Revised Common Lectionary (Semicontinuous)
97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.
31 ಜನರು ಈ ವಿಶೇಷ ಆಹಾರವನ್ನು ಮನ್ನ ಎಂದು ಕರೆಯತೊಡಗಿದರು. ಮನ್ನವು ಚಿಕ್ಕದಾದ ಬಿಳಿ ಕೊತ್ತಂಬರಿ ಬೀಜಗಳಂತಿದ್ದವು ಮತ್ತು ಜೇನುತುಪ್ಪದಿಂದ ಮಾಡಿದ ತೆಳುವಾದ ರೊಟ್ಟಿಯಂತೆ ರುಚಿಯಾಗಿತ್ತು. 32 ಮೋಶೆಯು, “ಯೆಹೋವನು ಆಜ್ಞಾಪಿಸಿದ್ದೇನೆಂದರೆ, ‘ಮೂರು ಸೇರಿನಷ್ಟು ಮನ್ನವನ್ನು ನಿಮ್ಮ ಮುಂದಿನ ಸಂತತಿಯವರಿಗಾಗಿ ಉಳಿಸಿರಿ. ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದಾಗ ಅರಣ್ಯದಲ್ಲಿ ನಾನು ನಿಮಗೆ ಕೊಟ್ಟ ಈ ಆಹಾರವನ್ನು ನೋಡುವರು’” ಎಂದು ಹೇಳಿದನು.
33 ಆದ್ದರಿಂದ ಮೋಶೆಯು ಆರೋನನಿಗೆ, “ಒಂದು ಭರಣಿಯನ್ನು ತೆಗೆದುಕೊಂಡು ಅದರಲ್ಲಿ ಮೂರು ಸೇರಿನಷ್ಟು ಮನ್ನವನ್ನು ತುಂಬಿಸು. ನಿಮ್ಮ ಮುಂದಿನ ಸಂತತಿಯವರು ನೋಡುವುದಕೋಸ್ಕರ ಇದನ್ನು ಉಳಿಸಿ ಯೆಹೋವನ ಮುಂದೆ ಇಡು” ಎಂದು ಹೇಳಿದನು. 34 (ನಂತರ ಆರೋನನು, ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಮಾಡಿದನು. ಆರೋನನು ಮನ್ನದ ಭರಣಿಯನ್ನು ಒಡಂಬಡಿಕೆಯ ಮುಂದುಗಡೆಯಲ್ಲಿ ಇಟ್ಟನು.) 35 ನಲವತ್ತು ವರ್ಷಗಳವರೆಗೆ ಜನರು ಮನ್ನವನ್ನು ತಿಂದರು. ಅವರು ವಿಶ್ರಾಂತಿಯ ದೇಶಕ್ಕೆ ಬರುವ ತನಕ, ಅಂದರೆ ಕಾನಾನಿನ ಗಡಿಗೆ ಬರುವವರೆಗೆ ಮನ್ನವನ್ನು ತಿಂದರು.
ಪೌಲನ ಕೊನೆ ಮಾತುಗಳು
16 ಕ್ರಿಸ್ತನಲ್ಲಿ ನಮ್ಮ ಸಹೋದರಿಯಾದ ಪೊಯಿಬೆಯನ್ನು ನಾನು ನಿಮಗೆ ಶಿಫಾರಸು ಮಾಡಲಿಚ್ಛಿಸುತ್ತೇನೆ. ಈಕೆಯು ಕೆಂಕ್ರೆಯ ಪಟ್ಟಣದ ಸಭೆಯಲ್ಲಿ ವಿಶೇಷ ಸಹಾಯಕಳಾಗಿದ್ದಾಳೆ. 2 ನೀವು ಆಕೆಯನ್ನು ಪ್ರಭುವಿನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ದೇವಜನರಿಗೆ ತಕ್ಕಂತೆ ಈಕೆಯನ್ನು ಸ್ವೀಕರಿಸಿಕೊಳ್ಳಿರಿ. ಆಕೆಗೆ ಬೇಕಾದ ಸಹಾಯಗಳನ್ನೆಲ್ಲಾ ಮಾಡಿರಿ. ಆಕೆಯು ನನಗೆ ಬಹಳವಾಗಿ ಸಹಾಯ ಮಾಡಿದ್ದಾಳೆ. ಅಲ್ಲದೆ ಇತರ ಅನೇಕ ಜನರಿಗೂ ಆಕೆ ಸಹಾಯ ಮಾಡಿದ್ದಾಳೆ.
3 ಪ್ರಿಸ್ಕಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆ ತಿಳಿಸಿರಿ. ಅವರು ಕ್ರಿಸ್ತ ಯೇಸುವಿನಲ್ಲಿ ನನ್ನೊಂದಿಗೆ ಸೇವೆ ಮಾಡುತ್ತಿದ್ದಾರೆ. 4 ಅವರು ನನ್ನ ಪ್ರಾಣವನ್ನು ಉಳಿಸುವುದಕ್ಕಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಈಡುಮಾಡಿದರು. ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಯೆಹೂದ್ಯರಲ್ಲದ ಸಭೆಗಳವರೆಲ್ಲರೂ ಅವರಿಗೆ ಕೃತಜ್ಞರಾಗಿದ್ದಾರೆ.
5 ಅಲ್ಲದೆ ಅವರ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ನನ್ನ ವಂದನೆಗಳನ್ನು ತಿಳಿಸಿರಿ. ನನ್ನ ಪ್ರಿಯ ಸ್ನೇಹಿತನಾದ ಎಪೈನೆತನಿಗೆ ನನ್ನ ವಂದನೆ ತಿಳಿಸಿರಿ.
ಏಷ್ಯಾದಲ್ಲಿ ಕ್ರಿಸ್ತನನ್ನು ಹಿಂಬಾಲಿಸಿದವರಲ್ಲಿ ಅವನೇ ಮೊಟ್ಟಮೊದಲನೆಯವನಾಗಿದ್ದಾನೆ.
6 ಮರಿಯಳಿಗೆ ನನ್ನ ವಂದನೆ ತಿಳಿಸಿರಿ. ಆಕೆ ನಿಮಗೋಸ್ಕರ ಬಹು ಕಷ್ಟಪಟ್ಟು ಕೆಲಸ ಮಾಡಿದಳು.
7 ಆಂದ್ರೋನಿಕನಿಗೆ ಮತ್ತು ಯೂನ್ಯನಿಗೆ ನನ್ನ ವಂದನೆ ತಿಳಿಸಿರಿ. ಅವರು ನನ್ನ ಸಂಬಂಧಿಕರಾಗಿದ್ದಾರೆ. ಅಲ್ಲದೆ ಅವರು ನನ್ನೊಂದಿಗೆ ಸೆರೆಮನೆಯಲ್ಲಿದ್ದರು. ದೇವರ ಅತ್ಯಂತ ಮುಖ್ಯಸೇವಕರುಗಳಲ್ಲಿ[a] ಅವರೂ ಸೇರಿದ್ದಾರೆ. ಅವರು ನನಗಿಂತ ಮೊದಲೇ ಕ್ರಿಸ್ತನ ವಿಶ್ವಾಸಿಗಳಾಗಿದ್ದಾರೆ.
8 ಪ್ರಭುವಿನಲ್ಲಿ ನನ್ನ ಪ್ರಿಯ ಸ್ನೇಹಿತನಾದ ಅಂಪ್ಲಿಯಾತನಿಗೆ ನನ್ನ ವಂದನೆ ತಿಳಿಸಿರಿ. 9 ಉರ್ಬಾನನಿಗೆ ನನ್ನ ವಂದನೆ ತಿಳಿಸಿರಿ.
ಅವನು ಕ್ರಿಸ್ತನಿಗೋಸ್ಕರ ನನ್ನ ಸಹೋದ್ಯೋಗಿಯಾಗಿದ್ದಾನೆ.
ನನ್ನ ಪ್ರಿಯ ಗೆಳೆಯನಾದ ಸ್ತಾಖುನಿಗೆ ನನ್ನ ವಂದನೆ ತಿಳಿಸಿರಿ. 10 ಅಪೆಲ್ಲನಿಗೆ ನನ್ನ ವಂದನೆ ತಿಳಿಸಿರಿ. ಅವನು ಕ್ರಿಸ್ತನನ್ನು ನಿಜವಾಗಿಯೂ ಪ್ರೀತಿಸುತ್ತಾನೆಂಬುದನ್ನು ಪರೀಕ್ಷಿಸಿ ನಿರೂಪಿಸಲಾಗಿದೆ.
ಅರಿಸ್ತೊಬೂಲನ ಕುಟುಂಬದಲ್ಲಿ ಇರುವವರಿಗೆಲ್ಲ ನನ್ನ ವಂದನೆ ತಿಳಿಸಿರಿ.
11 ನನ್ನ ಸಂಬಂಧಿಕರಾದ ಹೆರೋಡಿಯೊನನಿಗೂ ಪ್ರಭುವಿಗೆ ಸೇರಿದವನಾದ ನಾರ್ಕಿಸ್ಸನ ಕುಟುಂಬದಲ್ಲಿರುವವರೆಲ್ಲರಿಗೂ ನನ್ನ ವಂದನೆ ತಿಳಿಸಿರಿ. 12 ತ್ರುಫೈನಳಿಗೂ ತ್ರುಫೋಸಳಿಗೂ ನನ್ನ ವಂದನೆ ತಿಳಿಸಿರಿ.
ಅವರು ಪ್ರಭುವಿಗಾಗಿ ಬಹು ಕಷ್ಟಪಟ್ಟು ಸೇವೆ ಮಾಡುತ್ತಿದ್ದಾರೆ. ನನ್ನ ಪ್ರಿಯ ಸಹೋದರಿಯಾದ ಪೆರ್ಸೀಸಳಿಗೂ ನನ್ನ ವಂದನೆ ತಿಳಿಸಿರಿ. ಆಕೆಯು ಸಹ ಪ್ರಭುವಿಗೋಸ್ಕರ ಬಹು ಕಷ್ಟಪಟ್ಟು ಸೇವೆ ಮಾಡಿದಳು.
13 ರೂಫನಿಗೆ ನನ್ನ ವಂದನೆ ತಿಳಿಸಿರಿ. ಅವನು ಪ್ರಭುವಿನಲ್ಲಿ ವಿಶೇಷವಾದ ವ್ಯಕ್ತಿ. ಅವನ ತಾಯಿಗೂ ನನ್ನ ವಂದನೆ ತಿಳಿಸಿರಿ. ಆಕೆ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡಳು.
14 ಅಸುಂಕ್ರಿತನಿಗೂ ಪ್ಲೆಗೋನನಿಗೂ ಹೆರ್ಮೇಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಕ್ರೈಸ್ತ ಸಹೋದರರಿಗೂ
15 ಫಿಲೊಲೋಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ಸಹೋದರಿಗೂ ಮತ್ತು ಒಲುಂಪನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೆ ನನ್ನ ವಂದನೆ ತಿಳಿಸಿರಿ.
16 ನೀವು ಪರಸ್ಪರ ಸಂಧಿಸುವಾಗ ಪವಿತ್ರವಾದ ಮುದ್ದನ್ನಿಟ್ಟು ವಂದಿಸಿರಿ.
ಕ್ರಿಸ್ತನ ಸಭೆಗಳವರೆಲ್ಲಾ ನಿಮಗೆ ವಂದನೆ ತಿಳಿಸುತ್ತಾರೆ.
Kannada Holy Bible: Easy-to-Read Version. All rights reserved. © 1997 Bible League International