Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 78:1-4

ರಚನೆಗಾರ: ಆಸಾಫ.

78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
    ನನ್ನ ನುಡಿಗಳನ್ನು ಲಾಲಿಸಿರಿ.
ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
    ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
    ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
ನಾವು ಅವುಗಳನ್ನು ಮರೆಯುವುದೇ ಇಲ್ಲ.
    ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
    ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.

ಕೀರ್ತನೆಗಳು 78:12-16

12 ಈಜಿಪ್ಟಿನ ಸೋನ್ ಪ್ರದೇಶದಲ್ಲಿ ಅವರ ಪೂರ್ವಿಕರಿಗೆ
    ದೇವರು ತನ್ನ ಮಹಾಶಕ್ತಿಯನ್ನು ತೋರಿಸಿದನು.
13 ದೇವರು ಕೆಂಪು ಸಮುದ್ರವನ್ನು ಇಬ್ಭಾಗಮಾಡಿ ಅವರನ್ನು ದಾಟಿಸಿದನು.
    ಅವರ ಎರಡು ಕಡೆಗಳಲ್ಲಿ ನೀರು ಬಲವಾದ ಗೋಡೆಯಂತೆ ನಿಂತುಕೊಂಡಿತು.
14 ಹಗಲಿನಲ್ಲಿ ಮೋಡದಿಂದಲೂ
    ಇರುಳಿನಲ್ಲಿ ಬೆಂಕಿಯ ಬೆಳಕಿನಿಂದಲೂ ಅವರನ್ನು ಮುನ್ನಡೆಸಿದನು.
15 ದೇವರು ಅರಣ್ಯದಲ್ಲಿ ಬಂಡೆಯನ್ನು ಸೀಳಿ ಅವರಿಗೆ ಸಾಗರದಿಂದಲೋ
    ಎಂಬಂತೆ ನೀರನ್ನು ಸಮೃದ್ಧಿಕರವಾಗಿ ಒದಗಿಸಿದನು.
16 ಆತನು ಬಂಡೆಯಿಂದ ನೀರನ್ನು
    ನದಿಯಂತೆ ಬರಮಾಡಿದನು.

ಅರಣ್ಯಕಾಂಡ 27:12-14

ಯೆಹೋಶುವನು ನೂತನ ನಾಯಕ

12 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಅಬಾರೀಮ್ ಪರ್ವತ ಶ್ರೇಣಿಯಲ್ಲಿರುವ ಈ ಬೆಟ್ಟವನ್ನು ಹತ್ತು. ನಾನು ಇಸ್ರೇಲರಿಗೆ ಕೊಡಲಿಕ್ಕಿರುವ ದೇಶವನ್ನು ನೀನು ಅಲ್ಲಿಂದ ನೋಡು. 13 ಆ ದೇಶವನ್ನು ನೋಡಿದ ನಂತರ ನಿನ್ನ ಅಣ್ಣನಾದ ಆರೋನನಂತೆ ನೀನೂ ಸಾಯುವೆ. 14 ಇಸ್ರೇಲರ ಸಮೂಹದವರು ಚಿನ್ ಮರುಭೂಮಿಯಲ್ಲಿ ನನ್ನೊಡನೆ ವಿವಾದಿಸಿದಾಗ ನೀವಿಬ್ಬರೂ ನನ್ನ ಪವಿತ್ರತೆಯನ್ನು ಜನರ ಮುಂದೆ ತೋರಿಸದೆ ನನ್ನ ಆಜ್ಞೆಗೆ ಅವಿಧೇಯರಾದ ಕಾರಣ ಆ ದೇಶವನ್ನು ನೀನು ಸೇರಬಾರದು.” ಚಿನ್ ಮರುಭೂಮಿಯಲ್ಲಿ ಕಾದೇಶಿನ ಬಳಿ ಮೆರೀಬಾ ಬುಗ್ಗೆಯ ಕುರಿತಾಗಿ ಯೆಹೋವನು ಇದನ್ನು ಹೇಳಿದನು.

ಮಾರ್ಕ 11:27-33

ಯೇಸುವಿನ ಅಧಿಕಾರವನ್ನು ಕುರಿತು ಯೆಹೂದ್ಯ ನಾಯಕರ ಸಂಶಯ

(ಮತ್ತಾಯ 21:23-27; ಲೂಕ 20:1-8)

27 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿಗೆ ಮತ್ತೆ ಹೋದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿದ್ದಾಗ, ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯನಾಯಕರು ಆತನ ಬಳಿಗೆ ಬಂದು, 28 “ಇವುಗಳನ್ನೆಲ್ಲ ಮಾಡಲು ನಿನಗೆ ಯಾವ ಅಧಿಕಾರವಿದೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು? ನಮಗೆ ತಿಳಿಸು!” ಎಂದರು.

29 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನ್ನ ಪ್ರಶ್ನೆಗೆ ಉತ್ತರಿಸಿದರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆ ಎಂಬುದನ್ನು ನಿಮಗೆ ತಿಳಿಸುತ್ತೇನೆ. 30 ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸಿದ್ದು ದೇವರಿಂದ ಬಂದ ಅಧಿಕಾರದಿಂದಲೋ ಅಥವಾ ಮನುಷ್ಯರಿಂದ ಬಂದ ಅಧಿಕಾರದಿಂದಲೋ? ನನಗೆ ತಿಳಿಸಿ!” ಎಂದನು.

31 ಯೆಹೂದ್ಯನಾಯಕರು ಈ ಪ್ರಶ್ನೆಯ ಬಗ್ಗೆ ಚರ್ಚಿಸಿ ಒಬ್ಬರಿಗೊಬ್ಬರು, “‘ಯೋಹಾನನು ದೀಕ್ಷಾಸ್ನಾನ ಕೊಟ್ಟದ್ದು ದೇವರಿಂದ ಬಂದ ಅಧಿಕಾರದಿಂದ’ ಎಂದು ನಾವು ಉತ್ತರಿಸಿದರೆ, ಆಗ ‘ಮತ್ತೆ ನೀವು ಏಕೆ ಯೋಹಾನನನ್ನು ನಂಬಲಿಲ್ಲ?’ ಎಂದು ಯೇಸು ಕೇಳುತ್ತಾನೆ. 32 ಆದರೆ ‘ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮನುಷ್ಯನಿಂದ ಬಂದ ಅಧಿಕಾರದಿಂದ’ ಎಂದು ಹೇಳಿದರೆ, ಆಗ ಜನರು ನಮ್ಮ ಮೇಲೆ ಕೋಪಗೊಳ್ಳುತ್ತಾರೆ” ಎಂದು ಮಾತಾಡಿಕೊಂಡರು. ಜನರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರಿಂದ ಅವರು ಜನರಿಗೆ ಭಯಪಟ್ಟರು.

33 ಆದಕಾರಣ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದು ಉತ್ತರಿಸಿದರು.

ಯೇಸು ಅವರಿಗೆ, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತಿದ್ದೇನೆಂದು ನಿಮಗೆ ಹೇಳುವುದಿಲ್ಲ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International