Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 105:1-6

105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
    ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
    ಯೆಹೋವನ ಆರಾಧಕರೇ, ಸಂತೋಷಪಡಿರಿ.
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
    ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
    ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.

ಕೀರ್ತನೆಗಳು 105:23-26

23 ಬಳಿಕ ಇಸ್ರೇಲನು ಈಜಿಪ್ಟಿಗೆ ಬಂದನು.
    ಯಾಕೋಬನು ಹಾಮನ ದೇಶದಲ್ಲಿ ವಾಸಿಸಿದನು.
24 ಯಾಕೋಬನ ಕುಟುಂಬ ಬಹು ದೊಡ್ಡದಾಯಿತು.
    ಅವರು ಈಜಿಪ್ಟಿನವರಿಗಿಂತಲೂ ಬಲಿಷ್ಠರಾದರು.
25 ಆದ್ದರಿಂದ ಈಜಿಪ್ಟಿನವರು ಯಾಕೋಬನ ಕುಟುಂಬವನ್ನು ದ್ವೇಷಿಸತೊಡಗಿದರು.
    ಅವರು ತಮ್ಮ ಗುಲಾಮರ ವಿರೋಧವಾಗಿ ಸಂಚುಗಳನ್ನು ಮಾಡತೊಡಗಿದರು.
26 ಆದ್ದರಿಂದ ದೇವರು ತನ್ನ ಸೇವಕನಾದ ಮೋಶೆಯನ್ನೂ
    ತಾನು ಆರಿಸಿಕೊಂಡ ಯಾಜಕನಾದ ಆರೋನನನ್ನೂ ಕಳುಹಿಸಿದನು.

ಕೀರ್ತನೆಗಳು 105:45

45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
    ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.

ಯೆಹೋವನನ್ನು ಕೊಂಡಾಡಿರಿ.

ವಿಮೋಚನಕಾಂಡ 3:16-22

16 ಇದಲ್ಲದೆ ಯೆಹೋವನು ಅವನಿಗೆ, “ನೀನು ಹೋಗಿ ಇಸ್ರೇಲರ ನಾಯಕರನ್ನು ಒಟ್ಟುಗೂಡಿಸಿ ಅವರಿಗೆ, ‘ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನನಗೆ ಕಾಣಿಸಿಕೊಂಡನು. ಅಬ್ರಹಾಮನ, ಇಸಾಕನ, ಯಾಕೋಬನ ದೇವರು ಹೇಳುವುದೇನೆಂದರೆ, ಈಜಿಪ್ಟಿನಲ್ಲಿ ನಿಮಗೆ ಸಂಭವಿಸಿದವುಗಳನ್ನು ನಾನು ಲಕ್ಷ್ಯವಿಟ್ಟು ನೋಡಿದ್ದೇನೆ. 17 ಈಜಿಪ್ಟಿನಲ್ಲಿ ನೀವು ಅನುಭವಿಸುತ್ತಿರುವ ಸಂಕಟಗಳಿಂದ ಬಿಡಿಸಬೇಕೆಂದು ತೀರ್ಮಾನಿಸಿದ್ದೇನೆ. ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸವಾಗಿರುವ ಸಮೃದ್ಧಿಕರವಾದ ದೇಶಕ್ಕೆ ನಾನು ನಿಮ್ಮನ್ನು ನಡೆಸುವೆನು!’ ಎಂದು ಹೇಳು.

18 “ಹಿರಿಯರು ನಿನಗೆ ಕಿವಿಗೊಡುವರು. ಆಗ ನೀನು ಮತ್ತು ಹಿರಿಯರು ಈಜಿಪ್ಟಿನ ರಾಜನ ಬಳಿಗೆ ಹೋಗಿ, ‘ಇಬ್ರಿಯರ ದೇವರಾದ ಯೆಹೋವನು ನಮಗೆ ಕಾಣಿಸಿಕೊಂಡನು. ಆದ್ದರಿಂದ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಬೇಕು’ ಎಂದು ಹೇಳಿರಿ.

19 “ಆದರೆ ಈಜಿಪ್ಟಿನ ರಾಜನು ನಿಮ್ಮನ್ನು ಹೋಗಗೊಡಿಸುವುದಿಲ್ಲ ಎಂಬುದು ನನಗೆ ಗೊತ್ತಿದೆ. 20 ಆದ್ದರಿಂದ ನಾನು ಕೈಚಾಚಿ ಈಜಿಪ್ಟಿನ ವಿರುದ್ಧ ಮಹತ್ಕಾರ್ಯಗಳನ್ನು ಮಾಡಿ ಅನೇಕ ವಿಧದಲ್ಲಿ ಅದನ್ನು ಬಾಧಿಸುವೆನು. ಆಗ ಅವನು ನಿಮ್ಮನ್ನು ಹೋಗಗೊಡಿಸುವನು. 21 ಈಜಿಪ್ಟಿನ ಜನರು ಇಸ್ರೇಲರಿಗೆ ದಯೆ ತೋರುವಂತೆ ಮಾಡುವೆನು. ಇಸ್ರೇಲರು ಈಜಿಪ್ಟನ್ನು ಬಿಟ್ಟು ಹೊರಡುವಾಗ ಈಜಿಪ್ಟಿನವರು ಅವರಿಗೆ ಉಡುಗೊರೆಗಳನ್ನು ಕೊಡುವರು.

22 “ಪ್ರತಿಯೊಬ್ಬ ಇಬ್ರಿಯ ಸ್ತ್ರೀಯು ಈಜಿಪ್ಟಿನ ನೆರೆಯವರನ್ನಾಗಲಿ ಅಥವಾ ತನ್ನ ಮನೆಯಲ್ಲಿ ವಾಸಿಸುತ್ತಿರುವ ಯಾವುದೇ ಸ್ತ್ರೀಯನ್ನಾಗಲಿ ಕೇಳಿದರೆ ಅವರು ಆಕೆಗೆ ಉಡುಗೊರೆಗಳನ್ನು ಕೊಡುವರು. ನಿನ್ನ ಜನರು ಬೆಳ್ಳಿಬಂಗಾರಗಳನ್ನು, ಶ್ರೇಷ್ಠವಾದ ಬಟ್ಟೆಗಳನ್ನು ಪಡೆಯುವರು. ನೀವು ಈಜಿಪ್ಟನ್ನು ಬಿಡುವಾಗ ಆ ಉಡುಗೊರೆಗಳನ್ನು ನಿಮ್ಮ ಮಕ್ಕಳಿಗೆ ತೊಡಿಸುವಿರಿ. ಈ ರೀತಿಯಲ್ಲಿ ನೀವು ಈಜಿಪ್ಟಿನವರ ಐಶ್ವರ್ಯವನ್ನು ತೆಗೆದುಕೊಂಡು ಹೋಗುವಿರಿ” ಅಂದನು.

2 ಥೆಸಲೋನಿಕದವರಿಗೆ 2:7-12

ರಹಸ್ಯವಾದ ದುಷ್ಟಶಕ್ತಿಯು ಈಗಾಗಲೇ ಪ್ರಪಂಚದಲ್ಲಿ ತನ್ನ ಕಾರ್ಯವನ್ನು ಸಾಧಿಸುತ್ತಾ ಇದೆ. ಆದರೆ ಆ ರಹಸ್ಯವಾದ ದುಷ್ಟಶಕ್ತಿಯನ್ನು ತಡೆಹಿಡಿಯುವ ಒಬ್ಬಾತನಿದ್ದಾನೆ. ಆತನು ತೆಗೆದುಬಿಡಲ್ಪಟ್ಟ ಕೂಡಲೇ ಅಧರ್ಮಸ್ವರೂಪನು ಕಾಣಿಸಿಕೊಳ್ಳುತ್ತಾನೆ. ಪ್ರಭುವಾದ ಯೇಸು ಅವನನ್ನು ತನ್ನ ಬಾಯಿಯ ಉಸಿರಿನಿಂದಲೇ ಕೊಲ್ಲುವನು; ತನ್ನ ಪ್ರತ್ಯಕ್ಷತೆಯ ಮಹಿಮೆಯಿಂದ ನಾಶಪಡಿಸುವನು.

ಆ ಅಧರ್ಮಸ್ವರೂಪನು ಸೈತಾನನ ಮಹಾಶಕ್ತಿಯಿಂದ ಕೂಡಿದವನಾಗಿರುತ್ತಾನೆ. ಅವನು ಅನೇಕ ಮೋಸದ ಪವಾಡಗಳನ್ನು, ಸೂಚಕಕಾರ್ಯಗಳನ್ನು, ಅದ್ಭುತಕಾರ್ಯಗಳನ್ನು ಮಾಡುತ್ತಾನೆ. 10 ಸತ್ಯವನ್ನು ಪ್ರೀತಿಸದೆ ತಪ್ಪಿಹೋಗಿರುವ ಜನರನ್ನು ಮೋಸಗೊಳಿಸಲು, ಅವನು ಎಲ್ಲಾ ವಿಧವಾದ ತಂತ್ರಗಳನ್ನು ಮಾಡುವನು. (ಅವರು ಸತ್ಯವನ್ನು ಪ್ರೀತಿಸಿದ್ದರೆ, ರಕ್ಷಣೆ ಹೊಂದುತ್ತಿದ್ದರು.) 11 ಆದರೆ ಆ ಜನರು ಸತ್ಯವನ್ನು ಪ್ರೀತಿಸಲಿಲ್ಲ. ಆದಕಾರಣ, ಸತ್ಯವನ್ನು ತೊರೆದು, ಸತ್ಯವಲ್ಲದ್ದನ್ನು ನಂಬುವಂತೆ ಮಾಡುವ ಶಕ್ತಿಯೊಂದನ್ನು ದೇವರು ಅವರ ಬಳಿಗೆ ಕಳುಹಿಸುತ್ತಾನೆ. 12 ಸತ್ಯವನ್ನು ನಂಬದೆ, ಕೆಟ್ಟಕಾರ್ಯಗಳನ್ನು ಮಾಡುವುದರಲ್ಲಿ ಸಂತೋಷಪಡುವ ಜನರೆಲ್ಲರೂ ದಂಡನೆಗೆ ಒಳಗಾಗುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International