Revised Common Lectionary (Semicontinuous)
97 ಯೆಹೋವನು ಆಳುತ್ತಿರುವನು! ಭೂಮಿಯು ಸಂತೋಷಿಸಲಿ.
ದೂರ ದೇಶಗಳೆಲ್ಲಾ ಹರ್ಷಿಸಲಿ.
2 ಕಾರ್ಮೋಡಗಳು ಆತನನ್ನು ಕವಿದುಕೊಂಡಿವೆ.
ನೀತಿಯೂ ನ್ಯಾಯವೂ ಆತನ ರಾಜ್ಯದ ಬಲವಾಗಿವೆ.
3 ಬೆಂಕಿಯು ಆತನ ಮುಂದೆ ಹೋಗಿ
ಆತನ ಶತ್ರುಗಳನ್ನು ನಾಶಮಾಡುವುದು.
4 ಆತನ ಮಿಂಚು ಆಕಾಶದಲ್ಲಿ ಹೊಳೆಯುತ್ತದೆ.
ಜನರು ಅದನ್ನು ನೋಡಿ ಭಯಗೊಂಡಿದ್ದಾರೆ.
5 ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ
ಬೆಟ್ಟಗಳು ಮೇಣದಂತೆ ಕರಗಿಹೋಗುತ್ತವೆ.
6 ಆಕಾಶಗಳೇ, ಆತನ ನೀತಿಯ ಕುರಿತು ಹೇಳಿರಿ!
ದೇವರ ಮಹಿಮೆಯನ್ನು ಪ್ರತಿಯೊಬ್ಬನೂ ಕಾಣಲಿ!
7 ಜನರು ತಮ್ಮ ವಿಗ್ರಹಗಳನ್ನು ಪೂಜಿಸುವರು.
ಅವರು ತಮ್ಮ “ದೇವರುಗಳ” ಬಗ್ಗೆ ಜಂಬಕೊಚ್ಚುವರು.
ಆದರೆ ಅವರು ನಾಚಿಕೆಗೀಡಾಗುವರು.
ಅವರ “ದೇವರುಗಳು” ಯೆಹೋವನಿಗೆ ಅಡ್ಡಬಿದ್ದು ಆರಾಧಿಸುತ್ತವೆ.
8 ಚೀಯೋನೇ, ಕೇಳಿ ಸಂತೋಷಪಡು!
ಯೆಹೂದದ ಪಟ್ಟಣಗಳೇ, ಆನಂದಿಸಿರಿ.
ಯಾಕೆಂದರೆ ಯೆಹೋವನ ತೀರ್ಪುಗಳು ನ್ಯಾಯವಾಗಿವೆ.
9 ಮಹೋನ್ನತನಾದ ಯೆಹೋವನೇ, ಭೂಲೋಕದ ಸರ್ವಾಧಿಪತಿ ನೀನೇ.
ಎಲ್ಲಾ ದೇವರುಗಳಲ್ಲಿ ನೀನೇ ಮಹೋನ್ನತನು.
10 ಯೆಹೋವನನ್ನು ಪ್ರೀತಿಸುವವರೇ, ದುಷ್ಟತನವನ್ನು ದ್ವೇಷಿಸಿರಿ.
ದೇವರು ತನ್ನ ಭಕ್ತರನ್ನು ಸಂರಕ್ಷಿಸುವನು.
ದೇವರು ತನ್ನ ಸದ್ಭಕ್ತರನ್ನು ಕೆಡುಕರಿಂದ ರಕ್ಷಿಸುವನು.
11 ನೀತಿವಂತರಿಗೋಸ್ಕರ ಬೆಳಕೂ ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಪ್ರಕಾಶಿಸುತ್ತವೆ.
12 ನೀತಿವಂತರೇ, ಯೆಹೋವನಲ್ಲಿ ಸಂತೋಷಪಡಿರಿ!
ಆತನ ಪವಿತ್ರ ಹೆಸರನ್ನು ಸನ್ಮಾನಿಸಿರಿ!
“ನಾನು ನಿಮ್ಮೊಂದಿಗೆ ಬರುವುದಿಲ್ಲ”
33 ತರುವಾಯ ಯೆಹೋವನು ಮೋಶೆಗೆ, “ನೀನು ಮತ್ತು ಈಜಿಪ್ಟಿನಿಂದ ನೀನು ಕರೆದುಕೊಂಡು ಬಂದ ಜನರು ಈ ಸ್ಥಳವನ್ನು ಬಿಡಬೇಕು. ನಾನು ಅಬ್ರಹಾಮನಿಗೆ, ಇಸಾಕನಿಗೆ ಮತ್ತು ಯಾಕೋಬನಿಗೆ ವಾಗ್ದಾನ ಮಾಡಿದ ದೇಶಕ್ಕೆ ಹೋಗಿ. ನಾನು ಅವರಿಗೆ ‘ನಿಮ್ಮ ನಂತರ ಜೀವಿಸುವ ನಿಮ್ಮ ಸಂತತಿಯವರಿಗೆ ಆ ದೇಶವನ್ನು ಕೊಡುವೆನು’ ಎಂದು ನಾನು ಅವರಿಗೆ ವಾಗ್ದಾನ ಮಾಡಿದ್ದೇನೆ. 2 ನಿಮ್ಮ ಮುಂದೆ ಹೋಗುವುದಕ್ಕೆ ನಾನು ಒಬ್ಬ ದೂತನನ್ನು ಕಳುಹಿಸುವೆನು. ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ನಾನು ಸೋಲಿಸುವೆನು. ನಿಮ್ಮ ದೇಶದಿಂದ ಅವರನ್ನು ಬಲವಂತದಿಂದ ಅಟ್ಟಿಬಿಡುವೆನು. 3 ಆದ್ದರಿಂದ ಸಮೃದ್ಧಿಕರವಾದ ಆ ದೇಶಕ್ಕೆ ಹೋಗಿರಿ. ಆದರೆ ನಾನು ನಿಮ್ಮೊಂದಿಗೆ ಬರುವುದಿಲ್ಲ. ನೀವು ನನ್ನ ಆಜ್ಞೆಗೆ ವಿಧೇಯರಾಗದೆ ನನ್ನನ್ನು ಕೋಪಗೊಳಿಸುತ್ತೀರಿ. ನಾನು ನಿಮ್ಮೊಂದಿಗೆ ಬಂದರೆ, ದಾರಿಯಲ್ಲಿ ನಿಮ್ಮನ್ನು ಸಂಹರಿಸುವೆನು” ಎಂದು ಹೇಳಿದನು.
4 ಈ ದುಃಖದ ಸಮಾಚಾರವನ್ನು ಕೇಳಿ ಜನರು ನೊಂದುಕೊಂಡರು. ಅವರಲ್ಲಿ ಒಬ್ಬರಾದರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ. 5 ಯೆಹೋವನು ಮೋಶೆಗೆ, “ಇಸ್ರೇಲರಿಗೆ ಹೀಗೆಂದು ಹೇಳು: ನೀವು ಅವಿಧೇಯರಾದ ಜನರಾಗಿದ್ದೀರಿ. ನಾನು ನಿಮ್ಮೊಡನೆ ಕ್ಷಣಹೊತ್ತು ಸಂಚರಿಸಿದರೆ, ನಿಮ್ಮನ್ನು ಸಂಹರಿಸುವೆನು. ಆದ್ದರಿಂದ ನಿಮ್ಮೆಲ್ಲಾ ಆಭರಣಗಳನ್ನು ತೆಗೆದುಬಿಡಿರಿ. ನೀವು ಮಾಡಬೇಕಾದದ್ದನ್ನು ನಾನೇ ತಿಳಿಸುವೆನು!” ಎಂದು ಹೇಳಿದನು. 6 ಇಸ್ರೇಲರು ಹೋರೆಬ್ ಬೆಟ್ಟದಲ್ಲಿದ್ದಾಗ ಆಭರಣಗಳನ್ನು ಧರಿಸಿಕೊಳ್ಳುವುದನ್ನು ಬಿಟ್ಟುಬಿಟ್ಟರು.
13 ಸಹೋದರ ಸಹೋದರಿಯರೇ, ನಾನಿನ್ನೂ ಆ ಗುರಿಯನ್ನು ಮುಟ್ಟಿಲ್ಲವೆಂಬುದು ನನಗೆ ಗೊತ್ತಿದೆ. ಆದರೆ ನಾನು ಯಾವಾಗಲೂ ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ನನ್ನ ಮುಂದಿರುವ ಗುರಿಯನ್ನು ಮುಟ್ಟಲು ನನ್ನಿಂದಾದಷ್ಟರ ಮಟ್ಟಿಗೆ ಓಡುತ್ತಿದ್ದೇನೆ. 14 ದೇವರು ನಮ್ಮನ್ನು ಕ್ರಿಸ್ತನ ಮೂಲಕ ಮೇಲೋಕದ ಜೀವಿತಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.
15 ಆತ್ಮಿಕತೆಯಲ್ಲಿ ಪರಿಪೂರ್ಣವಾದ ಮಟ್ಟಕ್ಕೆ ಬಂದಿರುವ ನಾವೆಲ್ಲರೂ ಇದೇ ರೀತಿ ಯೋಚಿಸಬೇಕು. ನೀವು ಈ ಸಂಗತಿಗಳಲ್ಲಿ ಯಾವುದನ್ನಾದರೂ ಒಪ್ಪಿಕೊಳ್ಳದಿದ್ದರೆ ದೇವರೇ ನಿಮಗೆ ಅದನ್ನು ಸ್ಪಷ್ಟಪಡಿಸುವನು. 16 ಆದರೆ ನಾವು ಈಗಾಗಲೇ ಹೊಂದಿರುವ ಸತ್ಯವನ್ನು ಅನುಸರಿಸುತ್ತಾ ನಡೆಯೋಣ.
17 ಸಹೋದರ ಸಹೋದರಿಯರೇ, ನೀವೆಲ್ಲರೂ ನನ್ನಂತೆ ಜೀವಿಸಲು ಪ್ರಯತ್ನಿಸಿ. ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ಜೀವಿಸುವವರನ್ನು ಅನುಸರಿಸಿರಿ. 18 ಅನೇಕರು ಕ್ರಿಸ್ತನ ಶಿಲುಬೆಗೆ ವೈರಿಗಳೊ ಎಂಬಂತೆ ಜೀವಿಸುತ್ತಾರೆ. ಅವರ ಬಗ್ಗೆ ನಾನು ನಿಮಗೆ ಅನೇಕ ಸಲ ತಿಳಿಸಿದ್ದೇನೆ. ಈಗಲೂ ಕಣ್ಣೀರಿನಿಂದ ಹೇಳುತ್ತೇನೆ. 19 ಅವರ ನಡತೆಯು ಅವರನ್ನು ನಾಶದೆಡೆಗೆ ನಡೆಸುತ್ತಿದೆ. ಅವರು ದೇವರ ಸೇವೆ ಮಾಡುತ್ತಿಲ್ಲ. ಆ ಜನರು ಕೇವಲ ತಮ್ಮ ಸಂತೋಷಕ್ಕಾಗಿ ಜೀವಿಸುತ್ತಿದ್ದಾರೆ. ಅವರು ನಾಚಿಕೆಕರವಾದ ಕೆಲಸಗಳನ್ನು ಮಾಡಿ, ಅವುಗಳ ಬಗ್ಗೆ ಹೆಮ್ಮೆಪಡುತ್ತಾರೆ. ಅವರು ಕೇವಲ ಈ ಲೋಕದ ವಿಷಯಗಳ ಬಗ್ಗೆ ಆಲೋಚಿಸುತ್ತಾರೆ. 20 ನಾವಾದರೋ ಪರಲೋಕ ಸಂಸ್ಥಾನದವರು. ನಮ್ಮ ರಕ್ಷಕನು ಅಲ್ಲಿಂದಲೇ ಬರುವುದನ್ನು ನಾವು ಎದುರುನೋಡುತ್ತಿದ್ದೇವೆ. ಪ್ರಭುವಾದ ಯೇಸು ಕ್ರಿಸ್ತನೇ ನಮ್ಮ ರಕ್ಷಕನು. 21 ಆತನು ತನ್ನ ಶಕ್ತಿಯಿಂದ ಸಮಸ್ತವನ್ನು ಆಳುತ್ತಾನೆ ಮತ್ತು ನಮ್ಮ ದೀನಾವಸ್ಥೆಯ ಈ ಶರೀರವನ್ನು ರೂಪಾಂತರಪಡಿಸಿ ತನ್ನ ಸ್ವಂತ ಮಹಿಮಾಶರೀರದಂತೆ ಮಾಡುತ್ತಾನೆ.
ಮಾಡಬೇಕಾದ ಕಾರ್ಯಗಳು
4 ನನ್ನ ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮ್ಮನ್ನು ನೋಡಬಯಸುತ್ತೇನೆ. ನೀವು ನನಗೆ ಆನಂದವನ್ನು ಉಂಟುಮಾಡಿ, ನಿಮ್ಮ ವಿಷಯದಲ್ಲಿ ನಾನು ಹೆಮ್ಮಪಡುವಂತೆ ಮಾಡಿದ್ದೀರಿ. ನಾನು ನಿಮಗೆ ಹೇಳಿದಂತೆ ಪ್ರಭುವನ್ನು ಅನುಸರಿಸಿರಿ.
Kannada Holy Bible: Easy-to-Read Version. All rights reserved. © 1997 Bible League International