Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 106:1-6

106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
    ಆತನ ಪ್ರೀತಿಯು ಶಾಶ್ವತವಾದದ್ದು!
ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
    ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
    ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.

ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
    ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
    ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
    ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.

ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
    ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!

ಕೀರ್ತನೆಗಳು 106:19-23

19 ಹೋರೇಬ್ ಬೆಟ್ಟದ ಬಳಿಯಲ್ಲಿ
    ಅವರು ಚಿನ್ನದ ಬಸವನನ್ನು ಮಾಡಿ ಅದಕ್ಕೆ ಅಡ್ಡಬಿದ್ದರು.
20 ಹುಲ್ಲುತಿನ್ನುವ ಹೋರಿಯ ಮೂರ್ತಿಗಾಗಿ
    ಅವರು ಮಹಿಮಾಸ್ವರೂಪನಾದ ದೇವರನ್ನೇ ಬಿಟ್ಟುಕೊಟ್ಟರು!
21 ಆತನು ನಮ್ಮ ಪೂರ್ವಿಕರನ್ನು ರಕ್ಷಿಸಿದರೂ ಅವರು ಆತನನ್ನು ಮರೆತುಬಿಟ್ಟರು!
    ಈಜಿಪ್ಟಿನಲ್ಲಿ ಮಹತ್ಕಾರ್ಯಗಳನ್ನು ಮಾಡಿದ ದೇವರನ್ನು ಅವರು ಮರೆತುಬಿಟ್ಟರು.
22 ಆತನು ಹಾಮನ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದನು.
    ಆತನು ಕೆಂಪು ಸಮುದ್ರದ ಸಮೀಪದಲ್ಲಿ ಭಯಂಕರವಾದ ಕಾರ್ಯಗಳನ್ನು ಮಾಡಿದನು!

23 ಆತನು ಅವರನ್ನು ನಾಶಮಾಡಬೇಕೆಂದಿದ್ದನು.
    ಆದರೆ ಆತನು ಆರಿಸಿಕೊಂಡಿದ್ದ ಮೋಶೆಯು ಮಧ್ಯಸ್ಥನಾಗಿ
    ಅವರನ್ನು ನಾಶಮಾಡದಂತೆ ಆತನ ಕೋಪವನ್ನು ಶಾಂತಪಡಿಸಿದನು.

ವಿಮೋಚನಕಾಂಡ 24:12-18

ಯೆಹೋವನ ನಿಬಂಧನೆಯನ್ನು ಪಡೆಯಲು ಮೋಶೆ ಹೋದದ್ದು

12 ಯೆಹೋವನು ಮೋಶೆಗೆ, “ನೀನು ಬೆಟ್ಟವನ್ನು ಹತ್ತಿ ಬಂದು ನನ್ನ ಬಳಿಯಲ್ಲಿರು. ನಾನು ನನ್ನ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದೇನೆ. ಈ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ನೀನು ಜನರಿಗೆ ಬೋಧಿಸಬೇಕು. ನಾನು ಈ ಕಲ್ಲಿನ ಹಲಗೆಗಳನ್ನು ನಿನಗೆ ಕೊಡುವೆನು” ಎಂದು ಹೇಳಿದನು.

13 ಆದ್ದರಿಂದ ಮೋಶೆಯು ತನ್ನ ಶಿಷ್ಯನಾದ ಯೆಹೋಶುವನೊಡನೆ ಎದ್ದುನಿಂತು ದೇವರ ಬೆಟ್ಟದ ಮೇಲಕ್ಕೆ ಹೋದನು. 14 ಮೋಶೆಯು ಹಿರಿಯರಿಗೆ, “ನಾವು ನಿಮ್ಮ ಬಳಿಗೆ ಹಿಂತಿರುಗಿ ಬರುವ ತನಕ ನೀವು ಇಲ್ಲಿ ಕಾದುಕೊಂಡಿರಿ. ಆರೋನನು ಮತ್ತು ಹೂರನು ನಿಮ್ಮ ಬಳಿಯಿದ್ದಾರೆ; ನಿಮ್ಮಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ ಅವರ ಬಳಿಗೆ ಹೋಗಲಿ” ಎಂದು ಹೇಳಿದನು.

ಮೋಶೆಯು ದೇವರನ್ನು ಭೇಟಿಯಾದದ್ದು

15 ಬಳಿಕ ಮೋಶೆ ಬೆಟ್ಟದ ಮೇಲಕ್ಕೆ ಹೋದನು. ಮೋಡವು ಬೆಟ್ಟವನ್ನು ಕವಿದುಕೊಂಡಿತ್ತು. 16 ಸೀನಾಯಿ ಬೆಟ್ಟದ ಮೇಲೆ ಯೆಹೋವನ ಮಹಿಮೆಯು ಇಳಿದು ಬಂದಿತು. ಮೋಡವು ಆರುದಿನಗಳವರೆಗೆ ಬೆಟ್ಟವನ್ನು ಕವಿದುಕೊಂಡಿತ್ತು. ಏಳನೆಯ ದಿನದಲ್ಲಿ, ಮೋಡದೊಳಗಿಂದ ಯೆಹೋವನು ಮೋಶೆಯೊಡನೆ ಮಾತಾಡಿದನು. 17 ಇಸ್ರೇಲರಿಗೆ ಯೆಹೋವನ ಮಹಿಮೆಯು ಬೆಟ್ಟದ ತುದಿಯಲ್ಲಿ ಉರಿಯುವ ಬೆಂಕಿಯಂತೆ ಕಾಣುತ್ತಿತ್ತು.

18 ಬಳಿಕ ಮೋಶೆಯು ಮೋಡದಲ್ಲಿ ಬೆಟ್ಟದ ಮೇಲೆ ಇನ್ನೂ ಎತ್ತರಕ್ಕೆ ಹೋದನು. ಮೋಶೆಯು ಬೆಟ್ಟದಲ್ಲಿ ಹಗಲಿರುಳು ನಲವತ್ತು ದಿವಸ ಇದ್ದನು.

ಮಾರ್ಕ 2:18-22

ಯೇಸು ಇತರ ಧಾರ್ಮಿಕ ನಾಯಕರಂತಲ್ಲ

(ಮತ್ತಾಯ 9:14-17; ಲೂಕ 5:33-39)

18 ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸ ಮಾಡುತ್ತಿದ್ದರು. ಕೆಲವು ಜನರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಹಿಂಬಾಲಕರು ಉಪವಾಸ ಮಾಡುತ್ತಾರೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು.

19 ಯೇಸು, “ಮದುವೆಯಲ್ಲಿ ಮದುಮಗನು ತಮ್ಮ ಜೊತೆಯಲ್ಲಿ ಇರುವಾಗ ಅವನ ಗೆಳೆಯರು ವ್ಯಸನಪಡುವುದಿಲ್ಲ. ಉಪವಾಸ ಮಾಡುವುದಿಲ್ಲ. 20 ಆದರೆ ಮದುಮಗನು ಅವರನ್ನು ಬಿಟ್ಟುಹೋಗುವ ಕಾಲ ಬರುತ್ತದೆ. ಆಗ ಅವನ ಗೆಳೆಯರು ವ್ಯಸನಪಡುತ್ತಾರೆ, ಉಪವಾಸ ಮಾಡುತ್ತಾರೆ.

21 “ಒಬ್ಬ ವ್ಯಕ್ತಿಯು ತನ್ನ ಹಳೆಯ ಮೇಲಂಗಿಯ ಹರಕಿಗೆ ಹೊಸ ಬಟ್ಟೆಯನ್ನು ತೇಪೆ ಹಚ್ಚುವುದಿಲ್ಲ. ಒಂದುವೇಳೆ ಹಚ್ಚಿದರೆ, ಆ ತೇಪೆಯು ಹಿಂಜಿಕೊಂಡು ಆ ಹರಕನ್ನು ಮತ್ತಷ್ಟು ದೊಡ್ಡದನ್ನಾಗಿ ಮಾಡುತ್ತದೆ. 22 ಹಾಗೆಯೇ, ಜನರು ಹೊಸ ದ್ರಾಕ್ಷಾರಸವನ್ನು ಹಳೆಯ ಬುದ್ದಲಿಗಳಲ್ಲಿ ಹಾಕಿಡುವುದಿಲ್ಲ. ಏಕೆಂದರೆ ಅದು ಬುದ್ದಲಿಗಳನ್ನು ಒಡೆದುಹಾಕುವುದರಿಂದ ದ್ರಾಕ್ಷಾರಸವೂ ಹಾಳಾಗುತ್ತದೆ. ಆದ್ದರಿಂದ ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International