Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಇಸ್ರೇಲರೇ, ನನಗೆ ಉತ್ತರಹೇಳಿ.
2 ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
3 ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
4 ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
5 ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.
6 ಯೆಹೋವನಿಗೆ ಸ್ತೋತ್ರವಾಗಲಿ!
ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.
7 ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
8 ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.
ಯಾಕೋಬನು ತನ್ನ ಗಂಡುಮಕ್ಕಳನ್ನು ಆಶೀರ್ವದಿಸಿದ್ದು
49 ಬಳಿಕ ಯಾಕೋಬನು ತನ್ನ ಗಂಡುಮಕ್ಕಳನ್ನು ತನ್ನ ಬಳಿಗೆ ಕರೆಯಿಸಿ, “ನನ್ನ ಎಲ್ಲಾ ಗಂಡುಮಕ್ಕಳೇ, ನನ್ನ ಬಳಿಗೆ ಬನ್ನಿರಿ. ನಿಮಗೆ ಮುಂದೆ ಏನು ಸಂಭವಿಸುವುದೆಂದು ತಿಳಿಸುತ್ತೇನೆ.
2 “ಯಾಕೋಬನ ಗಂಡುಮಕ್ಕಳೇ, ಒಟ್ಟಾಗಿ ಬಂದು ಕೇಳಿರಿ.
ನಿಮ್ಮ ತಂದೆಯಾದ ಇಸ್ರೇಲನು ಹೇಳುವುದನ್ನು ಕೇಳಿರಿ” ಎಂದು ಹೇಳಿದನು.
ರೂಬೇನ
3 “ರೂಬೇನನೇ, ನೀನು ನನ್ನ ಚೊಚ್ಚಲು ಮಗ.
ನೀನೇ ನನ್ನ ಮೊದಲನೆಯ ಮಗ.
ನೀನು ನನ್ನ ಇತರ ಎಲ್ಲಾ ಗಂಡುಮಕ್ಕಳಿಗಿಂತ
ಶಕ್ತಿಶಾಲಿಯೂ ಗೌರವಯುತನೂ ಆಗಿರುವೆ.
4 ಆದರೆ ನೀನು ಪ್ರಳಯದ ಭಯಂಕರವಾದ ಅಲೆಗಳಂತಿರುವೆ.
ನೀನು ನನ್ನ ಮಕ್ಕಳಿಗಿಂತ ಅತ್ಯಂತ ಪ್ರಮುಖನಾಗಿರುವುದಿಲ್ಲ.
ನಿನ್ನ ತಂದೆಗೆ ಸೇರಿದ ಸ್ತ್ರೀಯೊಂದಿಗೆ ನೀನು ಮಲಗಿಕೊಂಡೆ.
ನೀನು ನಿನ್ನ ತಂದೆಯ ಹಾಸಿಗೆಗೆ ಗೌರವವನ್ನು ತೋರಿಸಲಿಲ್ಲ.”
ಸಿಮೆಯೋನ ಮತ್ತು ಲೇವಿ
5 “ಸಿಮೆಯೋನನೂ ಲೇವಿಯೂ ಸಹೋದರರಾಗಿದ್ದಾರೆ.
ಅವರು ತಮ್ಮ ಖಡ್ಗಗಳಿಂದ ಹೋರಾಡಲು ಇಷ್ಟಪಡುವರು.
6 ಅವರು ಗುಟ್ಟಾಗಿ ಕೆಟ್ಟಕಾರ್ಯಗಳನ್ನು ಯೋಚಿಸಿದರು.
ಅವರ ರಹಸ್ಯಕೂಟಗಳನ್ನು ನನ್ನ ಆತ್ಮವು ಸ್ವೀಕರಿಸುವುದಿಲ್ಲ.
ಅವರು ಕೋಪಗೊಂಡಾಗ ಗಂಡಸರನ್ನು ಕೊಂದುಹಾಕಿದರು.
ಅವರು ಮೋಜಿಗೆಂದೇ ಪ್ರಾಣಿಗಳನ್ನು ಹಿಂಸಿಸಿದರು.
7 ಅವರ ಕೋಪವೇ ಅವರಿಗೆ ಶಾಪ. ಅದು ತುಂಬಾ ಶಕ್ತಿಶಾಲಿಯಾದದ್ದು.
ಅವರು ಹುಚ್ಚರಾದಾಗ ತುಂಬಾ ಕ್ರೂರಿಗಳು.
ಅವರು ಯಾಕೋಬನ ನಾಡಿನಲ್ಲಿ ತಮ್ಮದೇ ಆದ ನಾಡನ್ನು ಹೊಂದಿಕೊಳ್ಳುವುದಿಲ್ಲ.
ಅವರು ಇಸ್ರೇಲಿನಲ್ಲೆಲ್ಲಾ ಹರಡಿಕೊಳ್ಳುವರು.”
ಯೆಹೂದ
8 “ಯೆಹೂದನೇ, ನಿನ್ನ ಸಹೋದರರು ನಿನ್ನನ್ನೇ ಹೊಗಳುವರು.
ನೀನು ನಿನ್ನ ವೈರಿಗಳನ್ನು ಸೋಲಿಸುವೆ.
ನಿನ್ನ ಸಹೋದರರು ನಿನಗೇ ಅಡ್ಡಬೀಳುವರು.
9 ಯೆಹೂದನು ಪ್ರಾಣಿಯನ್ನು ಕೊಂದ ಪ್ರಾಯದ ಸಿಂಹದಂತಿದ್ದಾನೆ.
ಮಗನೇ, ನೀನು ಸಿಂಹದಂತೆ ಬೇಟೆಗಾಗಿ ಹೊಂಚುಹಾಕಿ ನಿಂತಿರುವೆ.
ಯೆಹೂದನು ಸಿಂಹದಂತಿರುವನು. ಅವನು ಮಲಗಿ ವಿಶ್ರಮಿಸಿಕೊಳ್ಳುವನು;
ಅವನನ್ನು ಕೆಣಕಲು ಯಾರಿಗೂ ಧೈರ್ಯವಿಲ್ಲ.
10 ರಾಜದಂಡವನ್ನು ಹಿಡಿಯತಕ್ಕವನು ಬರುವ ತನಕ
ಯೆಹೂದನು ರಾಜದಂಡವನ್ನು ಹಿಡಿದುಕೊಳ್ಳುವನು.
ಅವನ ಸಂತತಿಯವರು ಶಾಶ್ವತವಾಗಿ ಆಳುವರು;
ಅನ್ಯಜನಾಂಗಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಅವನಿಗೆ ವಿಧೇಯರಾಗಿರುವರು.
11 ಅವನು ತನ್ನ ಕತ್ತೆಯನ್ನು ದ್ರಾಕ್ಷೆಬಳ್ಳಿಗೆ ಕಟ್ಟುವನು;
ತನ್ನ ಪ್ರಾಯದ ಕತ್ತೆಯನ್ನು ಉತ್ತಮವಾದ ದ್ರಾಕ್ಷೆಬಳ್ಳಿಗೆ ಕಟ್ಟುವನು.
ಅವನು ಉತ್ತಮವಾದ ದ್ರಾಕ್ಷಾರಸದಿಂದ
ತನ್ನ ಬಟ್ಟೆಗಳನ್ನು ತೊಳೆಯುವನು.
12 ಅವನು ದ್ರಾಕ್ಷಾರಸವನ್ನು ಕುಡಿಯುವುದರಿಂದ ಅವನ ಕಣ್ಣುಗಳು ಕೆಂಪಾಗಿರುತ್ತವೆ.
ಅವನು ಹಾಲು ಕುಡಿಯುವುದರಿಂದ ಅವನ ಹಲ್ಲುಗಳು ಬಿಳುಪಾಗಿರುತ್ತವೆ.”
ಜೆಬುಲೂನ
13 “ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು;
ಸಮುದ್ರ ತೀರವು ಅವನ ಹಡಗುಗಳಿಗೆ ಸುರಕ್ಷಿತವಾದ ಸ್ಥಳವಾಗಿದೆ.
ಅವನ ನಾಡು ಚೀದೋನ್ ಪಟ್ಟಣದವರೆಗೂ ವಿಸ್ತರಿಸುವುದು.”
ಇಸ್ಸಾಕಾರ
14 “ಇಸ್ಸಾಕಾರನು ಬಹಳ ಕಷ್ಟಪಟ್ಟು ದುಡಿಯುವ ಕತ್ತೆಯಂತಿದ್ದಾನೆ.
ಅವನು ಭಾರವಾದ ಹೊರೆಯನ್ನು ಹೊರುವುದರಿಂದ ಮಲಗಿ ವಿಶ್ರಮಿಸಿಕೊಳ್ಳುವನು.
15 ಅವನು ತನ್ನ ವಿಶ್ರಾಂತಿಗೆ ಅನುಕೂಲವಾಗಿರುವ
ಮತ್ತು ಪ್ರಶಾಂತವಾಗಿರುವ ನಾಡನ್ನು ನೋಡುವನು.
ಅವನು ಭಾರವಾದ ಹೊರೆಗಳನ್ನು ಹೊರುವುದಕ್ಕೂ
ಗುಲಾಮನಂತೆ ದುಡಿಯುವುದಕ್ಕೂ ಒಪ್ಪಿಕೊಳ್ಳುವನು.”
ದಾನ
16 “ಇತರ ಇಸ್ರೇಲರ ಕುಟುಂಬಗಳಿಗೆ ತೀರ್ಪುಮಾಡುವಂತೆ,
ದಾನನು ತನ್ನ ಸ್ವಂತ ಜನರಿಗೆ ತೀರ್ಪು ಮಾಡುತ್ತಾನೆ.
17 ದಾನನು ರಸ್ತೆಯ ಬಳಿಯಲ್ಲಿರುವ ಹಾವಿನಂತಿರುವನು.”
ದಾರಿಯ ಸಮೀಪದಲ್ಲಿ ಮಲಗಿದ್ದು
ಕುದುರೆಯ ಹಿಮ್ಮಡಿಯನ್ನು ಕಚ್ಚಿ
ಸವಾರನನ್ನು ಬೀಳಿಸುವ ವಿಷಸರ್ಪದಂತಿರುವನು.
18 “ಯೆಹೋವನೇ, ನಿನ್ನಿಂದುಂಟಾಗುವ ರಕ್ಷಣೆಗಾಗಿ ನಾನು ಕಾಯುತ್ತಿದ್ದೇನೆ.”
ಗಾದ
19 “ಒಂದು ಕಳ್ಳರ ಗುಂಪು ಗಾದನ ಮೇಲೆ ಆಕ್ರಮಣ ಮಾಡುವುದು.
ಆದರೆ ಗಾದನು ಅವರನ್ನು ಓಡಿಸಿ ಬಿಡುವನು.”
ಆಶೇರ
20 “ಆಶೇರನ ನಾಡು ಒಳ್ಳೆಯ ಆಹಾರವನ್ನು ಯಥೇಚ್ಛವಾಗಿ ಫಲಿಸುತ್ತದೆ;
ರಾಜನಿಗೆ ಸಾಕಾಗುವಷ್ಟು ಒಳ್ಳೆಯ ಆಹಾರವು ಅವನಲ್ಲಿರುವುದು.”
ನಫ್ತಾಲಿ
21 “ನಫ್ತಾಲಿಯು ಸ್ವತಂತ್ರವಾಗಿ ಓಡುವ ಜಿಂಕೆಯಂತಿದ್ದಾನೆ.
ಅವನ ಮಾತುಗಳು ಅದರ ಸುಂದರವಾದ ಮರಿಗಳಂತಿವೆ.”
ಯೋಸೇಫ
22 “ಯೋಸೇಫನು ಬಹು ಯಶಸ್ವಿಯಾಗಿದ್ದಾನೆ.
ಯೋಸೇಫನು ಹಣ್ಣನ್ನು ಅಧಿಕವಾಗಿ ಫಲಿಸುವ ದ್ರಾಕ್ಷೆ ಬಳ್ಳಿಯಂತಿರುವನು.
ಅವನು ವಸಂತಕಾಲದಲ್ಲಿ ಬೆಳೆಯುವ ದ್ರಾಕ್ಷೆಬಳ್ಳಿಯಂತಿರುವನು.
ಅವನು ಗೋಡೆಯ ಆಚೆಗೆ ಚಾಚಿಕೊಂಡಿರುವ ದ್ರಾಕ್ಷೆಬಳ್ಳಿಯಂತಿರುವನು.
23 ಅನೇಕ ಜನರು ಅವನ ವಿರುದ್ಧವಾಗಿ ಹೋರಾಡಿದರು.
ಬಿಲ್ಲುಗಳನ್ನು ಹೊಂದಿದ್ದ ಜನರು ಅವನನ್ನು ಇಷ್ಟಪಡಲಿಲ್ಲ.
24 ಆದರೆ ಅವನು ತನ್ನ ಹೋರಾಟದಲ್ಲಿ ಬಲಿಷ್ಠವಾದ ಬಿಲ್ಲಿನಿಂದಲೂ
ತನ್ನ ನಿಪುಣವಾದ ತೋಳುಗಳಿಂದಲೂ ಗೆದ್ದನು.
ಅವನು ಶಕ್ತಿಯನ್ನು ಯಾಕೋಬನ ಪರಾಕ್ರಮಿಯಿಂದಲೂ
ಇಸ್ರೇಲನ ಬಂಡೆಯಾದಾತನಿಂದಲೂ ಕುರುಬನಿಂದಲೂ
25 ನಿಮ್ಮ ತಂದೆಯ ದೇವರಿಂದಲೂ ಪಡೆದುಕೊಳ್ಳುವನು.
ದೇವರು ನಿನ್ನನ್ನು ಆಶೀರ್ವದಿಸುವನು.
ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಲಿ.
ಆತನು ಮೇಲಿರುವ ಆಕಾಶದಿಂದ ನಿನಗೆ ಆಶೀರ್ವಾದಗಳನ್ನು ಕೊಡಲಿ.
ಆತನು ಕೆಳಗಿನ ಆಳವಾದ ಸಾಗರದ ಸೆಲೆಗಳಿಂದಲೂ ನಿನಗೆ ಆಶೀರ್ವಾದಗಳನ್ನು ಕೊಡಲಿ.
ಆತನು ನಿನಗೆ ಸ್ತನ್ಯಗಳಿಂದಲೂ ಗರ್ಭದಿಂದಲೂ ಆಶೀರ್ವಾದಗಳನ್ನು ಕೊಡಲಿ.
26 ನನ್ನ ತಂದೆತಾಯಿಗಳಿಗೆ ಅನೇಕಾನೇಕ ಒಳ್ಳೆಯ ಸಂಗತಿಗಳು ಸಂಭವಿಸಿದವು.
ನಿನ್ನ ತಂದೆಯಾದ ನಾನು ಅದಕ್ಕಿಂತಲೂ ಹೆಚ್ಚು ಆಶೀರ್ವಾದ ಹೊಂದಿಕೊಂಡೆನು.
ನಿನ್ನ ಸಹೋದರರು ನಿನ್ನನ್ನು ದೂರಮಾಡಲು ಪ್ರಯತ್ನಿಸಿದರು.
ಆದರೆ ಈಗ ನನ್ನ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ
ಎತ್ತರವಾದ ಬೆಟ್ಟದೋಪಾದಿಯಲ್ಲಿ ರಾಶಿಯಂತಿವೆ.”
ಬೆನ್ಯಾಮೀನ
27 “ಬೆನ್ಯಾಮೀನನು ಹಸಿದಿರುವ ತೋಳದಂತಿದ್ದಾನೆ.
ಅವನು ಮುಂಜಾನೆಯಲ್ಲಿ ಕೊಂದು ತಿನ್ನುವನು.
ಅವನು ಸಾಯಂಕಾಲ ಮಿಕ್ಕುಳಿದುದ್ದನ್ನು ಹಂಚಿಕೊಳ್ಳುವನು.”
28 ಇವು ಇಸ್ರೇಲನ ಹನ್ನೆರಡು ಕುಲಗಳು. ಈ ವಿಷಯಗಳನ್ನೆಲ್ಲ ಅವರ ತಂದೆಯಾದ ಇಸ್ರೇಲನು ಅವರಿಗೆ ಹೇಳಿದನು. ಅವನು ತನ್ನ ಪ್ರತಿಯೊಬ್ಬ ಗಂಡುಮಗನಿಗೆ ಸರಿತಕ್ಕ ಆಶೀರ್ವಾದ ಕೊಟ್ಟನು. 29 ಬಳಿಕ ಇಸ್ರೇಲನು ಅವರಿಗೆ ಈ ಆಜ್ಞೆಯನ್ನು ಕೊಟ್ಟನು: “ನಾನು ಸತ್ತಾಗ, ನನ್ನ ಪೂರ್ವಿಕರ ಸಂಗಡವಿರಲು ಇಷ್ಟಪಡುತ್ತೇನೆ. ನನ್ನ ಪೂರ್ವಿಕರಿಗೆ ಸಮಾಧಿ ಮಾಡಿರುವ ಹಿತ್ತಿಯನಾದ ಎಫ್ರೋನನ ಗವಿಯಲ್ಲಿ ನನಗೆ ಸಮಾಧಿಮಾಡಬೇಕು. 30 ಆ ಗವಿಯು ಕಾನಾನ್ ದೇಶದ ಮಮ್ರೆಗೆ ಎದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿದೆ. ಅಬ್ರಹಾಮನು ತನ್ನ ಸಮಾಧಿಗಾಗಿ ಈ ಸ್ಥಳವನ್ನು ಎಫ್ರೋನನಿಂದ ಕೊಂಡುಕೊಂಡನು. 31 ಅಬ್ರಹಾಮನನ್ನು ಮತ್ತು ಅವನ ಹೆಂಡತಿಯಾದ ಸಾರಳನ್ನು ಆ ಗವಿಯಲ್ಲಿ ಸಮಾಧಿ ಮಾಡಲಾಗಿದೆ. ಇಸಾಕನನ್ನು ಮತ್ತು ರೆಬೆಕ್ಕಳನ್ನು ಅಲ್ಲಿ ಸಮಾಧಿ ಮಾಡಲಾಗಿದೆ. ನನ್ನ ಹೆಂಡತಿಯಾದ ಲೇಯಳನ್ನು ನಾನು ಅಲ್ಲಿ ಸಮಾಧಿ ಮಾಡಿದ್ದೇನೆ. ಬೆನ್ಯಾಮೀನ 32 ಆ ಗುಹೆಯನ್ನು ಮತ್ತು ಆ ಗುಹೆಯಿರುವ ಹೊಲವನ್ನು ಹಿತ್ತಿಯರಿಂದ ಕೊಂಡುಕೊಳ್ಳಲಾಗಿದೆ” ಎಂದು ಹೇಳಿದನು. 33 ಯಾಕೋಬನು ತನ್ನ ಗಂಡುಮಕ್ಕಳೊಂದಿಗೆ ಮಾತನಾಡಿದ ಮೇಲೆ ತನ್ನ ಹಾಸಿಗೆಯ ಮೇಲೆ ಕಾಲುಗಳನ್ನು ಮುದುರಿಕೊಂಡು ಪ್ರಾಣಬಿಟ್ಟನು.
ಕ್ರೈಸ್ತರ ನಡುವೆ ನ್ಯಾಯನಿರ್ಣಯದ ಸಮಸ್ಯೆಗಳು
6 ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವಿರೋಧವಿದ್ದರೆ, ನೀವು ನ್ಯಾಯಾಲಯಗಳಿಗೆ ಹೋಗುವುದೇಕೆ? ಅವರು ನೀತಿವಂತರಲ್ಲ. ಹೀಗಿರಲು ನಿಮಗೆ ನ್ಯಾಯತೀರ್ಪು ಮಾಡಲು ಅವರಿಗೆ ನೀವು ಅವಕಾಶ ಮಾಡಿಕೊಡುವುದೇಕೆ? ನಿಮಗೆ ನಾಚಿಕೆಯಾಗಬೇಕು. ನಿಮಗೆ ನ್ಯಾಯತೀರ್ಪು ನೀಡಲು ನೀವು ದೇವಜನರಿಗೆ ಏಕೆ ಅವಕಾಶ ಕೊಡಬಾರದು? 2 ದೇವಜನರು ಲೋಕಕ್ಕೆ ತೀರ್ಪು ಮಾಡುವರೆಂಬುದು ನಿಮಗೆ ತಿಳಿಯದೋ? ದೇವಜನರು ಲೋಕಕ್ಕೆ ನ್ಯಾಯತೀರ್ಪು ಮಾಡುವವರಾಗಿದ್ದರೆ, ಇಂಥ ಚಿಕ್ಕ ಸಂಗತಿಗಳ ಬಗ್ಗೆಯೂ ನ್ಯಾಯತೀರ್ಪು ಮಾಡಬಲ್ಲರೆಂಬುದು ನಿಶ್ಚಯವಾಗಿದೆ. 3 ಮುಂದಿನ ಕಾಲದಲ್ಲಿ ನಾವು ದೇವದೂತರಿಗೂ ನ್ಯಾಯತೀರಿಸುತ್ತೇವೆ ಎಂಬುದು ನಿಮಗೆ ಗೊತ್ತಿದೆ. ಆದ್ದರಿಂದ ಈ ಜೀವಿತದ ಸಂಗತಿಗಳನ್ನು ಕುರಿತು ನಾವು ತೀರ್ಪುಮಾಡಬಲ್ಲೆವು. 4 ಹೀಗಿರಲು, ನಿಮಲ್ಲಿ ಭಿನ್ನಾಭಿಪ್ರಾಯಗಳಿದ್ದು ಅದಕ್ಕೆ ನ್ಯಾಯನಿರ್ಣಯದ ಅಗತ್ಯವಿರುವಾಗ, ಸಭೆಗೆ ಸೇರಿಲ್ಲದ ಜನರ ಬಳಿಗೆ ನೀವು ಆ ಸಂಗತಿಗಳನ್ನು ತೆಗೆದುಕೊಂಡು ಹೋಗುವುದೇಕೆ? ಆ ಜನರಿಗೆ ಸಭೆಯಲ್ಲಿ ಯಾವ ಮಾನ್ಯತೆಯೂ ಇಲ್ಲ. 5 ನಿಮ್ಮನ್ನು ನಾಚಿಕೆಪಡಿಸಲು ಹೀಗೆ ಹೇಳುತ್ತಿದ್ದೇನೆ. ವಿಶ್ವಾಸಿಗಳಾಗಿರುವ ಇಬ್ಬರು ಸಹೋದರರ ನಡುವೆ ಉಂಟಾಗಿರುವ ವ್ಯಾಜ್ಯಕ್ಕೆ ತೀರ್ಪು ನೀಡಬಲ್ಲ ಜ್ಞಾನಿಯೊಬ್ಬನು ನಿಮ್ಮ ಸಭೆಯಲ್ಲಿ ಇಲ್ಲವೇ? 6 ನಿಮ್ಮಲ್ಲಿ ಒಬ್ಬ ಸಹೋದರನು ಮತ್ತೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅವರ ವ್ಯಾಜ್ಯಕ್ಕೆ ತೀರ್ಪು ನೀಡಲು ಅವಿಶ್ವಾಸಿಗಳಿಗೆ ನೀವು ಅವಕಾಶ ಮಾಡಿಕೊಟ್ಟಿದ್ದೀರಿ!
7 ನೀವು ಆಗಲೇ ಸೋತು ಹೋಗಿದ್ದೀರೆಂಬುದನ್ನು ನಿಮ್ಮ ಮಧ್ಯದಲ್ಲಿರುವ ವ್ಯಾಜ್ಯಗಳೇ ಸೂಚಿಸುತ್ತವೆ. ಅದಕ್ಕಿಂತ, ನೀವು ಕೆಟ್ಟದ್ದನ್ನು ಸಹಿಸಿಕೊಳ್ಳಬೇಕಿತ್ತು; ಮೋಸವನ್ನು ತಾಳಿಕೊಳ್ಳಬೇಕಿತ್ತು. 8 ಆದರೆ ಸ್ವತಃ ನೀವೇ ಕೆಟ್ಟದ್ದನ್ನು ಮಾಡುತ್ತೀರಿ ಮತ್ತು ಮೋಸ ಮಾಡುತ್ತೀರಿ! ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನಿಗೇ ನೀವು ಹೀಗೆ ಮಾಡುತ್ತೀರಿ.
9-10 ಅಧರ್ಮಿಗಳು ದೇವರ ರಾಜ್ಯವನ್ನು ಪಡೆಯುವುದಿಲ್ಲವೆಂದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ದೇವರ ರಾಜ್ಯಕ್ಕೆ ಸೇರದ ಜನರು ಯಾರ್ಯಾರೆಂದರೆ: ಲೈಂಗಿಕ ಪಾಪ ಮಾಡುವವರು, ವಿಗ್ರಹಗಳನ್ನು ಪೂಜಿಸುವವರು, ವ್ಯಭಿಚಾರ ಮಾಡುವವರು, ಸಲಿಂಗಕಾಮಿಗಳು, ಕದಿಯುವವರು, ಸ್ವಾರ್ಥಿಗಳು, ಕುಡುಕರು, ಬೈಯುವವರು ಮತ್ತು ಮೋಸಗಾರರು. 11 ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರಾತ್ಮನ ಮೂಲಕವಾಗಿಯೂ ನೀವು ತೊಳೆಯಲ್ಪಟ್ಟಿರಿ; ಪರಿಶುದ್ಧರಾದಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿಕೊಂಡಿರಿ.
Kannada Holy Bible: Easy-to-Read Version. All rights reserved. © 1997 Bible League International