Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 63:1-8

ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

63 ದೇವರೇ, ನೀನೇ ನನ್ನ ದೇವರು.
    ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
    ನನ್ನ ದೇಹವು ನಿನಗಾಗಿ ಬಯಸಿದೆ.
ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
    ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
    ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
    ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
    ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
    ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
ನಿಜವಾಗಿಯೂ ನೀನೇ ನನಗೆ ಸಹಾಯಕ.
    ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
    ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.

ವಿಮೋಚನಕಾಂಡ 40:34-38

ಯೆಹೋವನ ಮಹಿಮೆ

34 ತರುವಾಯ ಮೋಡವು ದೇವದರ್ಶನಗುಡಾರವನ್ನು ಕವಿಯಿತು. ಯೆಹೋವನ ಮಹಿಮೆಯು ಪವಿತ್ರಗುಡಾರವನ್ನು ತುಂಬಿಕೊಂಡಿತು. 35 ಮೋಡವು ದೇವದರ್ಶನಗುಡಾರದ ಮೇಲೆ ನಿಂತಿತು. ಯೆಹೋವನ ಮಹಿಮೆಯು ಪವಿತ್ರಗುಡಾರವನ್ನು ತುಂಬಿಕೊಂಡಿದ್ದರಿಂದ ಮೋಶೆಯು ಒಳಗೆ ಪ್ರವೇಶಿಸಲಾಗಲಿಲ್ಲ.

36 ಜನರು ಯಾವಾಗ ಚಲಿಸಬೇಕೆಂದು ಮೋಡವು ತೋರಿಸುತ್ತಿತ್ತು. ಮೋಡವು ಪವಿತ್ರಗುಡಾರವನ್ನು ಬಿಟ್ಟು ಮೇಲೆದ್ದಾಗ, ಜನರು ಪ್ರಯಾಣ ಮಾಡತೊಡಗುತ್ತಿದ್ದರು. 37 ಆದರೆ ಮೋಡವು ಪವಿತ್ರಗುಡಾರದ ಮೇಲಿದ್ದಾಗ ಜನರು ಪ್ರಯಾಣ ಮಾಡುತ್ತಿರಲಿಲ್ಲ. ಮೋಡವು ಮೇಲೇಳುವವರೆಗೆ ಅವರು ಅಲ್ಲೇ ಇರುತ್ತಿದ್ದರು. 38 ಹೀಗೆ ಯೆಹೋವನ ಮೋಡವು ಹಗಲಿನಲ್ಲಿ ಪವಿತ್ರಗುಡಾರದ ಮೇಲೆ ನಿಂತಿತು. ರಾತ್ರಿಯಲ್ಲಿ ಮೋಡದಲ್ಲಿ ಅಗ್ನಿಯು ಪ್ರಕಾಶಿಸುತ್ತಿತ್ತು. ಆದ್ದರಿಂದ ಇಸ್ರೇಲ್ ಜನರೆಲ್ಲರೂ ತಾವು ಪ್ರಯಾಣ ಮಾಡುವಾಗ, ಮೋಡವನ್ನು ನೋಡಬಹುದಾಗಿತ್ತು.

ಪ್ರಕಟನೆ 18:1-10

ಬಾಬಿಲೋನ್ ನಾಶವಾಯಿತು

18 ನಂತರ ಮತ್ತೊಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಈ ದೇವದೂತನಿಗೆ ಮಹಾ ಅಧಿಕಾರವಿತ್ತು. ಈ ದೇವದೂತನ ಪ್ರಭಾವವು ಭೂಮಿಯನ್ನು ಪ್ರಕಾಶಗೊಳಿಸಿತು. ದೇವದೂತನು ತನ್ನ ಶಕ್ತಿಯುತವಾದ ಧ್ವನಿಯಿಂದ ಆರ್ಭಟಿಸಿದನು:

“ಅವಳು ನಾಶವಾದಳು!
    ಬಾಬಿಲೋನೆಂಬ ಮಹಾನಗರಿಯು ನಾಶವಾದಳು!
ಅವಳು (ಬಾಬಿಲೋನ್) ದೆವ್ವಗಳಿಗೆ ವಾಸಸ್ಥಾನವಾದಳು,
    ಸಕಲ ಅಶುದ್ಧಾತ್ಮಗಳಿಗೆ ನೆಲೆಯಾದಳು,
    ಅಶುದ್ಧವಾದ ಮತ್ತು ಅಸಹ್ಯವಾದ
    ಸಕಲ ಹಕ್ಕಿಗಳಿಗೆ ಆಶ್ರಯವಾದಳು.”
ದೇವರ ಕೋಪವೆಂಬ ಮತ್ತು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಲೋಕದ ಜನರೆಲ್ಲರೂ ಕುಡಿದು ಮತ್ತರಾದರು.
ಭೂಲೋಕದ ರಾಜರುಗಳೆಲ್ಲ ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು.
    ಭೂಲೋಕದ ವರ್ತಕರು ಅವಳ ಅತಿಯಾದ ಸುಖದಿಂದ ಶ್ರೀಮಂತರಾದರು.

ನಂತರ ಪರಲೋಕದಿಂದ ಮತ್ತೊಂದು ಧ್ವನಿಯು ಹೀಗೆ ಹೇಳುವುದು ನನಗೆ ಕೇಳಿತು:

“ನನ್ನ ಜನರೇ, ನೀವು ಆ ನಗರದಿಂದ ಹೊರಗೆ ಬಂದುಬಿಡಿ.
    ಆಗ ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗುವುದಿಲ್ಲ;
    ಅವಳಿಗಾಗುವ ಉಪದ್ರವಗಳು ನಿಮಗೆ ಸಂಭವಿಸುವುದಿಲ್ಲ.
ಆ ನಗರಿಯ ಪಾಪಗಳು ಪರಲೋಕವನ್ನು ಮುಟ್ಟುವಂತೆ ಬೆಳೆದುನಿಂತಿವೆ.
    ಅವಳು ಮಾಡಿದ ಕೆಟ್ಟಕಾರ್ಯಗಳನ್ನು ದೇವರು ಮರೆತಿಲ್ಲ.
ಆ ನಗರಿಯು ಬೇರೆಯವರಿಗೆ ಕೊಟ್ಟಂತೆ ನೀವೂ ಅವಳಿಗೆ ಕೊಡಿರಿ.
    ಅವಳು ಮಾಡಿದ್ದಕ್ಕೆ ಪ್ರತಿಯಾಗಿ ಎರಡರಷ್ಟನ್ನು ಅವಳಿಗೆ ಕೊಡಿರಿ.
ಅವಳು ಇತರರಿಗೆ ಕೊಟ್ಟ ದ್ರಾಕ್ಷಾರಸಕ್ಕಿಂತ ಎರಡರಷ್ಟು ಗಟ್ಟಿಯಾದ
    ದ್ರಾಕ್ಷಾರಸವನ್ನು ಅವಳಿಗೆ ಸಿದ್ಧಪಡಿಸಿಕೊಡಿರಿ.
ಅವಳು ತನ್ನನ್ನು ಘನಪಡಿಸಿಕೊಂಡು ವೈಭವದಿಂದ ಜೀವಿಸಿದಳು.
    ಆದ್ದರಿಂದ ಅದಕ್ಕೆ ತಕ್ಕಂತೆ ಸಂಕಟವನ್ನೂ ದುಃಖವನ್ನೂ ಅವಳಿಗೆ ಬರಮಾಡಿರಿ.
‘ನಾನು ನನ್ನ ಸಿಂಹಾಸನದ ಮೇಲೆ ಕುಳಿತಿರುವ ರಾಣಿ.
    ನಾನು ವಿಧವೆಯಲ್ಲ,
    ನಾನು ಎಂದೆಂದಿಗೂ ದುಃಖಿಸುವುದಿಲ್ಲ’ ಎಂದು ಅವಳು ತನಗೆ ತಾನೇ ಹೇಳಿಕೊಳ್ಳುತ್ತಾಳೆ.
ಆದ್ದರಿಂದ ಅವಳಿಗೆ ಮರಣ, ಗೋಳಾಟ,
    ಭೀಕರ ಕ್ಷಾಮ ಎಂಬ ಉಪದ್ರವಗಳು ಒಂದೇ ದಿನದಲ್ಲಿ ಬರುತ್ತವೆ.
ಅವಳಿಗೆ ತೀರ್ಪು ನೀಡಿದ ದೇವರಾಗಿರುವ ಪ್ರಭುವು
    ಬಲಿಷ್ಠನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುತ್ತಾಳೆ.”

ಅವಳೊಂದಿಗೆ ಲೈಂಗಿಕ ಪಾಪಮಾಡಿ ಅವಳ ಸಂಪತ್ತಿನಲ್ಲಿ ಪಾಲುಗಾರರಾದ ಲೋಕದ ರಾಜರುಗಳು ಅವಳ ದಹನದಿಂದೇರುವ ಹೊಗೆಯನ್ನು ನೋಡುತ್ತಾರೆ. ಅವಳು ಸಾಯುತ್ತಿರುವುದನ್ನು ಕಂಡು ರಾಜರುಗಳು ಗೋಳಾಡುವರು ಮತ್ತು ದುಃಖಿಸುವರು. 10 ಅವಳ ಯಾತನೆಯನ್ನು ಕಂಡು ರಾಜರುಗಳು ಭಯದಿಂದ ದೂರನಿಂತು ಹೀಗೆನ್ನುವರು:

‘ಅಯ್ಯೋ, ಅಯ್ಯೋ, ಮಹಾನಗರಿಯೇ,
    ಬಲಿಷ್ಠವಾದ ಬಾಬಿಲೋನ್ ಪಟ್ಟಣವೇ,
ಒಂದೇ ಗಳಿಗೆಯಲ್ಲಿ ನಿನಗೆ ದಂಡನೆ ಆಯಿತಲ್ಲಾ!’

ಪ್ರಕಟನೆ 18:19-20

19 ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು, ದುಃಖದಿಂದ ಗೋಳಾಡುತ್ತಾ ಹೀಗೆ ಹೇಳಿದರು:

‘ಅಯ್ಯೋ! ಅಯ್ಯೋ! ಈ ಮಹಾನಗರಿಗೆ ಎಂಥಾ ಗತಿಯಾಯಿತು!
    ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದ್ದ ಜನರೆಲ್ಲರೂ ಅವಳ ಸಂಪತ್ತಿನಿಂದ ಶ್ರೀಮಂತರಾದರು!
    ಆದರೆ ಅವಳು ಒಂದೇ ಗಳಿಗೆಯಲ್ಲಿ ನಾಶವಾಗಿಬಿಟ್ಟಳು!
20 ಪರಲೋಕವೇ, ಇದರಿಂದ ನೀನೂ ಸಂತೋಷಪಡು!
    ದೇವರ ಪರಿಶುದ್ಧ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ನೀವೂ ಸಂತೋಷಪಡಿರಿ!
ಅವಳು ನಿಮಗೆ ಮಾಡಿದ ಕೇಡುಗಳಿಗಾಗಿ ದೇವರು ಅವಳನ್ನು ದಂಡಿಸಿದನು.’”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International