Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:49-56

49 ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ.
    ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ.
50 ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ.
    ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ.
51 ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು.
    ನಾನಾದರೋ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು.
52 ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ.
    ಅವು ನನ್ನನ್ನು ಸಂತೈಸುತ್ತವೆ.
53 ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು
    ನಾನು ಕಾಣುವಾಗ ಬಹುಕೋಪಗೊಳ್ಳುವೆ.
54 ನನಗಂತೂ, ನಿನ್ನ ಕಟ್ಟಳೆಗಳು
    ನನ್ನ ಮನೆಯಲ್ಲಿ[a] ಹಾಡುಗಳಾಗಿವೆ.
55 ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ
    ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ.
56 ಯಾಕೆಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.

ಧರ್ಮೋಪದೇಶಕಾಂಡ 5:22-6:3

ಜನರು ದೇವರಿಗೆ ಹೆದರಿದರು

22 ಮೋಶೆಯು ಹೇಳಿದ್ದೇನೆಂದರೆ: “ನೀವೆಲ್ಲಾ ಆ ಬೆಟ್ಟದ ಬಳಿಯಲ್ಲಿರುವಾಗ ದೇವರಾದ ಯೆಹೋವನು ಈ ಆಜ್ಞೆಗಳನ್ನು ನಿಮಗೆ ಕೊಟ್ಟನು. ಬೆಂಕಿ, ಮೋಡ ಮತ್ತು ಕಾರ್ಗತ್ತಲೊಳಗಿನಿಂದ ಯೆಹೋವನು ಗಟ್ಟಿಯಾದ ಸ್ವರದಲ್ಲಿ ಮಾತಾಡಿದ್ದನ್ನು ನೀವು ಕೇಳಿದಿರಿ. ಆತನು ಈ ಆಜ್ಞೆಗಳನ್ನು ಕೊಟ್ಟ ಬಳಿಕ ಬೇರೆ ಏನನ್ನೂ ಹೇಳಲಿಲ್ಲ. ಆತನು ತನ್ನ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದು ನನಗೆ ಕೊಟ್ಟನು.

23 “ಬೆಟ್ಟವು ಬೆಂಕಿಯಿಂದ ಉರಿಯುತ್ತಿರುವಾಗ ಕಾರ್ಗತ್ತಲೆಯಿಂದ ಬಂದ ಸ್ವರವನ್ನು ನೀವು ಕೇಳಿದಿರಿ. ಆಗ ನಿಮ್ಮ ಹಿರಿಯರು, ಕುಲಪ್ರಧಾನರು ನನ್ನ ಬಳಿಗೆ ಬಂದು ಹೇಳಿದ್ದೇನೆಂದರೆ: 24 ‘ನಮ್ಮ ದೇವರಾದ ಯೆಹೋವನು ತನ್ನ ಮಹಿಮೆಯನ್ನೂ ಪ್ರತಾಪವನ್ನೂ ನಮಗೆ ತೋರಿಸಿದ್ದಾನೆ. ಬೆಂಕಿಯೊಳಗಿಂದ ಆತನು ಮಾತನಾಡಿದ್ದನ್ನು ನಾವು ಕೇಳಿದ್ದೇವೆ. ದೇವರು ಒಬ್ಬನೊಡನೆ ಸ್ವತಃ ಮಾತನಾಡಿದ ಬಳಿಕವೂ ಅವನು ಜೀವದಿಂದುಳಿಯಲು ಸಾಧ್ಯ ಎಂಬುದನ್ನು ನಾವು ಕಣ್ಣಾರೆ ಕಂಡೆವು. 25 ಆದರೆ ನಮ್ಮ ದೇವರಾದ ಯೆಹೋವನು ಮಾತನಾಡುವುದನ್ನು ನಾವು ಮತ್ತೆ ಕೇಳಿದರೆ ಖಂಡಿತವಾಗಿ ಸಾಯುವೆವು. ಆ ಭಯಂಕರವಾದ ಬೆಂಕಿಯು ನಮ್ಮನ್ನು ದಹಿಸುವುದು. ನಮಗೆ ಸಾಯಲು ಇಷ್ಟವಿಲ್ಲ. 26 ಜೀವಸ್ವರೂಪನಾದ ದೇವರ ನುಡಿಯನ್ನು ಪ್ರತ್ಯಕ್ಷವಾಗಿ ನಾವು ಕೇಳಿದ ಹಾಗೆ ಬೇರೆ ಯಾರೂ ಕೇಳಿಲ್ಲ. ಆದರೂ ನಾವು ಜೀವದಿಂದಿದ್ದೇವೆ. 27 ಮೋಶೆಯೇ, ನೀನು ಹತ್ತಿರ ಹೋಗಿ ಯೆಹೋವನು ಹೇಳುವುದನ್ನೆಲ್ಲಾ ಕೇಳಿ ನಮಗೆ ಅದನ್ನು ತಿಳಿಸು. ನಾವು ನಿನ್ನ ಮಾತುಗಳನ್ನು ಕೇಳಿ ನೀನು ಹೇಳಿದ ಹಾಗೆ ಮಾಡುವೆವು.’

ಯೆಹೋವನು ಮೋಶೆಯ ಸಂಗಡ ಮಾತನಾಡುತ್ತಾನೆ

28 “ನೀವು ಹೇಳಿದ್ದನ್ನು ಯೆಹೋವನು ಕೇಳಿ ನನ್ನೊಡನೆ ಹೀಗೆಂದನು: ‘ನಿನ್ನ ಜನರು ಹೇಳುವುದನ್ನು ನಾನು ಕೇಳಿದೆನು. ಆ ಮಾತುಗಳೆಲ್ಲಾ ಒಳ್ಳೆಯವೇ. 29 ಆದರೆ ಅವರು ಆಲೋಚಿಸುವ ರೀತಿಯನ್ನು ನಾನು ಬದಲಾಯಿಸಬೇಕಾಗಿದೆ. ಅವರು ನನಗೆ ವಿಧೇಯರಾಗಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ತಮ್ಮ ಹೃದಯಗಳಿಂದ ನನ್ನನ್ನು ಗೌರವಿಸಬೇಕು. ಆಗ ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿ ಶುಭವಿರುವುದು.

30 “‘ನೀನು ಹೋಗಿ ಜನರಿಗೆ ಅವರವರ ಗುಡಾರಗಳಿಗೆ ಹಿಂದಿರುಗಿ ಹೋಗಲು ತಿಳಿಸು. 31 ಆದರೆ ಮೋಶೆಯೇ, ನೀನು ನನ್ನ ಬಳಿಯಲ್ಲಿಯೇ ನಿಂತಿರು. ನೀನು ಅವರಿಗೆ ಉಪದೇಶಿಸಬೇಕಾಗಿರುವ ಎಲ್ಲಾ ಆಜ್ಞೆಗಳನ್ನು, ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ನಾನು ನಿನಗೆ ತಿಳಿಸುತ್ತೇನೆ. ಅವರ ವಾಸಕ್ಕಾಗಿ ನಾನು ಕೊಡಲಿರುವ ದೇಶದಲ್ಲಿ ಅವರು ಇವುಗಳೆಲ್ಲವನ್ನು ಪರಿಪಾಲಿಸಬೇಕು.’

32 “ಆದ್ದರಿಂದ, ಇಸ್ರೇಲ್ ಜನರೇ, ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಅನುಸರಿಸಲು ನೀವು ಎಚ್ಚರದಿಂದಿರಬೇಕು. ಆತನನ್ನು ಹಿಂಬಾಲಿಸುವುದನ್ನು ನಿಲ್ಲಿಸಬೇಡಿ. 33 ನಿಮ್ಮ ದೇವರಾದ ಯೆಹೋವನು ಹೇಳಿದ ಆಜ್ಞೆಗಳಿಗನುಸಾರವಾಗಿ ನಡೆದರೆ ನೀವು ಜೀವಿಸುವಿರಿ. ಆಗ ನೀವು ಶುಭವನ್ನೇ ಹೊಂದುವಿರಿ. ನಿಮಗೆ ದೊರಕಿದ ಸ್ವಾಸ್ತ್ಯಭೂಮಿಯಲ್ಲಿ ನೀವು ಬಹುಕಾಲ ಬಾಳುವಿರಿ.

ಯಾವಾಗಲೂ ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗಿರಿ

“ನಿಮ್ಮದೇವರಾದ ಯೆಹೋವನು ನಿಮಗೆ ಉಪದೇಶಿಸಲೆಂದು ನನಗೆ ಕೊಟ್ಟ ಆಜ್ಞೆಗಳು, ಕಟ್ಟಳೆಗಳು ಮತ್ತು ನಿಯಮಗಳು ಇವೇ. ನೀವು ವಾಸಮಾಡಲು ಪ್ರವೇಶಿಸಲಿರುವ ದೇಶದಲ್ಲಿ ಅವುಗಳನ್ನು ಪಾಲಿಸಿರಿ. ನೀವೂ ಮತ್ತು ನಿಮ್ಮ ಸಂತತಿಯವರೂ ಜೀವಿಸುವ ದಿನಗಳಲ್ಲೆಲ್ಲಾ ದೇವರಾದ ಯೆಹೋವನನ್ನು ಗೌರವಿಸಬೇಕು. ನಾನೀಗ ಕೊಡುವ ಎಲ್ಲಾ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸಬೇಕು. ಹಾಗೆ ಮಾಡಿದ್ದಲ್ಲಿ ನೀವು ನೆಲೆಸುವ ಜಾಗದಲ್ಲಿ ನೀವು ಬಹುಕಾಲ ಜೀವಿಸುವಿರಿ. ಇಸ್ರೇಲಿನ ಜನರೇ, ಕಿವಿಗೊಟ್ಟು ಕೇಳಿರಿ. ದೇವರ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನಿಮಗೆ ಎಲ್ಲಾದರಲ್ಲಿ ಶುಭವಾಗುವುದು. ನಿಮಗೆ ಹೆಚ್ಚು ಮಕ್ಕಳಾಗುವವು. ನೀವು ನೆಲೆಸುವ ದೇಶವು ನಿಮ್ಮ ಪೂರ್ವಿಕರಿಗೆ ದೇವರು ವಾಗ್ದಾನ ಮಾಡಿದ ಪ್ರಕಾರ ಫಲಭರಿತವಾಗುವುದು.

2 ಕೊರಿಂಥದವರಿಗೆ 5:17-21

17 ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ಹೊಸ ಸೃಷ್ಟಿಯಾಗಿದ್ದಾನೆ. ಹಳೆಯ ಸಂಗತಿಗಳೆಲ್ಲಾ ಅಳಿದು ಹೋದವು; ಪ್ರತಿಯೊಂದೂ ಹೊಸದಾಯಿತು. 18 ಇದೆಲ್ಲಾ ದೇವರಿಂದಲೇ ಆಯಿತು. ಕ್ರಿಸ್ತನ ಮೂಲಕವಾಗಿ ದೇವರು ನಮ್ಮನ್ನು ತನ್ನೊಂದಿಗೆ ಸಮಾಧಾನ ಪಡಿಸಿಕೊಂಡಿದ್ದಾನೆ. ಇದಲ್ಲದೆ ಇತರರನ್ನು ಈ ಸಮಾಧಾನಕ್ಕೆ ಕರೆದುಕೊಂಡು ಬರುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 19 ಅಂದರೆ, ದೇವರು ಕ್ರಿಸ್ತನಲ್ಲಿ ಇಡೀ ಜಗತ್ತನ್ನೇ ತನ್ನೊಂದಿಗೆ ಸಮಾಧಾನಪಡಿಸಿಕೊಳ್ಳುತ್ತಿದ್ದನು. ದೇವರು ಕ್ರಿಸ್ತನಲ್ಲಿ ಜನರ ಅಪರಾಧಗಳನ್ನು ಪರಿಗಣಿಸುವುದಿಲ್ಲ. ಈ ಸಮಾಧಾನದ ಸಂದೇಶವನ್ನು ಜನರಿಗೆ ತಿಳಿಸುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 20 ಆದ್ದರಿಂದ ಕ್ರಿಸ್ತನ ಪರವಾಗಿ ಮಾತಾಡಲು ನಮ್ಮನ್ನು ಕಳುಹಿಸಲಾಗಿದೆ. ಇದು, ದೇವರು ನಮ್ಮ ಮೂಲಕವಾಗಿ ಜನರನ್ನು ಕರೆಯುವಂತಿದೆ. ದೇವರೊಂದಿಗೆ ಸಮಾಧಾನವಾಗಿರಿ ಎಂದು ನಾವು ನಿಮ್ಮನ್ನು ಬೇಡಿಕೊಳ್ಳುವಾಗ ಕ್ರಿಸ್ತನ ಪರವಾಗಿ ಮಾತಾಡುವವರಾಗಿದ್ದೇವೆ. 21 ಕ್ರಿಸ್ತನಲ್ಲಿ ಪಾಪವಿರಲಿಲ್ಲ. ಆದರೆ ನಾವು ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಆತನನ್ನು ಪಾಪಸ್ವರೂಪಿಯನ್ನಾಗಿ ಮಾಡಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International