Revised Common Lectionary (Semicontinuous)
149 ಯೆಹೋವನಿಗೆ ಸ್ತೋತ್ರವಾಗಲಿ.
ಯೆಹೋವನ ಹೊಸ ಕಾರ್ಯಗಳಿಗಾಗಿ ಆತನಿಗೆ ಹೊಸ ಹಾಡನ್ನು ಹಾಡಿರಿ!
ಆತನ ಭಕ್ತರ ಸಭೆಯಲ್ಲಿ ಆತನನ್ನು ಸಂಕೀರ್ತಿಸಿರಿ.
2 ಇಸ್ರೇಲರು ತಮ್ಮ ಸೃಷ್ಟಿಕರ್ತನಲ್ಲಿ ಉಲ್ಲಾಸಿಸಲಿ!
ಚೀಯೋನಿನ ಜನರು ತಮ್ಮ ರಾಜನಲ್ಲಿ ಹರ್ಷಿಸಲಿ.
3 ಅವರು ನೃತ್ಯಮಾಡುತ್ತಾ ಝಲ್ಲರಿಗಳನ್ನು ಬಡಿಯುತ್ತಾ
ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸ್ತುತಿಸಲಿ.
4 ಯೆಹೋವನು ತನ್ನ ಜನರಲ್ಲಿ ಸಂತೋಷಿಸುವನು.
ಆತನು ತನ್ನ ದೀನಜನರಿಗಾಗಿ ಅದ್ಭುತಕಾರ್ಯವನ್ನು ಮಾಡಿ ಅವರನ್ನು ರಕ್ಷಿಸಿದನು!
5 ಆತನ ಭಕ್ತರೇ, ನಿಮ್ಮ ವಿಜಯದಲ್ಲಿ ಉಲ್ಲಾಸಿಸಿರಿ!
ಹಾಸಿಗೆಯ ಮೇಲಿರುವಾಗಲೂ ಸಂತೋಷದಿಂದಿರಿ.
6 ಜನರು ಆತನಿಗೆ ಗಟ್ಟಿಯಾಗಿ ಸ್ತೋತ್ರಮಾಡುತ್ತಾ
ತಮ್ಮ ಇಬ್ಭಾಯಿ ಕತ್ತಿಗಳನ್ನು ಕೈಗಳಲ್ಲಿ ತೆಗೆದುಕೊಳ್ಳಲಿ.
7 ಅವರು ಹೋಗಿ ತಮ್ಮ ಶತ್ರುಗಳನ್ನು ದಂಡಿಸಲಿ;
ಅನ್ಯ ಜನರನ್ನು ದಂಡಿಸಲಿ.
8 ದೇವಜನರು ಆ ರಾಜರುಗಳನ್ನು ಮತ್ತು ಪ್ರಮುಖರನ್ನು
ಸರಪಣಿಗಳಿಂದಲೂ ಕಬ್ಬಿಣದ ಬೇಡಿಗಳಿಂದಲೂ ಬಂಧಿಸುವರು.
9 ಆತನ ಆಜ್ಞೆಗನುಸಾರವಾಗಿ ಆತನ ಭಕ್ತರು ತಮ್ಮ ಶತ್ರಗಳನ್ನು ದಂಡಿಸುವರು.
ಆತನು ತನ್ನ ಭಕ್ತರಿಗೆ ಒಳ್ಳೆಯವನಾಗಿದ್ದಾನೆ.
ಯೆಹೋವನಿಗೆ ಸ್ತೋತ್ರವಾಗಲಿ.
ಮೂರು ದಿನ ಕಾರ್ಗತ್ತಲೆ
21 ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು. ಆಗ ಕಾರ್ಗತ್ತಲೆಯು ಈಜಿಪ್ಟನ್ನು ಆವರಿಸುವುದು. ಆ ಕಾರ್ಗತ್ತಲೆಯಿಂದ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು.
22 ಮೋಶೆ ತನ್ನ ಕೈಯನ್ನು ಆಕಾಶದ ಕಡೆಗೆ ಚಾಚಿದಾಗ ಕಾರ್ಗತ್ತಲು ಈಜಿಪ್ಟನ್ನು ಆವರಿಸಿತು. ಕಾರ್ಗತ್ತಲು ಈಜಿಪ್ಟಿನಲ್ಲಿ ಮೂರು ದಿನಗಳವರೆಗೆ ಇತ್ತು. 23 ಈ ಮೂರು ದಿನಗಳಲ್ಲಿ ಯಾರೂ ಒಬ್ಬರನ್ನೊಬ್ಬರು ನೋಡಲಾಗಲಿಲ್ಲ. ಯಾವ ಸ್ಥಳಕ್ಕೂ ಹೋಗಲಿಲ್ಲ. ಆದರೆ ಇಸ್ರೇಲರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಬೆಳಕಿತ್ತು.
24 ಫರೋಹನು ಮತ್ತೆ ಮೋಶೆಯನ್ನು ಕರೆಸಿ, “ಹೋಗಿ, ಯೆಹೋವನನ್ನು ಆರಾಧಿಸಿರಿ! ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಆದರೆ ನೀವು ನಿಮ್ಮ ಕುರಿಗಳನ್ನು ದನಕರುಗಳನ್ನು ಇಲ್ಲಿಯೇ ಬಿಟ್ಟುಹೋಗಬೇಕು” ಎಂದು ಹೇಳಿದನು.
25 ಮೋಶೆಯು, “ನಾವು ನಮ್ಮ ಕುರಿಗಳನ್ನೂ ದನಕರುಗಳನ್ನೂ ಕಾಣಿಕೆಗಳಿಗಾಗಿ ಮತ್ತು ಯಜ್ಞಗಳಿಗಾಗಿ ತೆಗೆದುಕೊಂಡು ಹೋಗಬೇಕು; ಮಾತ್ರವಲ್ಲದೆ 26 ನಮ್ಮ ಪ್ರಾಣಿಗಳನ್ನೆಲ್ಲಾ ತೆಗೆದುಕೊಂಡು ಹೋಗುವೆವು. ಒಂದನ್ನಾದರೂ ಬಿಟ್ಟುಹೋಗುವುದಿಲ್ಲ; ಯಾವ ಪಶುಗಳನ್ನು ಅರ್ಪಿಸಬೇಕೆಂಬುದು ಅಲ್ಲಿಗೆ ಹೋದಾಗಲೇ ನಮಗೆ ತಿಳಿಯುವುದು. ಆದ್ದರಿಂದ, ನಾವು ಇವುಗಳನ್ನೆಲ್ಲಾ ನಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು” ಎಂದು ಹೇಳಿದನು.
27 ಯೆಹೋವನು ಫರೋಹನ ಹೃದಯವನ್ನು ಮತ್ತೆ ಕಠಿಣಗೊಳಿಸಿದನು. ಆದ್ದರಿಂದ ಫರೋಹನು ಅವರನ್ನು ಕಳುಹಿಸಿಕೊಡಲಿಲ್ಲ. 28 ಫರೋಹನು ಮೋಶೆಗೆ, “ಇಲ್ಲಿಂದ ತೊಲಗಿ ಹೋಗು! ನೀನು ನನ್ನ ಸನ್ನಿಧಿಗೆ ಇನ್ನು ಮೇಲೆ ಬರಕೂಡದು. ನೀನು ಮತ್ತೆ ಬಂದರೆ ನಿನಗೆ ಮರಣದಂಡನೆ ವಿಧಿಸುವೆನು” ಎಂದನು.
29 ಅದಕ್ಕೆ ಮೋಶೆಯು ಫರೋಹನಿಗೆ, “ಸರಿ, ಇನ್ನು ಮೇಲೆ ನಾನು ನಿನ್ನ ಸನ್ನಿಧಿಗೆ ಬರುವುದೇ ಇಲ್ಲ” ಎಂದು ಹೇಳಿದನು.
15 ಬೋಧಕರನ್ನು ಕಳುಹಿಸದ ಹೊರತು ಜನರಿಗೆ ತಿಳಿಸುವುದಾದರೂ ಹೇಗೆ? ಆದ್ದರಿಂದಲೇ, “ಸುವಾರ್ತಿಕರ ಪಾದಗಳು ಸುಂದರವಾಗಿವೆ”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
16 ಆದರೆ ಯೆಹೂದ್ಯರೆಲ್ಲರೂ ಆ ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. “ಪ್ರಭುವೇ, ನಾವು ಅವರಿಗೆ ಹೇಳಿದ ಸಂಗತಿಗಳನ್ನು ಯಾರು ನಂಬಿದರು?”(B) ಎಂದು ಯೆಶಾಯ ಹೇಳಿದ್ದಾನೆ. 17 ಹೀಗಿರಲು, ಸುವಾರ್ತೆಯನ್ನು ಕೇಳುವುದರ ಮೂಲಕ ನಂಬಿಕೆ ಬರುತ್ತದೆ. ಕ್ರಿಸ್ತನ ಬಗ್ಗೆ ಹೇಳುವುದರ ಮೂಲಕ ಸುವಾರ್ತೆ ಪ್ರಕಟವಾಗುತ್ತದೆ.
18 ಆದರೆ, “ಜನರು ಸುವಾರ್ತೆಯನ್ನು ಕೇಳಲಿಲ್ಲವೇ?” ಎಂದು ನಾನು ಪ್ರಶ್ನಿಸುತ್ತೇನೆ. ಹೌದು, ಅವರು ಕೇಳಿದರು ಪವಿತ್ರ ಗ್ರಂಥ ಹೇಳುವಂತೆ:
“ಅವರ ಸ್ವರಗಳು ಲೋಕದಲ್ಲೆಲ್ಲಾ ಪ್ರಸಾರಗೊಂಡವು.
ಅವರ ಮಾತುಗಳು ಪ್ರಪಂಚದ ಎಲ್ಲಾ ಕಡೆಗಳಿಗೂ ಹೋದವು.”(C)
19 “ಇಸ್ರೇಲಿನ ಜನರು ಅರ್ಥಮಾಡಿಕೊಳ್ಳಲಿಲ್ಲವೇ?” ಎಂದು ನಾನು ಮತ್ತೆ ಕೇಳುತ್ತೇನೆ. ಹೌದು, ಅವರು ಅರ್ಥಮಾಡಿಕೊಂಡರು. ಮೊದಲನೆಯದಾಗಿ, ದೇವರು ಮೋಶೆಯ ಮೂಲಕ ಹೀಗೆ ತಿಳಿಸಿದ್ದಾನೆ:
“ಜನಾಂಗವೆನಿಸಿಕೊಳ್ಳದವರ ಮೂಲಕ ಹೀಗೆ ನಾನು ನಿಮ್ಮಲ್ಲಿ ಅಸೂಯೆ ಹುಟ್ಟಿಸುವೆನು.
ಬುದ್ದಿಹೀನರೆನಿಸಿಕೊಂಡ ಜನಾಂಗದ ಮೂಲಕ ನಾನು ನಿಮ್ಮನ್ನು ಸಿಟ್ಟಿಗೆಬ್ಬಿಸುವೆನು.”(D)
20 ಬಳಿಕ ಯೆಶಾಯನು ದೇವರ ಈ ನುಡಿಯನ್ನು ಧೈರ್ಯವಾಗಿ ಹೇಳಿದ್ದಾನೆ:
“ನನ್ನನ್ನು ಹುಡುಕದೆ ಇದ್ದ ಜನರು
ನನ್ನನ್ನು ಕಂಡುಕೊಂಡರು.
ನನಗಾಗಿ ಕೇಳಿಕೊಳ್ಳದ ಜನರಿಗೆ ನನ್ನನ್ನು ತೋರ್ಪಡಿಸಿಕೊಂಡೆನು.”(E)
21 ಆದರೆ ಇಸ್ರೇಲಿನ ಜನರ ಬಗ್ಗೆ ದೇವರು:
“ನಾನು ಆ ಜನರಿಗಾಗಿ ದಿನವೆಲ್ಲಾ ಕಾದುಕೊಂಡಿದ್ದೆನು,
ಆದರೆ ಅವರು ವಿಧೇಯರಾಗಲಿಲ್ಲ; ನನ್ನನ್ನು ಹಿಂಬಾಲಿಸಲಿಲ್ಲ” ಎನ್ನುತ್ತಾನೆ.(F)
Kannada Holy Bible: Easy-to-Read Version. All rights reserved. © 1997 Bible League International