Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 63:1-8

ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

63 ದೇವರೇ, ನೀನೇ ನನ್ನ ದೇವರು.
    ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
    ನನ್ನ ದೇಹವು ನಿನಗಾಗಿ ಬಯಸಿದೆ.
ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
    ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
    ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
    ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
    ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
    ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
ನಿಜವಾಗಿಯೂ ನೀನೇ ನನಗೆ ಸಹಾಯಕ.
    ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
    ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.

ಅರಣ್ಯಕಾಂಡ 13:1-2

ಗೂಢಚಾರರು ಕಾನಾನ್ ದೇಶಕ್ಕೆ ಹೋದದ್ದು

13 ಯೆಹೋವನು ಮೋಶೆಗೆ, “ಕಾನಾನ್ ದೇಶದ ಬಗ್ಗೆ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಗೂಢಚಾರರನ್ನು ಕಳುಹಿಸು. ನಾನು ಇಸ್ರೇಲರಿಗೆ ಕೊಡುವ ದೇಶ ಇದಾಗಿದೆ. ಹನ್ನೆರಡು ಕುಲಗಳಿಂದ ಒಬ್ಬೊಬ್ಬ ನಾಯಕನನ್ನು ಕಳುಹಿಸು” ಎಂದು ಹೇಳಿದನು.

ಅರಣ್ಯಕಾಂಡ 13:17-14:9

17 ಕಾನಾನ್ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಬೆಟ್ಟದ ಸೀಮೆಗೆ ನೆಗೆವ್ ಮೂಲಕ ಹತ್ತಿ ಹೋಗಿ 18 ಆ ದೇಶದ ಸಂಗತಿಯನ್ನೆಲ್ಲಾ ತಿಳಿದುಕೊಳ್ಳಿರಿ. ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಮಂದಿಯೋ ಅಥವಾ ಸ್ವಲ್ಪ ಮಂದಿಯೋ, 19 ಅವರ ದೇಶ ಒಳ್ಳೆಯದೋ ಅಥವಾ ಕೆಟ್ಟದ್ದೋ, ಅವರ ಪಟ್ಟಣಗಳು ಗೋಡೆಗಳನ್ನು ಹೊಂದಿವೆಯೋ ಅಥವಾ ಇಲ್ಲವೋ, 20 ಭೂಮಿಯು ಸಾರವಾದದ್ದೋ ಅಥವಾ ನಿಸ್ಸಾರವಾದದ್ದೋ, ಮರಗಳನ್ನು ಹೊಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಅದಲ್ಲದೆ ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಲು ಪ್ರಯತ್ನ ಮಾಡಿ” ಎಂದು ಹೇಳಿದನು. (ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.)

21 ಅವರು ಬೆಟ್ಟದ ಸೀಮೆಗೆ ಹತ್ತಿಹೋಗಿ, ಚಿನ್ ಮರುಭೂಮಿಯಿಂದಿಡಿದು ಲೆಬೊಹಮಾತಿನ ಬಳಿಯಲ್ಲಿರುವ ರೆಹೋಬಿನವರೆಗೂ ದೇಶದ ವಿಷಯಗಳನ್ನು ಸಂಗ್ರಹಿಸಿಕೊಂಡರು. 22 ಅವರು ನೆಗೆವ್ ಮೂಲಕ ದೇಶವನ್ನು ಪ್ರವೇಶಿಸಿ ಹೆಬ್ರೋನಿಗೆ ಹೋದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳ ಮುಂಚೆ ಕಟ್ಟಲ್ಪಟ್ಟಿತ್ತು. ಅಲ್ಲಿ ಅಹೀಮನ್, ಶೇಫೈ ಮತ್ತು ತಲ್ಮೈ ಎಂಬವರು ವಾಸಿಸುತ್ತಿದ್ದರು. ಇವರು ಅನಾಕನ ಸಂತತಿಯವರು. 23 ಬಳಿಕ ಅವರು ಎಷ್ಕೋಲ್ ಕಣಿವೆಗೆ ಹೋದರು. ಅಲ್ಲಿ ಅವರು ದ್ರಾಕ್ಷಾಲತೆಯಿಂದ ಒಂದು ಕೊಂಬೆಯನ್ನು ಕಡಿದರು. ಆ ಕೊಂಬೆಯಲ್ಲಿ ದ್ರಾಕ್ಷೆಯ ಗೊಂಚಲಿತ್ತು. ಅವರು ಅದನ್ನು ಒಂದು ಕೋಲಿಗೆ ಕಟ್ಟಿ ಇಬ್ಬರು ಅದನ್ನು ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಹಣ್ಣುಗಳನ್ನು ಮತ್ತು ಅಂಜೂರದ ಹಣ್ಣುಗಳನ್ನು ಹೊತ್ತುತಂದರು. 24 ಇಸ್ರೇಲರು ಅಲ್ಲಿ ದ್ರಾಕ್ಷೆಯ ಗೊಂಚಲನ್ನು ಕತ್ತರಿಸಿದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಕಣಿವೆ ಎಂದು ಹೆಸರಾಯಿತು.

25 ಜನರು ನಲವತ್ತು ದಿನಗಳವರೆಗೆ ದೇಶವನ್ನು ಸಂಚರಿಸಿ ನೋಡಿ, ತಮ್ಮ ಪಾಳೆಯಕ್ಕೆ ಹಿಂತಿರುಗಿದರು. 26 ಇಸ್ರೇಲರು ಪಾರಾನ್ ಮರುಭೂಮಿಯ ಕಾದೇಶಿನಲ್ಲಿ ತಂಗಿದ್ದರು. ಅವರು ನೋಡಿದ್ದರ ಬಗ್ಗೆ ಎಲ್ಲವನ್ನು ಮೋಶೆಗೂ ಆರೋನನಿಗೂ ಎಲ್ಲಾ ಇಸ್ರೇಲರಿಗೂ ತಿಳಿಸಿದರು. ಅವರು ಕಾನಾನ್ ದೇಶದಿಂದ ತಂದ ಹಣ್ಣುಗಳನ್ನು ತೋರಿಸಿದರು. 27 ಜನರು ಮೋಶೆಗೆ, “ನೀನು ಕಳುಹಿಸಿದ ದೇಶಕ್ಕೆ ನಾವು ಹೋಗಿ ಸಂಚರಿಸಿ ನೋಡಿದೆವು. ಅದು ಹಾಲೂ ಜೇನೂ ಹರಿಯುವ ದೇಶವಾಗಿದೆ. ಇಗೋ, ಹಣ್ಣುಗಳಲ್ಲಿ ಕೆಲವು ಇಲ್ಲಿವೆ. 28 ಅಲ್ಲಿನ ಜನರು ಬಲಿಷ್ಠರು. ಪಟ್ಟಣಗಳೂ ಬಹಳ ದೊಡ್ಡದಾಗಿವೆ. ಪಟ್ಟಣಗಳು ಕೋಟೆಕೊತ್ತಲುಗಳುಳ್ಳದಾಗಿವೆ. ನಾವು ಕೆಲವು ಅನಾಕ್ಯರನ್ನು ಸಹ ನೋಡಿದೆವು. 29 ಅಮಾಲೇಕ್ಯರು ನೆಗೆವ್‌ನಲ್ಲಿ ವಾಸಿಸುತ್ತಾರೆ. ಹಿತ್ತಿಯರು, ಯೆಬೂಸಿಯರು ಮತ್ತು ಅಮೋರಿಯರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ. ಕಾನಾನ್ಯರು ಸಮುದ್ರ ತೀರದಲ್ಲಿಯೂ ಮತ್ತು ಯೋರ್ದನ್ ನದಿಯ ಉದ್ದಕ್ಕೂ ವಾಸಿಸುತ್ತಾರೆ” ಎಂದು ಹೇಳಿದರು.

30 ಕಾಲೇಬನು ಮೋಶೆಯ ಬಳಿಯಲ್ಲಿದ್ದ ಗೊಣಗುಟ್ಟುವ ಜನರನ್ನು ಸುಮ್ಮನಿರಿಸಿ, “ನಾವು ಹೋಗಿ ದೇಶವನ್ನು ವಶಪಡಿಸಿಕೊಳ್ಳಬೇಕು. ನಾವು ಸುಲಭವಾಗಿ ದೇಶವನ್ನು ವಶಪಡಿಸಿಕೊಳ್ಳಬಹುದು” ಎಂದು ಹೇಳಿದನು.

31 ಆದರೆ ಅವನೊಡನೆ ಹೋದ ಜನರು, “ನಾವು ಆ ಜನರೊಡನೆ ಹೋರಾಡಲಾರೆವು, ಅವರು ನಮಗಿಂತಲೂ ಬಲಿಷ್ಠರು” ಎಂದು ಹೇಳಿದರು. 32 “ನಾವು ಸಂಚರಿಸಿ ವಿಷಯ ಸಂಗ್ರಹಿಸಿಕೊಂಡು ಬಂದ ದೇಶವು ಅಲ್ಲಿ ವಾಸಿಸುವವರನ್ನು ನಾಶಪಡಿಸುವ ದೇಶವಾಗಿದೆ. ನಾವು ಅಲ್ಲಿ ನೋಡಿದ ಎಲ್ಲಾ ಜನರು ರಾಕ್ಷಸರಂತಿದ್ದಾರೆ. 33 ಪ್ರಚಂಡರಾದ ನೆಫೀಲಿಯರು ಅಲ್ಲಿ ವಾಸವಾಗಿರುವುದನ್ನು ನಾವು ನೋಡಿದೆವು. (ಅನಾಕ್ಯರು ನೆಫೀಲಿಯ ಜನರ ಸಂತತಿಯವರಾಗಿದ್ದಾರೆ.) ಅವರ ಮುಂದೆ ನಾವು ಮಿಡತೆಗಳೊ ಎಂದೆನಿಸಿತು. ಅವರಿಗೂ ಸಹ ನಾವು ಮಿಡತೆಗಳಂತೆ ಕಂಡುಬಂದೆವು” ಎಂದರು.

ಜನರು ಮತ್ತೆ ಗೊಣಗುಟ್ಟಿದ್ದು

14 ಆ ರಾತ್ರಿಯಲ್ಲಿ ಜನರೆಲ್ಲರೂ ಗಟ್ಟಿಯಾಗಿ ಕೂಗಿಕೊಂಡರು. ಇಸ್ರೇಲರು ಮೋಶೆ ಆರೋನರ ವಿರುದ್ಧ ಗೊಣಗುಟ್ಟಿದರು. ಜನರೆಲ್ಲರೂ ಒಟ್ಟಾಗಿ ಮೋಶೆ ಆರೋನರ ಬಳಿಗೆ ಬಂದು, “ನಾವು ಈಜಿಪ್ಟಿನಲ್ಲಿಯಾಗಲೀ ಅಥವಾ ಈ ಮರುಭೂಮಿಯಲ್ಲಾಗಲಿ ಸತ್ತಿದ್ದರೆ ಒಳ್ಳೆಯದಿತ್ತು. ಯುದ್ಧದಲ್ಲಿ ನಾವು ಸತ್ತುಹೋಗುವಂತೆ ಯೆಹೋವನು ನಮ್ಮನ್ನು ಈ ಹೊಸ ದೇಶಕ್ಕೆ ತರುತ್ತಿರುವುದೇಕೆ? ವೈರಿಗಳು ನಮ್ಮನ್ನು ಕೊಂದು ನಮ್ಮ ಹೆಂಡತಿಯರನ್ನೂ ಮಕ್ಕಳನ್ನೂ ತೆಗೆದುಕೊಳ್ಳುವರು. ನಾವು ಈಜಿಪ್ಟಿಗೆ ಮರಳಿಹೋಗುವುದೇ ಉತ್ತಮ” ಎಂದು ಹೇಳಿದರು.

ಬಳಿಕ ಜನರು, “ನಾವು ಇನ್ನೊಬ್ಬ ನಾಯಕನನ್ನು ಆರಿಸಿಕೊಂಡು ಈಜಿಪ್ಟಿಗೆ ಮರಳಿಹೋಗೋಣ” ಎಂದು ಮಾತಾಡಿಕೊಂಡರು.

ಆಗ ಮೋಶೆ ಆರೋನರು ಇಸ್ರೇಲರ ಸರ್ವ ಸಮೂಹದವರ ಮುಂದೆ ಬೋರಲಬಿದ್ದರು. ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬಂದವರಲ್ಲಿ ಇಬ್ಬರಾಗಿದ್ದರು. ಅವರು ಬೇಸರಗೊಂಡು ತಮ್ಮ ಬಟ್ಟೆಗಳನ್ನು ಹರಿದುಕೊಂಡರು. ಇವರಿಬ್ಬರು ಇಸ್ರೇಲರೆಲ್ಲರಿಗೆ, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು, ಅದು ಹಾಲೂ ಜೇನೂ ಹರಿಯುವ ದೇಶ. ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಆ ದೇಶದೊಳಗೆ ನಮ್ಮನ್ನು ಕರೆದೊಯ್ದು ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು. ಹೀಗಿರುವುದರಿಂದ ಯೆಹೋವನಿಗೆ ವಿರುದ್ಧವಾಗಿ ಏಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ನಾವು ಅವರನ್ನು ಸೋಲಿಸಬಹುದು. ಅವರಿಗೆ ಯಾವ ಸಂರಕ್ಷಣೆ ಇರುವುದಿಲ್ಲ. ಆದರೆ ನಮ್ಮ ಕಡೆ ಯೆಹೋವನು ಇದ್ದಾನೆ. ಆದ್ದರಿಂದ ಭಯಪಡಬೇಡಿರಿ” ಅಂದರು.

ಮತ್ತಾಯ 17:22-27

ತನ್ನ ಮರಣವನ್ನು ಕುರಿತು ಯೇಸುವಿನ ಎರಡನೆ ಪ್ರಕಟನೆ

(ಮಾರ್ಕ 9:30-32; ಲೂಕ 9:43-45)

22 ಒಮ್ಮೆ ಶಿಷ್ಯರು ಗಲಿಲಾಯದಲ್ಲಿ ಒಟ್ಟಿಗೆ ಸೇರಿದ್ದರು. ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. 23 ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಮರಣದಿಂದ ಮೇಲೆದ್ದು ಬರುವನು” ಎಂದು ಹೇಳಿದನು.

ತೆರಿಗೆಯ ಕುರಿತು ಯೇಸುವಿನ ಉಪದೇಶ

24 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ದೇವಾಲಯಕ್ಕೆ ಯೆಹೂದ್ಯರಿಂದ ವಾರ್ಷಿಕ ತೆರಿಗೆ ವಸೂಲಿ ಮಾಡುವ ಕೆಲವರು ಪೇತ್ರನ ಬಳಿಗೆ ಬಂದು, “ನಿಮ್ಮ ಬೋಧಕನು ದೇವಾಲಯದ ವಾರ್ಷಿಕ ತೆರಿಗೆಯನ್ನು ಸಲ್ಲಿಸುವುದಿಲ್ಲವೋ?” ಎಂದು ಕೇಳಿದರು.

25 ಅದಕ್ಕೆ ಪೇತ್ರನು, “ಹೌದು, ಸಲ್ಲಿಸುತ್ತಾನೆ” ಎಂದು ಉತ್ತರಕೊಟ್ಟನು.

ಬಳಿಕ ಪೇತ್ರನು ಯೇಸುವಿದ್ದ ಮನೆಯೊಳಕ್ಕೆ ಹೋದನು. ಅವನು ಈ ವಿಷಯವನ್ನು ಹೇಳುವುದಕ್ಕಿಂತ ಮೊದಲೇ ಯೇಸು ಅವನಿಗೆ, “ಭೂಲೋಕದ ರಾಜರುಗಳು ಜನರಿಂದ ಅನೇಕ ಬಗೆಯ ತೆರಿಗೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ತೆರಿಗೆ ಕೊಡುವ ಜನರು ಯಾರು? ರಾಜನ ಮಕ್ಕಳೇ ಅಥವಾ ಬೇರೆ ಜನರೇ? ನಿನ್ನ ಅಭಿಪ್ರಾಯವೇನು?” ಎಂದು ಕೇಳಿದನು.

26 ಪೇತ್ರನು, “ಬೇರೆ ಜನರು ತೆರಿಗೆಗಳನ್ನು ಸಲ್ಲಿಸುತ್ತಾರೆ” ಎಂದು ಉತ್ತರಕೊಟ್ಟನು.

ಯೇಸು ಪೇತ್ರನಿಗೆ, “ಹಾಗಾದರೆ ರಾಜನ ಮಕ್ಕಳು ತೆರಿಗೆ ಕೊಡಬೇಕಿಲ್ಲ. 27 ಆದರೆ ತೆರಿಗೆ ವಸೂಲಿಗಾರರನ್ನು ನಾವೇಕೆ ಕೋಪಗೊಳಿಸಬೇಕು? ನೀನು ತೆರಿಗೆಯನ್ನು ಕೊಡು. ಸರೋವರಕ್ಕೆ ಹೋಗಿ ಮೀನನ್ನು ಹಿಡಿ. ನಿನಗೆ ಸಿಕ್ಕಿದ ಮೊದಲನೇ ಮೀನಿನ ಬಾಯನ್ನು ತೆರೆ, ಅದರ ಬಾಯೊಳಗೆ ವಾರ್ಷಿಕ ತೆರಿಗೆಗೆ ಬೇಕಾದ ಒಂದು ನಾಣ್ಯವನ್ನು ಕಾಣುವೆ. ಅದನ್ನು ತೆಗೆದುಕೊಂಡು ಬಂದು, ತೆರಿಗೆ ವಸೂಲಿ ಮಾಡುವವರಿಗೆ ಕೊಡು. ಅದರಿಂದ ನನ್ನ ಮತ್ತು ನಿನ್ನ ತೆರಿಗೆಯನ್ನು ಕೊಟ್ಟಂತಾಗುವುದು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International