Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 149

149 ಯೆಹೋವನಿಗೆ ಸ್ತೋತ್ರವಾಗಲಿ.
ಯೆಹೋವನ ಹೊಸ ಕಾರ್ಯಗಳಿಗಾಗಿ ಆತನಿಗೆ ಹೊಸ ಹಾಡನ್ನು ಹಾಡಿರಿ!
    ಆತನ ಭಕ್ತರ ಸಭೆಯಲ್ಲಿ ಆತನನ್ನು ಸಂಕೀರ್ತಿಸಿರಿ.
ಇಸ್ರೇಲರು ತಮ್ಮ ಸೃಷ್ಟಿಕರ್ತನಲ್ಲಿ ಉಲ್ಲಾಸಿಸಲಿ!
    ಚೀಯೋನಿನ ಜನರು ತಮ್ಮ ರಾಜನಲ್ಲಿ ಹರ್ಷಿಸಲಿ.
ಅವರು ನೃತ್ಯಮಾಡುತ್ತಾ ಝಲ್ಲರಿಗಳನ್ನು ಬಡಿಯುತ್ತಾ
    ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸ್ತುತಿಸಲಿ.
ಯೆಹೋವನು ತನ್ನ ಜನರಲ್ಲಿ ಸಂತೋಷಿಸುವನು.
    ಆತನು ತನ್ನ ದೀನಜನರಿಗಾಗಿ ಅದ್ಭುತಕಾರ್ಯವನ್ನು ಮಾಡಿ ಅವರನ್ನು ರಕ್ಷಿಸಿದನು!
ಆತನ ಭಕ್ತರೇ, ನಿಮ್ಮ ವಿಜಯದಲ್ಲಿ ಉಲ್ಲಾಸಿಸಿರಿ!
    ಹಾಸಿಗೆಯ ಮೇಲಿರುವಾಗಲೂ ಸಂತೋಷದಿಂದಿರಿ.

ಜನರು ಆತನಿಗೆ ಗಟ್ಟಿಯಾಗಿ ಸ್ತೋತ್ರಮಾಡುತ್ತಾ
    ತಮ್ಮ ಇಬ್ಭಾಯಿ ಕತ್ತಿಗಳನ್ನು ಕೈಗಳಲ್ಲಿ ತೆಗೆದುಕೊಳ್ಳಲಿ.
ಅವರು ಹೋಗಿ ತಮ್ಮ ಶತ್ರುಗಳನ್ನು ದಂಡಿಸಲಿ;
    ಅನ್ಯ ಜನರನ್ನು ದಂಡಿಸಲಿ.
ದೇವಜನರು ಆ ರಾಜರುಗಳನ್ನು ಮತ್ತು ಪ್ರಮುಖರನ್ನು
    ಸರಪಣಿಗಳಿಂದಲೂ ಕಬ್ಬಿಣದ ಬೇಡಿಗಳಿಂದಲೂ ಬಂಧಿಸುವರು.
ಆತನ ಆಜ್ಞೆಗನುಸಾರವಾಗಿ ಆತನ ಭಕ್ತರು ತಮ್ಮ ಶತ್ರಗಳನ್ನು ದಂಡಿಸುವರು.
    ಆತನು ತನ್ನ ಭಕ್ತರಿಗೆ ಒಳ್ಳೆಯವನಾಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ.

ವಿಮೋಚನಕಾಂಡ 9:1-7

ಹೊಲದ ಪ್ರಾಣಿಗಳ ವ್ಯಾಧಿ

ಆಗ ಯೆಹೋವನು ಮೋಶೆಗೆ, “ನೀನು ಫರೋಹನ ಬಳಿಗೆ ಹೋಗಿ ಅವನಿಗೆ ಹೀಗೆ ಹೇಳು: ‘ಇಬ್ರಿಯರ ದೇವರಾದ ಯೆಹೋವನು ಹೇಳುವುದೇನೆಂದರೆ, ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ. ನೀನು ಅವರನ್ನು ಬಿಡದೆ ಇನ್ನೂ ತಡೆದರೆ, ನಾನು ಕೈಯೆತ್ತಿ ಹೊಲಗಳಲ್ಲಿರುವ ನಿನ್ನ ಪಶುಗಳನ್ನೂ ನಿನ್ನ ಎಲ್ಲಾ ಕುದುರೆಗಳನ್ನೂ ಕತ್ತೆಗಳನ್ನೂ ಒಂಟೆಗಳನ್ನೂ ದನಕರುಗಳನ್ನೂ ಕುರಿಗಳನ್ನೂ ಘೋರವ್ಯಾದಿಯಿಂದ ಸಾಯಿಸುವೆನು. ಆದರೆ ಇಸ್ರೇಲರ ಪಶುಗಳಿಗೂ ಈಜಿಪ್ಟಿನವರ ಪಶುಗಳಿಗೂ ವ್ಯತ್ಯಾಸ ಮಾಡುವೆನು. ಇಸ್ರೇಲರ ಯಾವ ಪಶುವೂ ಸಾಯುವುದಿಲ್ಲ. ಇದು ನಡೆಯತಕ್ಕ ಕಾಲವನ್ನು ನಿರ್ಣಯಿಸಿ ನಾಳೆಯೇ ಇದನ್ನು ಕಾರ್ಯರೂಪಕ್ಕೆ ತರುವೆನು’ ಎಂದು ಹೇಳಬೇಕು” ಅಂದನು.

ಮರುದಿನ ಯೆಹೋವನು ಈ ಕಾರ್ಯವನ್ನು ಮಾಡಿದನು. ಈಜಿಪ್ಟಿನ ಹೊಲಗಳಲ್ಲಿದ್ದ ಪಶುಗಳೆಲ್ಲಾ ಸತ್ತುಹೋದವು; ಆದರೆ ಇಸ್ರೇಲರಿಗೆ ಸೇರಿದ ಯಾವ ಪಶುವೂ ಸಾಯಲಿಲ್ಲ. ಇಸ್ರೇಲರ ಯಾವ ಪಶುವಾದರೂ ಸತ್ತಿದೆಯೋ ಎಂದು ತಿಳಿದುಕೊಳ್ಳಲು ಫರೋಹನು ಜನರನ್ನು ಕಳುಹಿಸಿದನು. ಇಸ್ರೇಲರ ಪಶುಗಳಲ್ಲಿ ಒಂದಾದರೂ ಸತ್ತಿರಲಿಲ್ಲ. ಆದರೂ ಫರೋಹನು ತನ್ನ ಹೃದಯವನ್ನು ಕಠಿಣಪಡಿಸಿಕೊಂಡದ್ದರಿಂದ ಇಸ್ರೇಲರನ್ನು ಹೋಗಗೊಡಿಸಲಿಲ್ಲ.

2 ಕೊರಿಂಥದವರಿಗೆ 12:11-21

ಕೊರಿಂಥದ ಕ್ರೈಸ್ತರ ಮೇಲೆ ಪೌಲನಿಗಿರುವ ಪ್ರೀತಿ

11 ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ. ಅದಕ್ಕೆ ನೀವೇ ಕಾರಣರು. ನೀವೇ ನನ್ನ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳಬೇಕು. ನನಗೆ ಯಾವ ಬೆಲೆಯೂ ಇಲ್ಲ. ನಾನು ಕೇವಲ ಅಲ್ಪನಾಗಿದ್ದೇನೆ, ಆದರೆ ಆ “ಮಹಾಅಪೊಸ್ತಲರು” ನನಗಿಂತ ಯಾವುದರಲ್ಲಿಯೂ ಮಿಗಿಲಾಗಿಲ್ಲ. 12 ನಾನು ನಿಮ್ಮೊಂದಿಗಿದ್ದಾಗ ನಾನೂ ಅಪೊಸ್ತಲನೆಂಬುದನ್ನು ನಿರೂಪಿಸುವಂಥ ಸೂಚಕಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು, ಅದ್ಭುತಕಾರ್ಯಗಳನ್ನು ಮಾಡಿದೆನು. 13 ನಾನು ಈ ಕಾರ್ಯಗಳನ್ನು ಬಹು ತಾಳ್ಮೆಯಿಂದ ಮಾಡಿದೆನು. ಆದ್ದರಿಂದ ಇತರ ಸಭೆಗಳಿಗೆ ದೊರೆತವುಗಳೆಲ್ಲ ನಿಮಗೂ ದೊರೆತವು. ಒಂದೇ ಒಂದು ವ್ಯತ್ಯಾಸವೇನೆಂದರೆ, ನಾನು ನಿಮಗೆ ಭಾರವಾಗಿರಲಿಲ್ಲ. ಈ ವಿಷಯದಲ್ಲಿ ನನ್ನನ್ನು ಕ್ಷಮಿಸಿರಿ.

14 ಈಗ ನಿಮ್ಮನ್ನು ಮೂರನೆ ಸಲ ಸಂದರ್ಶಿಸಲು ಸಿದ್ಧನಾಗಿದ್ದೇನೆ, ಆದರೆ ನಾನು ನಿಮಗೆ ಭಾರವಾಗಿರುವುದಿಲ್ಲ. ನಿಮ್ಮ ಸ್ವತ್ತುಗಳಲ್ಲಿ ಯಾವುದೂ ನನಗೆ ಬೇಕಾಗಿಲ್ಲ. ನನಗೆ ಬೇಕಾಗಿರುವುದು ನೀವೇ. ಮಕ್ಕಳು ತಂದೆತಾಯಿಗಳಿಗೋಸ್ಕರ ಹಣವನ್ನು ಉಳಿಸಿ ಕೊಡಬೇಕಾಗಿಲ್ಲ. ತಂದೆತಾಯಿಗಳು ಹಣವನ್ನು ಉಳಿಸಿ ಮಕ್ಕಳಿಗೆ ಕೊಡಬೇಕು. 15 ಆದ್ದರಿಂದ ನನ್ನಲ್ಲಿರುವುದನ್ನೆಲ್ಲಾ ನಿಮಗೆ ಕೊಡಲು ಸಂತೋಷಿಸುತ್ತೇನೆ. ನನ್ನನ್ನೇ ನಿಮಗೆ ಕೊಟ್ಟುಬಿಡುತ್ತೇನೆ. ನಾನು ನಿಮ್ಮನ್ನು ಬಹಳವಾಗಿ ಪ್ರೀತಿಸಿದರೆ, ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುವಿರೋ?

16 ನಾನು ನಿಮಗೆ ಭಾರವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಸುಳ್ಳು ಹೇಳಿ ಕುತಂತ್ರದಿಂದ ನಿಮ್ಮನ್ನು ಬಲೆಗೆ ಬೀಳಿಸುವವನಾಗಿದ್ದೇನೆಂದು ನೀವು ಯೋಚಿಸಿಕೊಂಡಿದ್ದೀರಿ. 17 ನಾನು ನಿಮ್ಮ ಬಳಿಗೆ ಕಳುಹಿಸಿದ ಜನರಲ್ಲಿ ಯಾರ ಮೂಲಕವಾದರೂ ನಿಮ್ಮನ್ನು ಮೋಸಗೊಳಿಸಿದೆನೇ? ಇಲ್ಲ! ನಾನು ಮೋಸಗೊಳಿಸಲಿಲ್ಲ ಎಂಬುದು ನಿಮಗೆ ಗೊತ್ತಿದೆ. 18 ನಿಮ್ಮ ಬಳಿಗೆ ಹೋಗಬೇಕೆಂದು ತೀತನನ್ನು ಕೇಳಿಕೊಂಡೆನು. ಅಲ್ಲದೆ ನಮ್ಮ ಸಹೋದರನನ್ನು ಅವನೊಂದಿಗೆ ಕಳುಹಿಸಿದೆನು. ಅವನು ನಿಮ್ಮನ್ನು ಮೋಸಗೊಳಿಸಲಿಲ್ಲ. ಅವನು ಮೋಸ ಮಾಡಿದನೇ? ಇಲ್ಲ! ಅವನು ಮತ್ತು ನಾನು ಒಂದೇ ಆತ್ಮನಿಂದ ಪ್ರೇರಿತರಾಗಿ ಒಂದೇ ರೀತಿಯಲ್ಲಿ ನಡೆದುಕೊಂಡೆವು.

19 ಈವರೆಗೂ ನಾವು ನಿಮ್ಮೊಂದಿಗೆ ನಮ್ಮ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತೀರೋ? ಇಲ್ಲ! ನಾವು ಕ್ರಿಸ್ತನಲ್ಲಿ ಈ ಸಂಗತಿಗಳನ್ನು ದೇವರ ಮುಂದೆ ಹೇಳುತ್ತಿದ್ದೇವೆ. ನೀವು ನಮ್ಮ ಪ್ರಿಯ ಸ್ನೇಹಿತರು. ನಾವು ಮಾಡುವ ಪ್ರತಿಯೊಂದೂ ನಿಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುವುದಕ್ಕಾಗಿಯೇ. 20 ಕಾರಣವೇನೆಂದರೆ, ನಾನು ಬಂದಾಗ ನನ್ನ ಅಪೇಕ್ಷೆಗೆ ತಕ್ಕಂತೆ ನೀವು ಇರುವುದಿಲ್ಲವೆಂಬ ಭಯ ನನಗಿದೆ. ನಿಮ್ಮ ಸಭೆಯಲ್ಲಿ ವಾದ, ಹೊಟ್ಟೆಕಿಚ್ಚು, ಕೋಪ, ಸ್ವಾರ್ಥಪರವಾದ ಹೋರಾಟ, ಕೆಟ್ಟಮಾತು, ಸುಳ್ಳುಸುದ್ದಿ, ಗರ್ವ ಮತ್ತು ಗಲಿಬಿಲಿ ಇರಬಹುದೆಂಬ ಭಯ ನನಗಿದೆ. 21 ನಾನು ನಿಮ್ಮ ಬಳಿಗೆ ಮತ್ತೆ ಬಂದಾಗ ನನ್ನ ದೇವರು ನನ್ನನ್ನು ನಿಮ್ಮ ಮುಂದೆ ದೀನನನ್ನಾಗಿ ಮಾಡಬಹುದೆಂಬ ಭಯವಿದೆ. ನಿಮ್ಮಲ್ಲಿ ಪಾಪಕ್ಕೆ ಒಳಗಾಗಿರುವ ಅನೇಕರಿಂದ ನಾನು ದುಃಖಿತನಾಗಬಹುದು. ಏಕೆಂದರೆ, ಆ ಜನರು ತಮ್ಮ ದುಷ್ಟಜೀವಿತದ ಬಗ್ಗೆ, ತಮ್ಮ ಲೈಂಗಿಕ ಪಾಪಗಳ ಬಗ್ಗೆ ಮತ್ತು ನಾಚಿಕೆಕರವಾದ ಕಾರ್ಯಗಳ ಬಗ್ಗೆ ದುಃಖಪಟ್ಟಿಲ್ಲ ಮತ್ತು ತಮ್ಮ ಹೃದಯಗಳನ್ನು ಮಾರ್ಪಾಟು ಮಾಡಿಕೊಂಡಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International