Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 12:1-14

ಪಸ್ಕ ಹಬ್ಬ

12 ಮೋಶೆ ಆರೋನರು ಇನ್ನೂ ಈಜಿಪ್ಟಿನಲ್ಲಿದ್ದಾಗ ಯೆಹೋವನು ಅವರೊಡನೆ ಮಾತಾಡಿ, “ಈ ತಿಂಗಳು ನಿಮಗೆ ವರ್ಷದ ಮೊದಲನೆ ತಿಂಗಳಾಗಿರುವುದು. ಈ ಆಜ್ಞೆಯು ಇಡೀ ಇಸ್ರೇಲರ ಸಮೂಹಕ್ಕೆ ಅನ್ವಯಿಸುತ್ತದೆ. ಈ ತಿಂಗಳ ಹತ್ತನೆಯ ದಿನದಲ್ಲಿ ಪ್ರತಿಯೊಬ್ಬನು ತನ್ನ ಮನೆಯಲ್ಲಿರುವ ಜನರಿಗಾಗಿ ಒಂದು ಕುರಿಮರಿಯನ್ನು ಅಥವಾ ಒಂದು ಆಡುಮರಿಯನ್ನು ಕೊಯ್ಯಬೇಕು. ಅದನ್ನು ಸಂಪೂರ್ಣವಾಗಿ ತಿನ್ನಲು ಅವನ ಮನೆಯಲ್ಲಿ ಸಾಕಷ್ಟು ಜನರಿಲ್ಲದಿದ್ದರೆ ಅವನು ತನ್ನ ನೆರೆಯವರನ್ನು ಆಮಂತ್ರಿಸಿ ಅವರೊಂದಿಗೆ ಅದರ ಮಾಂಸವನ್ನು ಹಂಚಿಕೊಳ್ಳಬೇಕು. ಪ್ರತಿಯೊಬ್ಬನಿಗೂ ತಿನ್ನಲು ಸಾಕಷ್ಟು ಮಾಂಸವಿರಬೇಕು. ಅದು ಒಂದು ವರ್ಷದ ಗಂಡು ಕುರಿಯಾಗಿರಬೇಕು ಅಥವಾ ಆಡಾಗಿರಬೇಕು. ಅಲ್ಲದೆ ಕಳಂಕ ರಹಿತವಾಗಿರಬೇಕು. ಈ ತಿಂಗಳ ಹದಿನಾಲ್ಕನೆಯ ದಿನದವರೆಗೆ ನೀವು ಆ ಪಶುವನ್ನು ಸಾಕಬೇಕು. ಅಂದು ಸಂಜೆ ಇಸ್ರೇಲರೆಲ್ಲರೂ ಆ ಪಶುಗಳನ್ನು ಕೊಯ್ಯಬೇಕು. ಈ ಪಶುಗಳ ರಕ್ತವನ್ನು ತೆಗೆದಿಟ್ಟು ಜನರು ಭೋಜನಮಾಡುವ ಮನೆಗಳ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗಳಿಗೂ ಆ ರಕ್ತವನ್ನು ಹಚ್ಚಬೇಕು.

“ಅಂದು ರಾತ್ರಿ ಆ ಪಶುವಿನ ಮಾಂಸವನ್ನು ಸುಟ್ಟು ಸಂಪೂರ್ಣವಾಗಿ ತಿನ್ನಬೇಕು. ಅದರೊಡನೆ ಕಹಿಯಾದ ಪಲ್ಯಗಳನ್ನೂ ಹುಳಿಯಿಲ್ಲದ ರೊಟ್ಟಿಯನ್ನೂ ತಿನ್ನಬೇಕು. ನೀವು ಆ ಪಶುವಿನ ಮಾಂಸವನ್ನು ಹಸಿಯಾಗಲಿ ನೀರಿನಲ್ಲಿ ಬೇಯಿಸಿಯಾಗಲಿ ತಿನ್ನಬಾರದು; ಅದರ ಮಾಂಸವನ್ನು ಬೆಂಕಿಯ ಮೇಲಿಟ್ಟು ಬೇಯಿಸಬೇಕು. ಅದರ ತಲೆ, ಕಾಲುಗಳನ್ನೂ ಒಳಗಿನ ಭಾಗಗಳನ್ನೂ ಬೆಂಕಿಯ ಮೇಲೆ ಬೇಯಿಸಬೇಕು. 10 ಅದರ ಮಾಂಸವನ್ನೆಲ್ಲಾ ಆ ರಾತ್ರಿಯಲ್ಲಿಯೇ ತಿನ್ನಬೇಕು. ಬೆಳಗಾಗುವವರೆಗೆ ಮಾಂಸವೇನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

11 “ನೀವು ಭೋಜನ ಮಾಡುವಾಗ ಪ್ರಯಾಣ ಮಾಡುತ್ತಿರುವಂತೆ ಬಟ್ಟೆ ಧರಿಸಿಕೊಂಡಿರಬೇಕು; ಕೆರಗಳನ್ನು ಹಾಕಿಕೊಂಡು ನಿಮ್ಮ ಊರುಗೋಲನ್ನು ಕೈಯಲ್ಲಿ ಹಿಡಿದಿರಬೇಕು. ನೀವು ಅವಸವಸರವಾಗಿ ತಿನ್ನಬೇಕು. ಯಾಕೆಂದರೆ ಇದು ಯೆಹೋವನ ಪಸ್ಕಹಬ್ಬ.

12 “ಆ ರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗಿ ಈಜಿಪ್ಟಿನ ಚೊಚ್ಚಲು ಪಶುಗಳನ್ನೂ ಚೊಚ್ಚಲು ಗಂಡುಮಕ್ಕಳನ್ನೂ ಕೊಲ್ಲುವೆನು; ಈಜಿಪ್ಟಿನ ಎಲ್ಲಾ ದೇವರುಗಳಿಗೆ ತೀರ್ಪು ಮಾಡುವೆನು. ನಾನೇ ಯೆಹೋವನೆಂದು ತೋರಿಸಿಕೊಡುವೆನು. 13 ಆದರೆ ನಿಮ್ಮ ಮನೆಗಳಿಗೆ ಹಚ್ಚಿರುವ ರಕ್ತವು ಒಂದು ವಿಶೇಷ ಸೂಚನೆಯಾಗಿದೆ. ನಾನು ಆ ರಕ್ತವನ್ನು ನೋಡಿದಾಗ ನಿಮ್ಮ ಮನೆಯನ್ನು ದಾಟಿಹೋಗುವೆನು.[a] ಈಜಿಪ್ಟಿನ ಜನರಿಗೆ ಕೇಡುಗಳಾಗುವಂತೆ ಮಾಡುವೆನು. ಆದರೆ ಆ ವ್ಯಾಧಿಗಳು ನಿಮಗೆ ಹಾನಿ ಮಾಡುವುದಿಲ್ಲ.

14 “ಆದ್ದರಿಂದ ನೀವು ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವಿರಿ. ಅದು ನಿಮಗೆ ವಿಶೇಷವಾದ ಹಬ್ಬವಾಗಿರುವುದು. ನಿಮ್ಮ ಸಂತತಿಯವರು ಈ ಹಬ್ಬದಿಂದ ಯೆಹೋವನನ್ನು ಎಂದೆಂದಿಗೂ ಸನ್ಮಾನಿಸುವರು.

ಕೀರ್ತನೆಗಳು 149

149 ಯೆಹೋವನಿಗೆ ಸ್ತೋತ್ರವಾಗಲಿ.
ಯೆಹೋವನ ಹೊಸ ಕಾರ್ಯಗಳಿಗಾಗಿ ಆತನಿಗೆ ಹೊಸ ಹಾಡನ್ನು ಹಾಡಿರಿ!
    ಆತನ ಭಕ್ತರ ಸಭೆಯಲ್ಲಿ ಆತನನ್ನು ಸಂಕೀರ್ತಿಸಿರಿ.
ಇಸ್ರೇಲರು ತಮ್ಮ ಸೃಷ್ಟಿಕರ್ತನಲ್ಲಿ ಉಲ್ಲಾಸಿಸಲಿ!
    ಚೀಯೋನಿನ ಜನರು ತಮ್ಮ ರಾಜನಲ್ಲಿ ಹರ್ಷಿಸಲಿ.
ಅವರು ನೃತ್ಯಮಾಡುತ್ತಾ ಝಲ್ಲರಿಗಳನ್ನು ಬಡಿಯುತ್ತಾ
    ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸ್ತುತಿಸಲಿ.
ಯೆಹೋವನು ತನ್ನ ಜನರಲ್ಲಿ ಸಂತೋಷಿಸುವನು.
    ಆತನು ತನ್ನ ದೀನಜನರಿಗಾಗಿ ಅದ್ಭುತಕಾರ್ಯವನ್ನು ಮಾಡಿ ಅವರನ್ನು ರಕ್ಷಿಸಿದನು!
ಆತನ ಭಕ್ತರೇ, ನಿಮ್ಮ ವಿಜಯದಲ್ಲಿ ಉಲ್ಲಾಸಿಸಿರಿ!
    ಹಾಸಿಗೆಯ ಮೇಲಿರುವಾಗಲೂ ಸಂತೋಷದಿಂದಿರಿ.

ಜನರು ಆತನಿಗೆ ಗಟ್ಟಿಯಾಗಿ ಸ್ತೋತ್ರಮಾಡುತ್ತಾ
    ತಮ್ಮ ಇಬ್ಭಾಯಿ ಕತ್ತಿಗಳನ್ನು ಕೈಗಳಲ್ಲಿ ತೆಗೆದುಕೊಳ್ಳಲಿ.
ಅವರು ಹೋಗಿ ತಮ್ಮ ಶತ್ರುಗಳನ್ನು ದಂಡಿಸಲಿ;
    ಅನ್ಯ ಜನರನ್ನು ದಂಡಿಸಲಿ.
ದೇವಜನರು ಆ ರಾಜರುಗಳನ್ನು ಮತ್ತು ಪ್ರಮುಖರನ್ನು
    ಸರಪಣಿಗಳಿಂದಲೂ ಕಬ್ಬಿಣದ ಬೇಡಿಗಳಿಂದಲೂ ಬಂಧಿಸುವರು.
ಆತನ ಆಜ್ಞೆಗನುಸಾರವಾಗಿ ಆತನ ಭಕ್ತರು ತಮ್ಮ ಶತ್ರಗಳನ್ನು ದಂಡಿಸುವರು.
    ಆತನು ತನ್ನ ಭಕ್ತರಿಗೆ ಒಳ್ಳೆಯವನಾಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ.

ರೋಮ್ನಗರದವರಿಗೆ 13:8-14

ಇತರ ಜನರನ್ನು ಪ್ರೀತಿಸಬೇಕೆಂಬ ಒಂದೇ ಆಜ್ಞೆ

ಜನರಿಗೆ ಯಾವ ವಿಷಯದಲ್ಲಿಯೂ ಸಾಲಗಾರರಾಗಿರಬೇಡಿ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ವಿಷಯದಲ್ಲಿ ಮಾತ್ರ ಯಾವಾಗಲೂ ಸಾಲಗಾರರಾಗಿದ್ದೀರಿ. ಇತರ ಜನರನ್ನು ಪ್ರೀತಿಸುವ ವ್ಯಕ್ತಿಯು ಇಡೀ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದಾನೆ. ಏಕೆಂದರೆ, “ವ್ಯಭಿಚಾರ ಮಾಡಕೂಡದು; ಕೊಲೆ ಮಾಡಕೂಡದು; ಕದಿಯಕೂಡದು; ಇತರರಿಗೆ ಸೇರಿದ ವಸ್ತುಗಳನ್ನು ಅಪೇಕ್ಷಿಸಕೂಡದು”(A) ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಈ ಆಜ್ಞೆಗಳನ್ನು ಮೊದಲುಗೊಂಡು ಉಳಿದೆಲ್ಲಾ ಆಜ್ಞೆಗಳು, “ನೀನು ನಿನ್ನನ್ನು ಪ್ರೀತಿಸುವಂತೆ ಇತರ ಜನರನ್ನೂ ಪ್ರೀತಿಸು”(B) ಎಂಬ ಒಂದೇ ಆಜ್ಞೆಯಲ್ಲಿ ಅಡಕವಾಗಿದೆ. 10 ಪ್ರೀತಿಯು ಬೇರೆಯವರಿಗೆ ಕೇಡುಮಾಡುವುದಿಲ್ಲ. ಆದ್ದರಿಂದ ಪ್ರೀತಿಸುವುದಕ್ಕೂ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದಕ್ಕೂ ವ್ಯತ್ಯಾಸವೇನೂ ಇಲ್ಲ.

11 ನಾವು ಪ್ರಾಮುಖ್ಯವಾದ ಸಮಯದಲ್ಲಿ ಜೀವಿಸುತ್ತಿರುವುದರಿಂದ ಈ ವಿಷಯಗಳನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಗೊತ್ತೇ ಇದೆ. ಹೌದು, ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ ಇದಾಗಿದೆ. ನಾವು ವಿಶ್ವಾಸಿಗಳಾದ ಕಾಲಕ್ಕಿಂತ ಈಗ ನಮ್ಮ ರಕ್ಷಣೆಯು ಸಮೀಪವಾಗಿದೆ. 12 “ರಾತ್ರಿ”ಯು ಬಹುಮಟ್ಟಿಗೆ ಮುಗಿದುಹೋಗಿದೆ. “ಹಗಲು” ಬಹುಮಟ್ಟಿಗೆ ಬಂದಿದೆ. ಆದ್ದರಿಂದ ಕತ್ತಲೆಗೆ ಸೇರಿದ ಕಾರ್ಯಗಳನ್ನು ಇನ್ನು ಮೇಲೆ ಮಾಡದೆ ಬೆಳಕಿಗೆ ಸೇರಿದ ಕಾರ್ಯಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. 13 ಹಗಲಿಗೆ ಸೇರಿದ ಜನರಂತೆ ಸರಿಯಾದ ರೀತಿಯಲ್ಲಿ ಜೀವಿಸೋಣ. ಕೆಟ್ಟದಾದ ಮತ್ತು ವ್ಯರ್ಥವಾದ ಔತಣಕೂಟಗಳನ್ನು ನಾವು ಏರ್ಪಡಿಸಕೂಡದು; ಕುಡಿದು ಮತ್ತರಾಗಕೂಡದು; ನಾವು ಲೈಂಗಿಕ ಪಾಪವನ್ನಾಗಲಿ ನಮ್ಮ ದೇಹದಿಂದ ಯಾವುದೇ ಬಗೆಯ ಪಾಪವನ್ನಾಗಲಿ ಮಾಡಕೂಡದು; ವಾಗ್ವಾದಗಳನ್ನಾಗಲಿ ಜಗಳಗಳನ್ನಾಗಲಿ ಎಬ್ಬಿಸಬಾರದು; ಅಲ್ಲದೆ ಹೊಟ್ಟೆಕಿಚ್ಚುಪಡಬಾರದು. 14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.

ಮತ್ತಾಯ 18:15-20

ನಿಮಗೆ ತಪ್ಪುಮಾಡಿದಾಗ ಮಾಡತಕ್ಕದ್ದೇನು?

(ಲೂಕ 17:3)

15 “ನಿನ್ನ ಸಹೋದರನಾಗಲಿ ಸಹೋದರಿಯಾಗಲಿ ನಿನಗೆ ಯಾವುದಾದರೂ ತಪ್ಪು ಮಾಡಿದರೆ, ನೀನು ಹೋಗಿ ಅವನೊಬ್ಬನೇ ಇರುವಾಗ ಅವನ ತಪ್ಪನ್ನು ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ, ಮತ್ತೆ ನಿನ್ನ ಸಹೋದರನಾಗಿರಲು ನೀನೇ ಅವನಿಗೆ ಸಹಾಯ ಮಾಡಿದಂತಾಗುವುದು. 16 ಆದರೆ ಅವನು ನಿನ್ನ ಮಾತನ್ನು ಕೇಳದಿದ್ದರೆ, ನಿನ್ನೊಂದಿಗೆ ಒಬ್ಬಿಬ್ಬರನ್ನು ಕರೆದುಕೊಂಡು ಮತ್ತೆ ಅವನ ಬಳಿಗೆ ಹೋಗು. ಆಗ ಪ್ರತಿಯೊಂದು ದೂರಿನ ವಿಷಯದಲ್ಲೂ ಇಬ್ಬರು ಅಥವಾ ಮೂವರು ಸಾಕ್ಷಿಗಳಿರುವರು.[a] 17 ಅವನು ಅವರ ಮಾತನ್ನೂ ಕೇಳದಿದ್ದರೆ, ಸಭೆಗೆ ತಿಳಿಸು. ಅವನು ಸಭೆಯ ಮಾತನ್ನೂ ಕೇಳದಿದ್ದರೆ ಅವನನ್ನು ದೇವರಲ್ಲಿ ನಂಬಿಕೆ ಇಡದ ಮನುಷ್ಯನಂತಾಗಲಿ ಸುಂಕವಸೂಲಿಗಾರನಂತಾಗಲಿ ಪರಿಗಣಿಸಿರಿ.

18 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಲೋಕದಲ್ಲಿ ನೀಡುವ ನಿಷಿದ್ಧಾಜ್ಞೆಯು ದೇವರೇ ನೀಡಿದ ನಿಷಿದ್ಧಾಜ್ಞೆಯಾಗಿರುತ್ತದೆ. ನೀವು ಭೂಲೋಕದಲ್ಲಿ ನೀಡುವ ಅನುಮತಿಯು ದೇವರೇ ನೀಡಿದ ಅನುಮತಿಯಾಗಿರುತ್ತದೆ. 19 ಇದಲ್ಲದೆ ನಿಮ್ಮಲ್ಲಿ ಇಬ್ಬರು ಈ ಲೋಕದಲ್ಲಿ ಒಮ್ಮನಸ್ಸಿನಿಂದ ಏನನ್ನೇ ಬೇಡಿಕೊಂಡರೂ ಪರಲೋಕದಲ್ಲಿರುವ ನನ್ನ ತಂದೆ ಅದನ್ನು ನೆರವೇರಿಸುತ್ತಾನೆ. 20 ಇದು ಸತ್ಯ. ಏಕೆಂದರೆ ಎಲ್ಲಿ ಇಬ್ಬರಾಗಲಿ ಮೂವರಾಗಲಿ ನನ್ನಲ್ಲಿ ನಂಬಿಕೆಯನ್ನಿಟ್ಟು ಒಟ್ಟಾಗಿ ಸೇರಿಬಂದಿರುತ್ತಾರೋ ಅವರ ಮಧ್ಯದಲ್ಲಿ ನಾನಿರುತ್ತೇನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International