Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 114

114 ಇಸ್ರೇಲರು ಈಜಿಪ್ಟಿನಿಂದ ಹೊರಟರು.
    ಯಾಕೋಬ್ಯರು ಪರದೇಶದಿಂದ ಹೊರಟರು.
ಆಗ ಯೆಹೂದದ ಜನರು ದೇವರ ವಿಶೇಷ ಪ್ರಜೆಯಾದರು;
    ಇಸ್ರೇಲ್ ಆತನ ರಾಜ್ಯವಾಯಿತು.
ಕೆಂಪು ಸಮುದ್ರವು ಇದನ್ನು ಕಂಡು ಓಡಿಹೋಯಿತು.
    ಜೋರ್ಡನ್ ನದಿಯು ಹಿಂತಿರುಗಿ ಓಡಿಹೋಯಿತು.
ಬೆಟ್ಟಗಳು ಟಗರುಗಳಂತೆಯೂ
    ಗುಡ್ಡಗಳು ಕುರಿಮರಿಗಳಂತೆಯೂ ನೃತ್ಯಮಾಡಿದವು.

ಕೆಂಪು ಸಮುದ್ರವೇ, ನೀನೇಕೆ ಓಡಿಹೋದೆ?
    ಜೋರ್ಡನ್ ನದಿಯೇ ನೀನೇಕೆ ಹಿಂತಿರುಗಿ ಓಡಿಹೋದೆ?
ಬೆಟ್ಟಗಳೇ, ನೀವೇಕೆ ಟಗರುಗಳಂತೆಯೂ
    ಗುಡ್ಡಗಳೇ, ನೀವೇಕೆ ಕುರಿಮರಿಗಳಂತೆಯೂ ನೃತ್ಯಮಾಡಿದಿರಿ?

ಯಾಕೋಬನ ದೇವರೂ ಒಡೆಯನೂ ಆಗಿರುವ
    ಯೆಹೋವನ ಎದುರಿನಲ್ಲಿ ಭೂಮಿಯು ನಡುಗಿತು.
ಬಂಡೆಯೊಳಗಿಂದ ನೀರು ಹರಿದುಬರುವಂತೆ ಮಾಡಿದವನು ಆತನೇ.
    ಗಟ್ಟಿಯಾದ ಬಂಡೆಯೊಳಗಿಂದ ನೀರಿನ ಒರತೆಯನ್ನು ಬರಮಾಡಿದವನು ಆತನೇ.

ವಿಮೋಚನಕಾಂಡ 14:1-18

14 ಬಳಿಕ ಯೆಹೋವನು ಮೋಶೆಗೆ, “ಪೀಹಹೀರೋತಿನ ಪೂರ್ವಕಡೆಯಲ್ಲಿ ಪ್ರಯಾಣ ಮಾಡಿ ಬಾಳ್ಚೆಫೋನಿಗೆ ಸಮೀಪದಲ್ಲಿರುವ ಮಿಗ್ದೋಲ್ ಮತ್ತು ಕೆಂಪು ಸಮುದ್ರದ ನಡುವೆ ಇಳಿದುಕೊಳ್ಳಬೇಕೆಂದು ಇಸ್ರೇಲರಿಗೆ ಆಜ್ಞಾಪಿಸು. ಇಸ್ರೇಲರು ಅರಣ್ಯದಲ್ಲಿ ದಾರಿ ತಪ್ಪಿದರು; ಅವರಿಗೆ ಹೋಗಲು ಯಾವ ಸ್ಥಳವೂ ಇರುವುದಿಲ್ಲ ಎಂದು ಫರೋಹನು ಭಾವಿಸುವನು. ನಾನು ಫರೋಹನ ಹೃದಯವನ್ನು ಕಠಿಣಪಡಿಸುವುದರಿಂದ ಅವನು ನಿಮ್ಮನ್ನು ಬೆನ್ನಟ್ಟುವನು. ಆದರೆ ನಾನು ಫರೋಹನನ್ನು ಮತ್ತು ಅವನ ಸೈನ್ಯವನ್ನು ಸೋಲಿಸುವೆನು. ಇದು ನನಗೆ ಗೌರವವನ್ನು ತರುವುದು. ಆಗ ನಾನೇ ಯೆಹೋವನೆಂದು ಈಜಿಪ್ಟಿನ ಜನರು ತಿಳಿದುಕೊಳ್ಳುವರು” ಎಂದು ಹೇಳಿದನು. ಇಸ್ರೇಲರು ದೇವರಿಗೆ ವಿಧೇಯರಾಗಿ ಆತನು ಹೇಳಿದ್ದನ್ನು ಮಾಡಿದರು.

ಫರೋಹನು ಇಸ್ರೇಲರನ್ನು ಬೆನ್ನಟ್ಟಿದ್ದು

ಇಸ್ರೇಲರು ತಪ್ಪಿಸಿಕೊಂಡರೆಂಬ ವರದಿಯನ್ನು ಕೇಳಿದಾಗ, ಫರೋಹನ ಮತ್ತು ಅವನ ಅಧಿಕಾರಿಗಳ ಮನಸ್ಸುಗಳು ಬದಲಾದವು. ಫರೋಹನು, “ಇಸ್ರೇಲರನ್ನು ನಾವು ಯಾಕೆ ಹೋಗಲು ಬಿಟ್ಟೆವು? ಅಯ್ಯೋ, ನಾವೀಗ ನಮ್ಮ ಗುಲಾಮರನ್ನು ಕಳೆದುಕೊಂಡೆವಲ್ಲಾ!” ಎಂದು ಹೇಳಿದನು.

ಆದ್ದರಿಂದ ಫರೋಹನು ತನ್ನ ರಥವನ್ನು ಸಿದ್ಧಮಾಡಿಕೊಂಡು ತನ್ನೊಡನೆ ತನ್ನ ಜನರನ್ನು ಕರೆದುಕೊಂಡನು. ಫರೋಹನು ತನ್ನ ಆರುನೂರು ರಥಗಳನ್ನೂ ಅವುಗಳ ಚಾಲಕರನ್ನೂ ಮತ್ತು ಅವುಗಳೊಡನೆ ಈಜಿಪ್ಟಿನ ಇತರ ರಥಗಳನ್ನೂ ತೆಗೆದುಕೊಂಡನು. ಪ್ರತಿಯೊಂದು ರಥದಲ್ಲಿ ಒಬ್ಬ ದಳಪತಿ ಇದ್ದನು. ಇಸ್ರೇಲರು ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ಧೈರ್ಯದಿಂದ ಹೋಗುತ್ತಿದ್ದರು. ಆದರೆ ಈಜಿಪ್ಟಿನ ಅರಸನಾದ ಫರೋಹನ ಹೃದಯವನ್ನು ಯೆಹೋವನು ಕಠಿಣಗೊಳಿಸಿದ್ದರಿಂದ ಅವನು ಇಸ್ರೇಲರನ್ನು ಬೆನ್ನಟ್ಟಿದನು.

ಈಜಿಪ್ಟಿನ ಸೈನ್ಯದಲ್ಲಿ ಅನೇಕ ರಾಹುತರು ಇದ್ದರು; ರಥಗಳೂ ಇದ್ದವು. ಅವರು ಇಸ್ರೇಲರನ್ನು ಬೆನ್ನಟ್ಟಿದರು. ಇಸ್ರೇಲರು ಪೀಹಹೀರೋತಿನ ಹತ್ತಿರವಿರುವ ಬಾಳ್ಚೆಫೋನಿನ ಎದುರಾಗಿ ಸಮುದ್ರತೀರದಲ್ಲಿ ಇಳಿದುಕೊಳ್ಳುವಾಗಲೇ ಈಜಿಪ್ಟಿನ ಸೈನ್ಯದವರು ಅವರ ಹತ್ತಿರಕ್ಕೆ ಬಂದರು.

10 ಫರೋಹನೂ ಅವನ ಸೈನ್ಯವೂ ತಮ್ಮ ಕಡೆಗೆ ಬರುತ್ತಿರುವುದನ್ನು ಇಸ್ರೇಲರು ಕಂಡು ಬಹಳ ಭಯಪಟ್ಟರು. ಅವರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು. 11 ಅವರು ಮೋಶೆಗೆ, “ನೀನು ಯಾಕೆ ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆ? ನಮ್ಮನ್ನು ಅರಣ್ಯದಲ್ಲಿ ಸಾಯಿಸುವುದಕ್ಕೆ ನೀನು ನಮ್ಮನ್ನು ಕರೆದುಕೊಂಡು ಬಂದೆಯಾ? ನಾವು ಈಜಿಪ್ಟಿನಲ್ಲಿಯೇ ಸಮಾಧಾನದಿಂದ ಸಾಯಬಹುದಾಗಿತ್ತಲ್ಲವೆ? ಈಜಿಪ್ಟಿನಲ್ಲಿ ಸಾಕಷ್ಟು ಸಮಾಧಿಗಳಿದ್ದವು. 12 ನಾವು ನಿನಗೆ ಈಜಿಪ್ಟಿನಲ್ಲೇ, ‘ದಯಮಾಡಿ ನಮ್ಮ ಗೊಡವೆಗೆ ಬರಬೇಡ. ನಾವು ಇಲ್ಲಿದ್ದುಕೊಂಡು ಈಜಿಪ್ಟಿನವರ ಸೇವೆಮಾಡಲು ಬಿಡು’ ಎಂದು ಹೇಳಿದ್ದೆವು. ನಾವು ಇಲ್ಲಿಗೆ ಬಂದು ಅರಣ್ಯದಲ್ಲಿ ಸಾಯುವುದಕ್ಕಿಂತ, ಅಲ್ಲೇ ಗುಲಾಮರಾಗಿ ಇದ್ದಿದ್ದರೆ ಒಳ್ಳೆಯದಾಗಿರುತ್ತಿತ್ತು” ಎಂದು ಹೇಳಿದರು.

13 ಆದರೆ ಮೋಶೆ ಆ ಜನರಿಗೆ, “ಭಯಪಡಬೇಡಿರಿ! ಓಡಿಹೋಗಬೇಡಿರಿ! ಇಲ್ಲೇ ಇದ್ದು ಯೆಹೋವನು ಈ ದಿನ ನಿಮ್ಮನ್ನು ರಕ್ಷಿಸುವುದನ್ನು ನೋಡಿರಿ. ಈ ದಿನದ ನಂತರ ನೀವು ಇನ್ನೆಂದಿಗೂ ಈ ಈಜಿಪ್ಟಿನವರನ್ನು ನೋಡುವುದಿಲ್ಲ. 14 ಯೆಹೋವನು ನಿಮಗೋಸ್ಕರ ಯುದ್ಧಮಾಡುವನು. ಆದ್ದರಿಂದ ನೀವು ಸುಮ್ಮನೆ ಇರಿ” ಎಂದು ಹೇಳಿದನು.

15 ಆಗ ಯೆಹೋವನು ಮೋಶೆಗೆ, “ನೀನು ನನಗೆ ಮೊರೆಯಿಡುತ್ತಿರುವುದೇಕೆ? ಇಸ್ರೇಲರಿಗೆ ಮುಂದೆ ಹೋಗಲು ಆಜ್ಞಾಪಿಸು. 16 ನಿನ್ನ ಕೈಯಲ್ಲಿರುವ ಊರುಗೋಲನ್ನು ಕೆಂಪುಸಮುದ್ರದ ಮೇಲೆ ಚಾಚು. ಆಗ ಸಮುದ್ರವು ಇಬ್ಭಾಗವಾಗುವುದು. ಜನರು ಒಣನೆಲದ ಮೇಲೆ ಸಮುದ್ರವನ್ನು ದಾಟಬಹುದು. 17 ಈಜಿಪ್ಟಿನವರು ನಿಮ್ಮನ್ನು ಬೆನ್ನಟ್ಟುವಂತೆ ನಾನು ಅವರ ಹೃದಯಗಳನ್ನು ಕಠಿಣಗೊಳಿಸುವುದರಿಂದ ನಾನು ಫರೋಹನಿಗಿಂತಲೂ ಅವನ ಎಲ್ಲಾ ರಾಹುತರುಗಳಿಗಿಂತಲೂ ರಥಗಳಿಗಿಂತಲೂ ಶಕ್ತಿಶಾಲಿ ಎಂಬುದನ್ನು ನಿಮಗೆ ತೋರಿಸುವೆನು. 18 ಆಗ ನಾನೇ ಯೆಹೋವನೆಂದು ಈಜಿಪ್ಟಿಗೆ ತಿಳಿಯುವುದು. ನಾನು ಫರೋಹನನ್ನೂ ಅವನ ರಾಹುತರನ್ನೂ ರಥಗಳನ್ನೂ ಸೋಲಿಸಿದಾಗ ಅವರು ನನ್ನನ್ನು ಸನ್ಮಾನಿಸುವರು” ಎಂದು ಹೇಳಿದನು.

ಅಪೊಸ್ತಲರ ಕಾರ್ಯಗಳು 7:9-16

“ಈ ಪಿತೃಗಳು ಯೋಸೇಫನ (ಅವರು ತಮ್ಮ) ಮೇಲೆ ಹೊಟ್ಟೆಕಿಚ್ಚುಪಟ್ಟರು. ಅವರು ಯೋಸೇಫನನ್ನು ಈಜಿಪ್ಟಿನ ಜನರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಯೋಸೇಫನೊಂದಿಗೆ ಇದ್ದನು. 10 ಯೋಸೇಫನಿಗೆ ಅಲ್ಲಿ ಅನೇಕ ತೊಂದರೆಗಳು ಬಂದವು. ಆದರೆ ದೇವರು ಆ ಎಲ್ಲಾ ತೊಂದರೆಗಳಿಂದ ಅವನನ್ನು ರಕ್ಷಿಸಿದನು. ಆಗ ಫರೋಹನು ಈಜಿಪ್ಟಿನ ರಾಜನಾಗಿದ್ದನು. ದೇವರು ಯೋಸೇಫನಿಗೆ ಕೊಟ್ಟ ಜ್ಞಾನದ ದೆಸೆಯಿಂದ ಫರೋಹನು ಯೋಸೇಫನನ್ನು ಇಷ್ಟಪಟ್ಟನು ಮತ್ತು ಗೌರವಿಸಿದನು. ಫರೋಹನು ಯೋಸೇಫನನ್ನು ಈಜಿಪ್ಟಿನ ರಾಜ್ಯಪಾಲನನ್ನಾಗಿಯೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರ ಮೇಲೆ ಅಧಿಪತಿಯನ್ನಾಗಿಯೂ ಮಾಡಿದನು. 11 ಆದರೆ ಈಜಿಪ್ಟಿನಲ್ಲಿ ಮತ್ತು ಕಾನಾನಿನಲ್ಲಿ ಬರಗಾಲ ಉಂಟಾಯಿತು. ಆಹಾರವಿಲ್ಲದೆ ನಮ್ಮ ಪಿತೃಗಳಿಗೆ ಬಹಳ ಕಷ್ಟವಾಯಿತು.

12 “ಆದರೆ ಈಜಿಪ್ಟಿನಲ್ಲಿ ಆಹಾರವನ್ನು ಸಂಗ್ರಹಿಸಲಾಗಿದೆ ಎಂಬ ಸುದ್ದಿಯನ್ನು ಯಾಕೋಬನು ಕೇಳಿ, ನಮ್ಮ ಪಿತೃಗಳನ್ನು ಅಲ್ಲಿಗೆ ಕಳುಹಿಸಿದನು. (ಇದು ಈಜಿಪ್ಟಿಗೆ ಅವರ ಮೊದಲ ಪ್ರಯಾಣ.) 13 ಬಳಿಕ ಅವರು ಅಲ್ಲಿಗೆ ಎರಡನೆಯ ಸಲ ಹೋದರು. ಈ ಸಲ, ತಾನು ಯಾರೆಂಬುದನ್ನು ಯೋಸೇಫನು ತನ್ನ ಸಹೋದರರಿಗೆ ತಿಳಿಸಿದನು ಮತ್ತು ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ತಿಳಿಯಿತು. 14 ಬಳಿಕ, ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಮತ್ತು ಸಂಬಂಧಿಕರನ್ನು (ಅವರೆಲ್ಲರು ಒಟ್ಟಿಗೆ ಎಪ್ಪತ್ತೈದು ಮಂದಿ) ಈಜಿಪ್ಟಿಗೆ ಆಹ್ವಾನಿಸಲು ಕೆಲವು ಜನರನ್ನು ಕಳುಹಿಸಿದನು. 15 ಆದ್ದರಿಂದ ಯಾಕೋಬನು ಈಜಿಪ್ಟಿಗೆ ಹೋದನು. ಯಾಕೋಬನು ಮತ್ತು ನಮ್ಮ ಪಿತೃಗಳು ತಾವು ಸಾಯುವವರೆಗೆ ಅಲ್ಲೇ ಇದ್ದರು. 16 ಬಳಿಕ ಅವರ ದೇಹಗಳನ್ನು ಶೇಕೆಮಿಗೆ ಸಾಗಿಸಲಾಯಿತು. ಅಲ್ಲಿಯ ಸಮಾಧಿಯೊಂದರಲ್ಲಿ ಅವರನ್ನು ಹೂಳಲಾಯಿತು. (ಅಬ್ರಹಾಮನು ಹಾಮೋರನ ಗಂಡುಮಕ್ಕಳಿಂದ ಕೊಂಡುಕೊಂಡದ್ದು ಈ ಸಮಾಧಿಯನ್ನೇ. ಅವನು ಅವರಿಗೆ ಬೆಳ್ಳಿಯನ್ನು ಕ್ರಯವಾಗಿ ಕೊಟ್ಟಿದ್ದನು.)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International