Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 90:1-6

ನಾಲ್ಕನೆ ಭಾಗ

(ಕೀರ್ತನೆಗಳು 90–106)

ಪ್ರಾರ್ಥನೆ. ರಚನೆಗಾರ: ದೇವಮನುಷ್ಯನಾದ ಮೋಶೆ.

90 ಯೆಹೋವನೇ, ತಲತಲಾಂತರಗಳಿಂದಲೂ ನೀನೇ ನಮ್ಮ ವಾಸಸ್ಥಾನ.
ಬೆಟ್ಟಗಳು ಹುಟ್ಟುವುದಕ್ಕಿಂತ ಮೊದಲಿಂದಲೂ
    ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲಿನಿಂದಲೂ ನೀನೇ ದೇವರು.
    ಯಾವಾಗಲೂ ದೇವರಾಗಿದ್ದಾತನು ನೀನೇ! ಯಾವಾಗಲೂ ದೇವರಾಗಿರುವಾತನೂ ನೀನೇ!

ಜನರಿಗೆ ಜನ್ಮನೀಡುವಾತನೂ ನೀನೇ;
    ಅವರನ್ನು ಮತ್ತೆ ಧೂಳನ್ನಾಗಿ ಮಾಡುವಾತನೂ ನೀನೇ.
ಸಾವಿರ ವರ್ಷಗಳು ನಿನಗೆ ಗತಿಸಿಹೋದ
    ನಿನ್ನೆಯಂತೆಯೂ ರಾತ್ರಿಯ ಜಾವದಂತೆಯೂ ಇವೆ.
ನೀನು ನಮ್ಮನ್ನು ಗುಡಿಸಿಹಾಕುವೆ.
    ನಮ್ಮ ಜೀವನವು ಕನಸಿನಂತಿದೆ; ಹೊತ್ತಾರೆಯಲ್ಲಿ ನಾವು ಇಲ್ಲವಾಗುತ್ತೇವೆ.
ನಾವು ಹುಲ್ಲಿನಂತಿದ್ದೇವೆ.
    ಹೊತ್ತಾರೆಯಲ್ಲಿ ಹುಲ್ಲು ಚಿಗುರತೊಡಗಿದರೂ
    ಸಾಯಂಕಾಲದೊಳಗೆ ಒಣಗಿಹೋಗುತ್ತದೆ.

ಕೀರ್ತನೆಗಳು 90:13-17

13 ಯೆಹೋವನೇ, ನಮ್ಮ ಬಳಿಗೆ ಹಿಂತಿರುಗಿ ಬಾ.
    ನಿನ್ನ ಸೇವಕರ ಮೇಲೆ ಅಂತಃಕರಣವಿರಲಿ.
14 ಪ್ರತಿ ಮುಂಜಾನೆ ನಿನ್ನ ಪ್ರೀತಿಯಿಂದ ನಮ್ಮನ್ನು ತುಂಬಿಸು.
    ಆಗ ಜೀವಮಾನವೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು.
15 ನೀನು ನಮಗೆ ಬಹು ದುಃಖವನ್ನೂ ಕಷ್ಟಗಳನ್ನೂ ಬರಮಾಡಿದೆ.
    ಈಗ ನಮ್ಮನ್ನು ಸಂತೋಷಗೊಳಿಸು.
16 ನೀನು ನಿನ್ನ ಸೇವಕರುಗಳಿಗಾಗಿ ಮಾಡಬಲ್ಲ ಅದ್ಭುತಕಾರ್ಯಗಳನ್ನು ನಾವು ನೋಡುವಂತಾಗಲಿ.
17 ನಮ್ಮ ದೇವರಾದ ಯೆಹೋವನೇ, ನಮಗೆ ಕರುಣೆತೋರು.
    ನಮ್ಮ ಕೆಲಸಕಾರ್ಯಗಳು ನಮಗೆ ಫಲ ನೀಡಲಿ;
    ನಮ್ಮ ಕಾರ್ಯಗಳನ್ನು ಆತನು ಸಫಲಪಡಿಸಲಿ.

ಧರ್ಮೋಪದೇಶಕಾಂಡ 31:14-22

ದೇವರು ಯೆಹೋಶುವನನ್ನೂ ಮೋಶೆಯನ್ನೂ ಒಟ್ಟಿಗೆ ಕರೆದದ್ದು

14 ಯೆಹೋವನು ಮೋಶೆಗೆ, “ನೀನು ಸಾಯುವ ಸಮಯವು ಹತ್ತಿರವಾಗುತ್ತಾ ಬಂತು. ಯೆಹೋಶುವನನ್ನು ದೇವದರ್ಶನ ಗುಡಾರಕ್ಕೆ ಕರೆದುಕೊಂಡು ಬಾ. ಅವನು ಮಾಡಬೇಕಾದ ವಿಷಯಗಳನ್ನು ನಾನು ಯೆಹೋಶುವನಿಗೆ ತಿಳಿಸುವೆನು” ಎಂದು ಹೇಳಿದನು. ಮೋಶೆಯೂ ಯೆಹೋಶುವನೂ ದೇವದರ್ಶನ ಗುಡಾರದೊಳಗೆ ಹೋದರು.

15 ಯೆಹೋವನು ಒಂದು ಮೇಘಸ್ತಂಭದಲ್ಲಿ ಪ್ರತ್ಯಕ್ಷನಾದನು. ಆ ಮೇಘಸ್ತಂಭವು ಗುಡಾರದ ಬಾಗಿಲಲ್ಲಿ ಬಂದು ನಿಂತಿತು. 16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಬೇಗನೇ ಸಾಯುವೆ. ನಿನ್ನ ಪೂರ್ವಿಕರ ಬಳಿಗೆ ನೀನು ಸೇರಿದಾಗ ಈ ಜನರು ನನಗೆ ನಂಬಿಗಸ್ತರಾಗಿರುವುದಿಲ್ಲ. ನಾನು ಅವರೊಡನೆ ಮಾಡಿರುವ ಒಡಂಬಡಿಕೆಯನ್ನು ಅವರು ಮುರಿಯುವರು. ಅವರು ನನ್ನನ್ನು ತೊರೆದು ತಾವು ಸ್ವಾಧೀನಮಾಡಿಕೊಳ್ಳುವ ದೇಶದ ಅನ್ಯದೇವತೆಗಳನ್ನು ಪೂಜಿಸುವರು. 17 ಆಗ ನಾನು ಅವರ ಮೇಲೆ ತುಂಬಾ ಕೋಪವುಳ್ಳವನಾಗಿರುವೆನು. ಅವರಿಗೆ ಸಹಾಯ ಮಾಡದೆ ಅವರನ್ನು ಬಿಟ್ಟುಬಿಡುವೆನು; ಅವರು ನಾಶವಾಗುವರು; ಅವರಿಗೆ ಭಯಂಕರ ಸಂಗತಿಗಳು ಸಂಭವಿಸುವವು; ಅನೇಕ ಕೇಡುಗಳಾಗುವುವು; ಆಗ, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದಿರುವ ಕಾರಣ ಇವೆಲ್ಲಾ ನಮಗೆ ಸಂಭವಿಸುತ್ತವೆ’ ಎಂದು ಅವರು ಹೇಳುವರು. 18 ಆಗಲೂ ನಾನು ಅವರಿಗೆ ಸಹಾಯ ಮಾಡುವುದಿಲ್ಲ. ಅವರು ಕೆಟ್ಟಕಾರ್ಯಗಳನ್ನು ಮಾಡಿ ಅನ್ಯದೇವರುಗಳನ್ನು ಅವಲಂಭಿಸಿದ್ದಾರಲ್ಲಾ!

19 “ಆದ್ದರಿಂದ ನೀನು ಈ ಹಾಡನ್ನು ಬರೆ, ಇಸ್ರೇಲರಿಗೆ ಇದನ್ನು ಕಲಿಸು. ಈ ಹಾಡನ್ನು ಹಾಡಲು ಅವರಿಗೆ ಕಲಿಸು. ಆಗ ಇದು ಇಸ್ರೇಲ್ ಜನರ ವಿರುದ್ಧವಾಗಿ ಸಾಕ್ಷಿಯಾಗುವುದು. 20 ನಾನು ಅವರ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಕರೆದುಕೊಂಡು ಹೋಗುವೆನು. ಆ ದೇಶವು ಹಾಲೂಜೇನೂ ಹರಿಯುವ ದೇಶವಾಗಿರುತ್ತದೆ. ಅವರಿಗೆ ಇಷ್ಟ ಬಂದದ್ದನ್ನೆಲ್ಲಾ ತಿನ್ನಲು ಅವರಿಗೆ ಸಿಗುವುದು. ಅವರಿಗೆ ಸಮೃದ್ಧಿಯಾದ ಜೀವಿತವು ಇರುವುದು. ಆದರೆ ಅವರು ಸುಳ್ಳುದೇವರ ಕಡೆಗೆ ತಿರುಗಿ ಅವುಗಳನ್ನು ಪೂಜಿಸುವರು. ಅವರು ನನ್ನಿಂದ ತೊಲಗಿ ನನ್ನ ಒಡಂಬಡಿಕೆಯನ್ನು ಮುರಿದುಬಿಡುವರು. 21 ಆಗ ಭಯಂಕರವಾದ ಸಂಗತಿಗಳು ಅವರಿಗೆ ಉಂಟಾಗುವವು. ಅವರಿಗೆ ಅನೇಕ ಸಂಕಟಗಳು ಉಂಟಾಗುವವು. ಆಗ ಆ ಜನರಿಗೆ ಈ ಹಾಡು ತಿಳಿದಿರುವುದರಿಂದ ತಾವು ಎಷ್ಟು ತಪ್ಪಿತಸ್ಥರು ಎಂದು ತಿಳಿಯುವುದು. ನಾನು ಕೊಡುವುದಾಗಿ ವಾಗ್ದಾನ ಮಾಡಿರುವ ದೇಶಕ್ಕೆ ಅವರನ್ನು ಇನ್ನೂ ಕರೆದುಕೊಂಡು ಹೋಗಿಲ್ಲ. ಆದರೆ ಅವರು ಅಲ್ಲಿ ಏನು ಮಾಡುತ್ತಾರೆಂಬುದು ನನಗೆ ಆಗಲೇ ಗೊತ್ತಿದೆ.”

22 ಅದೇ ದಿವಸದಲ್ಲಿ ಮೋಶೆಯು ಹಾಡನ್ನು ಬರೆದಿಟ್ಟನು. ಇಸ್ರೇಲ್ ಜನರಿಗೆ ಆ ಹಾಡನ್ನು ಕಲಿಸಲಾಯಿತು.

ತೀತನಿಗೆ 1:5-16

ಕ್ರೇತದಲ್ಲಿ ತೀತನ ಕಾರ್ಯ

ಇನ್ನೂ ಪೂರ್ಣವಾಗಿಲ್ಲದ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೂ ಪ್ರತಿಯೊಂದು ಪಟ್ಟಣದಲ್ಲಿ ಸಭಾಹಿರಿಯರನ್ನು ಆರಿಸುವುದಕ್ಕಾಗಿಯೂ ನಾನು ನಿನ್ನನ್ನು ಕ್ರೇತದಲ್ಲಿ ಬಿಟ್ಟು ಬಂದೆನು. ಸಭೆಯ ಹಿರಿಯನಾಗುವವನು ಅಪರಾಧಿಯೆಂಬ ನಿಂದನೆಗೆ ಗುರಿಯಾಗಿರಬಾರದು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು; ಅವರು ದುಷ್ಟರೆಂದಾಗಲಿ ಅವಿಧೇಯರೆಂದಾಗಲಿ ಹೇಳಿಸಿಕೊಂಡಿರಬಾರದು. ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು. ಸಭಾಹಿರಿಯನು ಜನರನ್ನು ತನ್ನ ಮನೆಗೆ ಆಹ್ವಾನಿಸಿ ಅತಿಥಿಸತ್ಕಾರ ಮಾಡಲು ಸಿದ್ಧನಾಗಿರಬೇಕು. ಅವನು ಒಳ್ಳೆಯದನ್ನು ಪ್ರೀತಿಸಬೇಕು; ಜ್ಞಾನಿಯಾಗಿರಬೇಕು; ನ್ಯಾಯವಂತನಾಗಿರಬೇಕು; ಪವಿತ್ರನಾಗಿರಬೇಕು. ಅವನು ತನ್ನನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ನಾವು ಬೋಧಿಸುವ ಸತ್ಯವಾಕ್ಯವನ್ನು ಅವನು ನಂಬಿಗಸ್ತಿಕೆಯಿಂದ ಅನುಸರಿಸಬೇಕು. ಸತ್ಯವಾದ ಮತ್ತು ಯೋಗ್ಯವಾದ ಬೋಧನೆಯಿಂದ ಅವನು ಜನರಿಗೆ ಸಹಾಯ ಮಾಡುವವನಾಗಿರಬೇಕು. ಅವನು ಸತ್ಯಬೋಧನೆಗೆ ವಿರುದ್ಧವಾದ ಜನರಿಗೆ ಅವರ ತಪ್ಪನ್ನು ತೋರಿಸಿಕೊಡುವ ಸಾಮರ್ಥ್ಯ ಉಳ್ಳವನಾಗಿರಬೇಕು.

10 ಅವಿಧೇಯರಾಗಿರುವ ಜನರು ಅನೇಕರಿದ್ದಾರೆ. ಅವರು ನಿರರ್ಥಕವಾದುದನ್ನು ಕುರಿತು ಮಾತನಾಡುತ್ತಲೇ ಇರುತ್ತಾರೆ ಮತ್ತು ಉಳಿದ ಜನರನ್ನು ತಪ್ಪುದಾರಿಗೆ ಎಳೆಯುತ್ತಾರೆ. ಯೆಹೂದ್ಯರಲ್ಲದ ಜನರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವ ಜನರ ಬಗ್ಗೆಯೇ ನಾನು ಹೇಳುತ್ತಿರುವುದು. 11 ಆ ಜನರ ಬೋಧನೆ ತಪ್ಪೆಂದು ನಿರೂಪಿಸಲು ಮತ್ತು ಉಪಯೋಗವಿಲ್ಲದ ಆ ಸಂಗತಿಗಳನ್ನು ಬೋಧಿಸದಂತೆ ಮಾಡಲು ಸಭಾಹಿರಿಯನು ಸಮರ್ಥನಾಗಿರಬೇಕು. ಅವರು ಉಪದೇಶ ಮಾಡಬಾರದ ಸಂಗತಿಗಳನ್ನು ಉಪದೇಶಿಸುತ್ತಾ ಇಡೀ ಕುಟುಂಬಗಳನ್ನೇ ಸಂಪೂರ್ಣವಾಗಿ ನಾಶಗೊಳಿಸುತ್ತಿದ್ದಾರೆ. ಅವರು ಜನರನ್ನು ವಂಚಿಸಿ, ಹಣವನ್ನು ಸಂಪಾದಿಸುವುದಕ್ಕೋಸ್ಕರ ಆ ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. 12 ಅವರ ಪ್ರವಾದಿಗಳಲ್ಲಿ ಒಬ್ಬನು, “ಕ್ರೇತದ ಜನರು ಯಾವಾಗಲೂ ಸುಳ್ಳು ಹೇಳುತ್ತಾರೆ. ಅವರು ದುಷ್ಟ ಮೃಗಗಳಾಗಿದ್ದಾರೆ; ಸೋಮಾರಿತನದಿಂದ ಕೆಲಸವನ್ನೇ ಮಾಡದೆ ಹೊಟ್ಟೆಬಾಕರಾಗಿದ್ದಾರೆ” ಎಂದು ಹೇಳಿದ್ದಾನೆ. 13 ಪ್ರವಾದಿಯು ಹೇಳಿದ ಮಾತುಗಳು ಸತ್ಯವಾಗಿವೆ. ಆದ್ದರಿಂದ ಅವರು ಮಾಡುತ್ತಿರುವ ತಪ್ಪುಗಳನ್ನು ಅವರಿಗೆ ತಿಳಿಸು. ನೀನು ಅವರ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು. ಆಗ ಅವರು ತಮ್ಮ ನಂಬಿಕೆಯಲ್ಲಿ ದೃಢವಾಗಿದ್ದು, 14 ಯೆಹೂದ್ಯರ ಕಟ್ಟುಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸತ್ಯವನ್ನು ಒಪ್ಪಿಕೊಳ್ಳದ ಜನರ ಆಜ್ಞೆಗಳನ್ನು ಅನುಸರಿಸುವುದಿಲ್ಲ.

15 ಪರಿಶುದ್ಧರಾದ ಜನರಿಗೆ ಎಲ್ಲಾ ಸಂಗತಿಗಳು ಪರಿಶುದ್ಧವಾಗಿರುತ್ತವೆ. ಆದರೆ ಪಾಪಗಳನ್ನೇ ತುಂಬಿಕೊಂಡಿರುವ ಮತ್ತು ನಂಬಿಕೆಯಿಲ್ಲದ ಜನರಿಗೆ ಯಾವುದೂ ಪರಿಶುದ್ಧವಾಗಿರುವುದಿಲ್ಲ. ನಿಜವಾಗಿಯೂ, ಅವರ ಮನಸ್ಸುಗಳು ಮತ್ತು ಮನಸ್ಸಾಕ್ಷಿಗಳು ಮಲಿನವಾಗಿವೆ. 16 ದೇವರ ಬಗ್ಗೆ ತಮಗೆ ತಿಳಿದಿದೆಯೆಂದು ಅವರು ಹೇಳಿದರೂ ಅವರು ದೇವರನ್ನು ತಿಳಿದಿಲ್ಲವೆಂದು ಅವರ ಕೆಟ್ಟಕಾರ್ಯಗಳೇ ಸ್ಪಷ್ಟಪಡಿಸುತ್ತವೆ. ಅವರು ಭಯಂಕರವಾದ ಜನರು ಮತ್ತು ಅವಿಧೇಯರು. ಯಾವ ಸತ್ಕಾರ್ಯಗಳನ್ನು ಮಾಡುವುದಕ್ಕೂ ಅವರು ಯೋಗ್ಯರಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International