Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 121

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
    ನನಗೆ ಸಹಾಯವು ಎಲ್ಲಿಂದ ಬರುವುದು?
ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
    ನನಗೆ ಸಹಾಯವು ಬರುವುದು.
ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
    ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
    ನಿದ್ರಿಸುವುದೂ ಇಲ್ಲ!
ನಿನ್ನನ್ನು ಕಾಯುವವನು ಯೆಹೋವನೇ.
    ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
ಹಗಲಲ್ಲಿ ಸೂರ್ಯನೂ
    ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
    ನಿನ್ನ ಪ್ರಾಣವನ್ನು ಕಾಯುವನು.
ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
    ಆತನು ನಿನ್ನನ್ನು ಸದಾಕಾಲ ಕಾಪಾಡುವನು.

ವಿಮೋಚನಕಾಂಡ 12:29-42

29 ಮಧ್ಯರಾತ್ರಿಯಲ್ಲಿ ಯೆಹೋವನು ಈಜಿಪ್ಟಿನಲ್ಲಿದ್ದ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಸಂಹರಿಸಿದನು. ಫರೋಹನ ಚೊಚ್ಚಲು ಮಗನಿಂದಿಡಿದು ಸೆರೆಮನೆಯಲ್ಲಿದ್ದ ಕೈದಿಯ ಚೊಚ್ಚಲು ಮಗನವರೆಗೆ ಇರುವ ಎಲ್ಲಾ ಚೊಚ್ಚಲು ಮಕ್ಕಳನ್ನು ಆತನು ಸಂಹರಿಸಿದನು. ಚೊಚ್ಚಲು ಪಶುಗಳೂ ಸಂಹರಿಸಲ್ಪಟ್ಟವು. 30 ಆ ರಾತ್ರಿಯಲ್ಲಿ ಫರೋಹನೂ ಅವನ ಅಧಿಕಾರಿಗಳೂ ಈಜಿಪ್ಟಿನ ಜನರೆಲ್ಲರೂ ಎದ್ದರು. ಈಜಿಪ್ಟಿನಲ್ಲಿ ಮಹಾ ಗೋಳಾಟ ಉಂಟಾಯಿತು. ಯಾಕೆಂದರೆ ಸಾವಿಲ್ಲದ ಮನೆಯೇ ಇರಲಿಲ್ಲ.

ಇಸ್ರೇಲರಿಗೆ ಈಜಿಪ್ಟಿನಿಂದ ಬಿಡುಗಡೆ

31 ಆದ್ದರಿಂದ ಆ ರಾತ್ರಿ, ಫರೋಹನು ಮೋಶೆ ಆರೋನರನ್ನು ಕರೆಸಿ, “ನನ್ನ ಜನರನ್ನು ಬಿಟ್ಟುಹೋಗಿ. ನೀವು ಕೇಳಿಕೊಂಡಂತೆ ನೀವು ಮತ್ತು ನಿಮ್ಮ ಜನರು ಹೊರಟುಹೋಗಿ ಯೆಹೋವನನ್ನು ಆರಾಧಿಸಿ. 32 ನೀವು ಕೇಳಿಕೊಂಡಂತೆ ನಿಮ್ಮ ಕುರಿಗಳನ್ನೂ ದನಕರುಗಳನ್ನೂ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ! ನನ್ನನ್ನು ಆಶೀರ್ವದಿಸಿ!” ಎಂದು ಹೇಳಿದನು. 33 ಈಜಿಪ್ಟಿನ ಜನರು ಸಹ ತಮ್ಮನ್ನು ಬೇಗನೆ ಬಿಟ್ಟು ಹೋಗಬೇಕೆಂದು ಇಸ್ರೇಲರನ್ನು ಬೇಡಿಕೊಂಡು, “ನೀವು ಬಿಟ್ಟು ಹೋಗದಿದ್ದರೆ, ನಾವೆಲ್ಲಾ ಸಾಯುವೆವು” ಎಂದು ಹೇಳಿದರು.

34 ತಮ್ಮ ರೊಟ್ಟಿಗೆ ಹುಳಿಹಾಕಲು ಇಸ್ರೇಲರಿಗೆ ಸಮಯವಿರಲಿಲ್ಲ. ಅವರು ಹಿಟ್ಟಿನ ಮುದ್ದೆಯನ್ನು ಬಟ್ಟೆಯಲ್ಲಿ ಸುತ್ತಿ ಹೆಗಲಿನ ಮೇಲೆ ಹೊತ್ತುಕೊಂಡು ಹೋದರು. 35 ಅಲ್ಲದೆ ಮೋಶೆಯು ಹೇಳಿದಂತೆಯೇ ಇಸ್ರೇಲರು ತಮ್ಮ ನೆರೆಮನೆಯವರ ಬಳಿಗೆ ಹೋಗಿ ಬಟ್ಟೆಗಳನ್ನೂ ಬೆಳ್ಳಿಬಂಗಾರಗಳ ವಸ್ತುಗಳನ್ನೂ ಕೇಳಿಕೊಂಡರು. 36 ಈಜಿಪ್ಟಿನವರು ಇಸ್ರೇಲರಿಗೆ ದಯೆ ತೋರಿಸುವಂತೆ ಯೆಹೋವನು ಪ್ರೇರೇಪಿಸಿದ್ದರಿಂದ ಈಜಿಪ್ಟಿನವರು ತಮ್ಮ ಸ್ವತ್ತುಗಳನ್ನು ಇಸ್ರೇಲರಿಗೆ ಕೊಟ್ಟುಬಿಟ್ಟರು.

37 ಇಸ್ರೇಲರು ರಮ್ಸೇಸ್‌ನಿಂದ ಸುಕ್ಕೋತಿಗೆ ಪ್ರಯಾಣ ಮಾಡಿದರು. ಅವರಲ್ಲಿ ಸುಮಾರು ಆರು ಲಕ್ಷಮಂದಿ[a] ಗಂಡಸರಿದ್ದರು. (ಈ ಸಂಖ್ಯೆಯಲ್ಲಿ ಮಕ್ಕಳು ಮತ್ತು ಹೆಂಗಸರು ಸೇರಿಲ್ಲ.) 38 ಲೆಕ್ಕವಿಲ್ಲದಷ್ಟು ಕುರಿಗಳೂ ದನಕರುಗಳೂ ಇವರೊಂದಿಗಿದ್ದವು. ಇಸ್ರೇಲರಲ್ಲದ ಬೇರೆ ಜನರು ಸಹ ಇಸ್ರೇಲರೊಂದಿಗೆ ಈಜಿಪ್ಟಿನಿಂದ ಹೊರಟರು. 39 ರೊಟ್ಟಿಗೆ ಹುಳಿಹಾಕುವಷ್ಟು ಸಮಯವೂ ಜನರಿಗೆ ಇರಲಿಲ್ಲ; ಅವರು ತಮ್ಮ ಪ್ರಯಾಣಕ್ಕಾಗಿ ವಿಶೇಷ ಆಹಾರವನ್ನು ತಯಾರಿಸುವುದಕ್ಕೂ ಆಗಲಿಲ್ಲ. ಆದ್ದರಿಂದ ಅವರು ಹುಳಿಯಿಲ್ಲದ ರೊಟ್ಟಿ ಮಾಡಿ ತಮ್ಮೊಡನೆ ತೆಗೆದುಕೊಂಡು ಹೋದರು.

40 ಇಸ್ರೇಲರು ಈಜಿಪ್ಟಿನಲ್ಲಿ ನಾನೂರಮೂವತ್ತು ವರ್ಷ ವಾಸಿಸಿದರು. 41 ನಾನೂರಮೂವತ್ತು ವರ್ಷಗಳಾದ ನಂತರ, ಅದೇ ದಿನದಂದು ಯೆಹೋವನ ಸೈನ್ಯಗಳೆಲ್ಲಾ[b] ಈಜಿಪ್ಟನ್ನು[c] ಬಿಟ್ಟು ಹೊರಟವು. 42 ಆದ್ದರಿಂದ ಯೆಹೋವನು ಅವರನ್ನು ಸಂರಕ್ಷಿಸಿ ಈಜಿಪ್ಟಿನಿಂದ ಹೊರತಂದದ್ದನ್ನು ಜ್ಞಾಪಕಮಾಡುವ ಆ ರಾತ್ರಿ ಬಹು ವಿಶೇಷವಾದ ರಾತ್ರಿಯಾಗಿದೆ. ಇಸ್ರೇಲರೆಲ್ಲರೂ ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವರು.

ರೋಮ್ನಗರದವರಿಗೆ 13:1-7

ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಿ

13 ನೀವೆಲ್ಲರೂ ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಬೇಕು. ಪ್ರತಿಯೊಬ್ಬ ಅಧಿಕಾರಿಗೆ ಅಧಿಕಾರವನ್ನು ಕೊಟ್ಟಿರುವವನು ದೇವರೇ. ಈಗಿರುವ ಎಲ್ಲಾ ಅಧಿಕಾರಿಗಳಿಗೆ ದೇವರೇ ಅಧಿಕಾರವನ್ನು ಕೊಟ್ಟಿದ್ದಾನೆ. ಆದ್ದರಿಂದ ಸರ್ಕಾರಕ್ಕೆ ವಿರೋಧವಾಗಿರುವ ವ್ಯಕ್ತಿಯು ನಿಜವಾಗಿಯೂ ದೇವರ ಆಜ್ಞೆಗೇ ವಿರೋಧವಾಗಿದ್ದಾನೆ. ಸರ್ಕಾರಕ್ಕೆ ವಿರೋಧವಾಗಿರುವ ಜನರು ತಮ್ಮ ಮೇಲೆ ತಾವೇ ದಂಡನೆಯನ್ನು ಬರಮಾಡಿಕೊಳ್ಳುತ್ತಾರೆ. ಸರಿಯಾದದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುವುದಿಲ್ಲ. ಆದರೆ ಕೆಟ್ಟದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುತ್ತದೆ. ನೀವು ಅಧಿಕಾರಿಗಳಿಗೆ ಭಯಪಡದವರಾಗಿರಬೇಕೆಂದು ಅಪೇಕ್ಷಿಸುತ್ತೀರೋ? ಹಾಗಾದರೆ ನೀವು ಸರಿಯಾದದ್ದನ್ನೇ ಮಾಡಿರಿ. ಆಗ ಅಧಿಕಾರಿಗಳು ನಿಮ್ಮನ್ನು ಹೊಗಳುವರು.

ಅಧಿಕಾರಿಯು ನಿಮ್ಮ ಒಳ್ಳೆಯದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದರೆ ನೀವು ಕೆಟ್ಟದ್ದನ್ನು ಮಾಡಿದರೆ ಭಯಪಡಲೇಬೇಕು. ನಿಮ್ಮನ್ನು ದಂಡಿಸಲು ಅವನಿಗೆ ಅಧಿಕಾರವಿದೆ. ಅವನು ಆ ಅಧಿಕಾರವನ್ನು ಉಪಯೋಗಿಸುವನು. ಅಧಿಕಾರಿಯು ಕೆಟ್ಟದ್ದನ್ನು ಮಾಡುವ ಜನರನ್ನು ದಂಡಿಸುವುದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದ್ದರಿಂದ ನೀವು ಸರ್ಕಾರಕ್ಕೆ ವಿಧೇಯರಾಗಬೇಕು. ನೀವು ದಂಡನೆಗೆ ಗುರಿಯಾಗಬಹುದೆಂಬ ಕಾರಣದಿಂದ ಮಾತ್ರವಲ್ಲದೆ, ನಿಮ್ಮ ಮನಸ್ಸಾಕ್ಷಿಯ ದೆಸೆಯಿಂದಲೂ ನೀವು ಅವರಿಗೆ ವಿಧೇಯರಾಗಬೇಕು.

ಈ ಕಾರಣದಿಂದಲೇ ನೀವು ತೆರಿಗೆಯನ್ನು ಸಹ ಕೊಡುತ್ತೀರಿ. ಆ ಅಧಿಕಾರಿಗಳು ದೇವರಿಗೋಸ್ಕರ ಕೆಲಸ ಮಾಡುವವರಾಗಿದ್ದಾರೆ; ತಮ್ಮ ಸಮಯವನ್ನೆಲ್ಲಾ ಆಡಳಿತ ಮಾಡಲು ಉಪಯೋಗಿಸುವವರಾಗಿದ್ದಾರೆ. ನೀವು ಯಾರ್ಯಾರಿಗೆ ಏನೇನು ಕೊಡಬೇಕೋ ಅದನ್ನೆಲ್ಲಾ ಅವರಿಗೆ ಕೊಡಿರಿ. ಯಾವ ತೆರಿಗೆಯನ್ನಾದರೂ ಕೊಡಬೇಕಿದ್ದರೆ ಅದನ್ನು ಕೊಟ್ಟುಬಿಡಿರಿ. ಯಾರಿಗೆ ಗೌರವ ಕೊಡಬೇಕೋ ಅವರಿಗೆ ಗೌರವ ಕೊಡಿರಿ. ಯಾರಿಗೆ ಮರ್ಯಾದೆ ತೋರಿಸಬೇಕೊ ಅವರಿಗೆ ಮರ್ಯಾದೆಯನ್ನು ತೋರಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International