Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 83:1-4

ಸ್ತುತಿಗೀತೆ. ರಚನೆಗಾರ: ಆಸಾಫ.

83 ದೇವರೇ, ಸುಮ್ಮನಿರಬೇಡ!
    ನಿನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಡ.
    ದೇವರೇ, ದಯವಿಟ್ಟು ಮಾತನಾಡು.
ದೇವರೇ, ನಿನ್ನ ಶತ್ರುಗಳು ನಿನಗೆ ವಿರೋಧವಾಗಿ ಸಂಚು ಮಾಡುತ್ತಿದ್ದಾರೆ.
    ಬಹುಬೇಗನೆ ಅವರು ಆಕ್ರಮಣ ಮಾಡಲಿದ್ದಾರೆ.
ನಿನ್ನ ಜನರಿಗೆ ವಿರೋಧವಾಗಿ ರಹಸ್ಯ ಯೋಜನೆಗಳನ್ನು ಮಾಡುತ್ತಿದ್ದಾರೆ.
    ನಿನ್ನ ಪ್ರಿಯರ ವಿರೋಧವಾಗಿ ಅವರು ಸಂಚು ಮಾಡುತ್ತಿದ್ದಾರೆ.
ಅವರು ಹೀಗೆಂದುಕೊಳ್ಳುತ್ತಿದ್ದಾರೆ: “ಬನ್ನಿರಿ, ಅವರನ್ನು ಸಂಪೂರ್ಣವಾಗಿ ನಾಶಮಾಡೋಣ.
    ಆಗ ‘ಇಸ್ರೇಲ್’ ಎಂಬ ಹೆಸರೇ ಅಳಿದುಹೋಗುವುದು.”

ಕೀರ್ತನೆಗಳು 83:13-18

13 ಗಾಳಿಗೆ ತೂರಿಹೋಗುವ ಮೊಟಕುಬೇರಿನ ಕಳೆಯಂತೆ ಅವರನ್ನು ಮಾಡು.
    ಗಾಳಿಯು ಹೊಟ್ಟನ್ನು ಚದರಿಸುವಂತೆ ಅವರನ್ನು ಚದರಿಸು.
14 ಕಾಡನ್ನು ನಾಶಮಾಡುವ ಬೆಂಕಿಯಂತೆಯೂ
    ಬೆಟ್ಟಗಳನ್ನು ಸುಟ್ಟುಹಾಕುವ ಅಗ್ನಿಜ್ವಾಲೆಯಂತೆಯೂ ಅವರನ್ನು ನಾಶಮಾಡು.
15 ಬಿರುಗಾಳಿಯಿಂದ ಕೊಚ್ಚಿಕೊಂಡು ಹೋಗುವ ಧೂಳಿನಂತೆ ಅವರನ್ನು ಬೆನ್ನಟ್ಟಿಹೋಗು.
    ಸುಂಟರ ಗಾಳಿಯಂತೆ ಅವರನ್ನು ನಡುಗಿಸು.
16 ಯೆಹೋವನೇ, ತಾವು ನಿಜವಾಗಿಯೂ ಬಲಹೀನರೆಂಬುದನ್ನು ಅವರು ಕಲಿತುಕೊಳ್ಳುವಂತೆ ಮಾಡು;
    ಆಗ ಅವರು ನಿನ್ನ ಹೆಸರನ್ನು ಆರಾಧಿಸಬೇಕೆನ್ನುವರು.
17 ಅವರನ್ನು ಭಯವೂ ನಾಚಿಕೆಯೂ ಕವಿದುಕೊಂಡೇ ಇರಲಿ.
    ಅವರು ಅವಮಾನಗೊಂಡು ನಾಶವಾಗಲಿ.
18 ಆಗ ಅವರು ನೀನೊಬ್ಬನೇ ದೇವರೆಂದೂ
    ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು.
ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ
    ದೇವರೆಂದು ಅವರು ಅರಿತುಕೊಳ್ಳುವರು.

ವಿಮೋಚನಕಾಂಡ 4:10-31

10 ಮೋಶೆಯು ಯೆಹೋವನಿಗೆ, “ಸ್ವಾಮೀ, ನಾನು ನಿನಗೆ ಸತ್ಯವಾಗಿ ಹೇಳುವುದೇನೆಂದರೆ ನನಗೆ ವಾಕ್ಚಾತುರ್ಯವಿಲ್ಲ. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು.

11 ಆಗ ಯೆಹೋವನು ಅವನಿಗೆ, “ಮನುಷ್ಯನ ಬಾಯನ್ನು ಯಾರು ಮಾಡಿದರು? ಮನುಷ್ಯನನ್ನು ಕಿವುಡನನ್ನಾಗಿ ಅಥವಾ ಮೂಕನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನನ್ನು ಕುರುಡನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನಿಗೆ ದೃಷ್ಟಿಕೊಟ್ಟವನು ಯಾರು? ಯೆಹೋವನಾದ ನಾನಲ್ಲವೇ. 12 ಈಗ ಹೋಗು. ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು. ನೀನು ಹೇಳಬೇಕಾದ ಮಾತುಗಳನ್ನು ನಾನು ನಿನಗೆ ಕೊಡುವೆನು” ಎಂದು ಹೇಳಿದನು.

13 ಆದರೆ ಮೋಶೆ, “ನನ್ನ ಯೆಹೋವನೇ, ದಯಮಾಡಿ ನನ್ನ ಬದಲಾಗಿ ಬೇರೊಬ್ಬನನ್ನು ಕಳುಹಿಸು” ಎಂದು ಬೇಡಿಕೊಂಡನು.

14 ಯೆಹೋವನು ಮೋಶೆಯ ಮೇಲೆ ಕೋಪಗೊಂಡು, “ಹಾಗಾದರೆ ನಿನ್ನ ಅಣ್ಣನಾದ ಲೇವಿ ಕುಟುಂಬದ ಆರೋನನನ್ನು ನಾನು ಉಪಯೋಗಿಸುವೆನು. ಅವನಿಗೆ ವಾಕ್ಚಾತುರ್ಯವಿದೆ. ಈಗ ಅವನು ನಿನ್ನ ಬಳಿಗೆ ಬರುತ್ತಿದ್ದಾನೆ. ನಿನ್ನನ್ನು ಕಂಡು ಅವನಿಗೆ ಸಂತೋಷವಾಗುವುದು. 15 ಅವನು ನಿನ್ನೊಡನೆ ಫರೋಹನ ಬಳಿಗೆ ಬರುವನು. ನೀನು ಹೇಳಬೇಕಾದದ್ದನ್ನು ನಾನೇ ನಿನಗೆ ತಿಳಿಸುವೆನು. ಅದನ್ನು ನೀನು ಆರೋನನಿಗೆ ತಿಳಿಸು. ಆರೋನನು ಫರೋಹನೊಡನೆ ಸರಿಯಾಗಿ ಮಾತಾಡುವನು. 16 ಆರೋನನು ಜನರೊಂದಿಗೂ ನಿನ್ನ ಪರವಾಗಿಯೂ ಮಾತಾಡುವನು. ನೀನು ಮಹಾರಾಜನಂತೆ ಇರುವೆ; ಅವನು ನಿನಗೆ ಅಧಿಕೃತ ಮಾತುಗಾರನಂತೆ ಇರುವನು.[a] 17 ಆದ್ದರಿಂದ ಹೋಗು. ನಿನ್ನ ಊರುಗೋಲನ್ನೂ ತೆಗೆದುಕೊಂಡು ಹೋಗು. ಯಾಕೆಂದರೆ ಅದರಿಂದಲೇ ನೀನು ಅದ್ಭುತಕಾರ್ಯಗಳನ್ನು ಮಾಡುವೆ” ಎಂದು ಹೇಳಿದನು.

ಮೋಶೆ ಈಜಿಪ್ಟಿಗೆ ಹಿಂತಿರುಗಿದ್ದು

18 ಬಳಿಕ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂತಿರುಗಿದನು. ಮೋಶೆ ಇತ್ರೋನನಿಗೆ, “ಈಜಿಪ್ಟಿನಲ್ಲಿರುವ ನನ್ನ ಜನರ ಬಳಿಗೆ ಹೋಗಿ ಅವರು ಇನ್ನೂ ಜೀವಂತವಾಗಿದ್ದಾರೋ ಏನೋ ನೋಡುವೆನು” ಎಂದು ಹೇಳಿದನು.

ಇತ್ರೋನನು ಮೋಶೆಗೆ, “ನೀನು ಸಮಾಧಾನದಿಂದ ಹೋಗಿ ಬಾ” ಎಂದು ಹೇಳಿದನು.

19 ಮೋಶೆ ಇನ್ನೂ ಮಿದ್ಯಾನಿನಲ್ಲಿದ್ದಾಗ ಯೆಹೋವನು, “ಈಗ ನೀನು ಸುರಕ್ಷಿತವಾಗಿ ಈಜಿಪ್ಟಿಗೆ ಹೋಗಬಹುದು. ನಿನ್ನನ್ನು ಕೊಲ್ಲಬೇಕೆಂದಿದ್ದವರು ಸತ್ತುಹೋಗಿದ್ದಾರೆ” ಅಂದನು.

20 ಆದ್ದರಿಂದ ಮೋಶೆ ತನ್ನ ಹೆಂಡತಿಯನ್ನೂ ಗಂಡುಮಕ್ಕಳನ್ನೂ ಕತ್ತೆಗಳ ಮೇಲೆ ಕುಳ್ಳಿರಿಸಿ ಈಜಿಪ್ಟ್ ದೇಶಕ್ಕೆ ಮರಳಿ ಪ್ರಯಾಣ ಮಾಡಿದನು. ಮೋಶೆಯು ಯೆಹೋವನ ಶಕ್ತಿಯಿಂದ ಕೂಡಿದ ತನ್ನ ಊರುಗೋಲನ್ನು ಹಿಡಿದುಕೊಂಡು ಹೋದನು.[b]

21 ಮೋಶೆ ಈಜಿಪ್ಟಿಗೆ ಪ್ರಯಾಣ ಮಾಡುತ್ತಿದ್ದಾಗ ಯೆಹೋವನು ಅವನೊಡನೆ ಮಾತಾಡಿ, “ನೀನು ಫರೋಹನೊಂದಿಗೆ ಮಾತಾಡುವಾಗ ನಾನು ತೋರಿಸಿಕೊಟ್ಟ ಅದ್ಭುತಕಾರ್ಯಗಳನ್ನೆಲ್ಲಾ ಅವನ ಮುಂದೆ ಮಾಡು. ಆದರೂ ನಾನು ಫರೋಹನ ಹೃದಯವನ್ನು ಕಠಿಣಗೊಳಿಸುವುದರಿಂದ ಅವನು ಇಸ್ರೇಲರನ್ನು ಹೋಗಗೊಡಿಸುವುದಿಲ್ಲ. 22 ಆಗ ನೀನು ಫರೋಹನಿಗೆ, ‘ಇಸ್ರೇಲ್ ಜನಾಂಗವು ಯೆಹೋವನಿಗೆ ಚೊಚ್ಚಲು ಮಗನಂತಿದೆ. 23 ನನ್ನ ಮಗನು ನಿನ್ನ ದೇಶದಿಂದ ಹೋಗಿ ನನ್ನನ್ನು ಆರಾಧಿಸಲು ನೀನು ಅಪ್ಪಣೆಕೊಡಬೇಕು. ಇಲ್ಲವಾದರೆ ನಾನು ನಿನ್ನ ಚೊಚ್ಚಲಮಗನನ್ನು ಕೊಲ್ಲುವೆನು’ ಎಂದು ಯೆಹೋವನು ಹೇಳುತ್ತಾನೆ” ಎಂಬುದಾಗಿ ತಿಳಿಸಬೇಕು.

ಮೋಶೆಯ ಮಗನಿಗೆ ಸುನ್ನತಿಯಾದದ್ದು

24 ಮೋಶೆಯು ಈಜಿಪ್ಟಿಗೆ ತನ್ನ ಪ್ರಯಾಣವನ್ನು ಮುಂದುವರೆಸಿ ಛತ್ರವೊಂದರಲ್ಲಿ ಇಳಿದುಕೊಂಡನು. ಆಗ ಯೆಹೋವನು ಮೋಶೆಯನ್ನು ಸಂಧಿಸಿ ಅವನನ್ನು ಕೊಲ್ಲಬೇಕೆಂದಿದ್ದನು.[c] 25 ಆದರೆ ಚಿಪ್ಪೋರಳು ಕಲ್ಲಿನ ಚೂರಿಯನ್ನು ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿಮಾಡಿ ಚರ್ಮವನ್ನು ತೆಗೆದುಕೊಂಡು ಮೋಶೆಯ ಪಾದಗಳಿಗೆ ಮುಟ್ಟಿಸಿ, “ನೀನು ನನಗೆ ರಕ್ತಧಾರೆಯಿಂದಾದ ಮದುವಣಿಗನಾದೆ” ಅಂದಳು. 26 ಆಕೆ ಸುನ್ನತಿಯ ನಿಮಿತ್ತವೇ “ನೀನು ನನಗೆ ರಕ್ತಧಾರೆಯಿಂದಾದ ಮದುವಣಿಗನಾದೆ” ಎಂದು ಹೇಳಿದ್ದರಿಂದ ಯೆಹೋವನು ಅವನನ್ನು ಉಳಿಸಿದನು.

ಯೆಹೋವನ ಮುಂದೆ ಮೋಶೆ ಆರೋನರು

27 ಯೆಹೋವನು ಆರೋನನೊಡನೆ ಮಾತಾಡಿ ಅವನಿಗೆ, “ಅರಣ್ಯಕ್ಕೆ ಹೋಗಿ ಮೋಶೆಯನ್ನು ಭೇಟಿಯಾಗು” ಎಂದು ಹೇಳಿದ್ದನು. ಆದ್ದರಿಂದ ಆರೋನನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಭೇಟಿಯಾದನು. ಆರೋನನು ಮೋಶೆಯನ್ನು ಕಂಡು ಅವನಿಗೆ ಮುದ್ದಿಟ್ಟನು. 28 ಯೆಹೋವನು ಹೇಳಿದ್ದನ್ನೆಲ್ಲಾ ಮೋಶೆಯು ಆರೋನನಿಗೆ ತಿಳಿಸಿದನು. ಯೆಹೋವನು ತನ್ನನ್ನು ಯಾಕೆ ಕಳುಹಿಸಿದನೆಂದೂ ತಾನು ಯಾವ ಅದ್ಭುತಕಾರ್ಯಗಳನ್ನು ಮಾಡಬೇಕೆಂದೂ ಆರೋನನಿಗೆ ವಿವರಿಸಿದನು.

29 ಆದ್ದರಿಂದ ಮೋಶೆ ಆರೋನರು ಹೋಗಿ ಇಸ್ರೇಲ್ ಜನರ ಹಿರಿಯರೆಲ್ಲರನ್ನು ಒಟ್ಟುಗೂಡಿಸಿದರು. 30 ಆಗ ಆರೋನನು ಜನರೊಂದಿಗೆ ಮಾತಾಡಿದನು. ಯೆಹೋವನು ಮೋಶೆಗೆ ಹೇಳಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸಿದನು. ಬಳಿಕ ಮೋಶೆ ಜನರೆಲ್ಲರೂ ನೋಡುವಂತೆ ಅದ್ಭುತಕಾರ್ಯಗಳನ್ನು ಮಾಡಿದನು. 31 ಯೆಹೋವನು ಮೋಶೆಯನ್ನು ಕಳುಹಿಸಿದ್ದಾನೆಂದು ಜನರು ನಂಬಿದರು. ಯೆಹೋವನು ಇಸ್ರೇಲರಿಗೆ ಸಹಾಯಮಾಡಬೇಕೆಂದಿರುವುದನ್ನು ಅವರು ತಿಳಿದು ತಲೆಬಾಗಿ ಆತನನ್ನು ಆರಾಧಿಸಿದರು. ಯೆಹೋವನು ತಮ್ಮ ಸಂಕಟಗಳನ್ನು ನೋಡಿದ್ದರಿಂದ ಅವರು ಆತನನ್ನು ಆರಾಧಿಸಿದರು.

ಪ್ರಕಟನೆ 3:1-6

ಸಾರ್ದಿಸ್‌ನಲ್ಲಿರುವ ಸಭೆಗೆ ಯೇಸುವಿನ ಪತ್ರ

“ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಏಳು ಆತ್ಮಗಳು ಮತ್ತು ಏಳು ನಕ್ಷತ್ರಗಳನ್ನು ಹೊಂದಿರುವಾತನು ಹೇಳುವುದೇನೆಂದರೆ: ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಜೀವವುಳ್ಳವನೆಂದು ಜನರು ಹೇಳುತ್ತಾರೆ. ಆದರೆ ನೀನು ನಿಜವಾಗಿಯೂ ಸತ್ತು ಹೋಗಿರುವೆ. ಎದ್ದೇಳು! ಸಾಯುವ ಸ್ಥಿತಿಯಲ್ಲಿರುವಂಥವುಗಳನ್ನು ಬಲಪಡಿಸು. ನೀನು ಮಾಡಿರುವ ಕಾರ್ಯಗಳನ್ನು ನನ್ನ ದೇವರ ದೃಷ್ಟಿಯಲ್ಲಿ ನಿಷ್ಕಳಂಕವಾಗಿರುವುದನ್ನು ನಾನು ಕಾಣಲಿಲ್ಲ. ಆದ್ದರಿಂದ ನೀನು ಸ್ವೀಕರಿಸಿಕೊಂಡ ಮತ್ತು ಕೇಳಿದ ಉಪದೇಶವನ್ನು ಮರೆಯದೆ ಅದಕ್ಕೆ ವಿಧೇಯನಾಗಿರು. ನಿನ್ನ ಹೃದಯವನ್ನೂ ಜೀವಿತವನ್ನೂ ಪರಿವರ್ತಿಸಿಕೊ! ಎಚ್ಚರಗೊಳ್ಳು! ಇಲ್ಲವಾದರೆ, ನಾನು ಕಳ್ಳನಂತೆ ನಿನ್ನ ಬಳಿಗೆ ಬಂದು ಆಶ್ಚರ್ಯಗೊಳಿಸುತ್ತೇನೆ. ನಾನು ಯಾವಾಗ ಬರುತ್ತೇನೆ ಎಂಬುದು ನಿನಗೆ ಗೊತ್ತಿರುವುದಿಲ್ಲ.

“ನಿಮ್ಮ ಸಭೆಗೆ ಸೇರಿದ ಸಾರ್ದಿಸಿನ ಕೆಲವರು ಇನ್ನೂ ಪರಿಶುದ್ಧರಾಗಿದ್ದಾರೆ. ಅವರು ತಮ್ಮ ಬಟ್ಟೆಗಳನ್ನು ಕೊಳಕು ಮಾಡಿಕೊಂಡಿಲ್ಲ. ಅವರು ನನ್ನೊಂದಿಗೆ ನಡೆಯುವರು. ಅವರು ಯೋಗ್ಯರಾಗಿರುವುದರಿಂದ ಬಿಳಿವಸ್ತ್ರಗಳನ್ನು ಧರಿಸುತ್ತಾರೆ. ಜಯಗಳಿಸುವ ಪ್ರತಿಯೊಬ್ಬನೂ ಈ ಜನರಂತೆ ಬಿಳಿಯ ವಸ್ತ್ರಗಳನ್ನು ಧರಿಸುತ್ತಾನೆ. ಆ ವ್ಯಕ್ತಿಯ ಹೆಸರನ್ನು ನಾನು ಜೀವಭಾದ್ಯರ ಪುಸ್ತಕದಿಂದ ತೆಗೆದು ಹಾಕುವುದಿಲ್ಲ. ಅವನು ನನಗೆ ಸೇರಿದವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಹೇಳುತ್ತೇನೆ. ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International