Revised Common Lectionary (Semicontinuous)
105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
2 ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
3 ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
ಯೆಹೋವನ ಆರಾಧಕರೇ, ಸಂತೋಷಪಡಿರಿ.
4 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
5 ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
6 ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
ಅರಣ್ಯದಲ್ಲಿ ನದಿಯು ಹರಿಯತೊಡಗಿತು!
42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
43 ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು.
ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
44 ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು.
ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.
ಯೆಹೋವನನ್ನು ಕೊಂಡಾಡಿರಿ.
22 ಆರನೆಯ ದಿನವಾದ ಶುಕ್ರವಾರದಲ್ಲಿ ಜನರು ಎರಡರಷ್ಟನ್ನು ಕೂಡಿಸಿಕೊಂಡರು. ಅವರು ಪ್ರತಿಯೊಬ್ಬನಿಗೆ ಆರು ಸೇರಿನಷ್ಟು ಕೂಡಿಸಿಕೊಂಡರು. ಆದ್ದರಿಂದ ಜನನಾಯಕರೆಲ್ಲರೂ ಬಂದು ಮೋಶೆಗೆ ಇದನ್ನು ತಿಳಿಸಿದರು.
23 ಮೋಶೆಯು ಅವರಿಗೆ, “ಯೆಹೋವನೇ ಇದರ ಬಗ್ಗೆ ತಿಳಿಸಿದ್ದನು. ನಾಳೆ ಮುಂಜಾನೆ ಯೆಹೋವನನ್ನು ಸನ್ಮಾನಿಸತಕ್ಕ ವಿಶೇಷ ವಿಶ್ರಾಂತಿ ದಿನವಾದ ಸಬ್ಬತ್ತಾಗಿದೆ. ಆದ್ದರಿಂದ ಇದು ಹೀಗೆ ಸಂಭವಿಸಿತು. ಈ ದಿನಕ್ಕೆ ಬೇಕಾದ ಅಡಿಗೆಯನ್ನು ನೀವು ತಯಾರಿಸಿಕೊಳ್ಳಿರಿ. ಆದರೆ ಈ ಆಹಾರದಲ್ಲಿ ಉಳಿದದ್ದನ್ನು ನಾಳೆ ಪ್ರಾತಃಕಾಲಕ್ಕಾಗಿ ಉಳಿಸಿಕೊಳ್ಳಿರಿ” ಎಂದು ಹೇಳಿದನು.
24 ಆದ್ದರಿಂದ ಉಳಿದ ಆಹಾರವನ್ನು ಜನರು ಮರುದಿನಕ್ಕಾಗಿ ಉಳಿಸಿದರು; ಆದರೆ ಆ ಆಹಾರವು ಕೆಡಲಿಲ್ಲ ಮತ್ತು ಹುಳಗಳು ಆ ಆಹಾರಕ್ಕೆ ಬರಲಿಲ್ಲ.
25 ಶನಿವಾರದಲ್ಲಿ ಮೋಶೆಯು ಜನರಿಗೆ, “ಈ ದಿನ ಸಬ್ಬತ್ತಾಗಿದೆ. ಇದು ಯೆಹೋವನನ್ನು ಸನ್ಮಾನಿಸುವುದಕ್ಕಿರುವ ವಿಶೇಷವಾದ ವಿಶ್ರಾಂತಿ ದಿನವಾಗಿದೆ. ನೀವು ನಿನ್ನೆಯಿಂದ ಇಟ್ಟುಕೊಂಡಿದ್ದ ಆಹಾರವನ್ನು ಊಟಮಾಡಿರಿ. ಇಂದು ನೀವು ಹೊಲದಲ್ಲಿ ಯಾವ ಆಹಾರವನ್ನೂ ಕಾಣುವುದಿಲ್ಲ. 26 ನೀವು ಆರು ದಿನಗಳಲ್ಲಿ ಆಹಾರವನ್ನು ಕೂಡಿಸಬೇಕು. ಆದರೆ ವಾರದ ಏಳನೆಯ ದಿನವು ಸಬ್ಬತ್ ದಿನವಾಗಿದೆ, ಅಂದರೆ ವಿಶ್ರಾಂತಿಯ ದಿನವಾಗಿದೆ. ಆದ್ದರಿಂದ ಆ ದಿನದಲ್ಲಿ ನೆಲದ ಮೇಲೆ ಯಾವ ಆಹಾರವೂ ಇರುವುದಿಲ್ಲ” ಅಂದನು.
27 ಏಳನೆಯ ದಿನದಲ್ಲಿ ಕೆಲವು ಜನರು ಆಹಾರವನ್ನು ಕೂಡಿಸಿಕೊಳ್ಳಲು ಹೊರಗೆ ಹೋದರು. ಆದರೆ ಅವರಿಗೆ ಏನೂ ಸಿಕ್ಕಲಿಲ್ಲ. 28 ಆಗ ಯೆಹೋವನು ಮೋಶೆಗೆ, “ಜನರೇ, ನೀವು ಇನ್ನೆಷ್ಟರವರೆಗೆ ನನ್ನ ಆಜ್ಞೆಗಳಿಗೆ ಮತ್ತು ಬೋಧನೆಗಳಿಗೆ ವಿಧೇಯರಾಗುವುದಿಲ್ಲ? 29 ನೋಡಿರಿ, ಯೆಹೋವನು ಸಬ್ಬತ್ ದಿನವನ್ನು ನಿಮಗೆ ವಿಶ್ರಾಂತಿ ದಿನವನ್ನಾಗಿ ಮಾಡಿದ್ದಾನೆ. ಆದ್ದರಿಂದ ಯೆಹೋವನು ಶುಕ್ರವಾರದಂದು ನಿಮಗೆ ಎರಡು ದಿನಗಳಿಗೆ ಬೇಕಾದಷ್ಟು ಆಹಾರವನ್ನು ಕೊಡುವನು. ಆದ್ದರಿಂದ ಸಬ್ಬತ್ತಿನಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ಕುಳಿತುಕೊಂಡು ವಿಶ್ರಮಿಸಿಕೊಳ್ಳಬೇಕು. ನೀವು ಇರುವಲ್ಲೇ ಇರಿ” ಎಂದು ಹೇಳಿದನು. 30 ಆದ್ದರಿಂದ ಜನರು ಸಬ್ಬತ್ತಿನಲ್ಲಿ ವಿಶ್ರಮಿಸಿಕೊಂಡರು.
23 ಆಗ ಯೇಸು ತನ್ನ ಶಿಷ್ಯರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಐಶ್ವರ್ಯವಂತನು ಪರಲೋಕರಾಜ್ಯಕ್ಕೆ ಪ್ರವೇಶಿಸುವುದು ಬಹಳ ಕಷ್ಟಕರ. 24 ಹೌದು, ಐಶ್ವರ್ಯವಂತನು ದೇವರ ರಾಜ್ಯ ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂದು ನಾನು ನಿಮಗೆ ಹೇಳುತ್ತೇನೆ” ಎಂದನು.
25 ಶಿಷ್ಯರು ಇದನ್ನು ಕೇಳಿ ಬಹಳ ಆಶ್ಚರ್ಯದಿಂದ, “ಹಾಗಾದರೆ ಯಾರು ರಕ್ಷಣೆ ಹೊಂದಬಲ್ಲರು?” ಎಂದು ಕೇಳಿದರು.
26 ಯೇಸು ತನ್ನ ಶಿಷ್ಯರ ಕಡೆಗೆ ದೃಷ್ಟಿಸಿ, “ಇದು ಮನುಷ್ಯರಿಗೆ ಅಸಾಧ್ಯವಾದ ಕಾರ್ಯ. ಆದರೆ ದೇವರಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.
27 ಪೇತ್ರನು ಯೇಸುವಿಗೆ, “ನಾವು ನಮಗಿದ್ದ ಪ್ರತಿಯೊಂದನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು. ನಮಗೆ ಏನು ದೊರಕುವುದು” ಎಂದನು.
28 ಯೇಸು ಶಿಷ್ಯರಿಗೆ ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಹೊಸ ಲೋಕವು ಸೃಷ್ಟಿಸಲ್ಪಟ್ಟಾಗ ಮನುಷ್ಯಕುಮಾರನು ತನ್ನ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುವನು. ನನ್ನನ್ನು ಹಿಂಬಾಲಿಸಿದ ನೀವೆಲ್ಲರೂ ಸಿಂಹಾಸನಗಳ ಮೇಲೆ ಕುಳಿತು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. 29 ನನ್ನನ್ನು ಹಿಂಬಾಲಿಸಲು ತಮ್ಮ ಮನೆಗಳನ್ನು, ಸಹೋದರ ಸಹೋದರಿಯರನ್ನು, ತಂದೆತಾಯಿಗಳನ್ನು, ಮಕ್ಕಳನ್ನು ಇಲ್ಲವೆ ಆಸ್ತಿಯನ್ನು ತ್ಯಜಿಸಿದ ಪ್ರತಿಯೊಬ್ಬರು ತಾವು ಬಿಟ್ಟವುಗಳಿಗಿಂತ ಹೆಚ್ಚಾಗಿ ಪಡೆಯುತ್ತಾರೆ. ಅಲ್ಲದೆ ನಿತ್ಯಜೀವವನ್ನೂ ಹೊಂದಿಕೊಳ್ಳುತ್ತಾರೆ. 30 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.
Kannada Holy Bible: Easy-to-Read Version. All rights reserved. © 1997 Bible League International