Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 105:1-6

105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
    ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
    ಯೆಹೋವನ ಆರಾಧಕರೇ, ಸಂತೋಷಪಡಿರಿ.
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
    ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
    ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.

ಕೀರ್ತನೆಗಳು 105:23-26

23 ಬಳಿಕ ಇಸ್ರೇಲನು ಈಜಿಪ್ಟಿಗೆ ಬಂದನು.
    ಯಾಕೋಬನು ಹಾಮನ ದೇಶದಲ್ಲಿ ವಾಸಿಸಿದನು.
24 ಯಾಕೋಬನ ಕುಟುಂಬ ಬಹು ದೊಡ್ಡದಾಯಿತು.
    ಅವರು ಈಜಿಪ್ಟಿನವರಿಗಿಂತಲೂ ಬಲಿಷ್ಠರಾದರು.
25 ಆದ್ದರಿಂದ ಈಜಿಪ್ಟಿನವರು ಯಾಕೋಬನ ಕುಟುಂಬವನ್ನು ದ್ವೇಷಿಸತೊಡಗಿದರು.
    ಅವರು ತಮ್ಮ ಗುಲಾಮರ ವಿರೋಧವಾಗಿ ಸಂಚುಗಳನ್ನು ಮಾಡತೊಡಗಿದರು.
26 ಆದ್ದರಿಂದ ದೇವರು ತನ್ನ ಸೇವಕನಾದ ಮೋಶೆಯನ್ನೂ
    ತಾನು ಆರಿಸಿಕೊಂಡ ಯಾಜಕನಾದ ಆರೋನನನ್ನೂ ಕಳುಹಿಸಿದನು.

ಕೀರ್ತನೆಗಳು 105:45

45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
    ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.

ಯೆಹೋವನನ್ನು ಕೊಂಡಾಡಿರಿ.

ವಿಮೋಚನಕಾಂಡ 4:1-9

ಮೋಶೆಗೆ ಸಾಕ್ಷಿ

ಆಗ ಮೋಶೆಯು ಯೆಹೋವನಿಗೆ, “ಆದರೆ ನೀನು ನನ್ನನ್ನು ಕಳುಹಿಸಿರುವೆ ಎಂದು ಇಸ್ರೇಲರು ನಂಬುವುದೂ ಇಲ್ಲ; ಕೇಳುವುದೂ ಇಲ್ಲ. ಅವರು, ‘ಯೆಹೋವನು ನಿನಗೆ ಪ್ರತ್ಯಕ್ಷನಾಗಲಿಲ್ಲ’ ಎಂದು ಹೇಳುವರು” ಎಂದು ಹೇಳಿದನು.

ಯೆಹೋವನು ಮೋಶೆಗೆ, “ನಿನ್ನ ಕೈಯಲ್ಲಿರುವುದೇನು?” ಅಂದನು.

ಮೋಶೆ, “ಊರುಗೋಲು” ಎಂದು ಉತ್ತರಿಸಿದನು.

ಆಗ ಯೆಹೋವನು, “ನಿನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡು” ಅಂದನು.

ಮೋಶೆ, ತನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡಿದನು. ಆಗ ಕೋಲು ಹಾವಾಯಿತು. ಮೋಶೆ ಅದರ ಬಳಿಯಿಂದ ಓಡಿಹೋದನು. ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿದುಕೊ” ಎಂದು ಹೇಳಿದನು.

ಮೋಶೆಯು ಕೈಚಾಚಿ ಹಾವಿನ ಬಾಲವನ್ನು ಹಿಡಿದನು. ಆಗ ಹಾವು ಕೋಲಾಯಿತು. ಆಗ ದೇವರು, “ನಿನ್ನ ಕೋಲನ್ನು ಈ ರೀತಿಯಲ್ಲಿ ಉಪಯೋಗಿಸು. ನಿನ್ನ ಪೂರ್ವಿಕರ, ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರು ನಿನಗೆ ಪ್ರತ್ಯಕ್ಷನಾದನೆಂದು ಆಗ ಅವರು ನಂಬುವರು” ಎಂದು ಹೇಳಿದನು.

ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಇನ್ನೊಂದು ಸಾಕ್ಷಿಯನ್ನು ಕೊಡುತ್ತೇನೆ. ನಿನ್ನ ಕೈಯನ್ನು ಉಡಿಯಲ್ಲಿ ಹಾಕು” ಅಂದನು.

ಮೋಶೆ ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದಕ್ಕೆ ತೊನ್ನು ಹಿಡಿದಿತ್ತು.

ಆಗ ದೇವರು, “ನಿನ್ನ ಕೈಯನ್ನು ತಿರಿಗಿ ಉಡಿಯಲ್ಲಿ ಹಾಕು” ಅಂದನು. ಅಂತೆಯೇ ಮೋಶೆಯು ತನ್ನ ಕೈಯನ್ನು ಮತ್ತೆ ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದು ಮೊದಲಿನಂತೆ ಆಗಿತ್ತು.

ಆಗ ಯೆಹೋವನು ಅವನಿಗೆ, “ನೀನು ನಿನ್ನ ಊರುಗೋಲಿನಿಂದ ಸೂಚಕಕಾರ್ಯ ಮಾಡುವಾಗ ಜನರು ನಿನ್ನನ್ನು ನಂಬುವರು; ನಿನ್ನ ಮಾತಿಗೆ ಲಕ್ಷ್ಯಕೊಡುವರು. ನೀನು ಈ ಎರಡು ಸೂಚಕಕಾರ್ಯಗಳನ್ನು ತೋರಿಸಿದ ನಂತರವೂ ಅವರು ನಂಬದಿದ್ದರೆ, ನೈಲ್ ನದಿಯಿಂದ ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ನೆಲದ ಮೇಲೆ ಸುರಿ; ನೀರು ನೆಲವನ್ನು ಮುಟ್ಟಿದ ಕೊಡಲೇ ರಕ್ತವಾಗುವುದು” ಎಂದು ಹೇಳಿದನು.

ಮತ್ತಾಯ 8:14-17

ಗುಣಮುಖರಾದ ವಿವಿಧ ಜನರು

(ಮಾರ್ಕ 1:29-34; ಲೂಕ 4:38-41)

14 ಯೇಸುವು ಪೇತ್ರನ ಮನೆಗೆ ಹೋದನು. ಅಲ್ಲಿ ಪೇತ್ರನ ಅತ್ತೆಯು ಬಹಳ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದನ್ನು ಯೇಸು ನೋಡಿದನು. 15 ಯೇಸು ಅವಳ ಕೈ ಮುಟ್ಟಿದಾಗ ಜ್ವರವು ಅವಳನ್ನು ಬಿಟ್ಟುಹೋಯಿತು. ಆಗ ಅವಳು ಮೇಲೆದ್ದು, ಆತನ ಸೇವೆಮಾಡಿದಳು.

16 ಅಂದು ಸಾಯಂಕಾಲ ಜನರು ದೆವ್ವದಿಂದ ಪೀಡಿತರಾಗಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಯೇಸುವು ಮಾತಿನಿಂದಲೇ ದೆವ್ವಗಳನ್ನು ಅವರಿಂದ ಓಡಿಸಿದನು; ಕಾಯಿಲೆಯಾಗಿದ್ದ ಜನರೆಲ್ಲರನ್ನೂ ಗುಣಪಡಿಸಿದನು.

17 “ಆತನು ನಮ್ಮ ಬೇನೆಗಳನ್ನು ತೆಗೆದುಕೊಂಡನು, ನಮ್ಮ ರೋಗಗಳನ್ನು ಹೊತ್ತುಕೊಂಡನು”(A)

ಎಂದು ಪ್ರವಾದಿಯಾದ ಯೆಶಾಯನು ಹೇಳಿದ್ದು ಇದರ ಮೂಲಕ ನೆರವೇರಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International