Revised Common Lectionary (Semicontinuous)
ರಚನೆಗಾರ: ಆಸಾಫ.
78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
ನನ್ನ ನುಡಿಗಳನ್ನು ಲಾಲಿಸಿರಿ.
2 ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
3 ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
4 ನಾವು ಅವುಗಳನ್ನು ಮರೆಯುವುದೇ ಇಲ್ಲ.
ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
12 ಈಜಿಪ್ಟಿನ ಸೋನ್ ಪ್ರದೇಶದಲ್ಲಿ ಅವರ ಪೂರ್ವಿಕರಿಗೆ
ದೇವರು ತನ್ನ ಮಹಾಶಕ್ತಿಯನ್ನು ತೋರಿಸಿದನು.
13 ದೇವರು ಕೆಂಪು ಸಮುದ್ರವನ್ನು ಇಬ್ಭಾಗಮಾಡಿ ಅವರನ್ನು ದಾಟಿಸಿದನು.
ಅವರ ಎರಡು ಕಡೆಗಳಲ್ಲಿ ನೀರು ಬಲವಾದ ಗೋಡೆಯಂತೆ ನಿಂತುಕೊಂಡಿತು.
14 ಹಗಲಿನಲ್ಲಿ ಮೋಡದಿಂದಲೂ
ಇರುಳಿನಲ್ಲಿ ಬೆಂಕಿಯ ಬೆಳಕಿನಿಂದಲೂ ಅವರನ್ನು ಮುನ್ನಡೆಸಿದನು.
15 ದೇವರು ಅರಣ್ಯದಲ್ಲಿ ಬಂಡೆಯನ್ನು ಸೀಳಿ ಅವರಿಗೆ ಸಾಗರದಿಂದಲೋ
ಎಂಬಂತೆ ನೀರನ್ನು ಸಮೃದ್ಧಿಕರವಾಗಿ ಒದಗಿಸಿದನು.
16 ಆತನು ಬಂಡೆಯಿಂದ ನೀರನ್ನು
ನದಿಯಂತೆ ಬರಮಾಡಿದನು.
ಮಿರ್ಯಾಮಳ ಮರಣ
20 ಮೊದಲನೆಯ ತಿಂಗಳಲ್ಲಿ ಇಡೀ ಇಸ್ರೇಲ್ ಸಮುದಾಯವು ಚಿನ್ ಮರುಭೂಮಿಗೆ ಬಂದಿತು. ಅವರು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಸತ್ತಳು. ಆಕೆಯ ಶವವನ್ನು ಅಲ್ಲಿ ಸಮಾಧಿ ಮಾಡಲಾಯಿತು.
ಮೋಶೆಯ ತಪ್ಪು
2 ಅಲ್ಲಿ ನೀರಿಲ್ಲದಿದ್ದ ಕಾರಣ ಅವರು ಮೋಶೆ ಆರೋನರ ವಿರುದ್ಧವಾಗಿ ಸೇರಿಬಂದರು. 3 ಜನರು ಮೋಶೆಯ ಸಂಗಡ ವಾದಮಾಡಿ, “ನಮ್ಮ ಸಹೋದರರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು. 4 ಯೆಹೋವನ ಜನರನ್ನು ಈ ಮರುಭೂಮಿಗೆ ಯಾಕೆ ಕರೆದುಕೊಂಡು ಬಂದೆ? ನಾವು ಮತ್ತು ನಮ್ಮ ಪ್ರಾಣಿಗಳು ಇಲ್ಲಿ ಸಾಯಬೇಕೆಂದು ನೀನು ಇಚ್ಛಿಸುತ್ತೀಯೋ? 5 ಈಜಿಪ್ಟಿನಿಂದ ನಮ್ಮನ್ನು ಇಲ್ಲಿಗೆ ಯಾಕೆ ಕರೆತಂದೆ? ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ಯಾಕೆ ಕರೆದುಕೊಂಡು ಬಂದೆ? ಇಲ್ಲಿ ಧಾನ್ಯವಾಗಲಿ ಅಂಜೂರವಾಗಲಿ ದ್ರಾಕ್ಷಿಯಾಗಲಿ ದಾಳಿಂಬೆಯಾಗಲಿ ಇಲ್ಲ, ಕುಡಿಯುವುದಕ್ಕೆ ನೀರೂ ಇಲ್ಲ” ಎಂದು ಹೇಳಿದರು.
6 ಮೋಶೆ ಆರೋನರು ಜನಸಮೂಹದ ಎದುರಿನಿಂದ ದೇವದರ್ಶನಗುಡಾರದ ಪ್ರವೇಶದ್ವಾರಕ್ಕೆ ಹೋಗಿ ಅಡ್ಡಬಿದ್ದರು. ಆಗ ಯೆಹೋವನ ಮಹಿಮೆಯು ಅವರಿಗೆ ಪ್ರತ್ಯಕ್ಷವಾಯಿತು.
7 ಆಗ ಯೆಹೋವನು ಮೋಶೆಯೊಡನೆ ಮಾತಾಡಿ, 8 “ಬಳಿಕ ನೀನು ಮತ್ತು ನಿನ್ನ ಸಹೋದರನಾದ ಆರೋನನು ಜನರನ್ನು ಬಂಡೆಯ ಮುಂದೆ ಸಭೆಸೇರಿಸಿ, ಜನರ ಮುಂದೆ ಆ ಬಂಡೆಗೆ ಮಾತಾಡು. ಆಗ ನೀರು ಬಂಡೆಯಿಂದ ಹರಿಯುವುದು ಮತ್ತು ನೀರನ್ನು ಜನರಿಗೂ ಅವರ ಪಶುಗಳಿಗೂ ಕೊಡು” ಎಂದು ಹೇಳಿದನು.
9 ಕೋಲು ಪವಿತ್ರಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿತ್ತು. ಯೆಹೋವನು ಹೇಳಿದಂತೆ ಮೋಶೆ ಕೋಲನ್ನು ತೆಗೆದುಕೊಂಡನು. 10 ಜನರು ಬಂಡೆಯ ಮುಂದೆ ಒಟ್ಟಾಗಿ ಸೇರಿಬರಬೇಕೆಂದು ಮೋಶೆ ಆರೋನರು ಹೇಳಿದರು. ಆಗ ಮೋಶೆ, “ದ್ರೋಹಿಗಳೇ, ಈಗ ನನಗೆ ಕಿವಿಗೊಡಿರಿ. ನಿಮಗೋಸ್ಕರವಾಗಿ ಈ ಬಂಡೆಯಿಂದ ನೀರು ಹರಿಯುವಂತೆ ನಾವು ಮಾಡಬೇಕೋ?” ಎಂದು ಹೇಳಿ, 11 ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಎರಡು ಸಾರಿ ಬಂಡೆಯನ್ನು ಹೊಡೆದನು. ಬಂಡೆಯಿಂದ ನೀರು ಹರಿಯತೊಡಗಿತು. ಜನರಿಗೆ ಮತ್ತು ಪಶುಗಳಿಗೆ ಕುಡಿಯಲು ನೀರು ದೊರೆಯಿತು.
12 ಆದರೆ ಯೆಹೋವನು ಮೋಶೆ ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರೇಲರ ಎದುರಿನಲ್ಲಿ ನನ್ನ ಪವಿತ್ರತೆಯನ್ನು ತೋರಿಸದೆ ಹೋದದ್ದರಿಂದ ಈ ಸಮುದಾಯದವರಿಗೆ ಕೊಡಲಿರುವ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗುವುದಿಲ್ಲ.” ಎಂದು ಹೇಳಿದನು.
13 ಇಸ್ರೇಲರು ಅಲ್ಲಿ ಯೆಹೋವನೊಡನೆ ವಾದ ಮಾಡಿದ್ದರಿಂದ ಆ ಸ್ಥಳವು “ಮೆರೀಬಾ ಬುಗ್ಗೆ” ಎಂದು ಕರೆಯಲ್ಪಟ್ಟಿತು. ಅದಲ್ಲದೆ ಯೆಹೋವನು ತಾನು ಪರಿಶುದ್ಧನು ಎಂಬುದನ್ನು ಅವರಿಗೆ ತೋರಿಸಿದ ಸ್ಥಳವು ಇದೇ.
32 “ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ವಿಷಯವಾದ ಸುವಾರ್ತೆಯನ್ನು ನಾವು ನಿಮಗೆ ಹೇಳುತ್ತೇವೆ. 33 ನಾವು ಅವರ ಸಂತತಿಯವರಾಗಿದ್ದೇವೆ. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವುದರ ಮೂಲಕ ಆ ವಾಗ್ದಾನವನ್ನು ನಮಗಾಗಿ ನೆರವೇರಿಸಿದ್ದಾನೆ. ಇದರ ಬಗ್ಗೆ ಎರಡನೆ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ:
‘ನೀನೇ ನನ್ನ ಮಗನು.
ಇಂದೇ ನಾನು ನಿನ್ನನ್ನು ಪಡೆದೆನು.’(A)
34 ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಸಮಾಧಿಗೆ ಸೇರಿ ಕೊಳೆಯುವುದಿಲ್ಲ ಎಂಬ ವಿಷಯದಲ್ಲಿ ದೇವರು ಇಂತೆಂದಿದ್ದಾನೆ:
‘ನಾನು ದಾವೀದನಿಗೆ ಮಾಡಿದ ಸತ್ಯವೂ ಪವಿತ್ರವೂ
ಆದ ವಾಗ್ದಾನಗಳನ್ನು ನಿನಗೆ ಕೊಡುತ್ತೇನೆ.’(B)
35 ಆದರೆ ಮತ್ತೊಂದು ಸ್ಥಳದಲ್ಲಿ ದೇವರು ಹೀಗೆನ್ನುತ್ತಾನೆ:
‘ನೀನು ನಿನ್ನ ಪರಿಶುದ್ಧನ ದೇಹವನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.’(C)
36 “ದಾವೀದನು ತನ್ನ ಜೀವಮಾನಕಾಲದಲ್ಲಿ ದೇವರ ಚಿತ್ತಕ್ಕನುಸಾರವಾಗಿ ಬಾಳಿದನು. ಬಳಿಕ ಅವನು ಸತ್ತುಹೋದನು. ದಾವೀದನನ್ನು ಅವನ ಪಿತೃಗಳೊಂದಿಗೆ ಸಮಾಧಿಮಾಡಲಾಯಿತು. ಅವನ ದೇಹ ಸಮಾಧಿಯಲ್ಲಿ ಕೊಳೆತುಹೋಯಿತು! 37 ಆದರೆ ದೇವರಿಂದ ಜೀವಂತವಾಗಿ ಎಬ್ಬಿಸಲ್ಪಟ್ಟ ಯೇಸುವಿನ ದೇಹ ಸಮಾಧಿಯಲ್ಲಿ ಕೊಳೆಯಲ್ಪಡಲಿಲ್ಲ. 38-39 ಸಹೋದರರೇ, ಇದು ನಿಮಗೆ ತಿಳಿದಿರಲಿ: ಆತನ ಮೂಲಕವಾಗಿ ನಿಮ್ಮ ಪಾಪಗಳಿಗೆ ಕ್ಷಮೆ ದೊರೆಯುತ್ತದೆ. ಮೋಶೆಯ ಧರ್ಮಶಾಸ್ತ್ರಕ್ಕೆ, ನಿಮ್ಮನ್ನು ನಿಮ್ಮ ಪಾಪಗಳಿಂದ ಬಿಡಿಸಲಾಗಲಿಲ್ಲ. ಆದರೆ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನು ಆತನ ಮೂಲಕವಾಗಿ ತನ್ನ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವನು. 40 ಆದ್ದರಿಂದ ಪ್ರವಾದಿಗಳು ತಿಳಿಸಿರುವ ಈ ಕೆಲವು ಸಂಗತಿಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:
41 ‘ಅಪಹಾಸ್ಯ ಮಾಡುವವರೇ,
ಆಶ್ಚರ್ಯಪಡುತ್ತಾ ನಾಶವಾಗಿಹೋಗಿರಿ.
ನೀವು ನಂಬಲೊಲ್ಲದ ಒಂದು ಕಾರ್ಯವನ್ನು
ನಾನು ಮಾಡುವೆನು.
ಬೇರೊಬ್ಬನು ನಿಮಗೆ ಅದನ್ನು ವಿವರಿಸಿದರೂ
ನೀವು ನಂಬುವುದಿಲ್ಲ!’”(D)
Kannada Holy Bible: Easy-to-Read Version. All rights reserved. © 1997 Bible League International