Revised Common Lectionary (Semicontinuous)
ರಚನೆಗಾರ: ಆಸಾಫ.
78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
ನನ್ನ ನುಡಿಗಳನ್ನು ಲಾಲಿಸಿರಿ.
2 ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
3 ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
4 ನಾವು ಅವುಗಳನ್ನು ಮರೆಯುವುದೇ ಇಲ್ಲ.
ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
12 ಈಜಿಪ್ಟಿನ ಸೋನ್ ಪ್ರದೇಶದಲ್ಲಿ ಅವರ ಪೂರ್ವಿಕರಿಗೆ
ದೇವರು ತನ್ನ ಮಹಾಶಕ್ತಿಯನ್ನು ತೋರಿಸಿದನು.
13 ದೇವರು ಕೆಂಪು ಸಮುದ್ರವನ್ನು ಇಬ್ಭಾಗಮಾಡಿ ಅವರನ್ನು ದಾಟಿಸಿದನು.
ಅವರ ಎರಡು ಕಡೆಗಳಲ್ಲಿ ನೀರು ಬಲವಾದ ಗೋಡೆಯಂತೆ ನಿಂತುಕೊಂಡಿತು.
14 ಹಗಲಿನಲ್ಲಿ ಮೋಡದಿಂದಲೂ
ಇರುಳಿನಲ್ಲಿ ಬೆಂಕಿಯ ಬೆಳಕಿನಿಂದಲೂ ಅವರನ್ನು ಮುನ್ನಡೆಸಿದನು.
15 ದೇವರು ಅರಣ್ಯದಲ್ಲಿ ಬಂಡೆಯನ್ನು ಸೀಳಿ ಅವರಿಗೆ ಸಾಗರದಿಂದಲೋ
ಎಂಬಂತೆ ನೀರನ್ನು ಸಮೃದ್ಧಿಕರವಾಗಿ ಒದಗಿಸಿದನು.
16 ಆತನು ಬಂಡೆಯಿಂದ ನೀರನ್ನು
ನದಿಯಂತೆ ಬರಮಾಡಿದನು.
17 ರಕ್ಷಕನೂ ಇಸ್ರೇಲರ ಪರಿಶುದ್ಧನೂ ಆಗಿರುವ ಯೆಹೋವನು ಹೇಳುವುದೇನೆಂದರೆ,
“ನಾನೇ ನಿಮ್ಮ ದೇವರಾದ ಯೆಹೋವನು.
ಯಾವದು ಒಳ್ಳೆಯದೋ, ಪ್ರಯೋಜನಕರವೋ ಅದನ್ನು ಮಾಡಲು ನಿಮಗೆ ಕಲಿಸುತ್ತೇನೆ.
ನೀವು ಹೋಗಲೇಬೇಕಾದ ದಾರಿಯಲ್ಲಿ ನಿಮ್ಮನ್ನು ನಡಿಸುವೆನು.
18 ನೀವು ನನಗೆ ವಿಧೇಯರಾಗಿದ್ದರೆ,
ತುಂಬಿಹರಿಯುವ ಹೊಳೆಯಂತೆ
ಸಮಾಧಾನವು ನಿಮಗೆ ದೊರಕುತ್ತಿತ್ತು.
ಸಮುದ್ರದ ತೆರೆಯಂತೆ ಮೇಲಿಂದ ಮೇಲೆ
ನಿಮಗೆ ಒಳ್ಳೆಯವುಗಳು ಬರುತ್ತಿದ್ದವು.
19 ನೀವು ನನಗೆ ವಿಧೇಯರಾಗಿದ್ದರೆ,
ನಿಮ್ಮ ಸಂತಾನವು ಅಭಿವೃದ್ಧಿಯಾಗುತ್ತಿತ್ತು.
ಅವರು ಸಮುದ್ರದ ಮರಳಿನಂತೆ ಅಸಂಖ್ಯಾತರಾಗಿರುತ್ತಿದ್ದರು.
ನೀವು ನನಗೆ ವಿಧೇಯರಾಗಿದ್ದರೆ, ನೀವು ನಾಶವಾಗಿರುತ್ತಿರಲಿಲ್ಲ
ಮತ್ತು ನನ್ನೆದುರಿನಿಂದ ನಿಮ್ಮ ಹೆಸರು ತೆಗೆದುಹಾಕಲ್ಪಡುತ್ತಿರಲಿಲ್ಲ.”
20 ನನ್ನ ಜನರೇ, ಬಾಬಿಲೋನನ್ನು ತೊರೆಯಿರಿ.
ನನ್ನ ಜನರೇ, ಕಸ್ದೀಯರಿಂದ ಓಡಿಹೋಗಿರಿ.
ಈ ವರ್ತಮಾನವನ್ನು ಜನರಿಗೆ ಹರ್ಷಿಸುತ್ತಾ ತಿಳಿಸಿರಿ.
ಲೋಕದ ಕಟ್ಟಕಡೆಯ ಸ್ಥಳದಲ್ಲೂ ಈ ವರ್ತಮಾನವನ್ನು ಪ್ರಕಟಿಸಿರಿ.
“ಯಾಕೋಬನನ್ನು ಯೆಹೋವನು ರಕ್ಷಿಸಿದನೆಂದು” ಜನರಿಗೆಲ್ಲಾ ತಿಳಿಸಿರಿ.
21 ಯೆಹೋವನು ತನ್ನ ಜನರನ್ನು ಮರುಭೂಮಿಯಲ್ಲಿ ನಡೆಸಿಕೊಂಡು ಬಂದನು.
ಜನರು ಬಾಯಾರಲಿಲ್ಲ;
ಯಾಕೆಂದರೆ ಆತನು ಬಂಡೆಯಿಂದ ನೀರು ಹರಿಯುಂತೆ ಮಾಡಿದನು.
ಆತನು ಬಂಡೆಯನ್ನು ಇಬ್ಭಾಗ ಮಾಡಿದಾಗ ನೀರು ಅದರೊಳಗಿಂದ ಹರಿಯಿತು.
ನೀವು ತೀರ್ಪುಗಾರರಲ್ಲ
11 ಸಹೋದರ ಸಹೋದರಿಯರೇ, ಒಬ್ಬರ ವಿರುದ್ಧ ಮತ್ತೊಬ್ಬರು ನಿಂದೆಯ ಮಾತುಗಳನ್ನಾಡದಿರಿ. ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನನ್ನು ನೀವು ಟೀಕಿಸಿದರೆ ಅಥವಾ ಅವನ ಬಗ್ಗೆ ತೀರ್ಪು ನೀಡಿದರೆ, ಅವನು ಅನುಸರಿಸುವ ಧರ್ಮಶಾಸ್ತ್ರವನ್ನೇ ಟೀಕಿಸಿದಂತಾಯಿತು. ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ನೀವು ತೀರ್ಪು ನೀಡಿದರೆ, ಅವನು ಅನುಸರಿಸುತ್ತಿರುವ ಧರ್ಮಶಾಸ್ತ್ರದ ಬಗ್ಗೆ ನೀವು ತೀರ್ಪು ನೀಡಿದಂತಾಯಿತು. ನೀವು ಧರ್ಮಶಾಸ್ತ್ರಕ್ಕೆ ತೀರ್ಪು ನೀಡುವಾಗ ನೀವು ಧರ್ಮಶಾಸ್ತ್ರವನ್ನು ಅನುಸರಿಸುವವರಲ್ಲ. ನೀವು ನ್ಯಾಯಾಧಿಪತಿಗಳಾಗಿದ್ದೀರಿ! 12 ದೇವರೊಬ್ಬನೇ ನಿಯಮಗಳನ್ನು ಮಾಡುವಾತನು. ಆತನೊಬ್ಬನೇ ನಿಜವಾದ ನ್ಯಾಯಾಧಿಪತಿ. ದೇವರೊಬ್ಬನೇ ರಕ್ಷಿಸಬಲ್ಲನು ಮತ್ತು ನಾಶಮಾಡಬಲ್ಲನು. ಆದ್ದರಿಂದ ಬೇರೊಬ್ಬ ವ್ಯಕ್ತಿಯ ಬಗ್ಗೆ ತೀರ್ಪು ನೀಡುವುದು ನಿಮಗೆ ಯೋಗ್ಯವಾದುದಲ್ಲ.
ದೇವರೇ ನಿನ್ನ ಜೀವನದ ಬಗ್ಗೆ ಯೋಚಿಸಲಿ
13 ನಿಮ್ಮಲ್ಲಿ ಕೆಲವರು, “ಈ ಹೊತ್ತು ಅಥವಾ ನಾಳೆ ನಗರಕ್ಕೆ ಹೋಗುತ್ತೇವೆ. ಅಲ್ಲಿ ಒಂದು ವರ್ಷವಿದ್ದು ವ್ಯಾಪಾರಮಾಡಿ ಹಣ ಸಂಪಾದಿಸುತ್ತೇವೆ” ಎಂದು ಹೇಳುವಿರಿ. ಆಲಿಸಿರಿ! ಇದರ ಬಗ್ಗೆ ಯೋಚಿಸಿರಿ: 14 ನಾಳೆ ಏನಾಗುವುದೋ ನಿಮಗೆ ತಿಳಿಯದು! ನಿಮ್ಮ ಜೀವನವು ಹಬೆಯಂತಿದೆ. ನೀವು ಅದನ್ನು ಸ್ವಲ್ಪಕಾಲ ನೋಡುವಿರಿ. ನಂತರ ಅದು ಅದೃಶ್ಯವಾಗುವುದು. 15 ಆದ್ದರಿಂದ, ನೀವು ಹೀಗೆ ಹೇಳಬೇಕು, “ಪ್ರಭುವು ಇಚ್ಛೆಪಟ್ಟರೆ, ನಾವು ಜೀವಿಸಿರುತ್ತೇವೆ. ಇಂಥಿಂಥದ್ದನ್ನು ಮಾಡುತ್ತೇವೆ.” 16 ಆದರೆ ನೀವೀಗ ಜಂಬಗಾರರಾಗಿ ಹೊಗಳಿಕೊಳ್ಳುತ್ತೀರಿ. ನಿಮ್ಮ ಹೊಗಳಿಕೆಯೆಲ್ಲವೂ ಕೆಟ್ಟದ್ದು.
Kannada Holy Bible: Easy-to-Read Version. All rights reserved. © 1997 Bible League International