Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 14:19-31

ಯೆಹೋವನು ಈಜಿಪ್ಟಿನ ಸೈನ್ಯವನ್ನು ಸೋಲಿಸಿದನು

19 ಆ ಸಮಯದಲ್ಲಿ ಯೆಹೋವನ ದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದಕ್ಕೆ ಬಂದನು. ಆದ್ದರಿಂದ ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅವರ ಹಿಂಭಾಗಕ್ಕೆ ಹೋಯಿತು. 20 ಹೀಗೆ ಮೋಡವು ಈಜಿಪ್ಟಿನವರಿಗೂ ಇಸ್ರೇಲರಿಗೂ ನಡುವೆ ನಿಂತಿತು. ಅಲ್ಲಿ ಇಸ್ರೇಲರಿಗೆ ಬೆಳಕಿತ್ತು. ಆದರೆ ಈಜಿಪ್ಟಿನವರಿಗೆ ಕತ್ತಲಿತ್ತು. ಆದ್ದರಿಂದ ಈಜಿಪ್ಟಿನವರು ಆ ರಾತ್ರಿ ಇಸ್ರೇಲರ ಸಮೀಪಕ್ಕೆ ಬರಲಿಲ್ಲ.

21 ಮೋಶೆಯು ತನ್ನ ಕೈಯನ್ನು ಕೆಂಪುಸಮುದ್ರದ ಮೇಲೆ ಚಾಚಿದನು; ಆಗ ಯೆಹೋವನು ಪೂರ್ವದಿಂದ ಬಲವಾದ ಗಾಳಿಯನ್ನು ಬೀಸುವಂತೆ ಮಾಡಿದನು. ಗಾಳಿಯು ರಾತ್ರಿಯೆಲ್ಲಾ ಬೀಸಿತು. ಸಮುದ್ರವು ಇಬ್ಭಾಗವಾಗಿ ಮಧ್ಯದಲ್ಲಿ ಒಣನೆಲವಾಯಿತು. 22 ಇಸ್ರೇಲರು ಒಣನೆಲದ ಮೇಲೆ ಸಮುದ್ರವನ್ನು ದಾಟಿದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತು. 23 ಆಗ ಫರೋಹನು ತನ್ನ ಎಲ್ಲಾ ರಥಗಳೊಡನೆ ಮತ್ತು ರಾಹುತರೊಡನೆ ಅವರನ್ನು ಹಿಂಬಾಲಿಸಿ ಸಮುದ್ರದೊಳಕ್ಕೆ ಹೋದನು. 24 ಬೆಳಗಿನ ಜಾವ ಇನ್ನೂ ಮೊಬ್ಬಿರುವಾಗ, ಯೆಹೋವನು ಎತ್ತರವಾದ ಮೇಘಸ್ತಂಭದಿಂದ ಮತ್ತು ಅಗ್ನಿಸ್ತಂಭದಿಂದ ಈಜಿಪ್ಟಿನ ಸೈನ್ಯವನ್ನು ದೃಷ್ಟಿಸಿದನು. ಆಗ ಯೆಹೋವನು ಅವರ ಮೇಲೆ ಧಾಳಿಮಾಡಿ ಅವರ ಪಾಳೆಯದಲ್ಲಿ ಗಲಿಬಿಲಿಮಾಡಿದನು. 25 ರಥಗಳ ಚಕ್ರಗಳು ನೆಲಕ್ಕೆ ಅಂಟಿಕೊಂಡವು. ರಥಗಳನ್ನು ನಡಿಸುವುದು ಬಹುಕಷ್ಟವಾಗಿತ್ತು. ಈಜಿಪ್ಟಿನವರು “ನಾವು ಇಲ್ಲಿಂದ ಹೋಗೋಣ. ಯೆಹೋವನು ಈಜಿಪ್ಟಿನ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾನೆ. ಯೆಹೋವನು ಇಸ್ರೇಲರಿಗಾಗಿ ಯುದ್ಧ ಮಾಡುತ್ತಿದ್ದಾನೆ” ಎಂದು ಕೂಗಿಕೊಂಡರು.

26 ಆಗ ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಸಮುದ್ರದ ಮೇಲೆ ಚಾಚು; ನೀರು ಈಜಿಪ್ಟಿನವರ ರಥಗಳನ್ನು ಮತ್ತು ರಾಹುತರನ್ನು ಮುಚ್ಚಿಕೊಳ್ಳುವುದು” ಎಂದು ಹೇಳಿದನು.

27 ಆದ್ದರಿಂದ ಹಗಲಿನ ಬೆಳಕು ಪ್ರಕಾಶಿಸುವುದಕ್ಕಿಂತ ಸ್ವಲ್ಪ ಮೊದಲು, ಮೋಶೆಯು ತನ್ನ ಕೈಯನ್ನು ಸಮುದ್ರದ ಮೇಲೆ ಚಾಚಿದನು. ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿತು. ಈಜಿಪ್ಟಿನವರು ನೀರಿನಿಂದ ಓಡಿಹೋಗಲು ಬಹಳವಾಗಿ ಪ್ರಯತ್ನಿಸಿದರು. ಆದರೆ ಯೆಹೋವನು ಈಜಿಪ್ಟಿನವರನ್ನು ಸಮುದ್ರದಲ್ಲಿ ಕೆಡವಿಬಿಟ್ಟನು. 28 ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿ ರಥಗಳನ್ನು ಮತ್ತು ರಾಹುತರನ್ನು ಮುಚ್ಚಿಬಿಟ್ಟಿತು. ಸಮುದ್ರದೊಳಗೆ ಹೋಗಿದ್ದ ಇಸ್ರೇಲರನ್ನು ಬೆನ್ನಟ್ಟಿದ ಫರೋಹನ ಸೈನ್ಯವೆಲ್ಲಾ ನಾಶವಾಯಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.

29 ಆದರೆ ಇಸ್ರೇಲರು ಒಣನೆಲದಲ್ಲಿ ಸಮುದ್ರವನ್ನು ದಾಟಿದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತು. 30 ಆದ್ದರಿಂದ ಆ ದಿನ ಯೆಹೋವನು ಇಸ್ರೇಲರನ್ನು ಈಜಿಪ್ಟಿನವರಿಂದ ರಕ್ಷಿಸಿದನು. ಇಸ್ರೇಲರು ಕೆಂಪುಸಮುದ್ರದ ದಡದಲ್ಲಿ ಬಿದ್ದಿದ್ದ ಈಜಿಪ್ಟಿನವರ ಹೆಣಗಳನ್ನು ನೋಡಿದರು. 31 ಈಜಿಪ್ಟಿನವರನ್ನು ಯೆಹೋವನು ಸೋಲಿಸಿದಾಗ ಇಸ್ರೇಲರು ಆತನ ಮಹಾಶಕ್ತಿಯನ್ನು ನೋಡಿದರು. ಆದ್ದರಿಂದ ಜನರು ಯೆಹೋವನನ್ನು ಸನ್ಮಾನಿಸಿ ಆತನ ಸೇವಕನಾದ ಮೋಶೆಯಲ್ಲಿ ಭರವಸವಿಟ್ಟರು.

ಕೀರ್ತನೆಗಳು 114

114 ಇಸ್ರೇಲರು ಈಜಿಪ್ಟಿನಿಂದ ಹೊರಟರು.
    ಯಾಕೋಬ್ಯರು ಪರದೇಶದಿಂದ ಹೊರಟರು.
ಆಗ ಯೆಹೂದದ ಜನರು ದೇವರ ವಿಶೇಷ ಪ್ರಜೆಯಾದರು;
    ಇಸ್ರೇಲ್ ಆತನ ರಾಜ್ಯವಾಯಿತು.
ಕೆಂಪು ಸಮುದ್ರವು ಇದನ್ನು ಕಂಡು ಓಡಿಹೋಯಿತು.
    ಜೋರ್ಡನ್ ನದಿಯು ಹಿಂತಿರುಗಿ ಓಡಿಹೋಯಿತು.
ಬೆಟ್ಟಗಳು ಟಗರುಗಳಂತೆಯೂ
    ಗುಡ್ಡಗಳು ಕುರಿಮರಿಗಳಂತೆಯೂ ನೃತ್ಯಮಾಡಿದವು.

ಕೆಂಪು ಸಮುದ್ರವೇ, ನೀನೇಕೆ ಓಡಿಹೋದೆ?
    ಜೋರ್ಡನ್ ನದಿಯೇ ನೀನೇಕೆ ಹಿಂತಿರುಗಿ ಓಡಿಹೋದೆ?
ಬೆಟ್ಟಗಳೇ, ನೀವೇಕೆ ಟಗರುಗಳಂತೆಯೂ
    ಗುಡ್ಡಗಳೇ, ನೀವೇಕೆ ಕುರಿಮರಿಗಳಂತೆಯೂ ನೃತ್ಯಮಾಡಿದಿರಿ?

ಯಾಕೋಬನ ದೇವರೂ ಒಡೆಯನೂ ಆಗಿರುವ
    ಯೆಹೋವನ ಎದುರಿನಲ್ಲಿ ಭೂಮಿಯು ನಡುಗಿತು.
ಬಂಡೆಯೊಳಗಿಂದ ನೀರು ಹರಿದುಬರುವಂತೆ ಮಾಡಿದವನು ಆತನೇ.
    ಗಟ್ಟಿಯಾದ ಬಂಡೆಯೊಳಗಿಂದ ನೀರಿನ ಒರತೆಯನ್ನು ಬರಮಾಡಿದವನು ಆತನೇ.

ವಿಮೋಚನಕಾಂಡ 15:1-11

ಮೋಶೆಯ ಗೀತೆ

15 ಬಳಿಕ ಮೋಶೆ ಮತ್ತು ಇಸ್ರೇಲರು ಯೆಹೋವನಿಗೆ ಈ ಗೀತೆಯನ್ನು ಹಾಡತೊಡಗಿದರು:

“ನಾನು ಯೆಹೋವನಿಗೆ ಹಾಡುವೆನು.
    ಆತನು ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನು ಕುದುರೆಗಳನ್ನೂ ಸವಾರರನ್ನೂ
    ಸಮುದ್ರದೊಳಗೆ ಮುಳುಗಿಸಿದನು.
ಯೆಹೋವನೇ ನನ್ನ ಬಲ,
    ಆತನು ನನ್ನನ್ನು ರಕ್ಷಿಸುತ್ತಾನೆ.
    ನನ್ನ ಬಲವೂ ಕೀರ್ತನೆಯೂ ಯಾಹುವೇ; ಆತನಿಂದ ನನಗೆ ರಕ್ಷಣೆ ಆಯಿತು.
ಯೆಹೋವನು ನನ್ನ ದೇವರು.
    ಮತ್ತು ನಾನು ಆತನನ್ನು ಸ್ತುತಿಸುತ್ತೇನೆ.
ಯೆಹೋವನೇ ನಮ್ಮ ಪೂರ್ವಿಕರ ದೇವರು.
    ನಾನು ಆತನನ್ನು ಸನ್ಮಾನಿಸುತ್ತೇನೆ.
ಯೆಹೋವನೇ ಯುದ್ಧವೀರನು.
    ಆತನ ನಾಮಧೇಯವು ಯೆಹೋವನೇ.
ಆತನು ಫರೋಹನ ರಥಗಳನ್ನೂ
    ಸೈನಿಕರನ್ನೂ ಸಮುದ್ರದೊಳಗೆ ಕೆಡವಿದನು;
ಫರೋಹನ ಮಹಾವೀರರನ್ನು
    ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ಸಾಗರವು ಅವರನ್ನು ಮುಚ್ಚಿಕೊಂಡಿತು;
    ಆಳವಾದ ನೀರಿನಲ್ಲಿ ಅವರು ಬಂಡೆಗಳಂತೆ ಮುಳುಗಿದರು.

“ನಿನ್ನ ಭುಜಬಲವು ಎಷ್ಟೋ ಶಕ್ತಿಯುಳ್ಳದ್ದಾಗಿದೆ.
    ಯೆಹೋವನೇ, ನಿನ್ನ ಭುಜಬಲವು ವೈರಿಯನ್ನು ನುಚ್ಚುನೂರು ಮಾಡಿತು.
ನೀನು ಅತ್ಯಧಿಕ ಮಹತ್ವವುಳ್ಳವನಾಗಿ,
    ನಿನಗೆದುರು ನಿಲ್ಲುವವರನ್ನು ನಾಶಗೊಳಿಸಿದೆ.
ಬೆಂಕಿಯು ಹುಲ್ಲನ್ನು ಸುಡುವಂತೆ
    ನಿನ್ನ ಕೋಪವು ಅವರನ್ನು ನಾಶಮಾಡಿತು.
ನೀನು ಊದಿದ ಮಹಾಗಾಳಿಯಿಂದ
    ನೀರು ಒತ್ತಟ್ಟಿಗೆ ಸೇರಿತು.
ವೇಗವಾಗಿ ಹರಿಯುವ ನೀರು ಗಟ್ಟಿಯಾದ ಗೋಡೆಯಾಯಿತು.
    ಸಾಗರಗರ್ಭದೊಳಗಿನ ಜಲವು ಗಟ್ಟಿಯಾಯಿತು.

“‘ನಾವು ಅವರನ್ನು ಬೆನ್ನಟ್ಟಿ ಹಿಡಿಯುವೆವು;
    ನಾವು ಅವರ ಸಂಪತ್ತನ್ನೆಲ್ಲಾ ತೆಗೆದುಕೊಳ್ಳುವೆವು.
ನಾವು ಖಡ್ಗದಿಂದ ಅವರನ್ನು ಸಂಹರಿಸುವೆವು.
    ನಮ್ಮ ಭುಜಬಲದಿಂದ ಅವರ ಸ್ವತ್ತುಗಳನ್ನೆಲ್ಲಾ ವಶಪಡಿಸಿಕೊಳ್ಳುವೆವು’
    ಎಂದುಕೊಂಡರು ವೈರಿಗಳು.
10 ಆದರೆ ನೀನು ಅವರ ಮೇಲೆ ಊದಿದ ಗಾಳಿಯಿಂದ
    ಸಮುದ್ರವು ಅವರನ್ನು ಮುಚ್ಚಿಕೊಂಡಿತು;
ಅವರು ಸೀಸದಂತೆ
    ಅಗಾಧವಾದ ಸಮುದ್ರದಲ್ಲಿ ಮುಳುಗಿದರು.

11 “ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು?
    ಪರಿಶುದ್ಧತೆಯಲ್ಲಿ ನೀನೇ ಸರ್ವೋತ್ತಮನು.
    ಭಯಂಕರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿಹೊಂದಿದವನೂ ನೀನೇ.
    ಅದ್ಭುತಕಾರ್ಯಗಳನ್ನು ಮಾಡುವಾತನೂ ನೀನೇ.

ವಿಮೋಚನಕಾಂಡ 15:20-21

20 ಆರೋನನ ಅಕ್ಕ ಮಿರ್ಯಾಮಳು ಪ್ರವಾದಿನಿಯಾಗಿದ್ದು ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು. ಮಿರ್ಯಾಮಳು ಮತ್ತು ಸ್ತ್ರೀಯರು ಹಾಡುವುದಕ್ಕೂ ಕುಣಿಯುವುದಕ್ಕೂ ಪ್ರಾರಂಭಿಸಿದರು. 21 ಮಿರ್ಯಾಮಳು ಅವರ ಹಾಡಿಗೆ ಹೀಗೆ ಪಲ್ಲವಿ ಹಾಡಿದಳು:

“ಯೆಹೋವನಿಗೆ ಗಾನಮಾಡಿರಿ;
    ಆತನು ಮಹಾಜಯಶಾಲಿಯಾದನು.
ಕುದುರೆಗಳನ್ನೂ ರಾಹುತರನ್ನೂ
    ಸಮುದ್ರದೊಳಗೆ ಮುಳುಗಿಸಿ ನಾಶಮಾಡಿದನು…”

ರೋಮ್ನಗರದವರಿಗೆ 14:1-12

ಬೇರೆಯವರನ್ನು ಟೀಕಿಸಬೇಡಿ

14 ನಂಬಿಕೆಯಲ್ಲಿ ಬಲಹೀನನಾಗಿರುವ ವ್ಯಕ್ತಿಯನ್ನು ನಿಮ್ಮ ಸಮುದಾಯಕ್ಕೆ ಸೇರಿಸಿಕೊಳ್ಳಿರಿ. ಅವನ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಅವನೊಂದಿಗೆ ವಾಗ್ವಾದ ಮಾಡಬೇಡಿ. ಒಬ್ಬನು ಯಾವ ಬಗೆಯ ಆಹಾರವನ್ನಾದರೂ ತಿನ್ನಬಹುದೆಂದು ಭಾವಿಸುತ್ತಾನೆ. ಆದರೆ ನಂಬಿಕೆಯಲ್ಲಿ ಬಲಹೀನನಾಗಿರುವ ವ್ಯಕ್ತಿಯು ತಾನು ತರಕಾರಿಗಳನ್ನು ಮಾತ್ರ ತಿನ್ನಬಹುದೆಂದು ಭಾವಿಸುತ್ತಾನೆ. ಯಾವ ಬಗೆಯ ಆಹಾರವನ್ನಾದರೂ ತಿನ್ನಬಹುದೆಂದು ನಂಬುವ ವ್ಯಕ್ತಿಯು ತರಕಾರಿಯನ್ನು ಮಾತ್ರ ತಿನ್ನುವ ವ್ಯಕ್ತಿಗಿಂತ ತನ್ನನ್ನು ಉತ್ತಮನೆಂದು ಭಾವಿಸಿಕೊಳ್ಳಕೂಡದು. ಅಂತೆಯೇ, ತರಕಾರಿಗಳನ್ನು ಮಾತ್ರ ತಿನ್ನುವ ವ್ಯಕ್ತಿಯು ಎಲ್ಲಾ ಆಹಾರಪದಾರ್ಥಗಳನ್ನು ತಿನ್ನುವ ವ್ಯಕ್ತಿಯನ್ನು ತಪ್ಪಿತಸ್ಥನೆಂದು ನಿರ್ಣಯಿಸಕೂಡದು. ದೇವರು ಆ ವ್ಯಕ್ತಿಯನ್ನೂ ಸ್ವೀಕರಿಸಿಕೊಂಡಿದ್ದಾನೆ. ನೀನು ಮತ್ತೊಬ್ಬ ವ್ಯಕ್ತಿಯ ಸೇವಕನಿಗೆ ತೀರ್ಪು ಮಾಡಕೂಡದು. ಅವನು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬುದನ್ನು ಅವನ ಸ್ವಂತ ಯಜಮಾನನೇ ನಿರ್ಣಯಿಸುವನು. ಪ್ರಭುವಿನ ಸೇವಕನು ನಿರ್ದೋಷಿಯಾಗಿರುತ್ತಾನೆ, ಏಕೆಂದರೆ ಪ್ರಭುವು ಅವನನ್ನು ನಿರ್ದೋಷಿಯನ್ನಾಗಿ ಮಾಡಲು ಶಕ್ತನಾಗಿದ್ದಾನೆ.

ಒಬ್ಬನು ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ಹೆಚ್ಚು ಮುಖ್ಯವೆಂದು ನಂಬಬಹುದು. ಆದರೆ ಇನ್ನೊಬ್ಬನು ಎಲ್ಲಾ ದಿನಗಳು ಒಂದೇ ಎಂದು ನಂಬಬಹುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಮನಸ್ಸಿನಲ್ಲಿರುವ ತನ್ನ ಸ್ವಂತ ನಂಬಿಕೆಯ ಬಗ್ಗೆ ನಿಶ್ಚಯದಿಂದಿರಬೇಕು. ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ಮುಖ್ಯವೆಂದು ಯೋಚಿಸುವ ವ್ಯಕ್ತಿಯು ಪ್ರಭುವಿಗೋಸ್ಕರವಾಗಿಯೇ ಹಾಗೆ ಯೋಚಿಸುವವನಾಗಿದ್ದಾನೆ. ಅಂತೆಯೇ ಎಲ್ಲಾ ಬಗೆಯ ಆಹಾರಪದಾರ್ಥಗಳನ್ನು ತಿನ್ನುವ ವ್ಯಕ್ತಿಯು ಪ್ರಭುವಿಗೋಸ್ಕರವೇ ಅವುಗಳನ್ನು ತಿನ್ನುತ್ತಾನೆ. ಹೌದು, ಅವನು ಆ ಆಹಾರಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ.

ಹೌದು, ನಾವೆಲ್ಲರೂ ಪ್ರಭುವಿಗೋಸ್ಕರವೇ ಜೀವಿಸುವವರಾಗಿದ್ದೇವೆ. ನಾವು ಜೀವಿಸುವುದಾಗಲಿ ಸಾಯುವುದಾಗಲಿ ನಮಗೋಸ್ಕರವಲ್ಲ. ನಾವು ಬದುಕುವುದಾಗಿದ್ದರೆ, ಪ್ರಭುವಿಗೋಸ್ಕರ ಬದುಕುತ್ತೇವೆ; ಸಾಯುವುದಾಗಿದ್ದರೆ, ಪ್ರಭುವಿಗೋಸ್ಕರ ಸಾಯುತ್ತೇವೆ. ಆದ್ದರಿಂದ ಬದುಕಿದರೂ ಸತ್ತರೂ ನಾವು ಪ್ರಭುವಿಗೆ ಸೇರಿದವರಾಗಿದ್ದೇವೆ. ಆದಕಾರಣ, ಮತ್ತೆ ಜೀವಿಸುವುದಕ್ಕಾಗಿಯೇ ಕ್ರಿಸ್ತನು ಸತ್ತು ಸಮಾಧಿಯೊಳಗಿಂದ ಜೀವಂತನಾಗಿ ಎದ್ದುಬಂದನು. ಸತ್ತುಹೋದ ಜನರಿಗೂ ಬದುಕಿರುವ ಜನರಿಗೂ ತಾನು ಪ್ರಭುವಾಗಿರಬೇಕೆಂದು ಆತನು ಹೀಗೆ ಮಾಡಿದನು.

10 ಹೀಗಿರಲು, ಕ್ರಿಸ್ತನಲ್ಲಿ ನಿನ್ನ ಸಹೋದರನಾಗಿರುವವನನ್ನು ನೀನು ಟೀಕಿಸುವುದೇಕೆ? ನೀನು ನಿನ್ನ ಸಹೋದರಿನಿಗಿಂತಲೂ ಉತ್ತಮನೆಂದು ಯೋಚಿಸುವುದೇಕೆ? ನಾವೆಲ್ಲರೂ ದೇವರ ಮುಂದೆ ನಿಂತುಕೊಳ್ಳುವೆವು, ಆಗ ಆತನು ನಮ್ಮೆಲ್ಲರಿಗೂ ತೀರ್ಪು ಕೊಡುವನು. 11 ಹೌದು, ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:

“‘ಪ್ರತಿಯೊಬ್ಬನೂ ನನಗೆ ಅಡ್ಡಬೀಳುವನು.
    ಪ್ರತಿಯೊಬ್ಬನೂ ನನ್ನನ್ನು ದೇವರೆಂದು ಹೇಳುವನು.
    ನನ್ನ ಜೀವದಾಣೆಯಾಗಿಯೂ ಈ ಸಂಗತಿಗಳು ನೆರವೇರುತ್ತವೆ’ ಎನ್ನುತ್ತಾನೆ ಪ್ರಭುವು.”(A)

12 ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮನಮ್ಮ ಜೀವಿತದ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕು.

ಮತ್ತಾಯ 18:21-35

ಕ್ಷಮಾಪಣೆಯನ್ನು ಕುರಿತ ಸಾಮ್ಯ

21 ಆಗ ಪೇತ್ರನು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ಸಹೋದರನು ನನಗೆ ಯಾವುದಾದರೂ ತಪ್ಪು ಮಾಡುತ್ತಲೇ ಇದ್ದರೆ ನಾನು ಎಷ್ಟು ಸಲ ಅವನನ್ನು ಕ್ಷಮಿಸಬೇಕು? ನಾನು ಅವನನ್ನು ಏಳು ಸಲ ಕ್ಷಮಿಸಬೇಕೋ?” ಎಂದು ಕೇಳಿದನು.

22 ಯೇಸು, “ಏಳು ಸಲಕ್ಕಿಂತಲೂ ಹೆಚ್ಚಾಗಿ ಕ್ಷಮಿಸಬೇಕು. ಅವನು ನಿನಗೆ ಎಪ್ಪತ್ತೇಳು ಸಲ ತಪ್ಪು ಮಾಡಿದರೂ ನೀನು ಅವನನ್ನು ಕ್ಷಮಿಸುತ್ತಲೇ ಇರಬೇಕೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

23 “ಪರಲೋಕರಾಜ್ಯವು ತನ್ನ ಸೇವಕರು ತನಗೆ ಕೊಡಬೇಕಿದ್ದ ಸಾಲದ ಹಣವನ್ನು ವಸೂಲಿ ಮಾಡಲು ತೀರ್ಮಾನಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ. 24 ರಾಜನು ತನ್ನ ಹಣವನ್ನು ವಸೂಲಿ ಮಾಡುವುದಕ್ಕೆ ಪ್ರಾರಂಭಿಸಿದನು. ಒಬ್ಬ ಸೇವಕನು ಹತ್ತು ಸಾವಿರ ಬೆಳ್ಳಿಯ ನಾಣ್ಯಗಳನ್ನು ರಾಜನಿಗೆ ಸಾಲ ಕೊಡಬೇಕಿತ್ತು. 25 ಆ ಸೇವಕನು ತನ್ನ ಯಜಮಾನನಾದ ರಾಜನಿಗೆ ಹಣವನ್ನು ಕೊಡಲು ಸಮರ್ಥನಾಗಿರಲಿಲ್ಲ. ಆದ್ದರಿಂದ ಆ ಸೇವಕನನ್ನು ಮತ್ತು ಅವನಲ್ಲಿದ್ದ ಪ್ರತಿಯೊಂದನ್ನೂ ಅವನ ಹೆಂಡತಿ ಮತ್ತು ಮಕ್ಕಳ ಸಮೇತವಾಗಿ ಮಾರಿ, ಬಂದ ಹಣವನ್ನೆಲ್ಲಾ ಕೊಡಬೇಕಾದ ಸಾಲಕ್ಕೆ ವಜಾ ಮಾಡಬೇಕೆಂದು ರಾಜನು ಆಜ್ಞಾಪಿಸಿದನು.

26 “ಆಗ ಸೇವಕನು ರಾಜನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆ ತಂದುಕೊಳ್ಳಿ. ನಾನು ನಿಮಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ.’ ಎಂದು ಬೇಡಿಕೊಂಡನು. 27 ರಾಜನು ತನ್ನ ಸೇವಕನ ವಿಷಯದಲ್ಲಿ ದುಃಖಪಟ್ಟು ಅವನು ಕೊಡಬೇಕಾದ ಸಾಲವನ್ನು ಮನ್ನಿಸಿ ಅವನನ್ನು ಬಿಡುಗಡೆ ಮಾಡಿದನು.

28 “ತರುವಾಯ, ಅದೇ ಸೇವಕನು ತನಗೆ ನೂರು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕಾಗಿದ್ದ ಬೇರೊಬ್ಬ ಸೇವಕನನ್ನು ಕಂಡು ಅವನ ಕುತ್ತಿಗೆ ಹಿಡಿದು, ‘ನೀನು ನನಗೆ ಕೊಡಬೇಕಾಗಿರುವ ಹಣವನ್ನು ಕೊಡು’ ಎಂದನು.

29 “ಆ ಸೇವಕನು ಅವನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆಯಿಂದಿರು. ನಾನು ನಿನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ’ ಎಂದು ಬೇಡಿಕೊಂಡನು.

30 “ಆದರೆ ಮೊದಲನೇ ಸೇವಕನು ತಾಳಿಕೊಳ್ಳಲಿಲ್ಲ. ತನಗೆ ಸಾಲ ಕೊಡಬೇಕಾಗಿದ್ದ ಸೇವಕನ ವಿಷಯದಲ್ಲಿ ನ್ಯಾಯಾಧಿಪತಿಗೆ ದೂರುಕೊಟ್ಟು ಅವನನ್ನು ಸೆರೆಮನೆಗೆ ಹಾಕಿಸಿದನು. ಆ ಸೇವಕನು ಸಾಲ ತೀರಿಸುವವರೆಗೂ ಸೆರೆಮನೆಯಲ್ಲಿ ಇರಬೇಕಾಯಿತು. 31 ಇದನ್ನು ಕಂಡ ಇತರ ಸೇವಕರೆಲ್ಲರೂ ಬಹಳವಾಗಿ ದುಃಖಪಟ್ಟು ನಡೆದ ಸಂಗತಿಯನ್ನೆಲ್ಲಾ ಯಜಮಾನನಿಗೆ ತಿಳಿಸಿದರು.”

32 “ಆಗ ಯಜಮಾನನು ತನ್ನ ಸೇವಕನನ್ನು ಒಳಗೆ ಕರೆದು, ‘ನೀನು ದುಷ್ಟ ಸೇವಕನು. ನೀನು ನನಗೆ ಹೆಚ್ಚು ಹಣ ಕೊಡಬೇಕಾಗಿತ್ತು. ಆದರೆ ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲ ನಾನು ಮನ್ನಿಸಿಬಿಟ್ಟೆ. 33 ಹೀಗಿರಲು ನಾನು ನಿನಗೆ ಕರುಣೆ ತೋರಿದಂತೆ ನಿನ್ನ ಜೊತೆ ಸೇವಕನಿಗೂ ನೀನು ಕರುಣೆ ತೋರಿಸಬೇಕಿತ್ತು’ ಎಂದು ಹೇಳಿ 34 ಬಹುಕೋಪಗೊಂಡು ಅವನನ್ನು ಶಿಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸಿದನು. ಆ ಸೇವಕನು ತನ್ನ ಸಾಲವನ್ನೆಲ್ಲಾ ತೀರಿಸುವ ತನಕ ಸೆರೆಮನೆಯಲ್ಲಿ ಇರಬೇಕಾಯಿತು.

35 “ಪರಲೋಕದ ನನ್ನ ತಂದೆಯು ನಿಮಗೆ ಮಾಡುವಂತೆಯೇ ಈ ರಾಜನು ಮಾಡಿದನು. ನೀವು ನಿಮ್ಮ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ನಿಜವಾಗಿಯೂ ಕ್ಷಮಿಸಬೇಕು. ಇಲ್ಲದಿದ್ದರೆ ಪರಲೋಕದ ನನ್ನ ತಂದೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International