Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 149

149 ಯೆಹೋವನಿಗೆ ಸ್ತೋತ್ರವಾಗಲಿ.
ಯೆಹೋವನ ಹೊಸ ಕಾರ್ಯಗಳಿಗಾಗಿ ಆತನಿಗೆ ಹೊಸ ಹಾಡನ್ನು ಹಾಡಿರಿ!
    ಆತನ ಭಕ್ತರ ಸಭೆಯಲ್ಲಿ ಆತನನ್ನು ಸಂಕೀರ್ತಿಸಿರಿ.
ಇಸ್ರೇಲರು ತಮ್ಮ ಸೃಷ್ಟಿಕರ್ತನಲ್ಲಿ ಉಲ್ಲಾಸಿಸಲಿ!
    ಚೀಯೋನಿನ ಜನರು ತಮ್ಮ ರಾಜನಲ್ಲಿ ಹರ್ಷಿಸಲಿ.
ಅವರು ನೃತ್ಯಮಾಡುತ್ತಾ ಝಲ್ಲರಿಗಳನ್ನು ಬಡಿಯುತ್ತಾ
    ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸ್ತುತಿಸಲಿ.
ಯೆಹೋವನು ತನ್ನ ಜನರಲ್ಲಿ ಸಂತೋಷಿಸುವನು.
    ಆತನು ತನ್ನ ದೀನಜನರಿಗಾಗಿ ಅದ್ಭುತಕಾರ್ಯವನ್ನು ಮಾಡಿ ಅವರನ್ನು ರಕ್ಷಿಸಿದನು!
ಆತನ ಭಕ್ತರೇ, ನಿಮ್ಮ ವಿಜಯದಲ್ಲಿ ಉಲ್ಲಾಸಿಸಿರಿ!
    ಹಾಸಿಗೆಯ ಮೇಲಿರುವಾಗಲೂ ಸಂತೋಷದಿಂದಿರಿ.

ಜನರು ಆತನಿಗೆ ಗಟ್ಟಿಯಾಗಿ ಸ್ತೋತ್ರಮಾಡುತ್ತಾ
    ತಮ್ಮ ಇಬ್ಭಾಯಿ ಕತ್ತಿಗಳನ್ನು ಕೈಗಳಲ್ಲಿ ತೆಗೆದುಕೊಳ್ಳಲಿ.
ಅವರು ಹೋಗಿ ತಮ್ಮ ಶತ್ರುಗಳನ್ನು ದಂಡಿಸಲಿ;
    ಅನ್ಯ ಜನರನ್ನು ದಂಡಿಸಲಿ.
ದೇವಜನರು ಆ ರಾಜರುಗಳನ್ನು ಮತ್ತು ಪ್ರಮುಖರನ್ನು
    ಸರಪಣಿಗಳಿಂದಲೂ ಕಬ್ಬಿಣದ ಬೇಡಿಗಳಿಂದಲೂ ಬಂಧಿಸುವರು.
ಆತನ ಆಜ್ಞೆಗನುಸಾರವಾಗಿ ಆತನ ಭಕ್ತರು ತಮ್ಮ ಶತ್ರಗಳನ್ನು ದಂಡಿಸುವರು.
    ಆತನು ತನ್ನ ಭಕ್ತರಿಗೆ ಒಳ್ಳೆಯವನಾಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ.

ವಿಮೋಚನಕಾಂಡ 11

ಚೊಚ್ಚಲು ಮಕ್ಕಳ ಮರಣ

11 ಬಳಿಕ ಯೆಹೋವನು ಮೋಶೆಗೆ, “ನಾನು ಫರೋಹನಿಗೂ ಈಜಿಪ್ಟಿಗೂ ಮತ್ತೊಂದು ವಿಪತ್ತನ್ನು ಬರಮಾಡುತ್ತೇನೆ. ಆಗ ಅವನು ನಿಮ್ಮನ್ನು ಈಜಿಪ್ಟಿನಿಂದ ಕಳುಹಿಸುವನು; ನಿಮ್ಮನ್ನು ಬಲವಂತದಿಂದ ಕಳುಹಿಸಿಬಿಡುವನು. ನೀನು ಇಸ್ರೇಲರಿಗೆ ಈ ಸಂದೇಶವನ್ನು ತಿಳಿಸು: ‘ಸ್ತ್ರೀಯರೂ ಪುರುಷರೂ ತಮ್ಮ ನೆರೆಯವರಿಂದ ಬೆಳ್ಳಿಬಂಗಾರಗಳ ವಸ್ತುಗಳನ್ನು ಕೇಳಿಕೊಳ್ಳಬೇಕು.’ ಈಜಿಪ್ಟಿನವರು ನಿಮಗೆ ದಯೆತೋರುವಂತೆ ಯೆಹೋವನು ಅವರನ್ನು ಪ್ರೇರೇಪಿಸುವನು. ಈಜಿಪ್ಟಿನ ಜನರು ಮತ್ತು ಫರೋಹನ ಅಧಿಕಾರಿಗಳು ಮೋಶೆಯನ್ನು ಮಹಾಪುರುಷನೆಂದು ತಿಳಿದುಕೊಂಡಿದ್ದಾರೆ” ಎಂದು ಹೇಳಿದನು.

ಮೋಶೆಯು ಜನರಿಗೆ, “ಯೆಹೋವನು ಹೀಗೆನ್ನುತ್ತಾನೆ: ‘ಇಂದು ಮಧ್ಯರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗುವೆನು. ಈಜಿಪ್ಟಿನ ಚೊಚ್ಚಲು ಮಕ್ಕಳೆಲ್ಲರೂ ಅಂದರೆ ಫರೋಹನ ಚೊಚ್ಚಲು ಮಗನಿಂದಿಡಿದು ಧಾನ್ಯವನ್ನು ಬೀಸುವ ಸೇವಕಿಯ ಚೊಚ್ಚಲು ಮಗನವರೆಗೂ ಇರುವ ಚೊಚ್ಚಲು ಮಕ್ಕಳೆಲ್ಲರೂ ಸಾಯುವರು. ಇದಲ್ಲದೆ ಚೊಚ್ಚಲು ಪಶುಗಳೂ ಸಾಯುತ್ತವೆ. ಈಜಿಪ್ಟಿನಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು, ಅಂಥ ಗೋಳಾಟ ಈವರೆಗೂ ಆಗಿಲ್ಲ; ಮುಂದೆಯೂ ಆಗುವುದಿಲ್ಲ. ಆದರೆ ಇಸ್ರೇಲರಲ್ಲಿ ಯಾರಿಗೂ ಕೇಡಾಗುವುದಿಲ್ಲ. ಒಂದು ನಾಯಿಯೂ ಅವರಿಗೆ ಬೊಗಳುವುದಿಲ್ಲ. ಇಸ್ರೇಲಿನ ಜನರಿಗಾಗಲಿ ಪಶುಗಳಿಗಾಗಲಿ ಕೇಡಾಗುವುದಿಲ್ಲ. ಇಸ್ರೇಲರಿಗೂ ಮತ್ತು ಈಜಿಪ್ಟಿನವರಿಗೂ ನಾನು ವ್ಯತ್ಯಾಸ ಮಾಡಿದ್ದೇನೆಂದು ಆಗ ನೀವು ತಿಳಿದುಕೊಳ್ಳುವಿರಿ. ಆಗ ನಿಮ್ಮ ಈ ಗುಲಾಮರೆಲ್ಲರೂ (ಈಜಿಪ್ಟಿನ ಅಧಿಕಾರಿಗಳು) ನನ್ನ ಬಳಿಗೆ ಬಂದು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸುವರು.’ ಅವರು, ‘ಹೊರಟುಹೋಗಿ, ನಿಮ್ಮ ಜನರೆಲ್ಲರನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿರಿ’ ಎಂದು ಹೇಳುವರು. ಆಗ ನಾನು ಫರೋಹನ ಬಳಿಯಿಂದ ಬಿಟ್ಟುಹೋಗುವೆನು” ಅಂದನು.

ಬಳಿಕ ಯೆಹೋವನು ಮೋಶೆಗೆ, “ಫರೋಹನು ನಿನ್ನ ಮಾತಿಗೆ ಕಿವಿಗೊಡುವುದಿಲ್ಲ. ಯಾಕೆಂದರೆ ನಾನು ನನ್ನ ಮಹಾಶಕ್ತಿಯನ್ನು ಈಜಿಪ್ಟಿನಲ್ಲಿ ತೋರಿಸಬೇಕಾಗಿದೆ” ಅಂದನು. 10 ಯೆಹೋವನು ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಫರೋಹನು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ; ಆದ್ದರಿಂದ ಮೋಶೆ ಆರೋನರು ಈ ಅದ್ಭುತಕಾರ್ಯಗಳನ್ನೆಲ್ಲಾ ಮಾಡಿದರು.

ಮತ್ತಾಯ 23:29-36

29 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟುತ್ತೀರಿ. ಒಳ್ಳೆಯವರಾಗಿ ಜೀವಿಸದವರ ಗೋರಿಗಳಿಗೆ ಹೋಗಿ ಗೌರವ ತೋರಿಸುತ್ತೀರಿ. 30 ‘ನಮ್ಮ ಪಿತೃಗಳ ಕಾಲದಲ್ಲಿ ನಾವು ಇದ್ದಿದ್ದರೆ ಈ ಪ್ರವಾದಿಗಳನ್ನು ಕೊಲ್ಲುವುದಕ್ಕೆ ಅವರಿಗೆ ಸಹಾಯ ಮಾಡುತ್ತಿರಲಿಲ್ಲ’ ಎಂದು ಹೇಳುತ್ತೀರಿ. 31 ಆ ಪ್ರವಾದಿಗಳನ್ನು ಕೊಂದವರ ಮಕ್ಕಳು (ಸಂತತಿಯವರು) ನೀವೇ ಎಂಬುದಕ್ಕೆ ಇದೇ ಆಧಾರವಾಗಿದೆ. 32 ನಿಮ್ಮ ಪಿತೃಗಳು ಪ್ರಾರಂಭಿಸಿದ ಆ ಪಾಪವನ್ನು ನೀವು ಪೂರ್ತಿಮಾಡುವಿರಿ!

33 “ನೀವು ಸರ್ಪಗಳು! ನೀವು ವಿಷಕರವಾದ ಹಾವುಗಳ ಕುಟುಂಬದವರು! ನೀವು ದೇವರಿಂದ ತಪ್ಪಿಸಿಕೊಳ್ಳಲಾರಿರಿ. ನೀವೆಲ್ಲರು ಅಪರಾಧಿಗಳೆಂಬ ತೀರ್ಪುಹೊಂದಿ ನರಕಕ್ಕೆ ಹೋಗುವಿರಿ! 34 ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಉಪದೇಶಕರನ್ನೂ ಕಳುಹಿಸುತ್ತೇನೆ. ನೀವು ಅವರಲ್ಲಿ ಕೆಲವರನ್ನು ಕೊಲ್ಲುವಿರಿ; ಇನ್ನು ಕೆಲವರನ್ನು ಶಿಲುಬೆಗೇರಿಸುವಿರಿ; ಇತರ ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಹೊಡೆಯುವಿರಿ; ನೀವು ಅವರನ್ನು ಊರಿಂದ ಊರಿಗೆ ಅಟ್ಟಿಬಿಡುವಿರಿ.

35 “ಆದ್ದರಿಂದ ಭೂಮಿಯ ಮೇಲೆ ಕೊಲ್ಲಲ್ಪಟ್ಟ ಎಲ್ಲಾ ಸತ್ಪುರುಷರ ಕೊಲೆಯ ಅಪರಾಧಕ್ಕೆ ನೀವು ಗುರಿಯಾಗುವಿರಿ. ಸತ್ಪುರುಷನಾದ ಹೇಬೆಲನನ್ನು ಮೊದಲುಗೊಂಡು ಬರಕೀಯನ ಮಗನಾದ ಜಕರೀಯನನ್ನು ಕೊಂದದ್ದಕ್ಕೆ ನೀವು ಅಪರಾಧಿಗಳಾಗುವಿರಿ. ಜಕರೀಯನು ದೇವಾಲಯಕ್ಕೂ ಯಜ್ಞವೇದಿಕೆಗೂ ನಡುವೆ ಕೊಲ್ಲಲ್ಪಟ್ಟನು. 36 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದಲ್ಲಿ ಜೀವಿಸುತ್ತಿರುವ ನಿಮ್ಮ ಮೇಲೆ ಈ ಅಪರಾಧಗಳೆಲ್ಲಾ ಬರುತ್ತವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International