Revised Common Lectionary (Semicontinuous)
105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
2 ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
3 ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
ಯೆಹೋವನ ಆರಾಧಕರೇ, ಸಂತೋಷಪಡಿರಿ.
4 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
5 ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
6 ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
ಅರಣ್ಯದಲ್ಲಿ ನದಿಯು ಹರಿಯತೊಡಗಿತು!
42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
43 ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು.
ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
44 ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು.
ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.
ಯೆಹೋವನನ್ನು ಕೊಂಡಾಡಿರಿ.
ಅರಣ್ಯದಲ್ಲಿ ಕಹಿನೀರು ಸಿಹಿಯಾದದ್ದು
22 ಮೋಶೆಯು ಇಸ್ರೇಲರನ್ನು ಕೆಂಪುಸಮುದ್ರದಿಂದ ಮುನ್ನಡೆಸಿದನು. ಅವರು ಶೂರಿನ ಅರಣ್ಯದೊಳಗೆ ಹೋದರು. ಅವರು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಜನರಿಗೆ ಎಲ್ಲಿಯೂ ನೀರು ಸಿಕ್ಕಲಿಲ್ಲ. 23 ಆ ಬಳಿಕ ಅವರು ಮಾರಾ ಎಂಬ ಸ್ಥಳವನ್ನು ತಲುಪಿದರು. ಅಲ್ಲಿ ನೀರಿತ್ತು. ಆದರೆ ಅವರು ಆ ನೀರನ್ನು ಕುಡಿಯಲಾಗಲಿಲ್ಲ. ಯಾಕೆಂದರೆ ಅದು ಬಹು ಕಹಿಯಾಗಿತ್ತು. (ಆದಕಾರಣವೇ ಆ ಸ್ಥಳಕ್ಕೆ “ಮಾರಾ” ಎಂಬುದಾಗಿ ಹೆಸರು ಕೊಡಲ್ಪಟ್ಟಿತ್ತು.)
24 ಅವರು ಮೋಶೆಗೆ ದೂರು ಹೇಳತೊಡಗಿದರು. “ಈಗ, ನಾವೇನು ಕುಡಿಯೋಣ?” ಎಂದು ಅವರು ಕೇಳಿದರು.
25 ಮೋಶೆಯು ಯೆಹೋವನಿಗೆ ಪ್ರಾರ್ಥಿಸಲು ಆತನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಮೋಶೆಯು ಆ ಗಿಡವನ್ನು ನೀರಿನಲ್ಲಿ ಹಾಕಿದಾಗ ಕಹಿನೀರು ಸಿಹಿ ನೀರಾಯಿತು.
ಆ ಸ್ಥಳದಲ್ಲಿ ಯೆಹೋವನು ಅವರಿಗಾಗಿ ನಿಯಮವನ್ನು ಮಾಡಿದನು. ಯೆಹೋವನು ಅವರ ನಂಬಿಕೆಯನ್ನು ಸಹ ಪರೀಕ್ಷಿಸಿದನು. 26 ಆತನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ಆತನ ದೃಷ್ಟಿಗೆ ಯೋಗ್ಯವಾದವುಗಳನ್ನು ಮಾಡಬೇಕು; ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಬೇಕು. ಆಗ ನಾನು ಈಜಿಪ್ಟಿನವರಿಗೆ ಉಂಟುಮಾಡಿದ ಕಾಯಿಲೆಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನಾಗಿದ್ದೇನೆ” ಎಂದು ಹೇಳಿದನು.
27 ಬಳಿಕ ಜನರು ಏಲೀಮಿಗೆ ಪ್ರಯಾಣ ಮಾಡಿದರು. ಏಲೀಮಿನಲ್ಲಿ ನೀರಿನ ಹನ್ನೆರಡು ಬುಗ್ಗೆಗಳಿದ್ದವು; ಅಲ್ಲಿ ಎಪ್ಪತ್ತು ಖರ್ಜೂರದ ಮರಗಳಿದ್ದವು. ಆದ್ದರಿಂದ ಅವರು ನೀರಿನ ಹತ್ತಿರ ತಮ್ಮ ಪಾಳೆಯ ಹಾಕಿದರು.
ಕಡೆಯ ಎಚ್ಚರಿಕೆಗಳು ಮತ್ತು ವಂದನೆಗಳು
13 ನಾನು ಮತ್ತೆ ನಿಮ್ಮ ಬಳಿಗೆ ಮೂರನೆ ಸಾರಿ ಬರುತ್ತೇನೆ. ನೆನಪಿಟ್ಟುಕೊಳ್ಳಿರಿ, “ಪ್ರತಿಯೊಂದು ದೂರಿಗೂ ಇಬ್ಬರಾಗಲಿ ಮೂವರಾಗಲಿ ಸಾಕ್ಷಿಗಳಿದ್ದು ತಮಗೆ ಗೊತ್ತಿರುವುದಾಗಿ ಮತ್ತು ಅದು ಸತ್ಯವೆಂದು”(A) ಹೇಳಬೇಕು. 2 ನಾನು ನಿಮ್ಮ ಬಳಿಗೆ ಎರಡನೆ ಸಲ ಬಂದಿದ್ದಾಗ ಪಾಪಕ್ಕೆ ಒಳಗಾಗಿದ್ದವರನ್ನು ಮತ್ತು ಉಳಿದವರೆಲ್ಲರನ್ನು ಎಚ್ಚರಿಸಿದೆನು. ಈಗ ನಾನು ದೂರದಲ್ಲಿದ್ದೇನೆ. ಈ ಪಾಪಕ್ಕೆ ಒಳಗಾಗಿರುವ ಎಲ್ಲರಿಗೂ ನಾನು ಕೊಡುವ ಎಚ್ಚರಿಕೆ ಏನೆಂದರೆ, ನಾನು ನಿಮ್ಮ ಬಳಿಗೆ ಬಂದಾಗ, ನಿಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. 3 ಕ್ರಿಸ್ತನು ನನ್ನ ಮೂಲಕ ಮಾತಾಡುತ್ತಿದ್ದಾನೆ ಎಂಬುದಕ್ಕೆ ನಿಮಗೆ ಸಾಕ್ಷಿಬೇಕು. ನನಗಿರುವ ಸಾಕ್ಷಿ ಏನೆಂದರೆ, ಕ್ರಿಸ್ತನು ನಿಮ್ಮನ್ನು ದಂಡಿಸುವುದರಲ್ಲಿ ಬಲಹೀನನಲ್ಲ. ಕ್ರಿಸ್ತನು ನಿಮ್ಮ ಮಧ್ಯದಲ್ಲಿ ಬಲಿಷ್ಠನಾಗಿದ್ದಾನೆ. 4 ಕ್ರಿಸ್ತನು ಶಿಲುಬೆಯ ಮೇಲೆ ಕೊಲ್ಲಲ್ಪಟ್ಟಾಗ ಬಲಹೀನನಾಗಿದ್ದನು ಎಂಬುದೇನೊ ನಿಜ. ಆದರೆ ಈಗ ಆತನು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾನೆ. ಅಲ್ಲದೆ ನಾವು ಕ್ರಿಸ್ತನಲ್ಲಿ ಬಲಹೀನರೆಂಬುದೂ ನಿಜ. ಆದರೆ ನಾವು ನಿಮಗೋಸ್ಕರವಾಗಿ ಕ್ರಿಸ್ತನಲ್ಲಿ ದೇವರ ಶಕ್ತಿಯಿಂದ ಜೀವಿಸುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International