Revised Common Lectionary (Semicontinuous)
114 ಇಸ್ರೇಲರು ಈಜಿಪ್ಟಿನಿಂದ ಹೊರಟರು.
ಯಾಕೋಬ್ಯರು ಪರದೇಶದಿಂದ ಹೊರಟರು.
2 ಆಗ ಯೆಹೂದದ ಜನರು ದೇವರ ವಿಶೇಷ ಪ್ರಜೆಯಾದರು;
ಇಸ್ರೇಲ್ ಆತನ ರಾಜ್ಯವಾಯಿತು.
3 ಕೆಂಪು ಸಮುದ್ರವು ಇದನ್ನು ಕಂಡು ಓಡಿಹೋಯಿತು.
ಜೋರ್ಡನ್ ನದಿಯು ಹಿಂತಿರುಗಿ ಓಡಿಹೋಯಿತು.
4 ಬೆಟ್ಟಗಳು ಟಗರುಗಳಂತೆಯೂ
ಗುಡ್ಡಗಳು ಕುರಿಮರಿಗಳಂತೆಯೂ ನೃತ್ಯಮಾಡಿದವು.
5 ಕೆಂಪು ಸಮುದ್ರವೇ, ನೀನೇಕೆ ಓಡಿಹೋದೆ?
ಜೋರ್ಡನ್ ನದಿಯೇ ನೀನೇಕೆ ಹಿಂತಿರುಗಿ ಓಡಿಹೋದೆ?
6 ಬೆಟ್ಟಗಳೇ, ನೀವೇಕೆ ಟಗರುಗಳಂತೆಯೂ
ಗುಡ್ಡಗಳೇ, ನೀವೇಕೆ ಕುರಿಮರಿಗಳಂತೆಯೂ ನೃತ್ಯಮಾಡಿದಿರಿ?
7 ಯಾಕೋಬನ ದೇವರೂ ಒಡೆಯನೂ ಆಗಿರುವ
ಯೆಹೋವನ ಎದುರಿನಲ್ಲಿ ಭೂಮಿಯು ನಡುಗಿತು.
8 ಬಂಡೆಯೊಳಗಿಂದ ನೀರು ಹರಿದುಬರುವಂತೆ ಮಾಡಿದವನು ಆತನೇ.
ಗಟ್ಟಿಯಾದ ಬಂಡೆಯೊಳಗಿಂದ ನೀರಿನ ಒರತೆಯನ್ನು ಬರಮಾಡಿದವನು ಆತನೇ.
ಈಜಿಪ್ಟಿನಿಂದ ಪ್ರಯಾಣ
17 ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವಂತೆ ಫರೋಹನು ಅನುಮತಿ ನೀಡಿದನು. ಇಸ್ರೇಲರು ಫಿಲಿಷ್ಟಿಯರ ದೇಶದ ಮೂಲಕ ಹಾದುಹೋಗುವ ರಸ್ತೆಯಲ್ಲಿ ಹೋಗಲು ಯೆಹೋವನು ಅನುಮತಿ ನೀಡಲಿಲ್ಲ. ಸಮುದ್ರದ ಮೂಲಕ ಹಾದುಹೋಗುವ ಆ ರಸ್ತೆ ಬಹಳ ಹತ್ತಿರವಾಗಿತ್ತು. ಆದರೆ ಯೆಹೋವನು, “ಇಸ್ರೇಲರು ಆ ದಾರಿಯಲ್ಲಿ ಹೋದರೆ, ಯುದ್ಧಮಾಡಬೇಕಾಗುವುದು. ಆಗ ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿ ಈಜಿಪ್ಟಿಗೆ ಹಿಂತಿರುಗಬಹುದು” ಅಂದುಕೊಂಡನು. 18 ಆದ್ದರಿಂದ ಯೆಹೋವನು ಅವರನ್ನು ಕೆಂಪು ಸಮುದ್ರದ ಅರಣ್ಯದ ಮೂಲಕ ನಡೆಸಿದನು. ಇಸ್ರೇಲರು ಈಜಿಪ್ಟನ್ನು ಬಿಟ್ಟಾಗ ಯುದ್ಧವಸ್ತ್ರಗಳನ್ನು ಧರಿಸಿಕೊಂಡಿದ್ದರು.
ಯೋಸೇಫನ ಎಲುಬುಗಳನ್ನು ತೆಗೆದುಕೊಂಡರು
19 ಮೋಶೆಯು ತನ್ನೊಡನೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. (ಯೋಸೇಫನು ಸಾಯುವ ಮೊದಲು, ತನಗಾಗಿ ಈ ಕಾರ್ಯವನ್ನು ಮಾಡುವಂತೆ ಇಸ್ರೇಲನ ಪುತ್ರರಿಂದ ಪ್ರಮಾಣ ಮಾಡಿಸಿದ್ದನು. ಯೋಸೇಫನು ಅವರಿಗೆ, “ಯೆಹೋವನು ನಿಮ್ಮನ್ನು ರಕ್ಷಿಸುವಾಗ, ಈಜಿಪ್ಟಿನಿಂದ ನನ್ನ ಎಲುಬುಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ” ಎಂದು ಹೇಳಿದ್ದನು.)
ಯೆಹೋವನು ತನ್ನ ಜನರನ್ನು ಮುನ್ನಡೆಸಿದನು
20 ಇಸ್ರೇಲರು ಸುಕ್ಕೋತನ್ನು ಬಿಟ್ಟು ಏತಾಮಿನಲ್ಲಿ ಪಾಳೆಯ ಹಾಕಿದರು. ಏತಾಮು ಮರುಭೂಮಿಗೆ ಹತ್ತಿರವಾಗಿತ್ತು. 21 ಯೆಹೋವನು ದಾರಿಯನ್ನು ತೋರಿಸಿದನು. ಹಗಲಿನಲ್ಲಿ ಜನರನ್ನು ನಡಿಸಲು ಯೆಹೋವನು ಎತ್ತರವಾದ ಮೇಘಸ್ತಂಭವನ್ನು ಉಪಯೋಗಿಸಿದನು; ರಾತ್ರಿ ವೇಳೆಯಲ್ಲಿ ದಾರಿಯನ್ನು ತೋರಿಸಲು ಯೆಹೋವನು ಎತ್ತರವಾದ ಅಗ್ನಿಸ್ತಂಭವನ್ನು ಉಪಯೋಗಿಸಿದನು. ಈ ಬೆಂಕಿಯು ಅವರಿಗೆ ಬೆಳಕು ಕೊಟ್ಟಿದ್ದರಿಂದ ಅವರು ರಾತ್ರಿಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಯಿತು. 22 ಹಗಲಿನಲ್ಲಿ ಎತ್ತರವಾದ ಮೇಘಸ್ತಂಭವೂ ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವೂ ಯಾವಾಗಲೂ ಅವರ ಮುಂಭಾಗದಲ್ಲಿ ಅವರೊಂದಿಗಿದ್ದವು.
ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು
11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ನೀವು ಆರಂಭದಿಂದಲೂ ಕೇಳಿದ ವಾಕ್ಯ. 12 ನೀವು ಕಾಯಿನನಂತಿರಬೇಡಿ. ಅವನು ಕೆಡುಕನಿಗೆ ಸೇರಿದವನಾಗಿದ್ದನು. ಅವನು ತನ್ನ ತಮ್ಮನನ್ನು (ಹೇಬೆಲ) ಕೊಂದುಹಾಕಿದನು. ಅವನು ತನ್ನ ತಮ್ಮನನ್ನು ಕೊಂದದ್ದೇಕೆ? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ಒಳ್ಳೆಯವುಗಳೂ ಆಗಿದ್ದರಿಂದಲೇ.
13 ಸಹೋದರ ಸಹೋದರಿಯರೇ, ಈ ಲೋಕದ ಜನರು ನಿಮ್ನನ್ನು ದ್ವೇಷಿಸುವಾಗ ಆಶ್ಚರ್ಯಗೊಳ್ಳದಿರಿ. 14 ನಾವು ಮರಣವನ್ನು (ಪಾಪಗಳನ್ನು) ತೊರೆದು ಜೀವಕ್ಕೆ ಬಂದಿದ್ದೇವೆ ಎಂಬುದು ನಮಗೆ ಗೊತ್ತಿದೆ. ಕ್ರಿಸ್ತನಲ್ಲಿ ನಮ್ಮ ಸಹೋದರ ಸಹೋದರಿಯರನ್ನು ನಾವು ಪ್ರೀತಿಸುತ್ತಿರುವುದರಿಂದಲೇ ಇದನ್ನು ತಿಳಿದುಕೊಂಡಿದ್ದೇನೆ. ಪ್ರೀತಿಸದಿರುವ ವ್ಯಕ್ತಿಯು ಇನ್ನೂ ಮರಣದಲ್ಲಿದ್ದಾನೆ. 15 ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನೂ ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರನಲ್ಲಿಯೂ ನಿತ್ಯಜೀವ ಇರುವುದಿಲ್ಲವೆಂಬುದು ನಿಮಗೆ ತಿಳಿದಿದೆ.
16 ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ನಿಜವಾದ ಪ್ರೀತಿಯೆಂದರೇನೆಂಬುದನ್ನು ನಾವು ತಿಳಿದುಕೊಂಡೆವು. ಆದ್ದರಿಂದ ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾದವರಿಗೋಸ್ಕರ ನಾವೂ ನಮ್ಮ ಪ್ರಾಣಗಳನ್ನು ಕೊಡಬೇಕು.
Kannada Holy Bible: Easy-to-Read Version. All rights reserved. © 1997 Bible League International