Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 130

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
    ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
ನನ್ನ ಒಡೆಯನೇ, ನನಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲಿಸು.
ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
    ಒಬ್ಬನೂ ಜೀವಂತವಾಗಿ ಉಳಿಯಲಾರ.
ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
    ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.

ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
    ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
    ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
    ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
    ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.

ಆದಿಕಾಂಡ 43

ಯಾಕೋಬನು ಬೆನ್ಯಾಮೀನನನ್ನು ಈಜಿಪ್ಟಿಗೆ ಕಳುಹಿಸಲು ಒಪ್ಪಿದ್ದು

43 ಬರಗಾಲವು ದೇಶದಲ್ಲಿ ತುಂಬ ಭೀಕರವಾಗಿತ್ತು. ಅವರು ಈಜಿಪ್ಟಿನಿಂದ ತಂದಿದ್ದ ದವಸಧಾನ್ಯಗಳನ್ನೆಲ್ಲ ಊಟ ಮಾಡಿದರು. ದವಸಧಾನ್ಯಗಳು ಮುಗಿದು ಹೋದಾಗ ಯಾಕೋಬನು, ತನ್ನ ಗಂಡುಮಕ್ಕಳಿಗೆ, “ಈಜಿಪ್ಟಿಗೆ ಮತ್ತೆ ಹೋಗಿ ನಮಗೆ ಊಟಕ್ಕೆ ದವಸಧಾನ್ಯಗಳನ್ನು ಕೊಂಡುಕೊಂಡು ಬನ್ನಿ” ಎಂದು ಹೇಳಿದನು.

ಯೆಹೂದನು ಯಾಕೋಬನಿಗೆ, “ಆ ದೇಶದ ರಾಜ್ಯಪಾಲನು ನಮಗೆ ಎಚ್ಚರಿಕೆ ಕೊಟ್ಟಿದ್ದಾನೆ. ಅವನು, ‘ನೀವು ನಿಮ್ಮ ಸಹೋದರನನ್ನು ನನ್ನ ಬಳಿಗೆ ಕರೆದುಕೊಂಡು ಬಾರದೆ ನನ್ನನ್ನು ಭೇಟಿಯಾಗಕೂಡದು’ ಎಂದು ಹೇಳಿದ್ದಾನೆ. ನೀನು ನಮ್ಮೊಡನೆ ಬೆನ್ಯಾಮೀನನನ್ನು ಕಳುಹಿಸಿದರೆ, ನಾವು ಹೋಗಿ ದವಸಧಾನ್ಯಗಳನ್ನು ಕೊಂಡುಕೊಂಡು ಬರುವೆವು. ಆದರೆ ಬೆನ್ಯಾಮೀನನನ್ನು ಕಳುಹಿಸದಿದ್ದರೆ, ನಾವು ಹೋಗುವುದಿಲ್ಲ; ಆ ಮನುಷ್ಯನು ನಮಗೆ ಬೆನ್ಯಾಮೀನನಿಲ್ಲದೆ ಬರಕೂಡದೆಂದು ಎಚ್ಚರಿಕೆ ಕೊಟ್ಟಿದ್ದಾನೆ” ಅಂದನು.

ಇಸ್ರೇಲನು, “ನಿಮಗೆ ಮತ್ತೊಬ್ಬ ಸಹೋದರನಿರುವುದಾಗಿ ನೀವು ಆ ಮನುಷ್ಯನಿಗೆ ಯಾಕೆ ಹೇಳಿದಿರಿ? ನೀವು ಅಂಥ ಕೆಟ್ಟದ್ದನ್ನು ಯಾಕೆ ಮಾಡಿದಿರಿ?” ಎಂದು ಕೇಳಿದನು.

ಸಹೋದರರು, “ಆ ಮನುಷ್ಯನು ನಮ್ಮ ವಿಷಯವಾಗಿಯೂ ನಮ್ಮ ಕುಟುಂಬದ ವಿಷಯವಾಗಿಯೂ ತಿಳಿದುಕೊಳ್ಳಲು ಸೂಕ್ಷ್ಮವಾಗಿ ಪ್ರಶ್ನೆಗಳನ್ನು ಕೇಳಿದನು. ಅವನು ನಮಗೆ, ‘ನಿಮ್ಮ ತಂದೆಯು ಇನ್ನೂ ಜೀವಂತವಾಗಿರುವನೇ? ನಿಮಗೆ ಮನೆಯಲ್ಲಿ ಮತ್ತೊಬ್ಬ ಸಹೋದರನಿರುವನೇ?’ ಎಂದು ಕೇಳಿದನು. ನಾವು ಅವನ ಪ್ರಶ್ನೆಗಳಿಗೆ ಮಾತ್ರ ಉತ್ತರಕೊಟ್ಟೆವು. ನಮ್ಮ ಸಹೋದರನನ್ನು ತನ್ನ ಬಳಿಗೆ ಕರೆದುಕೊಂಡು ಬರಬೇಕೆಂದು ಅವನು ಹೇಳುತ್ತಾನೆಂದು ನಮಗೆ ತಿಳಿದಿರಲಿಲ್ಲ” ಎಂದು ಹೇಳಿದರು.

ಆಮೇಲೆ ಯೆಹೂದನು ತನ್ನ ತಂದೆಯಾದ ಇಸ್ರೇಲನಿಗೆ, “ನನ್ನೊಂದಿಗೆ ಬೆನ್ಯಾಮೀನನನ್ನು ಕಳುಹಿಸಿಕೊಡು. ನಾನು ಅವನನ್ನು ನೋಡಿಕೊಳ್ಳುವೆನು. ನಾವು ಈಜಿಪ್ಟಿಗೆ ಹೋಗಿ ಆಹಾರವನ್ನು ತರಬೇಕು. ಇಲ್ಲವಾದರೆ ನಾವೂ ಸಾಯುವೆವು, ನಮ್ಮ ಮಕ್ಕಳೂ ಸಾಯುವರು. ಅವನು ಸುರಕ್ಷಿತವಾಗಿರುವಂತೆ ನಾನು ನೋಡಿಕೊಳ್ಳುವೆನು. ನಾನು ಅವನಿಗೆ ಜವಾಬ್ದಾರನಾಗಿರುತ್ತೇನೆ. ನಾನು ಅವನನ್ನು ನಿನ್ನ ಬಳಿಗೆ ಮತ್ತೆ ಕರೆದುಕೊಂಡು ಬರದಿದ್ದರೆ, ನೀನು ಸದಾಕಾಲ ನನ್ನನ್ನು ದೂಷಿಸಬಹುದು. 10 ಮೊದಲೇ ನೀನು ನಮ್ಮನ್ನು ಕಳುಹಿಸಿಕೊಟ್ಟಿದ್ದರೆ, ಈಗಾಗಲೇ ಎರಡು ಸಲ ಆಹಾರವನ್ನು ತೆಗೆದುಕೊಂಡು ಬರಬಹುದಾಗಿತ್ತು” ಎಂದು ಹೇಳಿದನು.

11 ಅದಕ್ಕೆ ಅವರ ತಂದೆಯಾದ ಇಸ್ರೇಲನು, “ಇದು ನಿಜವಾಗಿಯೂ ಸತ್ಯವಾಗಿದ್ದರೆ, ನಿನ್ನೊಂದಿಗೆ ಬೆನ್ಯಾಮೀನನನ್ನು ಕರೆದುಕೊಂಡು ಹೋಗು. ಆದರೆ ರಾಜ್ಯಪಾಲನಿಗೆ ಶ್ರೇಷ್ಠವಾದ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಹೋಗಿ. ನಮ್ಮ ನಾಡಿನಲ್ಲಿ ದೊರಕುವ ಜೇನು, ಆಕ್ರೋಡು, ಬಾದಾಮಿ, ಹಾಲುಮಡ್ಡಿ ಮತ್ತು ಗೋಲರಸ ಇವುಗಳನ್ನು ತೆಗೆದುಕೊಳ್ಳಿ. 12 ಈ ಸಲ ಎರಡರಷ್ಟು ಹಣವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಕಳೆದ ಸಲ ನೀವು ಪಾವತಿ ಮಾಡಿದ್ದರೂ ಹಿಂತಿರುಗಿಸಲಾದ ಹಣವನ್ನು ತೆಗೆದುಕೊಂಡು ಹೋಗಿ. ಒಂದುವೇಳೆ ರಾಜ್ಯಪಾಲನು ತಪ್ಪು ಮಾಡಿದ್ದಿರಬೇಕು. 13 ಬೆನ್ಯಾಮೀನನನ್ನು ಕರೆದುಕೊಂಡು ಆ ಮನುಷ್ಯನ ಬಳಿಗೆ ಹಿಂತಿರುಗಿ ಹೋಗಿರಿ. 14 ನೀವು ರಾಜ್ಯಪಾಲನ ಮುಂದೆ ನಿಂತುಕೊಂಡಾಗ ಸರ್ವಶಕ್ತನಾದ ದೇವರು ನಿಮಗೆ ಸಹಾಯ ಮಾಡುವಂತೆ ನಾನು ಪ್ರಾರ್ಥಿಸುತ್ತೇನೆ. ಬೆನ್ಯಾಮೀನನನ್ನೂ ಸಿಮೆಯೋನನನ್ನೂ ಕಳುಹಿಸಿಕೊಡುವಂತೆ ಮತ್ತು ನೀವು ಸುರಕ್ಷಿತವಾಗಿ ಮರಳಿಬರುವಂತೆ ನಾನು ಪ್ರಾರ್ಥಿಸುತ್ತೇನೆ. ಇಲ್ಲವಾದರೆ, ನನ್ನ ಮಗನನ್ನು ಕಳೆದುಕೊಂಡು ನಾನು ಮತ್ತೆ ದುಃಖಿತನಾಗುವೆ” ಎಂದು ಹೇಳಿದನು.

15 ಆದ್ದರಿಂದ ಸಹೋದರರು ರಾಜ್ಯಪಾಲನಿಗೆ ಕೊಡಲು ಉಡುಗೊರೆಗಳನ್ನು ತೆಗೆದುಕೊಂಡರು; ಮೊದಲನೆ ಸಲ ತೆಗೆದುಕೊಂಡು ಹೋಗಿದ್ದ ಹಣಕ್ಕಿಂತ ಎರಡರಷ್ಟು ಹೆಚ್ಚಾಗಿ ತೆಗೆದುಕೊಂಡರು. ಬೆನ್ಯಾಮೀನನು ಸಹೋದರರೊಂದಿಗೆ ಈಜಿಪ್ಟಿಗೆ ಹೋದನು.

ಯೋಸೇಫನು ಸಹೋದರರನ್ನು ಮನೆಗೆ ಆಹ್ವಾನಿಸಿದ್ದು

16 ಸಹೋದರರೊಂದಿಗೆ ಬೆನ್ಯಾಮೀನನು ಇರುವುದನ್ನು ಕಂಡ ಯೋಸೇಫನು ತನ್ನ ಸೇವಕನಿಗೆ, “ಈ ಜನರನ್ನು ನನ್ನ ಮನೆಯೊಳಗೆ ಕರೆದುಕೊಂಡು ಹೋಗು; ಕುರಿಯನ್ನು ಕೊಯ್ದು ಅಡಿಗೆ ಮಾಡು. ಈ ಜನರು ಈ ಹೊತ್ತು ಮಧ್ಯಾಹ್ನ ನನ್ನೊಂದಿಗೆ ಊಟಮಾಡುವರು” ಎಂದು ಹೇಳಿದನು. 17 ಅಂತೆಯೇ ಆ ಸೇವಕನು ಸಹೋದರರನ್ನು ಮನೆಯೊಳಗೆ ಕರೆದುಕೊಂಡು ಹೋದನು.

18 ಆಗ ಸಹೋದರರಿಗೆ ಭಯವಾಯಿತು. ಅವರು, “ಕಳೆದ ಸಲ ನಮ್ಮ ಚೀಲಗಳಿಗೆ ಮತ್ತೆ ಹಾಕಿದ್ದ ಹಣದ ಕಾರಣದಿಂದಾಗಿ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ನಮ್ಮನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ನಮ್ಮ ಕತ್ತೆಗಳನ್ನು ವಶಮಾಡಿಕೊಳ್ಳುವರು; ನಮ್ಮನ್ನೂ ಗುಲಾಮರನ್ನಾಗಿ ಮಾಡಿಕೊಳ್ಳುವರು” ಎಂದು ಮಾತಾಡಿಕೊಂಡರು.

19 ಆದ್ದರಿಂದ ಸಹೋದರರು ಯೋಸೇಫನ ಮನೆಯ ಮೇಲ್ವಿಚಾರಕನಾದ ಸೇವಕನ ಬಳಿಗೆ ಹೋಗಿ ಪ್ರವೇಶದ್ವಾರದ ಬಳಿಯಲ್ಲಿ ಅವನೊಂದಿಗೆ ಮಾತಾಡಿದರು. 20 ಅವರು, “ಸ್ವಾಮೀ, ನಾವು ಪ್ರಮಾಣಮಾಡಿ ಹೇಳುತ್ತೇವೆ. ಇದು ಸತ್ಯ. ಕಳೆದ ಸಲ ನಾವು ಆಹಾರವನ್ನು ಕೊಂಡುಕೊಳ್ಳಲು ಬಂದಿದ್ದೆವು. 21-22 ಮನೆಗೆ ಹೋಗುವಾಗ ದಾರಿಯಲ್ಲಿ ನಾವು ನಮ್ಮ ಚೀಲಗಳನ್ನು ಬಿಚ್ಚಿದಾಗ ಪ್ರತಿಯೊಂದು ಚೀಲದಲ್ಲಿಯೂ ನಾವು ಪಾವತಿಮಾಡಿದ್ದ ಹಣವನ್ನು ಕಂಡೆವು. ಆ ಹಣವು ಅಲ್ಲಿಗೆ ಹೇಗೆ ಬಂತೋ ನಮಗೆ ಗೊತ್ತಿಲ್ಲ. ಆದರೆ ಆ ಹಣವನ್ನು ನಿಮಗೆ ಕೊಡುವುದಕ್ಕಾಗಿ ನಮ್ಮೊಂದಿಗೆ ತೆಗೆದುಕೊಂಡು ಬಂದಿದ್ದೇವೆ. ಈ ಸಲ ನಾವು ಖರೀದಿ ಮಾಡಬೇಕೆಂದಿರುವ ಆಹಾರಕ್ಕೆ ಕೊಡಲು ಹೆಚ್ಚು ಹಣವನ್ನು ತಂದಿದ್ದೇವೆ” ಎಂದು ಹೇಳಿದರು.

23 ಅದಕ್ಕೆ ಸೇವಕನು, “ಭಯಪಡಬೇಡಿ, ಚಿಂತಿಸಬೇಡಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ಹಣವನ್ನು ಉಡುಗೊರೆಯಾಗಿ ನಿಮ್ಮ ಚೀಲಗಳಲ್ಲಿ ಇಟ್ಟಿದ್ದಿರಬೇಕು. ಕಳೆದ ಸಲ ನೀವು ದವಸಧಾನ್ಯಗಳಿಗಾಗಿ ಹಣ ಪಾವತಿ ಮಾಡಿದ್ದು ನನಗೆ ನೆನಪಿದೆ” ಎಂದು ಹೇಳಿದನು.

ಬಳಿಕ ಆ ಸೇವಕನು ಸಿಮೆಯೋನನನ್ನು ಸೆರೆಮನೆಯಿಂದ ಕರೆತಂದನು. 24 ಸೇವಕನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಹೋಗಿ ಅವರಿಗೆ ನೀರನ್ನು ಕೊಟ್ಟನು. ಅವರು ತಮ್ಮ ಕಾಲುಗಳನ್ನು ತೊಳೆದುಕೊಂಡರು. ಬಳಿಕ ಅವನು ಅವರ ಕತ್ತೆಗಳಿಗೆ ಆಹಾರವನ್ನು ಹಾಕಿದನು.

25 ತಾವು ಯೋಸೇಫನೊಂದಿಗೆ ಊಟ ಮಾಡುವುದಾಗಿ ಸಹೋದರರಿಗೆ ತಿಳಿಯಿತು. ಆದ್ದರಿಂದ ಅವರು ಅವನಿಗೆ ಕೊಡಲು ತಮ್ಮ ಉಡುಗೊರೆಗಳನ್ನು ಮಧ್ಯಾಹ್ನದವರೆಗೆ ಸಿದ್ಧಪಡಿಸಿದರು.

26 ಯೋಸೇಫನು ಮನೆಗೆ ಬಂದಾಗ, ಸಹೋದರರು ತಾವು ತಂದಿದ್ದ ಉಡುಗೊರೆಗಳನ್ನು ಅವನಿಗೆ ಕೊಟ್ಟರು. ಬಳಿಕ ಅವರು ನೆಲದವರೆಗೆ ಬಾಗಿ ನಮಸ್ಕರಿಸಿದರು.

27 ಯೋಸೇಫನು ಅವರ ಯೋಗಕ್ಷೇಮವನ್ನು ವಿಚಾರಿಸಿದನು. ಯೋಸೇಫನು “ನೀವು ನನಗೆ ತಿಳಿಸಿದ ನಿಮ್ಮ ವೃದ್ಧನಾದ ತಂದೆ ಕ್ಷೇಮವಾಗಿದ್ದಾನೆಯೇ? ಇನ್ನೂ ಜೀವಂತವಾಗಿರುವನೇ?” ಎಂದು ಕೇಳಿದನು.

28 ಸಹೋದರರು, “ಸ್ವಾಮೀ, ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಜೀವಂತವಾಗಿದ್ದಾನೆ” ಎಂದು ಹೇಳಿದನು. ಬಳಿಕ ಅವರು ಮತ್ತೆ ಯೋಸೇಫನಿಗೆ ಅಡ್ಡಬಿದ್ದರು.

29 ಬಳಿಕ ಯೋಸೇಫನು ತನ್ನ ಸಹೋದರನಾದ ಬೆನ್ಯಾಮೀನನನ್ನು ನೋಡಿದನು. (ಬೆನ್ಯಾಮೀನ ಮತ್ತು ಯೋಸೇಫ ಒಂದೇ ತಾಯಿಯ ಮಕ್ಕಳು.) ಯೋಸೇಫನು, “ನೀವು ನನಗೆ ತಿಳಿಸಿದ ನಿಮ್ಮ ಕಿರಿಯ ತಮ್ಮನು ಇವನೋ?” ಎಂದು ಕೇಳಿದನು. ಆಮೇಲೆ ಯೋಸೇಫನು ಬೆನ್ಯಾಮೀನನಿಗೆ “ಮಗನೇ, ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂದು ಹೇಳಿದನು.

30 ಯೋಸೇಫನು ತನ್ನ ತಮ್ಮನಾದ ಬೆನ್ಯಾಮೀನನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಆನಂದದಿಂದ ಅವನ ಕಣ್ಣಲ್ಲಿ ನೀರು ಉಕ್ಕೇರಿ ಬಂದದ್ದರಿಂದ ಕೋಣೆಯೊಳಗೆ ಹೋಗಿ ಕಣ್ಣೀರಿಟ್ಟನು. 31 ಬಳಿಕ ಯೋಸೇಫನು ತನ್ನ ಮುಖವನ್ನು ತೊಳೆದುಕೊಂಡು ಮತ್ತು ಮನಸ್ಸನ್ನು ಬಿಗಿಹಿಡಿದುಕೊಂಡು ಬಂದು, “ಊಟ ಬಡಿಸಿರಿ” ಎಂದು ಅಪ್ಪಣೆಕೊಟ್ಟನು.

32 ಯೋಸೇಫನೊಬ್ಬನೇ ಒಂದು ಮೇಜಿನಲ್ಲಿ ಊಟ ಮಾಡಿದನು. ಅವನ ಸಹೋದರರು ಒಟ್ಟಾಗಿ ಮತ್ತೊಂದು ಮೇಜಿನಲ್ಲಿ ಊಟ ಮಾಡಿದರು. ಈಜಿಪ್ಟಿನವರು ಬೇರೊಂದು ಮೇಜಿನಲ್ಲಿ ಊಟ ಮಾಡಿದರು. ಇಬ್ರಿಯ ಜನರೊಂದಿಗೆ ಊಟ ಮಾಡುವುದು ತಪ್ಪೆಂಬುದು ಅವರ ನಂಬಿಕೆಯಾಗಿತ್ತು. 33 ಯೋಸೇಫನ ಎದುರಿನ ಸಾಲಿನಲ್ಲಿ ಕುಳಿತುಕೊಳ್ಳಲು ಯೋಸೇಫನ ಸಹೋದರರಿಗೆ ಹಿರಿಯವನಿಂದ ಮೊದಲುಗೊಂಡು ಕಿರಿಯವನವರೆಗೆ ಕ್ರಮವಾಗಿ ಸ್ಥಳವನ್ನು ಗೊತ್ತುಪಡಿಸಲಾಗಿತ್ತು. ಆದ್ದರಿಂದ ಸಹೋದರರೆಲ್ಲಾ ಅತ್ಯಾಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡತೊಡಗಿದರು. 34 ಸೇವಕರು ಯೋಸೇಫನ ಮೇಜಿನಿಂದ ಊಟವನ್ನು ತೆಗೆದುಕೊಂಡು ಅವರಿಗೆ ಬಡಿಸುತ್ತಿದ್ದರು. ಆದರೆ ಸೇವಕರು ಬೆನ್ಯಾಮೀನನಿಗೆ ಬೇರೆಯವರಿಗಿಂತ ಐದರಷ್ಟು ಹೆಚ್ಚಾಗಿ ಕೊಟ್ಟರು. ಸಹೋದರರು ಯಥೇಚ್ಛವಾಗಿ ಊಟ ಮಾಡಿದರು.

ಅಪೊಸ್ತಲರ ಕಾರ್ಯಗಳು 15:1-21

ಜೆರುಸಲೇಮಿನಲ್ಲಿ ಸಮ್ಮೇಳನ

15 ಬಳಿಕ ಕೆಲವು ಜನರು ಜುದೇಯದಿಂದ ಅಂತಿಯೋಕ್ಯಕ್ಕೆ ಬಂದರು. “ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗುವುದಿಲ್ಲ. ಸುನ್ನತಿ ಮಾಡಿಸಿಕೊಳ್ಳಬೇಕೆಂದು ಮೋಶೆಯೇ ಹೇಳಿದ್ದಾನೆ” ಎಂದು ಅವರು ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಉಪದೇಶಿಸತೊಡಗಿದರು. ಪೌಲ ಬಾರ್ನಬರು ಈ ಉಪದೇಶಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅವರೊಂದಿಗೆ ವಾದ ಮಾಡಿದರು. ಈ ಸಮಸ್ಯೆಯ ಬಗ್ಗೆ ಅಪೊಸ್ತಲರೊಡನೆ ಮತ್ತು ಹಿರಿಯರೊಡನೆ ಚರ್ಚಿಸಲು ಪೌಲ ಬಾರ್ನಬರನ್ನು ಮತ್ತು ಇತರ ಕೆಲವರನ್ನು ಜೆರುಸಲೇಮಿಗೆ ಕಳುಹಿಸಲು ಸಭೆ ನಿರ್ಧರಿಸಿತು.

ಅಂತೆಯೇ ಸಭೆಯು ಇವರನ್ನು ಕಳುಹಿಸಿತು. ಇವರು ಫೆನಿಷ್ಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣಮಾಡಿದರು. ಯೆಹೂದ್ಯರಲ್ಲದ ಜನರು ನಿಜದೇವರ ಕಡೆಗೆ ತಿರುಗಿಕೊಂಡಿದ್ದರ ಬಗ್ಗೆ ಈ ನಾಡುಗಳಲ್ಲಿ ವಿವರಿಸಿದರು. ಇದನ್ನು ಕೇಳಿ ಸಹೋದರರಿಗೂ ಬಹಳ ಸಂತೋಷವಾಯಿತು. ಪೌಲ ಬಾರ್ನಬರು ಮತ್ತು ಇತರರು ಜೆರುಸಲೇಮನ್ನು ತಲುಪಿದರು. ಅಪೊಸ್ತಲರು, ಹಿರಿಯರು ಮತ್ತು ಸಭೆಯವರು ಇವರನ್ನು ಸ್ವಾಗತಿಸಿದರು. ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಮತ್ತು ಇತರರು ವಿವರಿಸಿದರು. ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳಲ್ಲಿ ಕೆಲವರು ಫರಿಸಾಯರ ಗುಂಪಿಗೆ ಸೇರಿದವರಾಗಿದ್ದರು. ಅವರು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳಬೇಕು. ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ನಾವು ಅವರಿಗೆ ಹೇಳಬೇಕು!” ಎಂದರು.

ಬಳಿಕ, ಅಪೊಸ್ತಲರು ಮತ್ತು ಹಿರಿಯರು ಈ ಸಮಸ್ಯೆಯನ್ನು ಪರಿಶೀಲಿಸಲು ಸೇರಿಬಂದರು. ದೀರ್ಘಚರ್ಚೆಯಾಯಿತು. ಬಳಿಕ ಪೇತ್ರ ಎದ್ದುನಿಂತು ಅವರಿಗೆ, “ನನ್ನ ಸಹೋದರರೇ, ನಿಮಗೇ ತಿಳಿದಿರುವಂತೆ, ಯೆಹೂದ್ಯರಲ್ಲದ ಜನರಿಗೆ ಸುವಾರ್ತೆಯನ್ನು ಬೋಧಿಸುವುದಕ್ಕಾಗಿ ನಿಮ್ಮ ಮಧ್ಯದೊಳಗಿಂದ ದೇವರು ನನ್ನನ್ನು ಬಹುದಿನಗಳ ಹಿಂದೆ ಆರಿಸಿಕೊಂಡನು. ಅವರು ನನ್ನಿಂದ ಸುವಾರ್ತೆಯನ್ನು ಕೇಳಿ ನಂಬಿಕೊಂಡರು. ಎಲ್ಲಾ ಜನರ ಆಲೋಚನೆಗಳನ್ನು ಬಲ್ಲ ದೇವರು ಯೆಹೂದ್ಯರಲ್ಲದ ಜನರನ್ನೂ ಸ್ವೀಕರಿಸಿಕೊಂಡನು. ದೇವರು ನಮಗೆ ಪವಿತ್ರಾತ್ಮನನ್ನು ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮನನ್ನು ಕೊಟ್ಟು ಇದನ್ನು ರುಜುವಾತುಪಡಿಸಿದ್ದಾನೆ. ದೇವರ ದೃಷ್ಟಿಯಲ್ಲಿ ಅವರಿಗೂ ನಮಗೂ ಯಾವ ವ್ಯತ್ಯಾಸವಿಲ್ಲ. ಅವರು ನಂಬಿಕೊಂಡಾಗ, ದೇವರು ಅವರ ಹೃದಯಗಳನ್ನು ಶುದ್ಧೀಕರಿಸಿದನು. 10 ಹೀಗಿರಲಾಗಿ, ಯೆಹೂದ್ಯರಲ್ಲದ ಸಹೋದರರ ಹೆಗಲ ಮೇಲೆ ಭಾರವಾದ ಹೊರೆಯನ್ನು[a] ಯಾಕೆ ಹೊರಿಸುತ್ತೀರಿ? ನೀವು ದೇವರನ್ನು ಸಿಟ್ಟಿಗೆಬ್ಬಿಸಲು ಪ್ರಯತ್ನಿಸುತ್ತಿದ್ದೀರಾ? ನಮಗಾಗಲಿ ನಮ್ಮ ಪಿತೃಗಳಿಗಾಗಲಿ ಈ ಹೊರೆಯನ್ನು ಹೊರವಷ್ಟು ಶಕ್ತಿ ಇರಲಿಲ್ಲ! 11 ಆದ್ದರಿಂದ ನಾವಾಗಲಿ ಇವರಾಗಲಿ ರಕ್ಷಣೆ ಹೊಂದುವುದು ಪ್ರಭುವಾದ ಯೇಸುವಿನ ಕೃಪೆಯಿಂದಲೇ ಎಂದು ನಾವು ನಂಬುತ್ತೇವೆ!” ಎಂದನು.

12 ಆಗ ಇಡೀ ಸಭೆಯು ಮೌನವಾಯಿತು. ಅವರು ಪೌಲ ಬಾರ್ನಬರಿಗೆ ಕಿವಿಗೊಟ್ಟರು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ದೇವರು ತಮ್ಮ ಮೂಲಕವಾಗಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳ ಮತ್ತು ಸೂಚಕಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಹೇಳಿದರು. 13 ಬಳಿಕ ಯಾಕೋಬನು, “ನನ್ನ ಸಹೋದರರೇ, ನನಗೆ ಕಿವಿಗೊಡಿರಿ. 14 ಯೆಹೂದ್ಯರಲ್ಲದ ಜನರಿಗೆ ದೇವರು ತನ್ನ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆಂದು ಸೀಮೋನನು ನಮಗೆ ತಿಳಿಸಿದ್ದಾನೆ. ಮೊಟ್ಟಮೊದಲ ಬಾರಿಗೆ, ದೇವರು ಯೆಹೂದ್ಯರಲ್ಲದ ಜನರನ್ನು ಸ್ವೀಕರಿಸಿಕೊಂಡನು. ಅವರನ್ನು ತನ್ನ ಜನರನ್ನಾಗಿ ಮಾಡಿಕೊಂಡನು. 15 ಪ್ರವಾದಿಗಳ ಮಾತುಗಳು ಸಹ ಇದಕ್ಕೆ ಸಾಮರಸ್ಯವಾಗಿವೆ:

16 ‘ಇದಾದನಂತರ ನಾನು ಹಿಂತಿರುಗುವೆನು.
    ನಾನು ದಾವೀದನ ಮನೆಯನ್ನು ಮತ್ತೆ ಕಟ್ಟುವೆನು.
    ಅದು ಬಿದ್ದುಹೋಗಿದೆ.
ಆದರೆ ಕೆಡವಲ್ಪಟ್ಟ ಅವನ ಮನೆಯ ಚೂರುಗಳನ್ನು ನಾನು ಮತ್ತೆ ಒಂದುಗೂಡಿಸುವೆನು.
    ನಾನು ಅವನ ಮನೆಯನ್ನು ಹೊಸದು ಮಾಡುವೆನು.
17 ಬಳಿಕ ಇತರ ಜನರೆಲ್ಲರೂ ಪ್ರಭುವಿಗಾಗಿ ಹುಡುಕುವರು.
    ಯೆಹೂದ್ಯರಲ್ಲದ ಜನರೆಲ್ಲರೂ ಸಹ ನನ್ನ ಜನರೇ ಆಗಿದ್ದಾರೆ.
ಪ್ರಭುವೇ ಇದನ್ನು ಹೇಳಿದ್ದಾನೆ.
    ಈ ಕಾರ್ಯಗಳನ್ನೆಲ್ಲ ಮಾಡುವವನು ಆತನೇ.’(A)

18 ‘ಆದಿಯಿಂದಲೂ ಈ ಕಾರ್ಯಗಳನ್ನು ತಿಳಿಯಪಡಿಸಲಾಗಿದೆ.’[b]

19 “ಆದ್ದರಿಂದ, ದೇವರ ಕಡೆಗೆ ತಿರುಗಿಕೊಂಡ ಯೆಹೂದ್ಯರಲ್ಲದ ಸಹೋದರರಿಗೆ ನಾವು ತೊಂದರೆ ಕೊಡಬಾರದು. 20 ಅದಕ್ಕೆ ಬದಲಾಗಿ ನಾವು ಅವರಿಗೆ ಒಂದು ಪತ್ರವನ್ನು ಬರೆದು ಈ ವಿಷಯಗಳನ್ನು ತಿಳಿಸೋಣ:

ವಿಗ್ರಹಗಳಿಗೆ ಅರ್ಪಿಸಿದ ಆಹಾರವನ್ನು ತಿನ್ನಬೇಡಿರಿ. (ಈ ಆಹಾರ ಅಶುದ್ಧವಾದದ್ದು.)

ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ. ರಕ್ತವನ್ನು ತಿನ್ನಬೇಡಿ.

ಕುತ್ತಿಗೆ ಹಿಸುಕಿಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

21 ಅವರು ಇವುಗಳನ್ನು ಮಾಡಕೂಡದು. ಏಕೆಂದರೆ ಮೋಶೆಯ ಧರ್ಮಶಾಸ್ತ್ರವನ್ನು ಬೋಧಿಸುವಂಥ ಜನರು ಪ್ರತಿಯೊಂದು ಪಟ್ಟಣದಲ್ಲಿ ಇನ್ನೂ ಇದ್ದಾರೆ. ಅನೇಕ ವರ್ಷಗಳಿಂದ ಪ್ರತಿ ಸಬ್ಬತ್ ದಿನದಲ್ಲಿ ಮೋಶೆಯ ಮಾತುಗಳನ್ನು ಓದಲಾಗುತ್ತಿದೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International