Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 105:1-6

105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
    ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
    ಯೆಹೋವನ ಆರಾಧಕರೇ, ಸಂತೋಷಪಡಿರಿ.
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
    ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
    ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.

ಕೀರ್ತನೆಗಳು 105:37-45

37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
    ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
    ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
    ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
    ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
    ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
    ಅರಣ್ಯದಲ್ಲಿ ನದಿಯು ಹರಿಯತೊಡಗಿತು!

42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
    ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
43 ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು.
    ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
44 ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು.
    ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
    ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.

ಯೆಹೋವನನ್ನು ಕೊಂಡಾಡಿರಿ.

ವಿಮೋಚನಕಾಂಡ 16:1-21

ದೇವರು ಆಹಾರವನ್ನು ಕಳುಹಿಸಿದ್ದು

16 ಬಳಿಕ ಅವರು ಏಲೀಮಿನಿಂದ ಪ್ರಯಾಣಮಾಡಿ ಸಿನ್ ಅರಣ್ಯಕ್ಕೆ ಬಂದರು. ಈ ಸ್ಥಳವು ಏಲೀಮಿನ ಮತ್ತು ಸೀನಾಯ್ ಬೆಟ್ಟದ ನಡುವೆ ಇತ್ತು. ಈಜಿಪ್ಟನ್ನು ಬಿಟ್ಟ ನಂತರ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಅವರು ಈ ಸ್ಥಳಕ್ಕೆ ಬಂದರು. ಆಗ ಇಸ್ರೇಲರು ಮತ್ತೆ ಮರುಭೂಮಿಯಲ್ಲಿ ಮೋಶೆ ಆರೋನರ ಮೇಲೆ ಗುಣುಗುಟ್ಟಿದರು. ಅವರು, “ಯೆಹೋವನು ನಮ್ಮನ್ನು ಈಜಿಪ್ಟಿನಲ್ಲಿ ಕೊಂದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ನಮಗೆ ಈಜಿಪ್ಟಿನಲ್ಲಿ ಮಾಂಸವೂ ರೊಟ್ಟಿಯೂ ಇತ್ತು. ನಮಗೆ ಬೇಕಿದ್ದ ಆಹಾರವೆಲ್ಲಾ ನಮ್ಮಲ್ಲಿತ್ತು. ಆದರೆ ಈಗ ನೀವು ನಮ್ಮನ್ನು ಈ ಅರಣ್ಯಕ್ಕೆ ಕರೆದುಕೊಂಡು ಬಂದಿರಿ. ನಾವೆಲ್ಲರೂ ಇಲ್ಲಿ ಹಸಿವೆಯಿಂದ ಸಾಯುವೆವು” ಎಂದು ಹೇಳಿದರು.

ಆಗ ಯೆಹೋವನು ಮೋಶೆಗೆ, “ಆಕಾಶದಿಂದ ನಿಮಗೋಸ್ಕರ ರೊಟ್ಟಿ ಸುರಿಯುವಂತೆ ಮಾಡುವೆನು. ಪ್ರತಿದಿನ ಅವರು ಹೊರಗೆ ಹೋಗಿ, ತಮಗೆ ಆ ದಿನದಲ್ಲಿ ತಿನ್ನಲು ಬೇಕಾದ ಆಹಾರವನ್ನು ಕೂಡಿಸಿಕೊಳ್ಳಬೇಕು. ನಾನು ಹೇಳುವುದನ್ನು ಅವರು ಮಾಡುತ್ತಾರೊ ಇಲ್ಲವೊ ಎಂದು ನೋಡಲು ನಾನು ಇದನ್ನು ಮಾಡುವೆನು. ಪ್ರತಿದಿನವು ಅವರು ಒಂದು ದಿನಕ್ಕೆ ಬೇಕಾದಷ್ಟು ಆಹಾರವನ್ನು ಕೂಡಿಸಿಕೊಳ್ಳಬೇಕು. ಆದರೆ ಶುಕ್ರವಾರ ಅವರು ತಮ್ಮ ಆಹಾರವನ್ನು ಸಿದ್ಧಪಡಿಸುವಾಗ ಎರಡು ದಿನಗಳಿಗೆ ಬೇಕಾದಷ್ಟು ಆಹಾರವಿರುವುದನ್ನು ಅವರು ನೋಡುವರು” ಎಂದು ಹೇಳಿದನು.

ಆದ್ದರಿಂದ ಮೋಶೆಯು ಮತ್ತು ಆರೋನನು ಇಸ್ರೇಲರಿಗೆ, “ಈ ರಾತ್ರಿ ನೀವು ಯೆಹೋವನ ಶಕ್ತಿಯನ್ನು ನೋಡುವಿರಿ. ನಿಮ್ಮನ್ನು ಈಜಿಪ್ಟಿನಿಂದ ರಕ್ಷಿಸಿದವನು ಆತನೇ ಎಂದು ತಿಳಿದುಕೊಳ್ಳುವಿರಿ. ನಾಳೆ ಬೆಳಿಗ್ಗೆ ನೀವು ಯೆಹೋವನ ಮಹಿಮೆಯನ್ನು ನೋಡುವಿರಿ. ನೀವು ಯೆಹೋವನ ಮೇಲೆ ಗುಣುಗುಟ್ಟಿದ್ದೀರಿ. ಆತನು ನಿಮ್ಮ ಗುಣುಗುಟ್ಟುವಿಕೆಯನ್ನು ಕೇಳಿದ್ದಾನೆ; ಆತನೇ ನಿಮಗೆ ಸಹಾಯ ಮಾಡುವನು. ನಮ್ಮ ಮೇಲೆ ನೀವು ಗುಣುಗುಟ್ಟುತ್ತಾ ಬರಲು ನಾವೆಷ್ಟರವರು? ನಿಮ್ಮನ್ನು ಈಜಿಪ್ಟಿನಿಂದ ಕರೆತಂದವನು ಯೆಹೋವನೇ. ಆತನೇ ನಿಮ್ಮ ಅಗತ್ಯತೆಗಳನ್ನು ಪೂರೈಸುವನು” ಎಂದು ಹೇಳಿದರು.

ಅಲ್ಲದೆ ಮೋಶೆಯು, “ನೀವು ಗೊಣಗುಟ್ಟುತ್ತಿರುವುದನ್ನು ಯೆಹೋವನು ಕೇಳಿದ್ದಾನೆ. ಆದ್ದರಿಂದ ರಾತ್ರಿಯಲ್ಲಿ ಆತನು ನಿಮಗೆ ಮಾಂಸವನ್ನು ಕೊಡುವನು. ಪ್ರತಿ ಮುಂಜಾನೆ ನಿಮಗೆ ಬೇಕಾದಷ್ಟು ರೊಟ್ಟಿಯು ದೊರಕುವುದು. ನೀವು (ಆರೋನನ ಮೇಲೂ ನನ್ನ ಮೇಲೂ) ಗೊಣಗುಟ್ಟುತ್ತಿದ್ದೀರಿ? ಆದರೆ ನಮಗೆ ದೂರು ಹೇಳಲು ನಾವೆಷ್ಟರವರು? ನೀವು ಯೆಹೋವನ ವಿರುದ್ಧವಾಗಿ ದೂರು ಹೇಳುತ್ತಿದ್ದೀರೆಂಬುದು ನಿಮ್ಮ ಜ್ಞಾಪಕದಲ್ಲಿರಲಿ” ಎಂದು ಹೇಳಿದನು.

ಬಳಿಕ ಮೋಶೆ ಆರೋನನಿಗೆ, “ಇಸ್ರೇಲರೊಂದಿಗೆ ಮಾತಾಡು. ಅವರಿಗೆ, ‘ಯೆಹೋವನ ಮುಂದೆ ಒಟ್ಟಾಗಿ ನೆರೆದು ಬನ್ನಿ: ಯಾಕೆಂದರೆ ಆತನು ನಿಮ್ಮ ಗೊಣಗುಟ್ಟುವಿಕೆಯನ್ನು ಕೇಳಿದ್ದಾನೆ’ ಎಂದು ಹೇಳು” ಅಂದನು.

10 ಅರೋನನು ಇಸ್ರೇಲರೆಲ್ಲರೊಂದಿಗೆ ಮಾತಾಡಿದನು. ಅವರೆಲ್ಲರೂ ಒಂದು ಸ್ಥಳದಲ್ಲಿ ಕೂಡಿಬಂದರು. ಆರೋನನು ಅವರೊಂದಿಗೆ ಮಾತಾಡುತ್ತಿದ್ದಾಗ ಅವರೆಲ್ಲರೂ ಅರಣ್ಯದ ಕಡೆಗೆ ತಿರುಗಿನೋಡಿದರು. ಮೇಘದಲ್ಲಿ ಯೆಹೋವನ ಮಹಿಮೆಯು ಪ್ರತ್ಯಕ್ಷವಾದದ್ದನ್ನು ಅವರೆಲ್ಲರೂ ಕಂಡರು.

11 ಯೆಹೋವನು ಮೋಶೆಗೆ, 12 “ನಾನು ಇಸ್ರೇಲರ ಗೊಣಗುಟ್ಟುವಿಕೆಯನ್ನು ಕೇಳಿದ್ದೇನೆ. ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸೂರ್ಯಾಸ್ತಮಕ್ಕಿಂತ ಮೊದಲು ನೀವು ಮಾಂಸವನ್ನು ತಿನ್ನುವಿರಿ; ಪ್ರತಿ ಮುಂಜಾನೆ ಸೂರ್ಯೋದಯಕ್ಕಿಂತ ಮೊದಲು ನಿಮಗೆ ಬೇಕಾದಷ್ಟು ರೊಟ್ಟಿಯನ್ನು ತಿನ್ನುವಿರಿ. ಆಗ ನಾನೇ ದೇವರಾದ ಯೆಹೋವನೆಂಬುದನ್ನು ನೀವು ತಿಳಿದುಕೊಳ್ಳುವಿರಿ; ನನ್ನಲ್ಲಿ ಭರವಸೆ ಇಡುವಿರಿ’” ಎಂದು ಹೇಳಿದನು.

13 ಸಾಯಂಕಾಲ ಲಾವಕ್ಕಿಗಳು ಪಾಳೆಯದ ಸುತ್ತಲೂ ಬಂದವು. ಜನರು ಮಾಂಸಕ್ಕಾಗಿ ಈ ಪಕ್ಷಿಗಳನ್ನು ಹಿಡಿದರು ಮತ್ತು ಪ್ರತಿ ಮುಂಜಾನೆ ಅವರ ಪಾಳೆಯದ ಸುತ್ತಲೂ ಮಂಜು ನೆಲದ ಮೇಲೆ ಬಿದ್ದಿತ್ತು. 14 ಸೂರ್ಯನು ಮೇಲಕ್ಕೇರಿದ ನಂತರ ಮಂಜು ಕರಗಿ ಇಲ್ಲವಾಯಿತು. ಆದರೆ ಮಂಜು ಕರಗಿ ಹೋದನಂತರ ನೆಲದ ಮೇಲೆ ಮಂಜಿನ ಹನಿಗಳಂತಿದ್ದ ತೆಳುವಾದ ಕಾಳುಗಳು ಬಿದ್ದಿದ್ದವು. 15 ಇಸ್ರೇಲರು ಅದನ್ನು ನೋಡಿ “ಏನದು” ಎಂಬುದಾಗಿ ಒಬ್ಬರನ್ನೊಬ್ಬರು ಕೇಳಿದರು. ಅದು ಏನೆಂದು ಅವರಿಗೆ ಗೊತ್ತಿಲ್ಲದ ಕಾರಣ ಅವರು ಈ ಪ್ರಶ್ನೆಯನ್ನು ಕೇಳಿದರು. ಆದ್ದರಿಂದ ಮೋಶೆ ಅವರಿಗೆ, “ಇದು ಯೆಹೋವನು ನಿಮಗೆ ಕೊಟ್ಟಿರುವ ಆಹಾರ. 16 ಯೆಹೋವನು ಆಜ್ಞಾಪಿಸುವುದೇನೆಂದರೆ, ‘ಪ್ರತಿಯೊಬ್ಬನು ತನಗೆ ಬೇಕಾದಷ್ಟನ್ನು ಮಾತ್ರ ಕೂಡಿಸಿಕೊಳ್ಳಬೇಕು. ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬನಿಗೆ ಸುಮಾರು ಮೂರು ಸೇರಿನಷ್ಟು ಕೂಡಿಸಿಕೊಳ್ಳಬೇಕು’” ಎಂದು ಹೇಳಿದನು.

17 ಅಂತೆಯೇ ಇಸ್ರೇಲರು ಮಾಡಿದರು. ಪ್ರತಿಯೊಬ್ಬನೂ ತನ್ನ ಆಹಾರವನ್ನು ಕೂಡಿಸಿಕೊಂಡನು. ಕೆಲವರು ಇತರರಿಗಿಂತ ಹೆಚ್ಚಾಗಿ ಕೂಡಿಸಿಕೊಂಡರು. 18 ಅವರು ತಮ್ಮ ಕುಟುಂಬದಲ್ಲಿದ್ದ ಪ್ರತಿಯೊಬ್ಬರ ಆಹಾರವನ್ನು ಒಟ್ಟಾಗಿ ಸೇರಿಸಿ ಅಳತೆಮಾಡಿದಾಗ ಅಲ್ಲಿ ಯಾವಾಗಲೂ ಪ್ರತಿಯೊಬ್ಬನಿಗೆ ಬೇಕಾದಷ್ಟು ಮಾತ್ರ ಆಹಾರವಿರುತ್ತಿತ್ತು. ಅದು ಹೆಚ್ಚಾಗಿಯೂ ಇರುತ್ತಿರಲಿಲ್ಲ; ಕಡಿಮೆಯಾಗಿಯೂ ಇರುತ್ತಿರಲಿಲ್ಲ. ಹೀಗೆ ಪ್ರತಿಯೊಬ್ಬನು ತನಗೆ ಮತ್ತು ತನ್ನ ಕುಟುಂಬಕ್ಕೆ ಬೇಕಾದಷ್ಟನ್ನು ಮಾತ್ರ ಕೂಡಿಸಿಕೊಂಡನು.

19 ಮೋಶೆಯು ಅವರಿಗೆ, “ಆಹಾರವನ್ನು ಮರುದಿನಕ್ಕಾಗಿ ಉಳಿಸಿಕೊಳ್ಳಬೇಡಿರಿ” ಎಂದು ಹೇಳಿದನು. 20 ಆದರೆ ಅವರು ಮೋಶೆಯ ಮಾತಿಗೆ ವಿಧೇಯರಾಗಲಿಲ್ಲ. ಕೆಲವು ಜನರು ಮರುದಿನ ತಿನ್ನುವುದಕ್ಕಾಗಿ ಆಹಾರವನ್ನು ಉಳಿಸಿಕೊಂಡರು; ಹೀಗೆ ಉಳಿಸಿಟ್ಟ ಆಹಾರವು ಹುಳಗಳಿಂದ ತುಂಬಿ ಕೊಳೆಯತೊಡಗಿತು. ಮೋಶೆಯು ಹೀಗೆ ಮಾಡಿದ ಜನರ ಮೇಲೆ ಕೋಪಗೊಂಡನು.

21 ಪ್ರತಿ ಮುಂಜಾನೆ ಅವರು ಆಹಾರವನ್ನು ಕೂಡಿಸಿಕೊಂಡರು. ಪ್ರತಿಯೊಬ್ಬನು ತಾನು ಎಷ್ಟು ತಿನ್ನಬಹುದೋ ಅಷ್ಟನ್ನೇ ಕೂಡಿಸಿಕೊಂಡನು. ಆದರೆ ಬಿಸಿಲೇರಿದಾಗ ಆಹಾರವು ಕರಗಿಹೋಯಿತು.

2 ಕೊರಿಂಥದವರಿಗೆ 13:5-10

ನೀವು ನಂಬಿಕೆಯಲ್ಲಿ ಜೀವಿಸುತ್ತಿದ್ದೀರೋ ಎಂಬುದನ್ನು ತಿಳಿದುಕೊಳ್ಳಲು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ಕ್ರಿಸ್ತಯೇಸುವು ನಿಮ್ಮೊಳಗೆ ಇದ್ದಾನೆಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರಾಗಿದ್ದೀರಿ. ಆದರೆ ನಾವು ಅಯೋಗ್ಯರಲ್ಲವೆಂದು ನಿಮಗೆ ಖಚಿತವಾಗುವುದರಲ್ಲಿ ನಮಗೆ ಸಂದೇಹವಿಲ್ಲ. ನೀವು ಯಾವ ತಪ್ಪನ್ನೂ ಮಾಡದಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮನ್ನು ಅಯೋಗ್ಯರೆಂದು ಜನರು ಭಾವಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವುದೇ ಮುಖ್ಯ. ಸತ್ಯಕ್ಕೆ ವಿರೋಧವಾದ ಸಂಗತಿಗಳನ್ನು ಮಾಡಲು ನಮಗೆ ಸಾಧ್ಯವಿಲ್ಲ. ಸತ್ಯದ ಪರವಾದ ಕಾರ್ಯಗಳನ್ನು ಮಾತ್ರ ಮಾಡಲು ನಮಗೆ ಸಾಧ್ಯ. ನೀವು ಶಕ್ತರಾಗಿರುವುದಾದರೆ, ನಾವು ಬಲಹೀನರಾಗಿರಲು ಸಂತೋಷಿಸುತ್ತೇವೆ. ನೀವು ನಂಬಿಕೆಯಲ್ಲಿ ಪರಿಪೂರ್ಣರಾಗಬೇಕೆಂಬುದೇ ನಮ್ಮ ಉದ್ದೇಶ. 10 ನಾನು ನಿಮ್ಮೊಂದಿಗೆ ಇಲ್ಲದಿರುವಾಗ ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. ಏಕೆಂದರೆ ನಾನು ಬಂದಾಗ ನಿಮ್ಮನ್ನು ದಂಡಿಸುವುದಕ್ಕಾಗಿ ನನ್ನ ಅಧಿಕಾರವನ್ನು ಉಪಯೋಗಿಸುವ ಅಗತ್ಯವಿರುವುದಿಲ್ಲ. ಪ್ರಭುವು ನನಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಗೊಳಿಸುವುದಕ್ಕಾಗಿಯೇ ಹೊರತು ನಾಶಮಾಡುವುದಕ್ಕಾಗಿಯಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International