Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಇಸ್ರೇಲರೇ, ನನಗೆ ಉತ್ತರಹೇಳಿ.
2 ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
3 ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
4 ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
5 ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.
6 ಯೆಹೋವನಿಗೆ ಸ್ತೋತ್ರವಾಗಲಿ!
ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.
7 ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
8 ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.
29 ಬಳಿಕ ಇಸ್ರೇಲನು ಅವರಿಗೆ ಈ ಆಜ್ಞೆಯನ್ನು ಕೊಟ್ಟನು: “ನಾನು ಸತ್ತಾಗ, ನನ್ನ ಪೂರ್ವಿಕರ ಸಂಗಡವಿರಲು ಇಷ್ಟಪಡುತ್ತೇನೆ. ನನ್ನ ಪೂರ್ವಿಕರಿಗೆ ಸಮಾಧಿ ಮಾಡಿರುವ ಹಿತ್ತಿಯನಾದ ಎಫ್ರೋನನ ಗವಿಯಲ್ಲಿ ನನಗೆ ಸಮಾಧಿಮಾಡಬೇಕು. 30 ಆ ಗವಿಯು ಕಾನಾನ್ ದೇಶದ ಮಮ್ರೆಗೆ ಎದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿದೆ. ಅಬ್ರಹಾಮನು ತನ್ನ ಸಮಾಧಿಗಾಗಿ ಈ ಸ್ಥಳವನ್ನು ಎಫ್ರೋನನಿಂದ ಕೊಂಡುಕೊಂಡನು. 31 ಅಬ್ರಹಾಮನನ್ನು ಮತ್ತು ಅವನ ಹೆಂಡತಿಯಾದ ಸಾರಳನ್ನು ಆ ಗವಿಯಲ್ಲಿ ಸಮಾಧಿ ಮಾಡಲಾಗಿದೆ. ಇಸಾಕನನ್ನು ಮತ್ತು ರೆಬೆಕ್ಕಳನ್ನು ಅಲ್ಲಿ ಸಮಾಧಿ ಮಾಡಲಾಗಿದೆ. ನನ್ನ ಹೆಂಡತಿಯಾದ ಲೇಯಳನ್ನು ನಾನು ಅಲ್ಲಿ ಸಮಾಧಿ ಮಾಡಿದ್ದೇನೆ. ಬೆನ್ಯಾಮೀನ 32 ಆ ಗುಹೆಯನ್ನು ಮತ್ತು ಆ ಗುಹೆಯಿರುವ ಹೊಲವನ್ನು ಹಿತ್ತಿಯರಿಂದ ಕೊಂಡುಕೊಳ್ಳಲಾಗಿದೆ” ಎಂದು ಹೇಳಿದನು. 33 ಯಾಕೋಬನು ತನ್ನ ಗಂಡುಮಕ್ಕಳೊಂದಿಗೆ ಮಾತನಾಡಿದ ಮೇಲೆ ತನ್ನ ಹಾಸಿಗೆಯ ಮೇಲೆ ಕಾಲುಗಳನ್ನು ಮುದುರಿಕೊಂಡು ಪ್ರಾಣಬಿಟ್ಟನು.
ಯಾಕೋಬನ ಅಂತ್ಯಕ್ರಿಯೆ
50 ಇಸ್ರೇಲನು ಸತ್ತಾಗ ಯೋಸೇಫನು ತುಂಬ ದುಃಖಿಸಿದನು. ಅವನು ತನ್ನ ತಂದೆಯನ್ನು ಅಪ್ಪಿಕೊಂಡು ಗೋಳಾಡಿ ಮುದ್ದಿಟ್ಟನು. 2 ಯೋಸೇಫನು ತನ್ನ ತಂದೆಯ ಶವವನ್ನು ಸಿದ್ಧಪಡಿಸಲು ತನ್ನ ಸೇವಕರಾದ ವೈದ್ಯರಿಗೆ ಹೇಳಿದನು. ಆ ವೈದ್ಯರು ಯಾಕೋಬನ ಶರೀರವನ್ನು ಸಮಾಧಿಮಾಡಲು ಸಿದ್ಧಪಡಿಸಿದರು. 3 ಈಜಿಪ್ಟಿನವರು ಆ ಶರೀರವನ್ನು ವಿಶೇಷವಾದ ರೀತಿಯಲ್ಲಿ ನಲವತ್ತು ದಿನಗಳವರೆಗೆ ಸಿದ್ಧಪಡಿಸಿದರು. ಬಳಿಕ ಈಜಿಪ್ಟಿನವರು ಯಾಕೋಬನಿಗಾಗಿ ಎಪ್ಪತ್ತು ದಿನಗಳವರೆಗೆ ಗೋಳಾಡಿದರು.
4 ಎಪ್ಪತ್ತು ದಿನಗಳಾದ ಮೇಲೆ ಯೋಸೇಫನು ಫರೋಹನ ಅಧಿಕಾರಿಗಳಿಗೆ, “ದಯವಿಟ್ಟು ಇದನ್ನು ಫರೋಹನಿಗೆ ತಿಳಿಸಿರಿ. 5 ‘ನನ್ನ ತಂದೆಯು ಸಾಯುವಾಗ ನಾನು ಅವನಿಗೆ ಒಂದು ಪ್ರಮಾಣವನ್ನು ಮಾಡಿದೆನು. ಕಾನಾನ್ ದೇಶದಲ್ಲಿ ಒಂದು ಗುಹೆಯನ್ನು ಅವನು ತನಗಾಗಿ ಸಿದ್ಧಪಡಿಸಿಕೊಂಡಿದ್ದಾನೆ. ಆದ್ದರಿಂದ, ನಾನು ಹೋಗಿ ನನ್ನ ತಂದೆಯನ್ನು ಸಮಾಧಿಮಾಡಿ ಮತ್ತೆ ಹಿಂತಿರುಗಿ ನಿಮ್ಮ ಬಳಿಗೆ ಬರಲು ದಯವಿಟ್ಟು ಅವಕಾಶ ಕೊಡಿ’ ಎಂದು ತಿಳಿಸಿರಿ” ಎಂಬುದಾಗಿ ಹೇಳಿದನು.
6 ಫರೋಹನು, “ನಿನ್ನ ಪ್ರಮಾಣವನ್ನು ಉಳಿಸಿಕೊ. ಹೋಗಿ ನಿನ್ನ ತಂದೆಯನ್ನು ಸಮಾಧಿಮಾಡು” ಎಂದು ಉತ್ತರಿಸಿದನು.
7 ಆದ್ದರಿಂದ ಯೋಸೇಫನು ತನ್ನ ತಂದೆಯನ್ನು ಸಮಾಧಿಮಾಡಲು ಹೋದನು. ಫರೋಹನ ಎಲ್ಲಾ ಅಧಿಕಾರಿಗಳು ಯೋಸೇಫನೊಂದಿಗೆ ಹೋದರು. ಫರೋಹನ ನಾಯಕರು ಮತ್ತು ಈಜಿಪ್ಟಿನ ಎಲ್ಲಾ ಹಿರಿಯರು ಯೋಸೇಫನೊಂದಿಗೆ ಹೋದರು. 8 ಯೋಸೇಫನ ಕುಟುಂಬದಲ್ಲಿದ್ದ ಜನರು ಮತ್ತು ಅವನ ಸಹೋದರರು ಅವನೊಂದಿಗೆ ಹೋದರು. ಅವನ ತಂದೆಯ ಕುಟುಂಬದವರೆಲ್ಲ ಯೋಸೇಫನೊಂದಿಗೆ ಹೋದರು. (ಹೆಂಡತಿ, ಮಕ್ಕಳು ಮತ್ತು ಪ್ರಾಣಿಗಳು ಮಾತ್ರ ಗೋಷೆನ್ ಪ್ರಾಂತ್ಯದಲ್ಲಿ ಉಳಿದುಕೊಂಡರು.) 9 ಗಂಡಸರು ಯೋಸೇಫನೊಂದಿಗೆ ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಹೋದರು. ಅದು ಬಹಳ ದೊಡ್ಡ ಗುಂಪಾಗಿತ್ತು.
10 ಅವರು ಗೋರೆನ್‌ಅಟಾದ್ ಎಂಬಲ್ಲಿಗೆ ಬಂದರು. ಅದು ಜೋರ್ಡನ್ ನದಿಯ ಪೂರ್ವದಲ್ಲಿತ್ತು. ಆ ಸ್ಥಳದಲ್ಲಿ ಅವರು ತುಂಬ ಸಮಯದವರೆಗೆ ಶೋಕಿಸಿದರು. ಆ ಶೋಕವು ಏಳು ದಿನಗಳವರೆಗೆ ಮುಂದುವರೆಯಿತು. 11 ಕಾನಾನಿನ ಜನರು ಗೋರೆನ್‌ಅಟಾದ್‌ನಲ್ಲಿ ಶೋಕಿಸುತ್ತಿರುವವರನ್ನು ನೋಡಿ, “ಈಜಿಪ್ಟಿನವರು ಬಹಳ ದುಃಖಕರವಾದ ಅಂತ್ಯಕ್ರಿಯೆ ಮಾಡುತ್ತಿದ್ದಾರೆ” ಎಂದು ಹೇಳಿದರು. ಆದ್ದರಿಂದ ಆ ಸ್ಥಳಕ್ಕೆ ಆಬೇಲ್ ಮಿಚ್ರಯೀಮ್ ಎಂದು ಹೆಸರಾಯಿತು.
12 ಹೀಗೆ ಯಾಕೋಬನ ಗಂಡುಮಕ್ಕಳು ತಮ್ಮ ತಂದೆಯ ಆಜ್ಞೆಯಂತೆ ಮಾಡಿದರು. 13 ಅವರು ಅವನ ಶರೀರವನ್ನು ಕಾನಾನ್ ದೇಶಕ್ಕೆ ತೆಗೆದುಕೊಂಡು ಹೋಗಿ ಮಕ್ಪೇಲದಲ್ಲಿದ್ದ ಗವಿಯಲ್ಲಿ ಸಮಾಧಿ ಮಾಡಿದರು. ಮಮ್ರೆಯ ಬಯಲಿನಲ್ಲಿದ್ದ ಈ ಗವಿಯನ್ನು ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಸಮಾಧಿಯ ಸ್ಥಳಕ್ಕಾಗಿ ಕೊಂಡುಕೊಂಡಿದ್ದನು. 14 ತಂದೆಯನ್ನು ಸಮಾಧಿ ಮಾಡಿದನಂತರ ಯೋಸೇಫನೂ ಅವನ ಅಣ್ಣತಮ್ಮಂದಿರೂ ಅವನ ತಂದೆಯ ಉತ್ತರಕ್ರಿಯೆಗಾಗಿ ಅವನೊಂದಿಗೆ ಹೋಗಿದ್ದವರೆಲ್ಲರೂ ಈಜಿಪ್ಟಿಗೆ ಹಿಂತಿರುಗಿದರು.
12 ತಾವು ಬಹಳ ಪ್ರಾಮುಖ್ಯವಾದವರೆಂದು ಯೋಚಿಸುವ ಆ ಜನರ ಗುಂಪಿನೊಡನೆ ಸೇರಿಕೊಳ್ಳಲು ನಮಗೆ ಧೈರ್ಯಸಾಲದು. ನಾವು ನಮ್ಮನ್ನು ಅವರೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ಅವರು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತಾರೆ; ತಮ್ಮನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುತ್ತಾರೆ. ಅವರಿಗೆ ಏನೂ ಗೊತ್ತಿಲ್ಲವೆಂದು ಇದೇ ತೋರಿಸುತ್ತದೆ.
13 ಆದರೆ ನಾವು ನಮಗೆ ಕೊಡಲ್ಪಟ್ಟಿರುವ ಕೆಲಸದ ಮೇರೆಯನ್ನು ಮೀರಿ ನಮ್ಮನ್ನು ಹೊಗಳಿಕೊಳ್ಳದೆ ದೇವರು ನಮಗೆ ಕೊಟ್ಟಿರುವ ಕೆಲಸದ ಮೇರೆಯೊಳಗೆ ಹೆಮ್ಮೆಪಡುತ್ತೇವೆ. ಆದರೆ ನಮ್ಮ ಈ ಕೆಲಸವು ನಿಮ್ಮ ಮಧ್ಯ ನಾವು ಮಾಡುವ ಈ ಸೇವೆಯನ್ನು ಒಳಗೊಂಡಿದೆ. 14 ನಾವು ಬಹಳವಾಗಿ ಹೊಗಳಿಕೊಳ್ಳುವುದಿಲ್ಲ. ನಾವು ನಿಮ್ಮಲ್ಲಿಗೆ ಈಗಾಗಲೇ ಬಂದಿಲ್ಲದಿದ್ದರೆ ಬಹಳವಾಗಿ ಹೊಗಳಿಕೊಳ್ಳುತ್ತಿದ್ದೆವು. ಆದರೆ ನಾವು ನಿಮ್ಮಲ್ಲಿಗೆ ಬಂದಿದ್ದೇವೆ. ಕ್ರಿಸ್ತನ ಸುವಾರ್ತೆಯೊಂದಿಗೆ ನಾವು ಬಂದೆವು. 15 ನಾವು ಹೊಗಳಿಕೊಳ್ಳುವುದನ್ನು ನಮ್ಮ ಕೆಲಸದ ಮೇರೆಗೆ ಸೀಮಿತಗೊಳಿಸುತ್ತೇವೆ. ಇತರರು ಮಾಡಿದ ಕೆಲಸದ ಬಗ್ಗೆ ನಾವು ನಮ್ಮನ್ನು ಹೊಗಳಿಕೊಳ್ಳುವುದಿಲ್ಲ. ನಿಮ್ಮ ನಂಬಿಕೆಯು ವೃದ್ಧಿಯಾಗುತ್ತಾ ಬಂದಂತೆ ನಮ್ಮ ಕೆಲಸವು ಮತ್ತಷ್ಟು ವಿಶಾಲವಾಗಿ ಬೆಳೆಯಲು ನೀವು ಸಹಾಯ ಮಾಡುತ್ತೀರೆಂಬ ನಿರೀಕ್ಷೆ ನಮಗಿದೆ. 16 ನಿಮ್ಮ ಪಟ್ಟಣಕ್ಕೆ ದೂರವಾಗಿರುವ ಸ್ಥಳಗಳಲ್ಲಿಯೂ ಸುವಾರ್ತೆಯನ್ನು ತಿಳಿಸಬೇಕೆಂಬ ಅಪೇಕ್ಷೆ ನಮಗುಂಟು. ಮತ್ತೊಬ್ಬ ವ್ಯಕ್ತಿಯ ಪ್ರದೇಶದಲ್ಲಿ ಈಗಾಗಲೇ ಮಾಡಲ್ಪಟ್ಟಿರುವ ಕೆಲಸದ ಬಗ್ಗೆ ಹೊಗಳಿಕೊಳ್ಳಬೇಕೆಂಬ ಅಪೇಕ್ಷೆ ನಮಗಿಲ್ಲ. 17 ಆದರೆ “ಹೊಗಳಿಕೊಳ್ಳುವವನು ಪ್ರಭುವಿನಲ್ಲಿಯೇ ಹೊಗಳಿಕೊಳ್ಳಬೇಕು”(A) 18 ಒಬ್ಬನು ತನ್ನನ್ನು ಒಳ್ಳೆಯವನೆಂದು ಹೇಳಿಕೊಂಡ ಮಾತ್ರಕ್ಕೆ ಅವನು ಸ್ವೀಕೃತನೆಂದಲ್ಲ. ಪ್ರಭುವು ಯಾರನ್ನು ಒಳ್ಳೆಯವನೆಂದು ಯೋಚಿಸುತ್ತಾನೊ ಅವನೇ ಸ್ವೀಕೃತನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International