Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 97

97 ಯೆಹೋವನು ಆಳುತ್ತಿರುವನು! ಭೂಮಿಯು ಸಂತೋಷಿಸಲಿ.
    ದೂರ ದೇಶಗಳೆಲ್ಲಾ ಹರ್ಷಿಸಲಿ.
ಕಾರ್ಮೋಡಗಳು ಆತನನ್ನು ಕವಿದುಕೊಂಡಿವೆ.
    ನೀತಿಯೂ ನ್ಯಾಯವೂ ಆತನ ರಾಜ್ಯದ ಬಲವಾಗಿವೆ.
ಬೆಂಕಿಯು ಆತನ ಮುಂದೆ ಹೋಗಿ
    ಆತನ ಶತ್ರುಗಳನ್ನು ನಾಶಮಾಡುವುದು.
ಆತನ ಮಿಂಚು ಆಕಾಶದಲ್ಲಿ ಹೊಳೆಯುತ್ತದೆ.
    ಜನರು ಅದನ್ನು ನೋಡಿ ಭಯಗೊಂಡಿದ್ದಾರೆ.
ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ
    ಬೆಟ್ಟಗಳು ಮೇಣದಂತೆ ಕರಗಿಹೋಗುತ್ತವೆ.
ಆಕಾಶಗಳೇ, ಆತನ ನೀತಿಯ ಕುರಿತು ಹೇಳಿರಿ!
    ದೇವರ ಮಹಿಮೆಯನ್ನು ಪ್ರತಿಯೊಬ್ಬನೂ ಕಾಣಲಿ!

ಜನರು ತಮ್ಮ ವಿಗ್ರಹಗಳನ್ನು ಪೂಜಿಸುವರು.
    ಅವರು ತಮ್ಮ “ದೇವರುಗಳ” ಬಗ್ಗೆ ಜಂಬಕೊಚ್ಚುವರು.
ಆದರೆ ಅವರು ನಾಚಿಕೆಗೀಡಾಗುವರು.
    ಅವರ “ದೇವರುಗಳು” ಯೆಹೋವನಿಗೆ ಅಡ್ಡಬಿದ್ದು ಆರಾಧಿಸುತ್ತವೆ.
ಚೀಯೋನೇ, ಕೇಳಿ ಸಂತೋಷಪಡು!
    ಯೆಹೂದದ ಪಟ್ಟಣಗಳೇ, ಆನಂದಿಸಿರಿ.
    ಯಾಕೆಂದರೆ ಯೆಹೋವನ ತೀರ್ಪುಗಳು ನ್ಯಾಯವಾಗಿವೆ.
ಮಹೋನ್ನತನಾದ ಯೆಹೋವನೇ, ಭೂಲೋಕದ ಸರ್ವಾಧಿಪತಿ ನೀನೇ.
    ಎಲ್ಲಾ ದೇವರುಗಳಲ್ಲಿ ನೀನೇ ಮಹೋನ್ನತನು.
10 ಯೆಹೋವನನ್ನು ಪ್ರೀತಿಸುವವರೇ, ದುಷ್ಟತನವನ್ನು ದ್ವೇಷಿಸಿರಿ.
    ದೇವರು ತನ್ನ ಭಕ್ತರನ್ನು ಸಂರಕ್ಷಿಸುವನು.
    ದೇವರು ತನ್ನ ಸದ್ಭಕ್ತರನ್ನು ಕೆಡುಕರಿಂದ ರಕ್ಷಿಸುವನು.
11 ನೀತಿವಂತರಿಗೋಸ್ಕರ ಬೆಳಕೂ ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಪ್ರಕಾಶಿಸುತ್ತವೆ.
12 ನೀತಿವಂತರೇ, ಯೆಹೋವನಲ್ಲಿ ಸಂತೋಷಪಡಿರಿ!
    ಆತನ ಪವಿತ್ರ ಹೆಸರನ್ನು ಸನ್ಮಾನಿಸಿರಿ!

ವಿಮೋಚನಕಾಂಡ 32:15-35

15 ಬಳಿಕ ಮೋಶೆ ಬೆಟ್ಟದಿಂದಿಳಿದು ಬಂದನು. ಮೋಶೆಯೊಡನೆ ಆಜ್ಞಾಶಾಸನಗಳ ಎರಡು ಕಲ್ಲಿನ ಹಲಿಗೆಗಳಿದ್ದವು. ಈ ಆಜ್ಞಾಶಾಸನಗಳ ಕಲ್ಲುಗಳ ಮುಂದೆಯೂ ಹಿಂದೆಯೂ ಬರೆಯಲ್ಪಟ್ಟಿದ್ದವು. 16 ಯೆಹೋವನು ತಾನೇ ಆ ಕಲ್ಲುಗಳನ್ನು ಮಾಡಿ ಅವುಗಳ ಮೇಲೆ ಬರೆದಿದ್ದನು.

17 ಇಸ್ರೇಲರ ಗದ್ದಲವನ್ನೂ ಕೂಗಾಟವನ್ನೂ ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಯುದ್ಧದ ಧ್ವನಿ ಕೇಳಿಬರುತ್ತಿದೆ” ಅಂದನು.

18 ಅದಕ್ಕೆ ಮೋಶೆ, “ಅದು ಸೈನ್ಯದ ಜಯಧ್ವನಿಯಲ್ಲ. ಅದು ಸೋಲಿನಿಂದ ಕೂಗುವ ಸೈನ್ಯದ ಧ್ವನಿಯೂ ಅಲ್ಲ. ನಾನು ಕೇಳುತ್ತಿರುವುದು ಉತ್ಸವದ ಧ್ವನಿ” ಎಂದು ಉತ್ತರಿಸಿದನು.

19 ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದನು. ಅವನು ಚಿನ್ನದ ಬಸವನನ್ನೂ ಜನರ ನರ್ತನವನ್ನೂ ನೋಡಿ ಬಹುಕೋಪಗೊಂಡು ಕಲ್ಲಿನ ಹಲಿಗೆಗಳನ್ನು ನೆಲದ ಮೇಲೆ ಬಿಸಾಡಿಬಿಟ್ಟನು; ಅವು ಚೂರುಚೂರಾಗಿ ಒಡೆದುಹೋದವು. 20 ಬಳಿಕ ಮೋಶೆಯು ಆ ಬಸವನ ಮೂರ್ತಿಯನ್ನು ಬೆಂಕಿಯಲ್ಲಿ ಕರಗಿಸಿ ಅದರ ಚಿನ್ನವನ್ನು ಧೂಳಿನಂತೆ ಅರೆದು ನೀರಿಗೆ ಹಾಕಿ ಆ ನೀರನ್ನು ಇಸ್ರೇಲರಿಗೆ ಕುಡಿಸಿದನು.

21 ಮೋಶೆಯು ಆರೋನನಿಗೆ, “ಈ ಜನರು ನಿನಗೇನು ಮಾಡಿದರು? ಇಂಥಾ ಕೆಟ್ಟ ಪಾಪವನ್ನು ಮಾಡುವಂತೆ ಯಾಕೆ ಅವರನ್ನು ನಡಿಸಿದೆ?” ಎಂದು ಹೇಳಿದನು.

22 ಆರೋನನು, “ಕೋಪಗೊಳ್ಳಬೇಡ. ಇವರು ಯಾವಾಗಲೂ ಪಾಪಮಾಡಲು ಸಿದ್ಧರಾಗಿರುವುದು ನಿನಗೆ ಗೊತ್ತೇ ಇದೆ. 23 ಅವರು ನನಗೆ, ‘ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದನು. ಆದರೆ ಅವನಿಗೇನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ದೇವರುಗಳನ್ನು ಮಾಡಿಕೊಡು’ ಎಂದು ಕೇಳಿದರು. 24 ಆದ್ದರಿಂದ ನಾನು ಅವರಿಗೆ, ‘ನಿಮ್ಮಲ್ಲಿ ಚಿನ್ನದ ಆಭರಣಗಳಿದ್ದರೆ ನನಗೆ ಕೊಡಿರಿ’ ಎಂದು ಹೇಳಿದೆನು. ಅವರು ಆಭರಣಗಳನ್ನು ನನಗೆ ತಂದುಕೊಟ್ಟರು. ನಾನು ಅವುಗಳನ್ನು ಬೆಂಕಿಯಲ್ಲಿ ಕರಗಿಸಿ ಈ ಬಸವನ ಮೂರ್ತಿಯನ್ನು ಎರಕಹೊಯ್ದೆನು” ಎಂದು ಉತ್ತರಿಸಿದನು.

25 ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಬಿಟ್ಟುಬಿಟ್ಟಿರುವುದು ಮೋಶೆಗೆ ತಿಳಿಯಿತು. ಜನರು ಕ್ರಮವಿಲ್ಲದೆ ಸ್ವೇಚ್ಛೆಯಿಂದ ನಡೆಯುತ್ತಿದ್ದರು; ಅವರ ಮೂರ್ಖತನವು ಅವರ ವಿರೋಧಿಗಳಿಗೆ ಎದ್ದುಕಾಣುತ್ತಿತ್ತು! 26 ಆದ್ದರಿಂದ ಪಾಳೆಯದ ದ್ವಾರದಲ್ಲಿ ಮೋಶೆಯು ನಿಂತು, “ಯೆಹೋವನ ಪಕ್ಷದವರು ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಲೇವಿ ಕುಲದವರೆಲ್ಲಾ ಮೋಶೆಯ ಬಳಿಗೆ ಬಂದರು.

27 ಆಗ ಮೋಶೆ ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದನ್ನು ನಿಮಗೆ ತಿಳಿಸುತ್ತೇನೆ: ‘ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ತೆಗೆದುಕೊಂಡು ಪಾಳೆಯದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಹೋಗಿ ಜನರನ್ನು ಶಿಕ್ಷಿಸಬೇಕು. ನಿಮ್ಮ ಸಹೋದರರಾಗಿದ್ದರೂ ಸ್ನೇಹಿತರಾಗಿದ್ದರೂ ಅಥವಾ ನೆರೆಯವರಾಗಿದ್ದರೂ ಸರಿ, ಕೊಲ್ಲಿರಿ’” ಎಂದು ಹೇಳಿದನು.

28 ಲೇವಿಕುಲದವರು ಮೋಶೆಯ ಮಾತಿಗೆ ವಿಧೇಯರಾದರು. ಅಂದು ಇಸ್ರೇಲರಲ್ಲಿ ಸುಮಾರು ಮೂರು ಸಾವಿರ ಮಂದಿ ಸತ್ತರು. 29 ಆಗ ಮೋಶೆಯು ಅವರಿಗೆ, “ಇಂದು ನೀವು ಯೆಹೋವನಿಗೆ ಮೀಸಲಾದ ಜನರಾದಿರಿ; ಯಾಕೆಂದರೆ ನೀವು ನಿಮ್ಮ ಸ್ವಂತ ಗಂಡುಮಗನಿಗೂ ಸಹೋದರನಿಗೂ ವಿರೋಧವಾದಿರಿ. ಇಂದು ಆತನು ನಿಮ್ಮನ್ನು ಆಶೀರ್ವದಿಸಿದ್ದಾನೆ” ಅಂದನು.

30 ಮರುದಿನ ಮುಂಜಾನೆ ಮೋಶೆಯು ಜನರಿಗೆ, “ನೀವು ಭಯಂಕರವಾದ ಪಾಪವನ್ನು ಮಾಡಿದ್ದೀರಿ. ಆದರೆ ಈಗ ನಾನು ಯೆಹೋವನ ಬಳಿಗೆ ಹೋಗಿ, ಆತನು ನಿಮ್ಮ ಪಾಪಗಳನ್ನು ಕ್ಷಮಿಸುವಂತೆ ನಾನೇನಾದರೂ ಮಾಡಬಹುದೊ ಎಂದು ವಿಚಾರಿಸುತ್ತೇನೆ” ಎಂದನು. 31 ಅಂತೆಯೇ ಮೋಶೆಯು ಯೆಹೋವನ ಬಳಿಗೆ ಮರಳಿ ಹೋಗಿ, “ದಯವಿಟ್ಟು ಆಲಿಸು! ಈ ಜನರು ಬಹಳ ಕೆಟ್ಟ ಪಾಪವನ್ನು ಮಾಡಿದ್ದಾರೆ. ಚಿನ್ನದಿಂದ ಮೂರ್ತಿಯನ್ನು ಮಾಡಿಕೊಂಡಿದ್ದಾರೆ. 32 ಅವರ ಈ ಪಾಪವನ್ನು ಕ್ಷಮಿಸು. ನೀನು ಅವರನ್ನು ಕ್ಷಮಿಸುವುದಿಲ್ಲವಾದರೆ ನಿನ್ನ ಜೀವಭಾದ್ಯರ ಪಟ್ಟಿಯ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು” ಎಂದು ಪ್ರಾರ್ಥಿಸಿದನು.

33 ಆದರೆ ಯೆಹೋವನು ಮೋಶೆಗೆ, “ನನಗೆ ವಿರೋಧವಾಗಿ ಪಾಪಮಾಡುವ ಜನರ ಹೆಸರನ್ನು ಮಾತ್ರವೇ ನನ್ನ ಪುಸ್ತಕದಿಂದ ಅಳಿಸುತ್ತೇನೆ. 34 ಆದ್ದರಿಂದ ಈಗ ಕೆಳಗಿಳಿದು ನಾನು ನಿನಗೆ ಹೇಳುವಲ್ಲಿಗೆ ಜನರನ್ನು ನಡಿಸು. ನನ್ನ ದೂತನು ನಿನ್ನ ಮುಂದೆ ಹೋಗಿ ನಿನ್ನನ್ನು ನಡಿಸುವನು. ಪಾಪಮಾಡಿದ ಜನರನ್ನು ಶಿಕ್ಷಿಸುವ ಸಮಯ ಬಂದಾಗ ಅವರು ಶಿಕ್ಷಿಸಲ್ಪಡುವರು” ಎಂದು ಹೇಳಿದನು. 35 ಆದ್ದರಿಂದ ಯೆಹೋವನು ಜನರಿಗೆ ಭಯಂಕರವಾದ ವ್ಯಾದಿಯನ್ನು ಬರಮಾಡಿದನು. ಅವರು ಆರೋನನಿಂದ ಬಸವನನ್ನು ಮಾಡಿಸಿಕೊಂಡದ್ದೇ ಇದಕ್ಕೇ ಕಾರಣ.

ಯೂದನು 17-25

ಎಚ್ಚರಿಕೆ ಮತ್ತು ಮಾಡಬೇಕಾದ ಕಾರ್ಯಗಳು

17 ಪ್ರಿಯ ಸ್ನೇಹಿತರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಪೊಸ್ತಲರು ಮುಂಚೆ ಏನು ಹೇಳಿದರೆಂಬುದನ್ನು ನೆನಪು ಮಾಡಿಕೊಳ್ಳಿ. 18 ಅಪೊಸ್ತಲರು ನಿಮಗೆ, “ಅಂತ್ಯಕಾಲದಲ್ಲಿ ದೇವರನ್ನು ಕುರಿತು ನಗುವ ಜನರಿರುತ್ತಾರೆ” ಎಂದು ಹೇಳಿದರು. ಈ ಜನರು ತಮ್ಮ ಇಚ್ಛೆಗನುಸಾರವಾದ ಮತ್ತು ದೇವರಿಗೆ ವಿರುದ್ಧವಾದವುಗಳನ್ನು ಮಾತ್ರ ಮಾಡುವವರಾಗಿರುತ್ತಾರೆ. 19 ಈ ಜನರು ನಿಮ್ಮಲ್ಲಿ ಭೇದವನ್ನು ಹುಟ್ಟಿಸುತ್ತಾರೆ. ಈ ಜನರು ತಮ್ಮ ಪಾಪಸ್ವಭಾವದ ಅಪೇಕ್ಷೆಯಂತೆ ಮಾತ್ರ ಮಾಡುತ್ತಾರೆ. ಅವರಲ್ಲಿ ಪವಿತ್ರಾತ್ಮನಿಲ್ಲ.

20 ಆದರೆ ಪ್ರಿಯ ಸ್ನೇಹಿತರೇ, ನೀವು ನಿಮ್ಮ ಅತಿಪರಿಶುದ್ಧ ನಂಬಿಕೆಯ ಮೂಲಕ ದೃಢವಾಗಿರಿ. ಪವಿತ್ರಾತ್ಮಭರಿತರಾಗಿ ಪ್ರಾರ್ಥಿಸಿರಿ. 21 ದೇವರ ಪ್ರೀತಿಯಲ್ಲಿ ನೆಲೆಗೊಂಡಿರಿ. ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಭುವಾದ ಯೇಸು ಕ್ರಿಸ್ತನ ಕರುಣೆಯನ್ನೇ ಎದುರುನೋಡುತ್ತಿರಿ.

22 ಸಂದೇಹವಿರುವ ಜನರಿಗೆ ಕರುಣೆ ತೋರಿ. 23 ಇತರ ಜನರನ್ನು ರಕ್ಷಿಸಿ. ಆ ಜನರನ್ನು ಬೆಂಕಿಯಿಂದ ಹೊರಕ್ಕೆ ತನ್ನಿರಿ. ನೀವು ಕೆಲವು ಜನರಿಗೆ ಕರುಣೆ ತೋರುವಾಗ ಎಚ್ಚರದಿಂದಿರಿ. ಪಾಪಗಳಿಂದ ಹೊಲಸಾಗಿರುವ ಅವರ ಬಟ್ಟೆಗಳನ್ನು ಸಹ ದ್ವೇಷಿಸಿರಿ.

ದೇವರಿಗೆ ಸ್ತೋತ್ರ ಮಾಡಿರಿ

24 ಆತನು (ದೇವರು) ಬಲಶಾಲಿಯಾಗಿದ್ದಾನೆ. ನೀವು ಬೀಳದಂತೆ ಆತನು ನಿಮಗೆ ಸಹಾಯ ಮಾಡಬಲ್ಲನು. ಆತನು ನಿಮ್ಮಲ್ಲಿ ಯಾವ ತಪ್ಪೂ ಇಲ್ಲದಂತೆ ಮಾಡಿ, ತನ್ನ ಮಹಿಮಾ ಸನ್ನಿಧಿಗೆ ತರುವುದಕ್ಕೂ ನಿಮಗೆ ಮಹಾಸಂತೋಷವನ್ನು ಕೊಡುವುದಕ್ಕೂ ಶಕ್ತನಾಗಿದ್ದಾನೆ. 25 ಆತನೊಬ್ಬನೇ ದೇವರು. ನಮ್ಮನ್ನು ರಕ್ಷಿಸುವಾತನು ಆತನೊಬ್ಬನೇ. ಆದಿಯಿಂದ ಇದ್ದಹಾಗೆ ಈಗಲೂ ಯಾವಾಗಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನಿಗೆ ಪ್ರಭಾವ, ಮಹತ್ವ, ಆಧಿಪತ್ಯ ಮತ್ತು ಅಧಿಕಾರಗಳು ಇರಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International