Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:49-56

49 ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ.
    ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ.
50 ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ.
    ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ.
51 ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು.
    ನಾನಾದರೋ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು.
52 ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ.
    ಅವು ನನ್ನನ್ನು ಸಂತೈಸುತ್ತವೆ.
53 ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು
    ನಾನು ಕಾಣುವಾಗ ಬಹುಕೋಪಗೊಳ್ಳುವೆ.
54 ನನಗಂತೂ, ನಿನ್ನ ಕಟ್ಟಳೆಗಳು
    ನನ್ನ ಮನೆಯಲ್ಲಿ[a] ಹಾಡುಗಳಾಗಿವೆ.
55 ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ
    ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ.
56 ಯಾಕೆಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.

ಧರ್ಮೋಪದೇಶಕಾಂಡ 5:1-21

ದಶಾಜ್ಞೆಗಳು

ಇಸ್ರೇಲ್ ಸಮೂಹದವರನ್ನೆಲ್ಲಾ ಮೋಶೆ ಒಟ್ಟಾಗಿ ಸೇರಿಸಿ ಅವರಿಗೆ ಹೇಳಿದ್ದೇನೆಂದರೆ: “ಇಸ್ರೇಲ್ ಜನರೇ, ನಾನು ಈ ಹೊತ್ತು ಹೇಳುವ ಕಟ್ಟಳೆಗಳಿಗೆ ಕಿವಿಗೊಡಿರಿ. ಇವುಗಳನ್ನು ಕಲಿತುಕೊಂಡು ಪಾಲಿಸುವವರಾಗಿರಿ. ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಯೆಹೋವ ದೇವರು ನಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿರುತ್ತಾನೆ. ಯೆಹೋವನು ನಮ್ಮ ಪೂರ್ವಿಕರೊಂದಿಗೆ ಒಡಂಬಡಿಕೆ ಮಾಡದೆ ಈಗ ಇಲ್ಲಿ ಜೀವಂತರಾಗಿರುವ ನಮ್ಮೊಂದಿಗೆ ಮಾಡಿರುತ್ತಾನೆ. ಆ ಪರ್ವತದಲ್ಲಿ ಯೆಹೋವನು ನಿಮ್ಮೊಂದಿಗೆ ಮುಖಾಮುಖಿಯಾಗಿ ಬೆಂಕಿಯೊಳಗಿಂದ ನಿಮ್ಮೊಂದಿಗೆ ಮಾತಾಡಿರುತ್ತಾನೆ. ಆದರೆ ನೀವು ಬೆಂಕಿಗೆ ಭಯಪಟ್ಟಿದ್ದರಿಂದ ಬೆಟ್ಟವನ್ನು ಏರಲಿಲ್ಲ. ಆಗ ನಾನು ನಿಮಗೂ ಯೆಹೋವನಿಗೂ ಮಧ್ಯದಲ್ಲಿದ್ದುಕೊಂಡು ಯೆಹೋವನು ಹೇಳಿದ್ದನ್ನು ತಿಳಿಸಿದೆನು.

“ಯೆಹೋವನು ಹೇಳಿದ್ದೇನೆಂದರೆ:

‘ನಾನು ನಿಮ್ಮ ದೇವರಾದ ಯೆಹೋವನು. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ನಿಮ್ಮನ್ನು ಅಲ್ಲಿಂದ ಬಿಡುಗಡೆ ಮಾಡಿದೆನು. ಆದ್ದರಿಂದ ನೀವು ಈ ಆಜ್ಞೆಗಳಿಗೆ ವಿಧೇಯರಾಗಬೇಕು:

‘ನೀವು ನನ್ನ ಹೊರತು ಬೇರೆ ಯಾವ ದೇವರುಗಳನ್ನೂ ಪೂಜಿಸಬಾರದು.

‘ನೀವು ವಿಗ್ರಹಗಳನ್ನು ಮಾಡಿಕೊಳ್ಳಬಾರದು. ಆಕಾಶದ ಮೇಲಾಗಲಿ ಭೂಮಿಯ ಮೇಲಾಗಲಿ ಭೂಮಿಯ ಕೆಳಗಿರುವ ನೀರಿನಲ್ಲಾಗಲಿ ಯಾವ ವಸ್ತುಗಳ ವಿಗ್ರಹಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಮಾಡಿಕೊಳ್ಳಬಾರದು. ನಾನೇ ನಿಮ್ಮ ದೇವರಾದ ಯೆಹೋವನು. ಆದ್ದರಿಂದ ನೀವು ಯಾವ ವಿಗ್ರಹವನ್ನೂ ಪೂಜಿಸಬಾರದು ಮತ್ತು ಅದರ ಸೇವೆ ಮಾಡಬಾರದು. ನನ್ನ ಜನರು ಇತರ ದೇವರುಗಳನ್ನು ಆರಾಧಿಸುವುದನ್ನು ನಾನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪ ಮಾಡಿದವರನ್ನು ನಾನು ಶಿಕ್ಷಿಸುತ್ತೇನೆ. ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ನನ್ನ ದಂಡನೆಗೆ ಗುರಿಯಾಗುವರು. 10 ಆದರೆ ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳಿಗೆ ವಿಧೇಯರಾಗುವವರ ಮೇಲೆ ನಾನು ದಯೆ ತೋರಿಸುವೆನು. ಅವರ ಕುಟುಂಬಗಳವರಿಗೆ ಸಾವಿರ ತಲೆಮಾರುಗಳವರೆಗೂ ಕರುಣೆಯನ್ನು ತೋರಿಸುವೆನು.

11 ‘ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದು. ಯಾರಾದರೂ ಅಯೋಗ್ಯ ಕಾರ್ಯಕ್ಕಾಗಿ ನನ್ನ ಹೆಸರನ್ನು ಉಪಯೋಗಿಸಿದರೆ ನಾನು ಅವನನ್ನು ಶಿಕ್ಷಿಸುವೆನು.

12 ‘ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಸಬ್ಬತ್ ದಿನವನ್ನು ವಿಶೇಷದಿನವೆಂದು ಪರಿಗಣಿಸಬೇಕು. 13 ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ. 14 ಆದರೆ ಏಳನೆಯ ದಿನವು ವಿಶ್ರಾಂತಿಯ ದಿನವಾಗಿದೆ. ಆ ದಿನ ಯಾರೂ ಕೆಲಸ ಮಾಡಬಾರದು. ನೀವು ಮಾತ್ರವೇ ಅಲ್ಲ, ನಿಮ್ಮ ಮಕ್ಕಳು, ಸೇವಕರು, ನಿಮ್ಮ ಪಶುಗಳು, ನಿಮ್ಮಲ್ಲಿರುವ ಪರದೇಶಿಯರು ಕೆಲಸಮಾಡದೆ ವಿಶ್ರಾಂತಿಯಲ್ಲಿರಬೇಕು. ನಿಮ್ಮ ದೇವರಾದ ಯೆಹೋವನ ಗೌರವಾರ್ಥವಾಗಿ ಸಬ್ಬತ್ ದಿನವು ವಿಶ್ರಾಂತಿಯ ದಿನವಾಗಿದೆ. 15 ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಿರೆಂಬುದನ್ನು ಮರೆಯಬೇಡಿ. ನಿಮ್ಮ ದೇವರಾದ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದಲೇ ನಿಮ್ಮ ದೇವರು ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞೆ ಮಾಡಿದ್ದು.

16 ‘ನಿಮ್ಮ ತಂದೆತಾಯಿಗಳನ್ನು ನೀವು ಸನ್ಮಾನಿಸಬೇಕು. ಇದು ನಿಮ್ಮ ದೇವರ ಆಜ್ಞೆ. ನೀವು ಇದಕ್ಕೆ ವಿಧೇಯರಾದರೆ ದೇವರು ನಿಮಗೆ ಕೊಡುವ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ ಮತ್ತು ನಿಮಗೆ ಯಾವಾಗಲೂ ಶುಭವಿರುವುದು.

17 ‘ಕೊಲೆ ಮಾಡಬಾರದು.

18 ‘ವ್ಯಭಿಚಾರ ಮಾಡಬಾರದು.

19 ‘ಕದಿಯಬಾರದು.

20 ‘ಇತರರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಬಾರದು.

21 ‘ಇನ್ನೊಬ್ಬನ ಹೆಂಡತಿಯನ್ನು ಆಶಿಸಬಾರದು. ಅವನ ಮನೆಯನ್ನಾಗಲಿ ಹೊಲವನ್ನಾಗಲಿ ಸೇವಕರನ್ನಾಗಲಿ ದನವನ್ನಾಗಲಿ ಕತ್ತೆಯನ್ನಾಗಲಿ ನೀವು ಅಪೇಕ್ಷಿಸಬಾರದು. ಇನ್ನೊಬ್ಬನ ವಸ್ತುಗಳಲ್ಲಿ ಯಾವುದನ್ನೂ ಆಶಿಸಬಾರದು!’”

1 ಪೇತ್ರನು 2:4-10

ಪ್ರಭುವಾದ ಯೇಸುವೇ ಜೀವವುಳ್ಳ “ಕಲ್ಲು.” ಈ ಲೋಕದ ಜನರು ತಮಗೆ ಆ “ಕಲ್ಲು” (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ “ಕಲ್ಲು.” ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ. ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ. ಪವಿತ್ರ ಗ್ರಂಥವು ಹೇಳುವುದೇನೆಂದರೆ,

“ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ.
    ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು;
ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ”(A)

ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ:

“ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ
    ಮೂಲೆಗಲ್ಲಾಯಿತು.”(B)

ನಂಬದಿರುವ ಜನರಿಗೆ ಆತನು:

“ಜನರನ್ನು ಮುಗ್ಗರಿಸುವ ಕಲ್ಲೂ
    ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.”(C)

ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.

ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.

10 ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ.
    ಆದರೆ ಈಗ ನೀವು ದೇವರ ಜನರಾಗಿದ್ದೀರಿ.
ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ.
    ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ.[a]

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International