Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 130

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
    ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
ನನ್ನ ಒಡೆಯನೇ, ನನಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲಿಸು.
ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
    ಒಬ್ಬನೂ ಜೀವಂತವಾಗಿ ಉಳಿಯಲಾರ.
ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
    ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.

ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
    ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
    ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
    ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
    ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.

ಆದಿಕಾಂಡ 44

ಯೋಸೇಫನ ಸಂಚು

44 ಬಳಿಕ ಯೋಸೇಫನು ತನ್ನ ಸೇವಕನಿಗೆ ಆಜ್ಞೆಮಾಡಿದನು. ಯೋಸೇಫನು, “ಈ ಜನರು ತೆಗೆದುಕೊಂಡು ಹೋಗಬಹುದಾದಷ್ಟು ದವಸಧಾನ್ಯಗಳನ್ನು ಇವರ ಚೀಲಗಳಲ್ಲಿ ತುಂಬಿ ಪ್ರತಿಯೊಬ್ಬನ ಹಣವನ್ನೂ ಧಾನ್ಯದೊಂದಿಗೆ ಚೀಲದಲ್ಲಿಡು. ಕಿರಿಯ ಸಹೋದರನ ಚೀಲದಲ್ಲಿಯೂ ಹಣವನ್ನು ಇಡು. ಅಲ್ಲದೆ ನನ್ನ ವಿಶೇಷವಾದ ಬೆಳ್ಳಿ ಬಟ್ಟಲನ್ನು ಸಹ ಅವನ ಚೀಲದಲ್ಲಿಡು” ಎಂದು ಆಜ್ಞಾಪಿಸಿದನು. ಅಂತೆಯೇ ಸೇವಕನು ಮಾಡಿದನು.

ಮರುದಿನ ಮುಂಜಾನೆ ಸಹೋದರರನ್ನು ಮತ್ತು ಅವರ ಕತ್ತೆಗಳನ್ನು ಅವರ ದೇಶಕ್ಕೆ ಮರಳಿ ಕಳುಹಿಸಲಾಯಿತು. ಅವರು ನಗರವನ್ನು ಬಿಟ್ಟುಹೋದ ಮೇಲೆ, ಯೋಸೇಫನು ತನ್ನ ಸೇವಕನಿಗೆ, “ಹೋಗು, ಆ ಜನರನ್ನು ಹಿಂಬಾಲಿಸು. ಅವರನ್ನು ತಡೆದು ಅವರಿಗೆ, ‘ನಾವು ನಿಮಗೆ ಒಳ್ಳೆಯವರಾಗಿದ್ದೆವು; ಆದರೆ ನೀವು ನಮಗೇಕೆ ಕೆಟ್ಟದ್ದನ್ನು ಮಾಡಿದಿರಿ? ನನ್ನ ಒಡೆಯನ ಬೆಳ್ಳಿ ಬಟ್ಟಲನ್ನು ನೀವೇಕೆ ಕದ್ದುಕೊಂಡು ಬಂದಿರಿ? ಈ ಬಟ್ಟಲಿನಲ್ಲಿ ನನ್ನ ಒಡೆಯನು ಕುಡಿಯುತ್ತಾನೆ. ದೇವರಿಗೆ ಪ್ರಶ್ನೆಗಳನ್ನು ಕೇಳಲು ಅವನು ಈ ಬಟ್ಟಲನ್ನೇ ಉಪಯೋಗಿಸುವನು. ನೀವು ಅವನ ಬಟ್ಟಲನ್ನು ಕದ್ದುಕೊಂಡು ತಪ್ಪುಮಾಡಿದಿರಿ’ ಎಂದು ಹೇಳು” ಎಂಬುದಾಗಿ ತಿಳಿಸಿದನು.

ಅಂತೆಯೇ ಸೇವಕನು ಸಹೋದರರನ್ನು ಹಿಂಬಾಲಿಸಿ ಅವರನ್ನು ತಡೆದು ನಿಲ್ಲಿಸಿದನು. ಯೋಸೇಫನು ಹೇಳಿದಂತೆಯೇ ಅವನು ಅವರಿಗೆ ಹೇಳಿದನು.

ಆದರೆ ಸಹೋದರರು ಸೇವಕನಿಗೆ, “ರಾಜ್ಯಪಾಲನು ಈ ರೀತಿ ಹೇಳುವುದೇಕೆ? ನಾವು ಇಂಥಾ ಕೃತ್ಯವನ್ನು ಮಾಡಿಲ್ಲ. ಮೊದಲು ನಮ್ಮ ಚೀಲಗಳಲ್ಲಿ ಸಿಕ್ಕಿದ ಹಣವನ್ನು ನಾವು ಕಾನಾನ್ ದೇಶದಿಂದ ಮತ್ತೆ ತಂದುಕೊಟ್ಟೆವು. ಆದ್ದರಿಂದ ಖಂಡಿತವಾಗಿ ನಾವು ನಿನ್ನ ಒಡೆಯನ ಮನೆಯಿಂದ ಬೆಳ್ಳಿಯನ್ನಾಗಲಿ ಬಂಗಾರವನ್ನಾಗಲಿ ಕದ್ದುಕೊಂಡಿಲ್ಲ. ನೀನು ಬೆಳ್ಳಿಯ ಬಟ್ಟಲನ್ನು ನಮ್ಮ ಯಾರ ಚೀಲಗಳಲ್ಲಿ ಕಂಡರೂ, ಆ ವ್ಯಕ್ತಿಯು ಸಾಯಲಿ, ನೀನು ಅವನನ್ನು ಕೊಲ್ಲಬಹುದು; ನಾವು ನಿನ್ನ ಗುಲಾಮರಾಗಿರುವೆವು” ಎಂದು ಹೇಳಿದರು.

10 ಕನು, “ನೀವು ಹೇಳಿದಂತೆಯೇ ಆಗಲಿ. ಆದರೆ ನಾನು ಅವನನ್ನು ಕೊಲ್ಲುವುದಿಲ್ಲ. ಯಾರಲ್ಲಿ ಬೆಳ್ಳಿಯ ಬಟ್ಟಲು ಸಿಕ್ಕುತ್ತದೊ ಅವನು ನನ್ನ ಗುಲಾಮನಾಗಿರಬೇಕು; ಉಳಿದವರು ಹೋಗಬಹುದು” ಎಂದು ಹೇಳಿದನು.

ಸಂಚಿನಲ್ಲಿ ಬೆನ್ಯಾಮೀನನು ಸಿಕ್ಕಿಕೊಂಡದ್ದು

11 ಬಳಿಕ ಅವರು ಅವಸರದಿಂದ ತಮ್ಮ ಚೀಲಗಳನ್ನು ನೆಲದ ಮೇಲಿಟ್ಟು ಬಿಚ್ಚಿದರು. 12 ಸೇವಕನು ಚೀಲಗಳನ್ನು ಪರೀಕ್ಷಿಸಲು ಹಿರಿಯ ಸಹೋದರನಿಂದ ಆರಂಭಿಸಿ, ಕಿರಿಯವನಾದ ಬೆನ್ಯಾಮೀನನ ಚೀಲದಲ್ಲಿ ಆ ಬೆಳ್ಳಿಯ ಬಟ್ಟಲನ್ನು ಕಂಡುಕೊಂಡನು. 13 ಸಹೋದರರು ತುಂಬ ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು ತಮ್ಮ ಚೀಲಗಳನ್ನು ಮತ್ತೆ ಕತ್ತೆಗಳ ಮೇಲೇರಿಸಿಕೊಂಡು ನಗರಕ್ಕೆ ಹಿಂತಿರುಗಿದರು.

14 ಯೆಹೂದ ಮತ್ತು ಅವನ ಸಹೋದರರು ಯೋಸೇಫನ ಮನೆಗೆ ಹಿಂತಿರುಗಿದಾಗ ಯೋಸೇಫನು ಇನ್ನೂ ಅಲ್ಲೇ ಇದ್ದನು. ಸಹೋದರರು ನೆಲದ ಮೇಲೆ ಬಿದ್ದು ತಲೆಬಾಗಿ ನಮಸ್ಕರಿಸಿದರು. 15 ಯೋಸೇಫನು ಅವರಿಗೆ, “ನೀವು ಹೀಗೇಕೆ ಮಾಡಿದಿರಿ? ನಾನು ಶಕುನ ನೋಡಿ ರಹಸ್ಯಗಳನ್ನು ತಿಳಿದುಕೊಳ್ಳಬಲ್ಲೆನೆಂಬುದು ನಿಮಗೆ ಗೊತ್ತಿರಲಿಲ್ಲವೇ?” ಎಂದು ಕೇಳಿದನು.

16 ಯೆಹೂದನು, “ಸ್ವಾಮಿ, ನಾವು ಹೇಳುವಂಥದ್ದು ಏನೂ ಇಲ್ಲ; ವಿವರಿಸಲು ಯಾವ ದಾರಿಯೂ ಇಲ್ಲ; ನಾವು ತಪ್ಪಿತಸ್ಥರಲ್ಲವೆಂದು ತೋರಿಸಲು ಯಾವ ಮಾರ್ಗವೂ ಇಲ್ಲ. ನಾವು ಮಾಡಿದ ಬೇರೊಂದು ಕಾರ್ಯದ ನಿಮಿತ್ತ ದೇವರು ನಮ್ಮನ್ನು ತಪ್ಪಿತಸ್ಥರೆಂದು ನಿರ್ಣಯಿಸಿದ್ದಾನೆ. ಆದ್ದರಿಂದ ನಾವೆಲ್ಲರೂ ಬೆನ್ಯಾಮೀನನೂ ನಿನಗೆ ಗುಲಾಮರಾಗಿರುವೆವು” ಎಂದು ಹೇಳಿದನು.

17 ಆದರೆ ಯೋಸೇಫನು, “ನಾನು ನಿಮ್ಮೆಲ್ಲರನ್ನು ಗುಲಾಮರನ್ನಾಗಿ ಮಾಡುವುದಿಲ್ಲ; ಬಟ್ಟಲನ್ನು ಕದ್ದುಕೊಂಡವನು ಮಾತ್ರ ನನ್ನ ಗುಲಾಮನಾಗಿರಬೇಕು; ಉಳಿದ ನೀವೆಲ್ಲರೂ ನಿಮ್ಮ ತಂದೆಯ ಬಳಿಗೆ ಸಮಾಧಾನದಿಂದ ಹೋಗಬಹುದು” ಎಂದು ಹೇಳಿದನು.

ಬೆನ್ಯಾಮೀನನಿಗಾಗಿ ಯೆಹೂದನು ಬೇಡಿಕೊಂಡಿದ್ದು

18 ಆಗ ಯೆಹೂದನು ಯೋಸೇಫನ ಬಳಿಗೆ ಹೋಗಿ, “ಸ್ವಾಮಿ, ತಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತನಾಡಲು ದಯವಿಟ್ಟು ಅನುಮತಿಯಾಗಲಿ; ದಯವಿಟ್ಟು ನನ್ನ ಮೇಲೆ ಕೋಪಗೊಳ್ಳಬೇಡಿ. ನೀವು ಸ್ವತಃ ಫರೋಹನಂತೆ ಇರುವಿರೆಂದು ನನಗೆ ತಿಳಿದಿದೆ. 19 ನಾವು ಮೊದಲನೆಯ ಸಲ ಬಂದಿದ್ದಾಗ, ನೀವು ನಮಗೆ, ‘ನಿಮಗೆ ತಂದೆಯಾಗಲಿ ತಮ್ಮನಾಗಲಿ ಇರುವನೇ?’ ಎಂದು ಕೇಳಿದಿರಿ. 20 ನಾವು ನಿಮಗೆ, ‘ನಮಗೆ ಒಬ್ಬ ತಂದೆಯಿದ್ದಾನೆ, ಅವನು ವೃದ್ಧನಾಗಿದ್ದಾನೆ; ನಮಗೆ ಪ್ರಾಯದ ತಮ್ಮನಿದ್ದಾನೆ, ನಮ್ಮ ತಂದೆಗೆ ತುಂಬ ವಯಸ್ಸಾಗಿದ್ದಾಗ ಅವನು ಹುಟ್ಟಿದ್ದರಿಂದ ನಮ್ಮ ತಂದೆಯು ಅವನನ್ನು ಪ್ರೀತಿಸುತ್ತಾನೆ. ಆ ಕಿರಿಯ ಮಗನ ಸಹೋದರನು ಸತ್ತುಹೋದನು. ಆದ್ದರಿಂದ ಆ ತಾಯಿಯಲ್ಲಿ ಹುಟ್ಟಿದವರಲ್ಲಿ ಇವನೊಬ್ಬನೇ ಉಳಿದಿದ್ದಾನೆ. ನಮ್ಮ ತಂದೆಯು ಅವನನ್ನು ತುಂಬಾ ಪ್ರೀತಿಸುವನು’ ಎಂದು ಹೇಳಿದೆವು. 21 ಬಳಿಕ ನೀವು ನಮಗೆ, ‘ಹಾಗಾದರೆ ಆ ಸಹೋದರನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ, ನಾನು ಅವನನ್ನು ನೋಡಬೇಕು’ ಎಂದು ಹೇಳಿದಿರಿ. 22 ನಾವು ನಿಮಗೆ ‘ಆ ಯುವಕನು ಬರಲಾರನು. ಅವನು ತನ್ನ ತಂದೆಯನ್ನು ಬಿಟ್ಟುಬರಲಾಗದು. ಅವನ ತಂದೆ ಅವನನ್ನು ಕಳೆದುಕೊಂಡರೆ ತುಂಬ ದುಃಖದಿಂದ ಸತ್ತುಹೋಗುವನು’ ಎಂದು ಹೇಳಿದೆವು. 23 ಆದರೆ ನೀವು ನಮಗೆ, ‘ನೀವು ಆ ಕಿರಿಯ ಸಹೋದರನನ್ನು ಕರೆದುಕೊಂಡು ಬರಲೇಬೇಕು; ಇಲ್ಲವಾದರೆ, ನಾನು ನಿಮಗೆ ದವಸಧಾನ್ಯಗಳನ್ನು ಮತ್ತೆ ಮಾರುವುದಿಲ್ಲ’ ಎಂದು ಹೇಳಿದಿರಿ. 24 ಆದ್ದರಿಂದ ನಾವು ನಮ್ಮ ತಂದೆಯ ಬಳಿಗೆ ಹಿಂತಿರುಗಿ ಹೋಗಿ ನೀವು ಹೇಳಿದ್ದನ್ನು ಅವನಿಗೆ ತಿಳಿಸಿದೆವು.

25 “ಸ್ವಲ ಸಮಯದ ನಂತರ ನಮ್ಮ ತಂದೆಯು, ‘ಮತ್ತೆ ಹೋಗಿ ಇನ್ನು ಸ್ವಲ್ಪ ಆಹಾರವನ್ನು ನಮಗಾಗಿ ಕೊಂಡುಕೊಂಡು ಬನ್ನಿ’ ಎಂದು ಹೇಳಿದನು. 26 ಆದರೆ ನಾವು ನಮ್ಮ ತಂದೆಗೆ, ‘ನಮ್ಮ ಕಿರಿಯ ತಮ್ಮನಿಲ್ಲದೆ ನಾವು ಹೋಗಲು ಸಾಧ್ಯವಿಲ್ಲ. ನಮ್ಮ ಕಿರಿಯ ತಮ್ಮನನ್ನು ನೋಡುವ ತನಕ, ನಮಗೆ ದವಸಧಾನ್ಯಗಳನ್ನು ಮಾರುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ’ ಎಂದು ಹೇಳಿದೆವು. 27 ಆಗ ನಮ್ಮ ತಂದೆಯು ನಮಗೆ, ‘ನನ್ನ ಹೆಂಡತಿಯಾದ ರಾಹೇಲಳು ನನಗೆ ಇಬ್ಬರು ಗಂಡುಮಕ್ಕಳನ್ನು ಕೊಟ್ಟಳು. 28 ನಾನು ಒಬ್ಬ ಮಗನನ್ನು ಕಳುಹಿಸಿಕೊಟ್ಟಾಗ, ಅವನು ಕ್ರೂರ ಪ್ರಾಣಿಯಿಂದ ಕೊಲ್ಲಲ್ಪಟ್ಟನು; ಇಂದಿನ ತನಕ ನಾನು ಅವನನ್ನು ನೋಡಲಿಲ್ಲ. 29 ನೀವು ನನ್ನ ಮತ್ತೊಬ್ಬ ಮಗನನ್ನು ನನ್ನ ಬಳಿಯಿಂದ ಕರೆದುಕೊಂಡು ಹೋಗುವಾಗ ಅವನಿಗೆ ಏನಾದರೂ ಸಂಭವಿಸಿದರೆ, ನಾನು ದುಃಖ ತಾಳಲಾರದೆ ಸತ್ತುಹೋಗುವೆನು’ ಎಂದು ಹೇಳಿದನು. 30 ನಮ್ಮ ತಂದೆಗಂತೂ ಇವನನ್ನು ಕಂಡರೆ ಪ್ರಾಣಪ್ರೀತಿ. ಆದ್ದರಿಂದ ನಮ್ಮ ಈ ಕಿರಿಯ ತಮ್ಮನಿಲ್ಲದೆ ಹೋದರೆ, 31 ನಮ್ಮ ತಂದೆಯೂ ಆ ಕೂಡಲೇ ಸತ್ತುಹೋಗುವನು; ನಮ್ಮ ತಂದೆ ದುಃಖದಿಂದ ಸಾಯಲು ನಾವೇ ಕಾರಣರಾಗುವೆವು.

32 “ನಾನು ಈ ಯುವಕನ ಜವಾಬ್ದಾರಿಯನ್ನು ವಹಿಸಿಕೊಂಡೆನು. ನಾನು ನನ್ನ ತಂದೆಗೆ, ‘ನಾನು ಇವನನ್ನು ಹಿಂದಕ್ಕೆ ಕರೆದುಕೊಂಡು ಬರದಿದ್ದರೆ ನನ್ನ ಜೀವಮಾನವೆಲ್ಲಾ ನೀನು ನನ್ನನ್ನು ದೂಷಿಸಬಹುದು’ ಎಂದು ಹೇಳಿದೆನು. 33 ಆದ್ದರಿಂದ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ಈ ಯುವಕನು ತನ್ನ ಸಹೋದರರೊಂದಿಗೆ ಹಿಂತಿರುಗಿ ಹೋಗಲಿ; ನಾನು ಇಲ್ಲಿ ನಿಮಗೆ ಗುಲಾಮನಾಗಿರುವೆನು. 34 ನನ್ನ ಜೊತೆಯಲ್ಲಿ ಈ ಹುಡುಗನಿಲ್ಲದೆ ನಾನು ನನ್ನ ತಂದೆಯ ಬಳಿಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ನಮ್ಮ ತಂದೆಗೆ ಸಂಭವಿಸುವುದನ್ನು ನೋಡಲು ನನಗೆ ತುಂಬ ಭಯವಾಗಿದೆ” ಎಂದು ಹೇಳಿದನು.

ರೋಮ್ನಗರದವರಿಗೆ 11:13-29

13 ಈಗ ನಾನು ಯೆಹೂದ್ಯರಲ್ಲದ ಜನರೊಂದಿಗೆ ಮಾತಾಡುತ್ತಿದ್ದೇನೆ. ನಾನು ಅವರಿಗೆ ಅಪೊಸ್ತಲನಾಗಿದ್ದೇನೆ. ಆದ್ದರಿಂದ ನಾನು ಈ ಕೆಲಸವನ್ನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿಯೇ ಮಾಡುತ್ತೇನೆ. 14 ನಾನು ನನ್ನ ಸ್ವಂತ ಜನರಲ್ಲಿ (ಯೆಹೂದ್ಯರಲ್ಲಿ) ಅಸೂಯೆಯನ್ನು ಉಂಟುಮಾಡಿ ಅವರಲ್ಲಿ ಕೆಲವರಾದರೂ ರಕ್ಷಣೆ ಹೊಂದುವಂತೆ ಮಾಡಬಲ್ಲೆನೆಂಬ ನಿರೀಕ್ಷೆ ನನಗಿದೆ. 15 ಇಸ್ರೇಲರು ತಿರಸ್ಕೃತರಾದ್ದರಿಂದ ಜಗತ್ತು ದೇವರೊಡನೆ ಸಂಧಾನವಾಗಲು ಸಾಧ್ಯವಾಯಿತಾದರೆ ಅವರು ಸ್ವೀಕೃತರಾದಾಗ ಇನ್ನೇನು ತಾನೆ ಸಂಭವಿಸದು! ಸತ್ತವರು ಜೀವ ಪಡೆದುಕೊಂಡಂತಾಗುವುದಿಲ್ಲವೇ? 16 ರೊಟ್ಟಿಯ ಮೊದಲನೇ ತುಂಡನ್ನು ದೇವರಿಗೆ ಅರ್ಪಿಸಿದಾಗ, ಇಡೀ ರೊಟ್ಟಿಯೇ ಪವಿತ್ರವಾಯಿತು. ಮರದ ಬೇರುಗಳು ಪವಿತ್ರವಾಗಿದ್ದರೆ, ಆ ಮರದ ಕೊಂಬೆಗಳು ಸಹ ಪವಿತ್ರವಾಗಿವೆ.

17 ಇದು, ಆಲಿವ್ ಮರದ ಕೆಲವು ಕೊಂಬೆಗಳು ಮುರಿಯಲ್ಪಟ್ಟಾಗ, ಕಾಡುಆಲಿವ್ ಮರದ ಕೊಂಬೆಯೊಂದು ಮೊದಲಿನ ಆಲಿವ್ ಮರಕ್ಕೆ ಸೇರಿಕೊಂಡಂತಿದೆ. ಯೆಹೂದ್ಯರಲ್ಲದ ನೀವು ಕಾಡುಕೊಂಬೆಗೆ ಸಮಾನವಾಗಿದ್ದೀರಿ. ಆದರೆ ಈಗ ನೀವು ಮೊದಲನೆ ಮರದ (ಯೆಹೂದ್ಯರ) ಶಕ್ತಿಯಲ್ಲಿಯೂ ಜೀವದಲ್ಲಿಯೂ ಪಾಲುಗಾರರಾಗಿದ್ದೀರಿ. 18 ಆದ್ದರಿಂದ ಮುರಿಯಲ್ಪಟ್ಟ ಆ ಕೊಂಬೆಗಳನ್ನು ಕಡೆಗಣಿಸಬೇಡಿ. ಅವುಗಳನ್ನು ಕಡೆಗಣಿಸಲು ನಿಮಗೆ ಯಾವ ಕಾರಣವೂ ಇಲ್ಲ. ಏಕೆಂದರೆ, ನೀವು ಬೇರಿಗೆ ಜೀವವನ್ನು ಕೊಡುವುದಿಲ್ಲ. ಬೇರು ನಿಮಗೆ ಜೀವವನ್ನು ಕೊಡುತ್ತದೆ. 19 “ನಾವು ಆ ಮರದ ಕೊಂಬೆಗಳಿಗೆ ಸೇರಿಕೊಳ್ಳಬೇಕೆಂದು ಆ ಕೊಂಬೆಗಳು ಮುರಿಯಲ್ಪಟ್ಟವು” ಎಂದು ನೀವು ಹೇಳಬಹುದು. 20 ಅದು ಸತ್ಯ. ಆ ಕೊಂಬೆಗಳು ಮುರಿಯಲ್ಪಟ್ಟವು. ಅದಕ್ಕೆ ಅಪನಂಬಿಕೆಯೇ ಕಾರಣ. ನೀವು ಆ ಮರದ ಒಂದು ಭಾಗವಾದದ್ದು ನಿಮ್ಮ ನಂಬಿಕೆಯಿಂದಲೇ. ಆದ್ದರಿಂದ ಗರ್ವಪಡಬೇಡ, ಭಯದಿಂದಿರು. 21 ದೇವರು ಸಹಜವಾದ ಕೊಂಬೆಗಳನ್ನೇ ಉಳಿಸಿಲ್ಲದಿರುವುದರಿಂದ ನೀವು ನಂಬದಿದ್ದರೆ ಆತನು ನಿನ್ನನ್ನು ಉಳಿಸುವುದಿಲ್ಲ.

22 ಆದ್ದರಿಂದ ದೇವರು ದಯೆ ಉಳ್ಳವನಾಗಿದ್ದರೂ ಬಹುಕಠಿಣನೂ ಆಗಿದ್ದಾನೆ ಎಂಬುದನ್ನು ಗಮನಿಸು. ದೇವರು ತನ್ನನ್ನು ಹಿಂಬಾಲಿಸದಿರುವ ಜನರನ್ನು ದಂಡಿಸುತ್ತಾನೆ. ಆದರೆ ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡಿದ್ದರೆ, ದೇವರು ನಿನಗೆ ದಯಾಳುವಾಗಿರುತ್ತಾನೆ. ಇಲ್ಲವಾದರೆ, ನಿನ್ನನ್ನು ಮರದಿಂದ ಕಡಿದುಹಾಕಲಾಗುವುದು. 23 ಯೆಹೂದ್ಯರು ತಮ್ಮ ಅಪನಂಬಿಕೆಯನ್ನು ಬಿಡುವುದಾದರೆ, ದೇವರು ಅವರನ್ನು ಮತ್ತೆ ಸ್ವೀಕರಿಸಿಕೊಳ್ಳುವನು. ಅವರ ಮೊದಲಿನ ಸ್ಥಾನವನ್ನು ಅವರಿಗೆ ಕೊಡಲು ದೇವರು ಶಕ್ತನಾಗಿದ್ದಾನೆ. 24 ಕಾಡುಕೊಂಬೆಯೊಂದು ಒಳ್ಳೆಯ ಮರದ ಕೊಂಬೆಯಾಗುವುದು ಸಹಜವಾದದ್ದಲ್ಲ. ಆದರೆ ಯೆಹೂದ್ಯರಲ್ಲದ ನೀವು ಕಾಡು ಆಲಿವ್ ಮರದಿಂದ ಕತ್ತರಿಸಲ್ಪಟ್ಟ ಕೊಂಬೆಯಾಗಿದ್ದು ಒಳ್ಳೆಯ ಆಲಿವ್ ಮರಕ್ಕೆ ಕಸಿಕಟ್ಟಲ್ಪಟ್ಟಿದ್ದೀರಿ. ಯೆಹೂದ್ಯರಾದರೋ ಒಳ್ಳೆಯ ಆಲಿವ್ ಮರದಲ್ಲಿ ಬೆಳೆದ ರೆಂಬೆಗಳು. ಆದ್ದರಿಂದ ಅವರು ತಮ್ಮ ಸ್ವಂತ ಮರಕ್ಕೆ ಮತ್ತೆ ಸೇರಿಸಲ್ಪಡಲು ಖಂಡಿತವಾಗಿಯೂ ಸಾಧ್ಯ.

25 ಸಹೋದರ ಸಹೋದರಿಯರೇ, ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳದಂತೆ ಇದುವರೆಗೆ ರಹಸ್ಯವಾಗಿದ್ದ ಸತ್ಯವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: ಇಸ್ರೇಲಿನ ಜನರಲ್ಲಿ ಒಂದು ಪಾಲು ಮಂದಿ ಮೊಂಡರಾದರು. ಆದರೆ ಯೆಹೂದ್ಯರಲ್ಲದ ಜನರೆಲ್ಲರೂ ದೇವರ ಬಳಿಗೆ ಬಂದಾಗ ಅವರ ಮೊಂಡತನವು ಇಲ್ಲವಾಗುವುದು. 26 ಹೀಗೆ ಎಲ್ಲಾ ಇಸ್ರೇಲರು ರಕ್ಷಣೆ ಹೊಂದುವರು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:

“ಸಿಯೋನಿನಿಂದ ರಕ್ಷಕನು ಬರುವನು:
    ಆತನು ಯಾಕೋಬನ ಕುಟುಂಬದಿಂದ ಎಲ್ಲಾ ದುಷ್ಟತನವನ್ನು ನಿವಾರಣೆ ಮಾಡುವನು.
27 ನಾನು ಆ ಜನರ ಪಾಪಗಳನ್ನು ಪರಿಹರಿಸುವಾಗ
    ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.”(A)

28 ಯೆಹೂದ್ಯರು ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ದೇವರ ಶತ್ರುಗಳಾಗಿದ್ದಾರೆ. ಯೆಹೂದ್ಯರಲ್ಲದ ಜನರಿಗೆ ಸಹಾಯವಾಗಲೆಂದೇ ಇದಾಯಿತು. ಆದರೆ ಯೆಹೂದ್ಯರು ಇನ್ನೂ ದೇವರಿಂದ ಆರಿಸಲ್ಪಟ್ಟ ಜನರಾಗಿದ್ದಾರೆ. ಆದ್ದರಿಂದ ಆತನು ಪಿತೃಗಳೊಂದಿಗೆ ತಾನು ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಅವರನ್ನು ಪ್ರೀತಿಸುತ್ತಾನೆ. 29 ಆತನು, ತಾನು ಕರೆಯುವ ಜನರ ವಿಷಯವಾಗಿಯೂ ತಾನು ಅವರಿಗೆ ಕೊಡುವ ವರಗಳ ವಿಷಯವಾಗಿಯೂ ತನ್ನ ಮನಸ್ಸನ್ನು ಬದಲಾಯಿಸುವುದೇ ಇಲ್ಲ; ತಾನು ಜನರಿಗೆ ನೀಡಿದ ಕರೆಯನ್ನು ಹಿಂತೆಗೆದುಕೊಳ್ಳುವುದೇ ಇಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International