೆ ಬಂದು ಯೆಹೋವನು ಆಜ್ಞಾಪಿಸಿದ ಸಂಗತಿಗಳನ್ನು ಇಸ್ರೇಲರಿಗೆ ತಿಳಿಸುತ್ತಿದ್ದನು. 35 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿದ್ದುದನ್ನು ಜನರು ನೋಡಿದರು. ಆದ್ದರಿಂದ ಮೋಶೆಯು ಮುಂದಿನ ಸಾರಿ ಯೆಹೋವನೊಡನೆ ಮಾತಾಡಲು ಹೋಗುವವರೆಗೆ ತನ್ನ ಮುಖಕ್ಕೆ ಮುಸುಕು ಹಾಕಿಕೊಂಡಿರುವನು.
ನಂಬಿಕೆ ಮತ್ತು ಉತ್ತಮ ಕಾರ್ಯಗಳು
14 ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ! 15 ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು. 16 ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. 17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.
18 ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು. 19 ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ.
20 ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ? 21 ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು. 22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು. 23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.”(A) ಅಬ್ರಹಾಮನನ್ನು “ದೇವರ ಸ್ನೇಹಿತ”(B) ನೆಂದು ಕರೆಯಲಾಯಿತು. 24 ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ.
25 ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು.[a]
26 ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ.
Kannada Holy Bible: Easy-to-Read Version. All rights reserved. © 1997 Bible League International