Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 97

97 ಯೆಹೋವನು ಆಳುತ್ತಿರುವನು! ಭೂಮಿಯು ಸಂತೋಷಿಸಲಿ.
    ದೂರ ದೇಶಗಳೆಲ್ಲಾ ಹರ್ಷಿಸಲಿ.
ಕಾರ್ಮೋಡಗಳು ಆತನನ್ನು ಕವಿದುಕೊಂಡಿವೆ.
    ನೀತಿಯೂ ನ್ಯಾಯವೂ ಆತನ ರಾಜ್ಯದ ಬಲವಾಗಿವೆ.
ಬೆಂಕಿಯು ಆತನ ಮುಂದೆ ಹೋಗಿ
    ಆತನ ಶತ್ರುಗಳನ್ನು ನಾಶಮಾಡುವುದು.
ಆತನ ಮಿಂಚು ಆಕಾಶದಲ್ಲಿ ಹೊಳೆಯುತ್ತದೆ.
    ಜನರು ಅದನ್ನು ನೋಡಿ ಭಯಗೊಂಡಿದ್ದಾರೆ.
ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ
    ಬೆಟ್ಟಗಳು ಮೇಣದಂತೆ ಕರಗಿಹೋಗುತ್ತವೆ.
ಆಕಾಶಗಳೇ, ಆತನ ನೀತಿಯ ಕುರಿತು ಹೇಳಿರಿ!
    ದೇವರ ಮಹಿಮೆಯನ್ನು ಪ್ರತಿಯೊಬ್ಬನೂ ಕಾಣಲಿ!

ಜನರು ತಮ್ಮ ವಿಗ್ರಹಗಳನ್ನು ಪೂಜಿಸುವರು.
    ಅವರು ತಮ್ಮ “ದೇವರುಗಳ” ಬಗ್ಗೆ ಜಂಬಕೊಚ್ಚುವರು.
ಆದರೆ ಅವರು ನಾಚಿಕೆಗೀಡಾಗುವರು.
    ಅವರ “ದೇವರುಗಳು” ಯೆಹೋವನಿಗೆ ಅಡ್ಡಬಿದ್ದು ಆರಾಧಿಸುತ್ತವೆ.
ಚೀಯೋನೇ, ಕೇಳಿ ಸಂತೋಷಪಡು!
    ಯೆಹೂದದ ಪಟ್ಟಣಗಳೇ, ಆನಂದಿಸಿರಿ.
    ಯಾಕೆಂದರೆ ಯೆಹೋವನ ತೀರ್ಪುಗಳು ನ್ಯಾಯವಾಗಿವೆ.
ಮಹೋನ್ನತನಾದ ಯೆಹೋವನೇ, ಭೂಲೋಕದ ಸರ್ವಾಧಿಪತಿ ನೀನೇ.
    ಎಲ್ಲಾ ದೇವರುಗಳಲ್ಲಿ ನೀನೇ ಮಹೋನ್ನತನು.
10 ಯೆಹೋವನನ್ನು ಪ್ರೀತಿಸುವವರೇ, ದುಷ್ಟತನವನ್ನು ದ್ವೇಷಿಸಿರಿ.
    ದೇವರು ತನ್ನ ಭಕ್ತರನ್ನು ಸಂರಕ್ಷಿಸುವನು.
    ದೇವರು ತನ್ನ ಸದ್ಭಕ್ತರನ್ನು ಕೆಡುಕರಿಂದ ರಕ್ಷಿಸುವನು.
11 ನೀತಿವಂತರಿಗೋಸ್ಕರ ಬೆಳಕೂ ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಪ್ರಕಾಶಿಸುತ್ತವೆ.
12 ನೀತಿವಂತರೇ, ಯೆಹೋವನಲ್ಲಿ ಸಂತೋಷಪಡಿರಿ!
    ಆತನ ಪವಿತ್ರ ಹೆಸರನ್ನು ಸನ್ಮಾನಿಸಿರಿ!

2 ರಾಜರುಗಳು 17:7-20

ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ಪಾಪಗಳನ್ನು ಮಾಡಿದ್ದರಿಂದ ಇವೆಲ್ಲವೂ ಸಂಭವಿಸಿದವು. ಈಜಿಪ್ಟಿನ ರಾಜನಾದ ಫರೋಹನ ಆಳ್ವಿಕೆಯಿಂದ ಇಸ್ರೇಲರನ್ನು ತಪ್ಪಿಸಿ ಯೆಹೋವನು ಅವರನ್ನು ಈಜಿಪ್ಟ್ ದೇಶದಿಂದ ಹೊರತಂದಿದ್ದನು. ಆದರೆ ಇಸ್ರೇಲರು ಬೇರೆ ದೇವರುಗಳನ್ನು ಪೂಜಿಸಲು ಆರಂಭಿಸಿ ಅನ್ಯರು ಮಾಡುವಂತಹ ಕಾರ್ಯಗಳನ್ನೇ ಮಾಡತೊಡಗಿದರು. ಇಸ್ರೇಲರು ಈಜಿಪ್ಟಿನಿಂದ ತಮ್ಮ ದೇಶಕ್ಕೆ ಬಂದಾಗ ಯೆಹೋವನು ಅಲ್ಲಿಯ ನಿವಾಸಿಗಳನ್ನು ಬಲವಂತವಾಗಿ ಹೊರಗಟ್ಟಿದ್ದನು. ಆದರೆ ಇಸ್ರೇಲರು ತಮ್ಮನ್ನು ಆಳುವುದಕ್ಕಾಗಿ ದೇವರನ್ನು ತೊರೆದು ರಾಜರನ್ನು ಆರಿಸಿಕೊಂಡರು. ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ರಹಸ್ಯವಾದ ಕೆಟ್ಟಕಾರ್ಯಗಳನ್ನು ಮಾಡಿದರು.

ಇಸ್ರೇಲರು ಚಿಕ್ಕ ಊರಿನಿಂದಿಡಿದು ದೊಡ್ಡ ನಗರದವರೆಗೂ ತಮ್ಮ ಎಲ್ಲಾ ನಗರಗಳಲ್ಲಿ ಉನ್ನತಸ್ಥಳಗಳನ್ನು ನಿರ್ಮಿಸಿದರು. 10 ಇಸ್ರೇಲರು ಪ್ರತಿಯೊಂದು ಬೆಟ್ಟದ ಮೇಲೂ ಪ್ರತಿಯೊಂದು ಹಸಿರುಗಿಡಗಳ ಅಡಿಯಲ್ಲೂ ಸ್ಮಾರಕಕಲ್ಲುಗಳನ್ನು ಮತ್ತು ಅಶೇರ್ ವಿಗ್ರಹಕಲ್ಲುಗಳನ್ನು ನಿಲ್ಲಿಸಿದರು. 11 ಇಸ್ರೇಲರು ಪೂಜಾಸ್ಥಳಗಳಲ್ಲೆಲ್ಲಾ ಧೂಪವನ್ನು ಸುಡುತ್ತಿದ್ದರು. ಯೆಹೋವನು ಆ ದೇಶದಿಂದ ಬಲವಂತವಾಗಿ ಹೊರಗಟ್ಟಿದ ಆ ಮೊದಲಿನ ಜನಾಂಗಗಳಂತೆ ಇಸ್ರೇಲರು ಮಾಡಿದರು. ಇಸ್ರೇಲರು ಮಾಡಿದ ದುಷ್ಕೃತ್ಯಗಳಿಂದ ಯೆಹೋವನು ಕೋಪಗೊಂಡನು. 12 ಅವರು ವಿಗ್ರಹಗಳ ಸೇವೆಮಾಡಿದರು. ಯೆಹೋವನು ಇಸ್ರೇಲರಿಗೆ, “ನೀವು ವಿಗ್ರಹಗಳನ್ನು ಪೂಜಿಸಲೇಬಾರದು” ಎಂದು ಹೇಳಿದ್ದನು.

13 ಇಸ್ರೇಲ್ ಮತ್ತು ಯೆಹೂದಗಳನ್ನು ಎಚ್ಚರಿಸಲು ಯೆಹೋವನು ಪ್ರತಿಯೊಬ್ಬ ಪ್ರವಾದಿಯನ್ನು ಮತ್ತು ದೇವದರ್ಶಿಯನ್ನು ಬಳಸಿಕೊಂಡನು. ಯೆಹೋವನು, “ನಿಮ್ಮ ಕೆಟ್ಟಕಾರ್ಯಗಳಿಂದ ದೂರವಾಗಿ! ನನ್ನ ಆಜ್ಞೆಗಳಿಗೆ ಮತ್ತು ಧರ್ಮಶಾಸ್ತ್ರಗಳಿಗೆ ವಿಧೇಯತೆಯಿಂದಿರಿ. ನಿಮ್ಮ ಪೂರ್ವಿಕರಿಗೆ ನಾನು ನೀಡಿದ ಕಟ್ಟಳೆಗಳನ್ನೆಲ್ಲಾ ಅನುಸರಿಸಿ. ನಾನು ನನ್ನ ಸೇವಕರಾದ ಪ್ರವಾದಿಗಳ ಮೂಲಕ ಇವುಗಳನ್ನು ನೀಡಿದ್ದೇನೆ” ಎಂದು ಹೇಳಿದ್ದನು.

14 ಆದರೆ ಅವರು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ; ತಮ್ಮ ದೇವರಾದ ಯೆಹೋವನನ್ನು ನಂಬದೆಹೋದ ತಮ್ಮ ಪೂರ್ವಿಕರನ್ನೇ ಅನುಸರಿಸಿದರು. 15 ಯೆಹೋವನು ಅವರ ಪೂರ್ವಿಕರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಮತ್ತು ಆತನ ನಿಯಮಗಳನ್ನು ಅವರು ಒಪ್ಪಲಿಲ್ಲ. ಅವರು ಯೆಹೋವನ ಎಚ್ಚರಿಕೆಗೆ ಗಮನವನ್ನೂ ನೀಡಲಿಲ್ಲ. ಅವರು ನಿರರ್ಥಕವಾದ ವಿಗ್ರಹಗಳನ್ನು ಅನುಸರಿಸಿ ನಿಷ್ಪ್ರಯೋಜಕರಾದರು, ಅವರು ತಮ್ಮ ಸುತ್ತಮುತ್ತಲಿನ ಜನಾಂಗಗಳನ್ನು ಅನುಸರಿಸಿದರು. ಯೆಹೋವನು ಇಸ್ರೇಲಿನ ಜನರಿಗೆ ಮಾಡಬಾರದೆಂದು ಎಚ್ಚರಿಸಿ ಹೇಳಿದ್ದನ್ನು ಈ ಜನಾಂಗಗಳು ಮಾಡಿದವು.

16 ಜನರು ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಅನುಸರಿಸುವುದನ್ನು ನಿಲ್ಲಿಸಿದರು. ಅವರು ಚಿನ್ನದ ಎರಡು ಬಸವನ ಮೂರ್ತಿಗಳನ್ನು ನಿರ್ಮಿಸಿದರು. ಅವರು ಅಶೇರ ಸ್ತಂಭಗಳನ್ನು ನಿರ್ಮಿಸಿದರು. ಅವರು ಪರಲೋಕದ ಎಲ್ಲಾ ನಕ್ಷತ್ರಗಳನ್ನು ಮತ್ತು ಬಾಳ್ ದೇವರನ್ನು ಪೂಜಿಸಿದರು. 17 ಅವರು ತಮ್ಮ ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು. ಅವರು ಭವಿಷ್ಯವನ್ನು ತಿಳಿಯಲು ಮಾಂತ್ರಿಕ ವಿದ್ಯೆಯನ್ನು ಮತ್ತು ಕಣಿಹೇಳುವುದನ್ನು ಕಲಿತರು. ಯೆಹೋವನು ಕೆಟ್ಟದ್ದೆಂದು ಹೇಳಿದ್ದಕ್ಕೆ ತಮ್ಮನ್ನು ತಾವು ಮಾರಿಕೊಂಡು ಯೆಹೋವನಿಗೆ ಕೋಪವನ್ನು ಉಂಟುಮಾಡಿದರು. 18 ಆದ್ದರಿಂದ ಯೆಹೋವನು ಇಸ್ರೇಲಿನ ಬಗ್ಗೆ ಉಗ್ರಕೋಪಿಯಾಗಿ, ಅವರನ್ನು ತನ್ನ ದೃಷ್ಟಿಯಿಂದ ದೂರಮಾಡಿದನು. ಯೆಹೂದಕುಲದವರ ಹೊರತಾಗಿ ಇಸ್ರೇಲರಲ್ಲಿ ಯಾರೂ ಉಳಿಯಲಿಲ್ಲ!

ಯೆಹೂದದ ಜನರೂ ಸಹ ತಪ್ಪಿತಸ್ಥರಾದರು

19 ಆದರೆ ಯೆಹೂದದ ಜನರೂ ಸಹ ತಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಿರಲಿಲ್ಲ. ಯೆಹೂದದ ಜನರು ಇಸ್ರೇಲಿನ ಜನರಂತೆಯೇ ಜೀವಿಸುತ್ತಿದ್ದರು.

20 ಯೆಹೋವನು ಇಸ್ರೇಲಿನ ಜನರೆಲ್ಲರನ್ನೂ ತಿರಸ್ಕರಿಸಿದನು. ಅವನು ಅವರಿಗೆ ಅನೇಕ ತೊಂದರೆಗಳನ್ನು ಉಂಟುಮಾಡಿದನು. ಅವರನ್ನು ನಾಶಗೊಳಿಸಲು ನಾಶಕರಿಗೆ ಆತನು ಅವಕಾಶ ನೀಡಿದನು. ಕೊನೆಗೆ, ಆತನು ಅವರನ್ನು ದೂರತಳ್ಳಿ, ತನ್ನ ದೃಷ್ಟಿಯಿಂದ ಅವರನ್ನೂ ದೂರಮಾಡಿದನು.

ಯೋಹಾನ 6:25-35

ಯೇಸುವೇ ಜೀವದ ರೊಟ್ಟಿ

25 ಜನರು ಯೇಸುವನ್ನು ಸರೋವರದ ಆಚೆಯ ದಡದಲ್ಲಿ ಕಂಡುಕೊಂಡರು. ಅವರು ಆತನಿಗೆ, “ಗುರುವೇ, ನೀನು ಇಲ್ಲಿಗೆ ಯಾವಾಗ ಬಂದೆ?” ಎಂದು ಕೇಳಿದರು.

26 ಯೇಸು, “ನೀವು ನನ್ನನ್ನು ಏಕೆ ಹುಡುಕುತ್ತಿದ್ದೀರಿ? ನನ್ನ ಅಧಿಕಾರವನ್ನು ನಿರೂಪಿಸುವ ನನ್ನ ಅದ್ಭುತಕಾರ್ಯಗಳನ್ನು ಕಂಡು ನೀವು ನನ್ನನ್ನು ಹುಡುಕುತ್ತಿದ್ದೀರೋ? ಇಲ್ಲ! ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ರೊಟ್ಟಿಯನ್ನು ತೃಪ್ತಿಯಾಗುವಷ್ಟು ತಿಂದಕಾರಣ ನನ್ನನ್ನು ಹುಡುಕುತ್ತಿದ್ದೀರಿ. 27 ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು.

28 ಜನರು ಯೇಸುವಿಗೆ, “ನಾವು ಯಾವ ಕಾರ್ಯಗಳನ್ನು ಮಾಡಬೇಕೆಂದು ದೇವರು ಬಯಸುತ್ತಾನೆ?” ಎಂದು ಕೇಳಿದರು.

29 ಯೇಸು, “ದೇವರು ಕಳುಹಿಸಿದಾತನನ್ನು ನೀವು ನಂಬಬೇಕು. ಈ ಕಾರ್ಯವನ್ನೇ ದೇವರು ನಿಮ್ಮಿಂದ ಅಪೇಕ್ಷಿಸುತ್ತಾನೆ” ಎಂದು ಉತ್ತರಕೊಟ್ಟನು.

30 ಆದ್ದರಿಂದ ಜನರು, “ದೇವರಿಂದ ಕಳುಹಿಸಲ್ಪಟ್ಟಾತನು ನೀನೇ ಎಂಬುದನ್ನು ನಿರೂಪಿಸುವುದಕ್ಕಾಗಿ ನೀನು ಯಾವ ಸೂಚಕಕಾರ್ಯವನ್ನು ಮಾಡುವೆ? 31 ನಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು (ಆಹಾರವನ್ನು) ತಿಂದರು. ‘ದೇವರು ಅವರಿಗೆ ತಿನ್ನಲು ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದರು.

32 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ಜನರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ. ಆದರೆ ನನ್ನ ತಂದೆಯು ನಿಮಗೆ ಪರಲೋಕದಿಂದ ನಿಜವಾದ ರೊಟ್ಟಿಯನ್ನು ಕೊಡುವನು. 33 ದೇವರ ರೊಟ್ಟಿ ಯಾವುದು? ಪರಲೋಕದಿಂದ ಇಳಿದುಬಂದು ಈ ಲೋಕಕ್ಕಾಗಿ ಜೀವವನ್ನು ಕೊಡುವಾತನೇ ದೇವರು ಕೊಡುವ ರೊಟ್ಟಿ” ಎಂದು ಹೇಳಿದನು.

34 ಜನರು, “ಅಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದು ಕೇಳಿಕೊಂಡರು.

35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International