Revised Common Lectionary (Semicontinuous)
97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.
ಜನರು ಮತ್ತೆ ಗುಣುಗುಟ್ಟಿದರು
11 ಜನರು ತಮಗೆ ತೊಂದರೆ ಉಂಟಾಯಿತೆಂದು ಗಟ್ಟಿಯಾಗಿ ಗುಣುಗುಟ್ಟಿದರು. ಅದನ್ನು ಯೆಹೋವನು ಕೇಳಿ ಕೋಪಗೊಂಡನು. ಯೆಹೋವನಿಂದ ಬಂದ ಬೆಂಕಿ ಅವರ ವಿರುದ್ಧವಾಗಿ ಹೊತ್ತಿಕೊಂಡದ್ದರಿಂದ ಪಾಳೆಯದ ಹೊರಭಾಗದಲ್ಲಿದ್ದವರು ಸುಟ್ಟುಹೋದರು. 2 ಆಗ ಜನರು ಸಹಾಯಕ್ಕಾಗಿ ಮೋಶೆಗೆ ಮೊರೆಯಿಟ್ಟರು. ಮೋಶೆಯು ಅವರಿಗೋಸ್ಕರ ಯೆಹೋವನಿಗೆ ಪ್ರಾರ್ಥಿಸಲಾಗಿ ಬೆಂಕಿ ಆರಿಹೋಯಿತು. 3 ಯೆಹೋವನು ಅವರಿಗೆ ವಿರುದ್ಧವಾಗಿ ಬೆಂಕಿ ಉರಿಯುವಂತೆ ಮಾಡಿದ್ದರಿಂದ ಜನರು ಆ ಸ್ಥಳಕ್ಕೆ “ತಬೇರ” ಎಂದು ಹೆಸರಿಟ್ಟರು.
ಎಪ್ಪತ್ತು ಮಂದಿ ಹಿರಿಯರು
4 ಅವರ ಮಧ್ಯದಲ್ಲಿದ್ದ ಕಿರುಕುಳಕೊಡುವ ಪರದೇಶಸ್ಥರು ಬೇರೆ ರೀತಿಯ ಆಹಾರಕ್ಕಾಗಿ ಬಹಳವಾಗಿ ಆಶಿಸಿದರು. ಇಸ್ರೇಲರು ಸಹ ಮತ್ತೆ ಅಳಲು ಆರಂಭಿಸಿ, “ನಮಗೆ ಯಾರು ಮಾಂಸವನ್ನು ಕೊಡುತ್ತಾರೆ? 5 ನಾವು ಈಜಿಪ್ಟಿನಲ್ಲಿ ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜು, ಈರುಳ್ಳಿಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ ಇವುಗಳನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. 6 ಆದರೆ ನಾವು ಈಗ ನಮ್ಮ ಬಲವನ್ನು ಕಳೆದುಕೊಂಡಿದ್ದೇವೆ. ಈ ಮನ್ನವನ್ನು ಬಿಟ್ಟು ನಮ್ಮಲ್ಲಿ ತಿನ್ನಲು ಬೇರೇನೂ ಇಲ್ಲ” ಎಂದರು. 7 ಈ ಮನ್ನವು ಕೊತ್ತುಂಬರಿ ಕಾಳಿನಂತಿತ್ತು ಮತ್ತು ಅಂಟು ಪದಾರ್ಥದಂತೆ ಕಾಣಿಸಿತು. 8 ಜನರು ಮನ್ನವನ್ನು ಕೂಡಿಸಿಕೊಂಡು ಬೀಸುವ ಕಲ್ಲುಗಳಿಂದ ಬೀಸಿ ಅಥವಾ ಒರಳಲ್ಲಿ ಕುಟ್ಟಿ, ಮಡಕೆಗಳಲ್ಲಿ ಬೇಯಿಸಿ ತೆಳುವಾದ ರೊಟ್ಟಿಗಳನ್ನು ಮಾಡಿಕೊಂಡರು. ಅದರ ರುಚಿ ಆಲಿವ್ ಎಣ್ಣೆಯಿಂದ ಮಾಡಿದ ಭಕ್ಷ್ಯಗಳಂತಿತ್ತು. 9 ರಾತ್ರಿ ಕಾಲದಲ್ಲಿ ಮಂಜು ಪಾಳೆಯದಲ್ಲಿ ಬೀಳುತ್ತಿದ್ದಾಗ ಅದರೊಂದಿಗೆ ಮನ್ನವೂ ಬೀಳುತ್ತಿತ್ತು.
17 ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಡಕುಗಳನ್ನು ಉಂಟುಮಾಡುವ ಜನರ ವಿಷಯದಲ್ಲಿ ನೀವು ಬಹು ಜಾಗ್ರತೆಯಿಂದ ಇರಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇತರರ ನಂಬಿಕೆಯನ್ನು ಕೆಡಿಸುವಂಥವರ ಬಗ್ಗೆ ಬಹು ಎಚ್ಚರದಿಂದಿರಿ. ನೀವು ಕಲಿತಿರುವ ಉಪದೇಶಕ್ಕೆ ಅವರು ವಿರುದ್ಧವಾಗಿದ್ದಾರೆ. ನೀವು ಅವರಿಂದ ದೂರವಿರಿ. 18 ಅಂಥ ಜನರು ನಮ್ಮ ಪ್ರಭುವಾದ ಕ್ರಿಸ್ತನ ಸೇವೆ ಮಾಡುತ್ತಿಲ್ಲ. ಅವರು ಕೇವಲ ತಮ್ಮ ಸುಖಕ್ಕಾಗಿ ಈ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಟ್ಟದರ ಬಗ್ಗೆ ತಿಳಿದಿಲ್ಲದ ಜನರ ಮನಸ್ಸುಗಳನ್ನು ಮೋಸಗೊಳಿಸುವುದಕ್ಕಾಗಿ ಅವರು ನಯನಾಜುಕಿನ ನುಡಿಗಳನ್ನಾಡುತ್ತಾರೆ ಮತ್ತು ಮುಖಸ್ತುತಿಯ ಮಾತುಗಳನ್ನಾಡುತ್ತಾರೆ. 19 ನಿಮ್ಮ ವಿಧೇಯತ್ವವು ಎಲ್ಲಾ ವಿಶ್ವಾಸಿಗಳಿಗೆ ತಿಳಿದಿದೆ. ಆದ್ದರಿಂದ ನಿಮ್ಮ ವಿಷಯದಲ್ಲಿ ನಾನು ಬಹು ಸಂತೋಷಪಡುತ್ತೇನೆ. ಆದರೆ ಒಳ್ಳೆಯ ಸಂಗತಿಗಳ ಬಗ್ಗೆ ನೀವು ವಿವೇಕಿಗಳಾಗಿರಬೇಕೆಂದು ಮತ್ತು ಕೆಟ್ಟಸಂಗತಿಗಳ ಬಗ್ಗೆ ಏನೂ ತಿಳಿದಿಲ್ಲದವರಾಗಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.
20 ಶಾಂತಿಯನ್ನು ಕೊಡುವ ದೇವರು ಬೇಗನೆ ಸೈತಾನನನ್ನು ಸೋಲಿಸಿ, ಅವನ ಮೇಲೆ ನಿಮಗೆ ಅಧಿಕಾರವನ್ನು ಕೊಡುವನು.
ನಮ್ಮ ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International