Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 34

ಮೋಶೆಯ ಮರಣ

34 ಮೋಶೆಯು ನೆಬೋ ಬೆಟ್ಟವನ್ನು ಹತ್ತಿದನು. ಅವನು ಮೋವಾಬಿನ ಜೋರ್ಡನ್ ಕಣಿವೆಯಿಂದ ಪಿಸ್ಗಾ ಬೆಟ್ಟದ ಮೇಲಕ್ಕೆ ಬಂದನು. ಇದು ಜೋರ್ಡನ್ ನದಿಯ ಆಚೆಕಡೆಯಲ್ಲಿರುವ ಜೆರಿಕೊ ಊರಿನ ಎದುರಿನಲ್ಲಿದೆ. ಯೆಹೋವನು ಮೋಶೆಗೆ ಗಿಲ್ಯಾದಿನಿಂದ ದಾನ್‌ವರೆಗಿದ್ದ ಎಲ್ಲಾ ಪ್ರದೇಶವನ್ನು ತೋರಿಸಿದನು. ಮೋಶೆಗೆ ಯೆಹೋವನು ನಫ್ತಾಲಿ, ಎಫ್ರಾಯೀಮ್, ಮನಸ್ಸೆ ಪ್ರಾಂತ್ಯಗಳನ್ನು ತೋರಿಸಿದನು. ಯೆಹೂದ ಪ್ರಾಂತ್ಯವನ್ನು ಮೆಡಿಟರೇನಿಯನ್ ಸಮುದ್ರದವರೆಗೂ ತೋರಿಸಿದನು. ಯೆಹೋವನು ಮೋಶೆಗೆ ನೆಗೆವ್ ಮತ್ತು ಚೋಗರೂರಿನಿಂದ ಖರ್ಜೂರದ ಮರಗಳ ಪಟ್ಟಣವಾದ ಜೆರಿಕೊ ಪಟ್ಟಣದವರೆಗಿರುವ ಕಣಿವೆಯನ್ನು ತೋರಿಸಿದನು. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಈ ದೇಶವನ್ನು ನಾನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ವಾಗ್ದಾನ ಮಾಡಿದ್ದೇನೆ. ನಿಮ್ಮ ಸಂತತಿಯವರಿಗೆ ನಾನು ಈ ದೇಶವನ್ನು ಕೊಡುವೆನು ಎಂದು ಹೇಳಿದ್ದೆನು. ಆ ದೇಶವನ್ನು ನೀನು ನೋಡುವಂತೆ ಮಾಡಿದೆನು. ಆದರೆ ನೀನು ಅದರೊಳಗೆ ಪ್ರವೇಶಿಸುವುದಿಲ್ಲ.”

ಮೋವಾಬ್ ದೇಶದಲ್ಲಿ ಯೆಹೋವನ ಸೇವಕನಾದ ಮೋಶೆಯು ಸತ್ತುಹೋದನು. ಯೆಹೋವನು ಅವನಿಗೆ ಹಾಗೆ ಆಗುತ್ತದೆಂದು ಮುಂಚೆಯೇ ತಿಳಿಸಿದ್ದನು. ಯೆಹೋವನು ಮೋಶೆಯನ್ನು ಮೋವಾಬ್‌ನಲ್ಲಿ ಹೂಳಿಟ್ಟನು. ಇದು ಬೇತ್ಪೆಗೋರ್ ತಗ್ಗಿಗೆ ಎದುರಾಗಿದೆ. ಆದರೆ ಮೋಶೆಯನ್ನು ಸಮಾಧಿಮಾಡಿದ ಸ್ಥಳವು ಇದುವರೆಗೆ ಯಾರಿಗೂ ಗೊತ್ತಾಗಲಿಲ್ಲ. ಮೋಶೆಯು ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನು ಸಾಯುವ ತನಕ ಬಲಶಾಲಿಯಾಗಿಯೇ ಇದ್ದನು. ಅವನ ಕಣ್ಣು ಮೊಬ್ಬಾಗಿರಲಿಲ್ಲ. ಇಸ್ರೇಲರು ಮೋಶೆಗಾಗಿ ಮೂವತ್ತು ದಿವಸಗಳ ತನಕ ಗೋಳಾಡಿದರು. ಶೋಕದ ದಿವಸಗಳು ಕಳೆಯುವ ತನಕ ಅವರು ಮೋವಾಬಿನಲ್ಲಿದ್ದ ಜೋರ್ಡನ್ ಕಣಿವೆಯಲ್ಲಿ ತಂಗಿದ್ದರು.

ಯೆಹೋಶುವನು ಇಸ್ರೇಲರ ಹೊಸ ನಾಯಕ

ಮೋಶೆಯು ಯೆಹೋಶುವನ ಮೇಲೆ ತನ್ನ ಕೈಗಳನ್ನಿಟ್ಟು ಅವನನ್ನು ನಾಯಕನನ್ನಾಗಿ ನೇಮಿಸಿದನು. ಆಗ ನೂನನ ಮಗನಾದ ಯೆಹೋಶುವನು ಜ್ಞಾನದ ಆತ್ಮನಿಂದ ತುಂಬಲ್ಪಟ್ಟವನಾದನು. ಇಸ್ರೇಲಿನ ಜನರು ಯೆಹೋಶುವನಿಗೆ ವಿಧೇಯರಾದರು. ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರೇಲರು ಮಾಡಿದರು.

10 ಮೋಶೆಯಂತ ಪ್ರವಾದಿಯು ಇಸ್ರೇಲರಿಗೆ ದೊರೆಯಲೇ ಇಲ್ಲ. ಯೆಹೋವನು ಅವನೊಂದಿಗೆ ಮುಖಾಮುಖಿಯಾಗಿ ಮಾತನಾಡಿದನು. 11 ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡುವುದಕ್ಕಾಗಿ ಯೆಹೋವನು ಮೋಶೆಯನ್ನು ಕಳುಹಿಸಿದನು. ಅದನ್ನು ಫರೋಹನೂ ಅವನ ಪರಿವಾರದವರೂ ಅಧಿಕಾರಿಗಳೆಲ್ಲರೂ ನೋಡಿದರು. 12 ಯಾವ ಪ್ರವಾದಿಯೂ ಮೋಶೆ ಮಾಡಿದ ಸೂಚಕಕಾರ್ಯಗಳನ್ನು ಮಾಡಲಿಲ್ಲ. ಇಸ್ರೇಲಿನ ಎಲ್ಲಾ ಜನರು ಮೋಶೆ ಮಾಡಿದ್ದನ್ನು ನೋಡಿದ್ದರು.

ಕೀರ್ತನೆಗಳು 90:1-6

ನಾಲ್ಕನೆ ಭಾಗ

(ಕೀರ್ತನೆಗಳು 90–106)

ಪ್ರಾರ್ಥನೆ. ರಚನೆಗಾರ: ದೇವಮನುಷ್ಯನಾದ ಮೋಶೆ.

90 ಯೆಹೋವನೇ, ತಲತಲಾಂತರಗಳಿಂದಲೂ ನೀನೇ ನಮ್ಮ ವಾಸಸ್ಥಾನ.
ಬೆಟ್ಟಗಳು ಹುಟ್ಟುವುದಕ್ಕಿಂತ ಮೊದಲಿಂದಲೂ
    ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲಿನಿಂದಲೂ ನೀನೇ ದೇವರು.
    ಯಾವಾಗಲೂ ದೇವರಾಗಿದ್ದಾತನು ನೀನೇ! ಯಾವಾಗಲೂ ದೇವರಾಗಿರುವಾತನೂ ನೀನೇ!

ಜನರಿಗೆ ಜನ್ಮನೀಡುವಾತನೂ ನೀನೇ;
    ಅವರನ್ನು ಮತ್ತೆ ಧೂಳನ್ನಾಗಿ ಮಾಡುವಾತನೂ ನೀನೇ.
ಸಾವಿರ ವರ್ಷಗಳು ನಿನಗೆ ಗತಿಸಿಹೋದ
    ನಿನ್ನೆಯಂತೆಯೂ ರಾತ್ರಿಯ ಜಾವದಂತೆಯೂ ಇವೆ.
ನೀನು ನಮ್ಮನ್ನು ಗುಡಿಸಿಹಾಕುವೆ.
    ನಮ್ಮ ಜೀವನವು ಕನಸಿನಂತಿದೆ; ಹೊತ್ತಾರೆಯಲ್ಲಿ ನಾವು ಇಲ್ಲವಾಗುತ್ತೇವೆ.
ನಾವು ಹುಲ್ಲಿನಂತಿದ್ದೇವೆ.
    ಹೊತ್ತಾರೆಯಲ್ಲಿ ಹುಲ್ಲು ಚಿಗುರತೊಡಗಿದರೂ
    ಸಾಯಂಕಾಲದೊಳಗೆ ಒಣಗಿಹೋಗುತ್ತದೆ.

ಕೀರ್ತನೆಗಳು 90:13-17

13 ಯೆಹೋವನೇ, ನಮ್ಮ ಬಳಿಗೆ ಹಿಂತಿರುಗಿ ಬಾ.
    ನಿನ್ನ ಸೇವಕರ ಮೇಲೆ ಅಂತಃಕರಣವಿರಲಿ.
14 ಪ್ರತಿ ಮುಂಜಾನೆ ನಿನ್ನ ಪ್ರೀತಿಯಿಂದ ನಮ್ಮನ್ನು ತುಂಬಿಸು.
    ಆಗ ಜೀವಮಾನವೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು.
15 ನೀನು ನಮಗೆ ಬಹು ದುಃಖವನ್ನೂ ಕಷ್ಟಗಳನ್ನೂ ಬರಮಾಡಿದೆ.
    ಈಗ ನಮ್ಮನ್ನು ಸಂತೋಷಗೊಳಿಸು.
16 ನೀನು ನಿನ್ನ ಸೇವಕರುಗಳಿಗಾಗಿ ಮಾಡಬಲ್ಲ ಅದ್ಭುತಕಾರ್ಯಗಳನ್ನು ನಾವು ನೋಡುವಂತಾಗಲಿ.
17 ನಮ್ಮ ದೇವರಾದ ಯೆಹೋವನೇ, ನಮಗೆ ಕರುಣೆತೋರು.
    ನಮ್ಮ ಕೆಲಸಕಾರ್ಯಗಳು ನಮಗೆ ಫಲ ನೀಡಲಿ;
    ನಮ್ಮ ಕಾರ್ಯಗಳನ್ನು ಆತನು ಸಫಲಪಡಿಸಲಿ.

1 ಥೆಸಲೋನಿಕದವರಿಗೆ 2:1-8

ಥೆಸಲೋನಿಕದಲ್ಲಿ ಪೌಲನ ಕಾರ್ಯ

ಸಹೋದರ ಸಹೋದರಿಯರೇ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲ ಎಂಬುದು ನಿಮಗೆ ತಿಳಿದಿದೆ. ನಿಮ್ಮಲ್ಲಿಗೆ ಬರುವುದಕ್ಕೆ ಮೊದಲೇ ಫಿಲಿಪ್ಪಿಯಲ್ಲಿ ಹಿಂಸೆಯನ್ನು ಅನುಭವಿಸಿದೆವು. ಅಲ್ಲಿಯ ಜನರು ನಮ್ಮ ವಿರುದ್ಧವಾಗಿ ಕೆಟ್ಟದ್ದನ್ನು ಹೇಳಿದರು. ಅದೆಲ್ಲವೂ ನಿಮಗೆ ತಿಳಿದಿದೆ. ನಿಮ್ಮ ಬಳಿಗೆ ಬಂದಾಗ, ಅನೇಕ ಜನರು ನಮಗೆ ವಿರುದ್ಧವಾಗಿದ್ದರು. ಆದರೆ ಧೈರ್ಯದಿಂದ ಇರಲು ಮತ್ತು ನಿಮಗೆ ಸುವಾರ್ತೆಯನ್ನು ತಿಳಿಸಲು ದೇವರು ನಮಗೆ ಸಹಾಯ ಮಾಡಿದನು. ನಮ್ಮ ಬೋಧನೆಯು ತಪ್ಪೂ ಅಲ್ಲ ಮತ್ತು ಅಶುದ್ಧವಾದ ಉದ್ದೇಶವನ್ನು ಹೊಂದಿಯೂ ಇಲ್ಲ ಮತ್ತು ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವೂ ಅಲ್ಲ. ನಾವು ಸುವಾರ್ತೆಯನ್ನು ತಿಳಿಸುತ್ತೇವೆ. ಏಕೆಂದರೆ ದೇವರು ನಮ್ಮನ್ನು ಪರಿಶೋಧಿಸಿದ್ದಾನೆ ಮತ್ತು ಸುವಾರ್ತೆಯನ್ನು ತಿಳಿಸಲು ನಮ್ಮನ್ನು ನೇಮಿಸಿದ್ದಾನೆ. ಆದುದರಿಂದ ಜನರನ್ನು ಮೆಚ್ಚಿಸಲು ಪ್ರಯತ್ನಿಸದೆ ನಮ್ಮ ಹೃದಯಗಳನ್ನು ಪರೀಕ್ಷಿಸುವಾತನಾದ ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತೇವೆ.

ನಿಮ್ಮ ಬಗ್ಗೆ ಒಳ್ಳೆಯದನ್ನು ಹೇಳಿ ನಿಮ್ಮನ್ನು ಮರುಳು ಮಾಡಬೇಕೆಂದು ನಾವೆಂದೂ ಪ್ರಯತ್ನಿಸಿಲ್ಲವೆಂಬುದು ನಿಮಗೆ ತಿಳಿದಿದೆ. ನಾವು ನಿಮ್ಮ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿಲ್ಲ; ನಮ್ಮ ಸ್ವಾರ್ಥವನ್ನು ಮರೆಮಾಡಿಕೊಂಡು ವೇಶಧಾರಿಗಳಾಗಿರಲಿಲ್ಲ. ಇದು ನಿಜವೆಂಬುದು ದೇವರಿಗೆ ತಿಳಿದಿದೆ. ಜನರಿಂದ ಬರುವ ಮಾನಮರ್ಯಾದೆಗಳನ್ನು ನಿಮ್ಮಿಂದಾಗಲಿ ಇತರ ಜನರಿಂದಾಗಲಿ ನಾವೆಂದೂ ಬಯಸಲಿಲ್ಲ.

ನಾವು ಕ್ರಿಸ್ತನ ಅಪೊಸ್ತಲರಾಗಿ ನಿಮ್ಮೊಡಗಿದ್ದಾಗ, ನಿಮ್ಮಿಂದ ದುಡಿಸಿಕೊಳ್ಳಲು ನಮ್ಮ ಅಧಿಕಾರವನ್ನು ಬಳಸಬಹುದಾಗಿತ್ತು. ಆದರೆ ನಿಮ್ಮೊಡನೆ ಬಹಳ ಸಾತ್ವಿಕರಾಗಿದ್ದೆವು. ತಾಯಿಯು ತನ್ನ ಸ್ವಂತ ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ನಾವು ನಡೆದುಕೊಂಡೆವು. ನಿಮ್ಮನ್ನು ಬಹಳವಾಗಿ ಪ್ರೀತಿಸಿದೆವು. ಆದುದರಿಂದ ದೇವರ ಸುವಾರ್ತೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು, ಮಾತ್ರವೇ ಅಲ್ಲ, ನಿಮಗೋಸ್ಕರ ಸ್ವಂತ ಪ್ರಾಣವನ್ನೇ ಕೊಡಲು ಸಿದ್ಧರಾಗಿದ್ದೆವು.

ಮತ್ತಾಯ 22:34-46

ಅತ್ಯಂತ ಪ್ರಮುಖ ಆಜ್ಞೆ ಯಾವುದು?

(ಮಾರ್ಕ 12:28-34; ಲೂಕ 10:25-28)

34 ಸದ್ದುಕಾಯರು ಪ್ರತಿವಾದ ಮಾಡಲಾಗದ ರೀತಿಯಲ್ಲಿ ಯೇಸು ಉತ್ತರಕೊಟ್ಟನೆಂಬುದು ಫರಿಸಾಯರಿಗೆ ತಿಳಿದು ಅವರು ಒಟ್ಟಾಗಿ ಯೇಸುವಿನ ಬಳಿಗೆ ಬಂದರು. 35 ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದ ಫರಿಸಾಯನೊಬ್ಬನು ಯೇಸುವನ್ನು ಪರೀಕ್ಷಿಸಲು, 36 “ಬೋಧಕನೇ, ಧರ್ಮಶಾಸ್ತ್ರದಲ್ಲಿ ಅತ್ಯಂತ ಪ್ರಮುಖ ಆಜ್ಞೆ ಯಾವುದು?” ಎಂದು ಕೇಳಿದನು.

37 ಯೇಸು, “‘ನಿನ್ನ ದೇವರಾಗಿರುವ ಪ್ರಭುವನ್ನು ಪ್ರೀತಿಸಬೇಕು. ನೀನು ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’(A) 38 ಇದೇ ಮೊದಲನೆಯ ಮತ್ತು ಅತ್ಯಂತ ಪ್ರಮುಖವಾದ ಆಜ್ಞೆ. 39 ಎರಡನೆಯ ಆಜ್ಞೆಯು ಮೊದಲನೆಯ ಆಜ್ಞೆಯಷ್ಟೇ ಪ್ರಮುಖವಾಗಿದೆ. ‘ನೀನು ನಿನ್ನನ್ನು ಪ್ರೀತಿಸುವಂತೆಯೇ ನೆರೆಯವರನ್ನು ಪ್ರೀತಿಸಬೇಕು’(B) ಎಂಬುದೇ ಆ ಆಜ್ಞೆ. 40 ಇಡೀ ಧರ್ಮಶಾಸ್ತ್ರವು ಮತ್ತು ಪ್ರವಾದಿಗಳ ಎಲ್ಲಾ ಗ್ರಂಥಗಳು ಈ ಎರಡು ಆಜ್ಞೆಗಳ ಅರ್ಥವನ್ನೇ ಒಳಗೊಂಡಿವೆ” ಎಂದು ಉತ್ತರಕೊಟ್ಟನು.

ಯೇಸು ಫರಿಸಾಯರಿಗೆ ಕೇಳಿದ ಪ್ರಶ್ನೆ

(ಮಾರ್ಕ 12:35-37; ಲೂಕ 20:41-44)

41 ಫರಿಸಾಯರು ಒಟ್ಟಿಗೆ ಬಂದಿದ್ದಾಗ ಯೇಸು ಅವರಿಗೆ, 42 “ಕ್ರಿಸ್ತನ ವಿಷಯವಾಗಿ ನಿಮ್ಮ ಆಲೋಚನೆಯೇನು? ಆತನು ಯಾರ ಮಗನು?” ಎಂದು ಅವರನ್ನು ಕೇಳಿದನು.

ಫರಿಸಾಯರು, “ಕ್ರಿಸ್ತನು ದಾವೀದನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟರು.

43 ಆಗ ಯೇಸುವು ಫರಿಸಾಯರಿಗೆ, “ಹಾಗಾದರೆ ದಾವೀದನು ಆತನನ್ನು ‘ಪ್ರಭು’ ಎಂದು ಏಕೆ ಕರೆದನು? ದಾವೀದನು ಪರಿಶುದ್ಧಾತ್ಮನ ಶಕ್ತಿಯಿಂದ ಮಾತನಾಡಿದ್ದನು. ದಾವೀದನು ಹೇಳಿದ್ದೇನೆಂದರೆ:

44 ‘ಪ್ರಭು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ),
ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
    ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’(C)

ಎಂದು ಹೇಳಿದ್ದಾನೆ. 45 ದಾವೀದನು ಕ್ರಿಸ್ತನನ್ನು ‘ಪ್ರಭು’ ಎಂದು ಕರೆದಿದ್ದಾನೆ. ಹೀಗಿರಲು ಆತನು ದಾವೀದನಿಗೆ ಮಗನಾಗಲು ಹೇಗೆ ಸಾಧ್ಯ?” ಅಂದನು.

46 ಯೇಸುವಿನ ಪ್ರಶ್ನೆಗೆ ಉತ್ತರಕೊಡಲು ಫರಿಸಾಯರಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಅಂದಿನಿಂದ ಯೇಸುವನ್ನು ವಂಚಿಸುವುದಕ್ಕಾಗಿ ಪ್ರಶ್ನೆ ಕೇಳಲು ಯಾರೂ ಧೈರ್ಯಪಡಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International