Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:49-56

49 ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ.
    ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ.
50 ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ.
    ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ.
51 ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು.
    ನಾನಾದರೋ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು.
52 ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ.
    ಅವು ನನ್ನನ್ನು ಸಂತೈಸುತ್ತವೆ.
53 ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು
    ನಾನು ಕಾಣುವಾಗ ಬಹುಕೋಪಗೊಳ್ಳುವೆ.
54 ನನಗಂತೂ, ನಿನ್ನ ಕಟ್ಟಳೆಗಳು
    ನನ್ನ ಮನೆಯಲ್ಲಿ[a] ಹಾಡುಗಳಾಗಿವೆ.
55 ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ
    ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ.
56 ಯಾಕೆಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.

ಧರ್ಮೋಪದೇಶಕಾಂಡ 6:10-25

10 “ದೇವರಾದ ಯೆಹೋವನು ನಮಗೆ ಈ ದೇಶವನ್ನು ಕೊಡುವುದಾಗಿ ನಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ ಮತ್ತು ಯಾಕೋಬನಿಗೆ ವಾಗ್ದಾನ ಮಾಡಿದ್ದನು. ಈಗ ಆ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಅದರಲ್ಲಿರುವ ದೊಡ್ಡದೊಡ್ಡ ನಗರಗಳನ್ನು ನೀವು ಕೈಯಿಂದ ಕಟ್ಟಲಿಲ್ಲ. 11 ನೀವು ಕೂಡಿಸಿಡದ ಉತ್ತಮ ವಸ್ತುಗಳಿಂದ ತುಂಬಿರುವ ಮನೆಗಳನ್ನು ಯೆಹೋವನು ನಿಮಗೆ ಕೊಡುತ್ತಾನೆ. ನೀವು ತೋಡದಿರುವ ಬಾವಿಗಳನ್ನು ನಿಮಗೆ ಕೊಡುವನು. ನೀವು ನೆಡದಿರುವ ದ್ರಾಕ್ಷಾತೋಟಗಳನ್ನೂ ಎಣ್ಣೆಮರಗಳ ತೋಪುಗಳನ್ನೂ ನಿಮಗೆ ಕೊಡುವನು. ನಿಮಗೆ ತಿನ್ನಲು ಯಾವ ಕೊರತೆಯೂ ಇರುವುದಿಲ್ಲ.

12 “ನಿಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಿ ಆತನನ್ನೇ ಸೇವಿಸಿರಿ. ಆತನನ್ನು ಮರೆತುಬಿಡಬೇಡಿರಿ. ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಾಗ ಆತನೇ ನಿಮ್ಮನ್ನು ವಿಮೋಚಿಸಿದನಲ್ಲಾ? 13 ಆತನ ಹೆಸರಿನಲ್ಲಿಯೇ ವಾಗ್ದಾನಗಳನ್ನು ಮಾಡಿರಿ; ಅನ್ಯ ದೇವರ ಹೆಸರಿನಲ್ಲಿ ಮಾಡಕೂಡದು. 14 ಇತರ ದೇವರುಗಳನ್ನು ಅವಲಂಭಿಸಬಾರದು. ನಿಮ್ಮ ಸುತ್ತಲೂ ಇರುವವರ ದೇವರುಗಳನ್ನು ಪೂಜಿಸಬಾರದು. 15 ನಿಮ್ಮ ದೇವರಾದ ಯೆಹೋವನು ಯಾವಾಗಲೂ ನಿಮ್ಮ ಜೊತೆಯಲ್ಲಿರುವನು. ಸುಳ್ಳುದೇವರನ್ನು ಪೂಜಿಸುವವರನ್ನು ಯೆಹೋವನು ದ್ವೇಷಿಸುವುದರಿಂದ ಅವರನ್ನು ಈ ಲೋಕದಿಂದ ಅಳಿಸಿಬಿಡುವನು.

16 “ಮಸ್ಸಾದಲ್ಲಿ ನೀವು ನಿಮ್ಮ ದೇವರನ್ನು ಪರೀಕ್ಷಿಸಿದಂತೆ ಆತನನ್ನು ಪರೀಕ್ಷಿಸಬಾರದು. 17 ಆತನ ಆಜ್ಞೆಗಳಿಗೆ ವಿಧೇಯರಾಗಿರಲು ಎಚ್ಚರದಿಂದಿರಬೇಕು. ಆತನು ನಿಮಗೆ ಕೊಟ್ಟ ವಿಧಿನಿಯಮಗಳನ್ನು ಪರಿಪಾಲಿಸಲು ತಯಾರಾಗಿರಬೇಕು. 18 ಯೋಗ್ಯವಾದವುಗಳನ್ನು, ಸರಿಯಾದವುಗಳನ್ನು ಮತ್ತು ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡಬೇಕು. ಆಗ ನಿಮ್ಮ ಕಾರ್ಯಗಳೆಲ್ಲವೂ ಸಫಲವಾಗುವುವು. ಅಲ್ಲದೆ ಯೆಹೋವನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದೊಳಗೆ ನೀವು ಹೋಗಿ ಅದನ್ನು ವಶಪಡಿಸಿಕೊಳ್ಳಬಹುದು. 19 ಯೆಹೋವನು ಹೇಳಿದಂತೆಯೇ, ಅಲ್ಲಿ ವಾಸವಾಗಿರುವ ನಿಮ್ಮ ವೈರಿಗಳನ್ನೆಲ್ಲಾ ಹೊರಗಟ್ಟುವಿರಿ.

ದೇವರ ಕಾರ್ಯಗಳನ್ನು ನಿಮ್ಮ ಮಕ್ಕಳಿಗೆ ತಿಳಿಸಬೇಕು

20 “ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳು ನಿಮಗೆ ಈ ಪ್ರಶ್ನೆ ಕೇಳಬಹುದು: ‘ಯೆಹೋವದೇವರು ನಮಗೆ ನ್ಯಾಯವಿಧಿ, ನಿಯಮಗಳನ್ನು ಕೊಟ್ಟಿರುತ್ತಾನೆ. ಇವುಗಳ ಅರ್ಥವೇನು?’ 21 ಆಗ ನೀವು ಹೀಗೆ ಉತ್ತರಿಸಬೇಕು: ‘ನಾವು ಈಜಿಪ್ಟಿನಲ್ಲಿ ಫರೋಹನ ಗುಲಾಮರಾಗಿದ್ದೆವು. ಆದರೆ ನಮ್ಮ ದೇವರಾದ ಯೆಹೋವನು ತನ್ನ ಪರಾಕ್ರಮದಿಂದ ನಮ್ಮನ್ನು ಬಿಡುಗಡೆ ಮಾಡಿದನು. 22 ಯೆಹೋವನು ಈಜಿಪ್ಟಿನವರನ್ನೂ ಫರೋಹನನ್ನೂ ಅವನ ಪರಿವಾರದವರನ್ನೂ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಮಹತ್ಕಾರ್ಯಗಳಿಂದಲೂ ಭಯಂಕರ ಕಾರ್ಯಗಳಿಂದಲೂ ಬಾಧಿಸಿದನು. 23 ಯೆಹೋವನು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನದಂತೆ ನಮಗೆ ಆ ದೇಶವನ್ನು ಕೊಡುವುದಕ್ಕಾಗಿ ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. 24 ಈ ಉಪದೇಶಗಳನ್ನೆಲ್ಲಾ ಅನುಸರಿಸಬೇಕೆಂದು ಯೆಹೋವನು ನಮಗೆ ಆಜ್ಞಾಪಿಸಿದ್ದಾನೆ. ನಮ್ಮ ದೇವರಾದ ಯೆಹೋವನನ್ನು ನಾವು ಗೌರವಿಸತಕ್ಕದ್ದು. ಆಗ ಇಂದಿನಂತೆ ಯೆಹೋವನು ನಮ್ಮನ್ನು ಜೀವಂತವಾಗಿರಿಸಿ ನಮಗೆ ಒಳ್ಳೆಯದನ್ನು ಮಾಡುತ್ತಾನೆ. 25 ನಮ್ಮ ದೇವರಾದ ಯೆಹೋವನು ಹೇಳಿದಂತೆಯೇ, ಇಡೀ ಧರ್ಮಶಾಸ್ತ್ರಕ್ಕೆ ನಾವು ಚಾಚೂತಪ್ಪದೆ ಎಚ್ಚರಿಕೆಯಿಂದ ವಿಧೇಯರಾದರೆ, ನಾವು ಒಳ್ಳೆಯದನ್ನು ಮಾಡಿದೆವೆಂದು ದೇವರು ಹೇಳುತ್ತಾನೆ.’

ಯೋಹಾನ 11:45-57

ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಸಂಚು

(ಮತ್ತಾಯ 26:1-5; ಮಾರ್ಕ 14:1-2; ಲೂಕ 22:1-2)

45 ಮರಿಯಳನ್ನು ಸಂದರ್ಶಿಸಲು ಬಂದಿದ್ದ ಅನೇಕ ಯೆಹೂದ್ಯರು ಅಲ್ಲಿದ್ದರು. ಯೇಸು ಮಾಡಿದ ಈ ಕಾರ್ಯವನ್ನು ಕಂಡ ಇವರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. 46 ಆದರೆ ಕೆಲವು ಯೆಹೂದ್ಯರು ಫರಿಸಾಯರ ಬಳಿಗೆ ಹೋಗಿ, ಯೇಸು ಮಾಡಿದ್ದನ್ನು ತಿಳಿಸಿದರು. 47 ಆಗ ಮಹಾಯಾಜಕರು ಮತ್ತು ಫರಿಸಾಯರು ಯೆಹೂದ್ಯರ ಆಲೋಚನಾಸಭೆಯನ್ನು ಕರೆದು, “ನಾವು ಏನು ಮಾಡಬೇಕು? ಈ ಮನುಷ್ಯನು (ಯೇಸು) ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಿದ್ದಾನೆ. 48 ಈ ಕಾರ್ಯಗಳನ್ನು ಮಾಡಲು ನಾವು ಅವನಿಗೆ ಅವಕಾಶ ಕೊಟ್ಟರೆ ಜನರೆಲ್ಲರೂ ಇವನಲ್ಲಿ ನಂಬಿಕೆ ಇಡುವರು. ಆಗ ರೋಮ್ ರಾಜ್ಯದವರು ಬಂದು ನಮ್ಮ ದೇವಾಲಯವನ್ನೂ ನಮ್ಮ ದೇಶವನ್ನೂ ವಶಪಡಿಸಿಕೊಳ್ಳುವರು” ಅಂದರು.

49 ಅವರಲ್ಲಿ ಕಾಯಫನೆಂಬ ಒಬ್ಬನಿದ್ದನು. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಅವನು, “ನಿಮಗೆ ಏನೂ ಗೊತ್ತಿಲ್ಲ! 50 ಇಡೀ ಜನಾಂಗವು ನಾಶವಾಗುವುದಕ್ಕಿಂತ ಒಬ್ಬನು ಅವರಿಗೋಸ್ಕರವಾಗಿ ಸಾಯುವುದು ಉತ್ತಮ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿದನು.

51 ಇದು ಕಾಯಫನ ಸ್ವಂತ ಆಲೋಚನೆಯಾಗಿರಲಿಲ್ಲ. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಆದ್ದರಿಂದ ಯೆಹೂದ್ಯರಿಗೋಸ್ಕರವಾಗಿ ಯೇಸು ಸಾಯುತ್ತಾನೆಂದು ಅವನು ನಿಜವಾಗಿಯೂ ಪ್ರವಾದಿಸಿದನು. 52 ಹೌದು, ಯೆಹೂದ್ಯರಿಗಾಗಿಯೂ ಲೋಕದಲ್ಲೆಲ್ಲಾ ಚದರಿಹೋಗಿರುವ ದೇವರ ಮಕ್ಕಳನ್ನೆಲ್ಲ ಒಂದುಗೂಡಿಸುವುದಕ್ಕಾಗಿಯೂ ಆತನು ಸಾಯಲಿದ್ದನು.

53 ಅಂದಿನಿಂದ ಯೆಹೂದ್ಯನಾಯಕರು ಯೇಸುವನ್ನು ಕೊಲ್ಲಲು ಸಂಚು ಮಾಡಲಾರಂಭಿಸಿದರು. 54 ಆದ್ದರಿಂದ ಯೇಸುವು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ಸಂಚರಿಸುವುದನ್ನು ಬಿಟ್ಟುಬಿಟ್ಟನು. ಆತನು ಜೆರುಸಲೇಮನ್ನು ಬಿಟ್ಟು ಮರುಭೂಮಿಯ ಸಮೀಪದಲ್ಲಿದ್ದ ಸ್ಥಳಕ್ಕೆ ಹೋಗಿ ಎಫ್ರಾಯಿಮ್ ಎಂಬ ಊರಿನಲ್ಲಿ ತನ್ನ ಶಿಷ್ಯರ ಸಂಗಡ ಇಳಿದುಕೊಂಡನು.

55 ಆಗ ಯೆಹೂದ್ಯರ ಪಸ್ಕಹಬ್ಬವು ಸಮೀಪವಾಗಿತ್ತು. ಪಸ್ಕಹಬ್ಬಕ್ಕಿಂತ ಮೊದಲೇ ತಮ್ಮ ಗ್ರಾಮಗಳಿಂದ ಅನೇಕ ಜನರು ಜೆರುಸಲೇಮಿಗೆ ಹೋಗಿದ್ದರು. ವಿಶೇಷವಾದ ಕಾರ್ಯಗಳನ್ನು ಮಾಡಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಶುದ್ಧೀಕರಿಸಿಕೊಳ್ಳಬೇಕೆಂದು ಅವರು ಹೋಗಿದ್ದರು. 56 ಅವರು ಅಲ್ಲಿ ಯೇಸುವನ್ನು ಹುಡುಕತೊಡಗಿದರು. ಅವರು ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುವನೇ? ನಿಮ್ಮ ಆಲೋಚನೆ ಏನು?” ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು. 57 ಆದರೆ ಮಹಾಯಾಜಕರು ಮತ್ತು ಫರಿಸಾಯರು, ಯೇಸು ಎಲ್ಲಿದ್ದಾನೆಂಬುದು ಯಾರಿಗಾದರೂ ತಿಳಿದು ಬಂದರೆ ತಮಗೆ ತಿಳಿಸಬೇಕೆಂದು ವಿಶೇಷ ಆಜ್ಞೆಯನ್ನು ಪ್ರಕಟಿಸಿದ್ದರು. ಅವರು ಆತನನ್ನು ಬಂಧಿಸಬೇಕೆಂದಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International