Revised Common Lectionary (Semicontinuous)
ಕನಸುಗಾರ ಯೋಸೇಫ
37 ಯಾಕೋಬನು ಕಾನಾನ್ ದೇಶದಲ್ಲಿ ನೆಲೆಸಿದನು. ಅವನ ತಂದೆ ಆ ದೇಶದಲ್ಲೇ ವಾಸವಾಗಿದ್ದನು. 2 ಯಾಕೋಬನ ಕುಟುಂಬದ ಚರಿತ್ರೆಯಿದು:
ಯೋಸೇಫನು ಹದಿನೇಳು ವರ್ಷದ ಯೌವನಸ್ಥನಾಗಿದ್ದನು. ಆಡುಕುರಿಗಳನ್ನು ಸಾಕುವುದು ಅವನ ಕಸುಬಾಗಿತ್ತು. ತನ್ನ ಅಣ್ಣಂದಿರೊಡನೆ ಅಂದರೆ ಬಿಲ್ಹಾ ಮತ್ತು ಜಿಲ್ಪಾ ಎಂಬ ತನ್ನ ಮಲತಾಯಿಗಳ ಮಕ್ಕಳೊಡನೆ ಯೋಸೇಫನು ಆಡುಕುರಿಗಳನ್ನು ಮೇಯಿಸುತ್ತಿದ್ದನು. ಅವರೇನಾದರೂ ಕೆಟ್ಟದ್ದನ್ನು ಮಾಡಿದರೆ ಯೋಸೇಫನು ತಂದೆಗೆ ತಿಳಿಸುತ್ತಿದ್ದನು. 3 ಇಸ್ರೇಲನು ತುಂಬ ಮುಪ್ಪಿನವನಾಗಿದ್ದಾಗ ಯೋಸೇಫನು ಹುಟ್ಟಿದ್ದರಿಂದ ಇಸ್ರೇಲನು ತನ್ನ ಬೇರೆ ಗಂಡುಮಕ್ಕಳಿಗಿಂತಲೂ ಹೆಚ್ಚಾಗಿ ಯೋಸೇಫನನ್ನು ಪ್ರೀತಿಸಿದನು. ಯಾಕೋಬನು ತನ್ನ ಮಗನಿಗೆ ಸುಂದರವಾದ ನಿಲುವಂಗಿಯನ್ನು ಮಾಡಿಸಿ ಕೊಟ್ಟಿದ್ದನು. 4 ತಮ್ಮ ತಂದೆಗೆ ಯೋಸೇಫನ ಮೇಲೆ ಹೆಚ್ಚು ಪ್ರೀತಿಯಿರುವುದನ್ನು ಗಮನಿಸಿದ ಯೋಸೇಫನ ಅಣ್ಣಂದಿರು ಯೋಸೇಫನನ್ನು ದ್ವೇಷಿಸತೊಡಗಿ ಅವನೊಡನೆ ಸ್ನೇಹಭಾವದಿಂದ ಮಾತಾಡುತ್ತಿರಲಿಲ್ಲ.
12 ಒಂದು ದಿನ ಯೋಸೇಫನ ಅಣ್ಣಂದಿರು ತಮ್ಮ ತಂದೆಯ ಆಡುಕುರಿಗಳನ್ನು ಕಾಯಲು ಶೆಕೆಮಿಗೆ ಹೋದರು. 13 ಇಸ್ರೇಲನು ಯೋಸೇಫನಿಗೆ, “ಶೆಕೆಮಿಗೆ ಹೋಗು. ನಿನ್ನ ಅಣ್ಣಂದಿರು ಅಲ್ಲಿ ನನ್ನ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ” ಎಂದು ಹೇಳಿದನು.
ಯೋಸೇಫನು, “ಸರಿ, ಹೋಗುವೆನು” ಎಂದು ಉತ್ತರಿಸಿದನು.
14 ಇಸ್ರೇಲನು, “ನಿನ್ನ ಅಣ್ಣಂದಿರ ಮತ್ತು ಆಡುಕುರಿಗಳ ಕ್ಷೇಮವನ್ನು ವಿಚಾರಿಸಿಕೊಂಡು ಬಂದು ನನಗೆ ತಿಳಿಸು” ಎಂದು ಹೇಳಿ ಅವನನ್ನು ಹೆಬ್ರೋನಿನ ಕಣಿವೆಯಿಂದ ಶೆಕೆಮಿಗೆ ಕಳುಹಿಸಿಕೊಟ್ಟನು.
15 ಶೆಕೆಮಿನಲ್ಲಿ ದಾರಿತಪ್ಪಿ ಯೋಸೇಫನು ಹೊಲಗಳಲ್ಲಿ ಅಲೆದಾಡುತ್ತಿರಲು ಅವನನ್ನು ಕಂಡ ಒಬ್ಬನು, “ಏನು ಹುಡುಕುತ್ತಿರುವೆ?” ಎಂದು ಕೇಳಿದನು.
16 ಯೋಸೇಫನು, “ನನ್ನ ಅಣ್ಣಂದಿರನ್ನು ಹುಡುಕುತ್ತಿದ್ದೇನೆ. ಅವರು ತಮ್ಮ ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆ?” ಎಂದು ಕೇಳಿದನು.
17 ಅದಕ್ಕೆ ಅವನು, “ಅವರು ಇಲ್ಲಿಂದ ಹೊರಟುಹೋದರು. ದೋತಾನಿಗೆ ಹೋಗೋಣ ಎಂದು ಅವರು ಮಾತಾಡಿಕೊಳ್ಳುವುದನ್ನು ನಾನು ಕೇಳಿದೆ” ಎಂದು ಹೇಳಿದನು. ಆದ್ದರಿಂದ ಯೋಸೇಫನು ಅವರನ್ನು ಹುಡುಕುತ್ತಾ ಹೋಗಿ ದೋತಾನಿನಲ್ಲಿ ಅವರನ್ನು ಕಂಡನು.
ಯೋಸೇಫನನ್ನು ಗುಲಾಮತನಕ್ಕೆ ಮಾರಿದ್ದು
18 ಯೋಸೇಫನನ್ನು ಬಹುದೂರದಿಂದಲೇ ಕಂಡ ಅವನ ಅಣ್ಣಂದಿರು ಅವನನ್ನು ಕೊಲ್ಲಲು ಒಂದು ಉಪಾಯ ಮಾಡಿದರು. 19 ಅವರು ಒಬ್ಬರಿಗೊಬ್ಬರು, “ಅಗೋ, ಅಲ್ಲಿ ಬರುತ್ತಿದ್ದಾನೆ ಕನಸುಗಾರನಾದ ಯೋಸೇಫ. 20 ಅವನನ್ನು ಕೊಲ್ಲಲು ಇದೇ ತಕ್ಕ ಸಮಯ. ಅವನನ್ನು ಕೊಂದು ನೀರಿಲ್ಲದ ಬಾವಿಯೊಳಗೆ ದಬ್ಬಿ, ಕ್ರೂರ ಪ್ರಾಣಿಯೊಂದು ಅವನನ್ನು ತಿಂದುಬಿಟ್ಟಿತೆಂದು ನಮ್ಮ ತಂದೆಗೆ ಹೇಳೋಣ. ಆಗ ಅವನ ಕನಸುಗಳೆಲ್ಲ ಹೇಗೆ ನಿಜವಾಗುತ್ತವೊ ನೋಡೋಣ” ಎಂದು ಮಾತಾಡಿಕೊಂಡರು.
21 ಆದರೆ ರೂಬೇನನು ಅವರಿಗೆ, “ಅವನನ್ನು ಕೊಲ್ಲಬೇಡಿ; 22 ಅರಣ್ಯದಲ್ಲಿರುವ ಬರಿದಾದ ಬಾವಿಗೆ ಅವನನ್ನು ನೂಕಿಬಿಡಿ; ಆದರೆ ಅವನಿಗೆ ನೋವು ಮಾಡಬೇಡಿ” ಎಂದು ಹೇಳಿದನು. ತರುವಾಯ ಯೋಸೇಫನನ್ನು ಬಾವಿಯಿಂದ ಮೇಲೆತ್ತಿ ತಂದೆಗೆ ಅವನನ್ನು ಒಪ್ಪಿಸಬೇಕೆಂಬುದೇ ರೂಬೇನನ ಅಪೇಕ್ಷೆಯಾಗಿತ್ತು. 23 ಯೋಸೇಫನು ಬಂದಾಗ ಅವನ ಅಣ್ಣಂದಿರು ಅವನನ್ನು ಹಿಡಿದು ಅವನ ನಿಲುವಂಗಿಯನ್ನು ಹರಿದುಹಾಕಿ 24 ನೀರಿಲ್ಲದ ಒಂದು ಬಾವಿಯೊಳಗೆ ತಳ್ಳಿದರು.
25 ಯೋಸೇಫನು ಬಾವಿಯೊಳಗಿದ್ದಾಗ, ಅವನ ಅಣ್ಣಂದಿರು ಊಟಕ್ಕೆ ಕುಳಿತುಕೊಂಡರು. ಅವರು ಕಣ್ಣೆತ್ತಿ ನೋಡಿದಾಗ ಗಿಲ್ಯಾದಿನಿಂದ ಈಜಿಪ್ಟಿಗೆ ಹೋಗುತ್ತಿದ್ದ ವ್ಯಾಪಾರಿಗಳನ್ನು ಕಂಡರು. ಅವರ ಒಂಟೆಗಳು ಅನೇಕ ಬಗೆಯ ಸಾಂಬಾರ ಪದಾರ್ಥಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿದ್ದವು. 26 ಆದ್ದರಿಂದ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಅವನ ಮರಣವನ್ನು ಮರೆಮಾಡಿದರೆ ನಮಗಾಗುವ ಲಾಭವೇನು? 27 ಈ ವ್ಯಾಪಾರಿಗಳಿಗೆ ನಾವು ಅವನನ್ನು ಮಾರಿದರೆ ನಮಗೆ ಹೆಚ್ಚು ಲಾಭವಾಗುವುದು; ಆಮೇಲೆ ನಮ್ಮ ತಮ್ಮನನ್ನು ಕೊಂದ ಅಪರಾಧವೂ ನಮ್ಮ ಮೇಲಿರುವುದಿಲ್ಲ” ಎಂದು ಹೇಳಿದನು. ಅದಕ್ಕೆ ಉಳಿದ ಸಹೋದರರೆಲ್ಲ ಒಪ್ಪಿಕೊಂಡರು. 28 ಮಿದ್ಯಾನಿನ ವ್ಯಾಪಾರಿಗಳು ಸಮೀಪಿಸಿದಾಗ, ಅಣ್ಣಂದಿರು ಯೋಸೇಫನನ್ನು ಬಾವಿಯೊಳಗಿಂದ ಹೊರತೆಗೆದು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು. ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿಗೆ ಕೊಂಡೊಯ್ದರು.
105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
2 ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
3 ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
ಯೆಹೋವನ ಆರಾಧಕರೇ, ಸಂತೋಷಪಡಿರಿ.
4 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
5 ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
6 ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
16 ದೇವರು ಆ ದೇಶಕ್ಕೆ ಬರಗಾಲವನ್ನು ಬರಮಾಡಿದನು.
ಜನರಿಗೆ ತಿನ್ನುವುದಕ್ಕೂ ಸಾಕಷ್ಟು ಆಹಾರವಿರಲಿಲ್ಲ.
17 ಆದರೆ ದೇವರು ಒಬ್ಬನನ್ನು ಅವರಿಗಿಂತ ಮುಂಚಿತವಾಗಿ ಕಳುಹಿಸಿಕೊಟ್ಟನು.
ಗುಲಾಮತನಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
18 ಅವರು ಯೋಸೇಫನ ಕಾಲುಗಳನ್ನು ಹಗ್ಗಗಳಿಂದ ಕಟ್ಟಿದರು;
ಅವನ ಕೊರಳಿಗೆ ಕಬ್ಬಿಣದ ಬೇಡಿಯನ್ನು ಹಾಕಿದರು.
19 ಅವನ ಪ್ರವಾದನೆಯು ನೆರವೇರುವ ತನಕ ಅವನು ಗುಲಾಮನಾಗಿದ್ದನು.
ಯೋಸೇಫನು ಸತ್ಯವಂತನೆಂದು ಯೆಹೋವನ ಸಂದೇಶವು ನಿರೂಪಿಸಿತು.
20 ಆದ್ದರಿಂದ ಈಜಿಪ್ಟಿನ ರಾಜನು ಅವನನ್ನು ಬಿಡುಗಡೆ ಮಾಡಿದನು.
ಆ ದೇಶದ ರಾಜನು ಅವನನ್ನು ಸೆರೆಮನೆಯಿಂದ ಬಿಡಿಸಿದನು.
21 ಅರಮನೆಯ ಮೇಲ್ವಿಚಾರಕನನ್ನಾಗಿ ನೇಮಿಸಿದನು.
ರಾಜನ ಆಸ್ತಿಯನ್ನೆಲ್ಲಾ ಯೋಸೇಫನು ನೋಡಿಕೊಂಡನು.
22 ಯೋಸೇಫನು ಇತರ ನಾಯಕರುಗಳಿಗೆ ಸಲಹೆಗಳನ್ನು ಕೊಟ್ಟನು;
ಹಿರಿಯರಿಗೆ ಉಪದೇಶಿಸಿದನು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.
ಯೆಹೋವನನ್ನು ಕೊಂಡಾಡಿರಿ.
5 ಧರ್ಮಶಾಸ್ತ್ರದಿಂದಾಗುವ ನೀತಿಯ ಬಗ್ಗೆ, “ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಜೀವವನ್ನು ಪಡೆದುಕೊಳ್ಳಲು ಬಯಸುವವನು, ಧರ್ಮಶಾಸ್ತವು ಹೇಳುವ ಕಾರ್ಯಗಳನ್ನು ಮಾಡಲೇಬೇಕು”(A) ಎಂದು ಮೋಶೆ ಹೇಳಿದ್ದಾನೆ. 6 ಆದರೆ ನಂಬಿಕೆಯ ಮೂಲಕ ನೀತಿನಿರ್ಣಯ ಹೊಂದುವುದರ ಬಗ್ಗೆ, “(ಕ್ರಿಸ್ತನನ್ನು ಕೆಳಕ್ಕೆ ಕರೆದುಕೊಂಡು ಬರಲು) ‘ಯಾರು ಪರಲೋಕಕ್ಕೆ ಏರಿಹೋಗಬಲ್ಲರು?’” ಎಂದಾಗಲಿ (ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು.) 7 “‘ಯಾರು ಪಾತಾಳಕ್ಕೆ ಇಳಿದುಹೋಗಬಲ್ಲರು’ ಎಂದಾಗಲಿ ಹೇಳಬೇಡಿ” ಎಂದು ಪವಿತ್ರ ಗ್ರಂಥವು ಹೇಳುತ್ತದೆ.
8 ಇದಲ್ಲದೆ, “ದೇವರ ವಾಕ್ಯವು ನಿಮ್ಮ ಸಮೀಪದಲ್ಲೇ ಇದೆ. ಅದು ನಿಮ್ಮ ಬಾಯಲ್ಲಿಯೂ ನಿಮ್ಮ ಹೃದಯದಲ್ಲಿಯೂ ಇದೆ” ಎಂದು ಪವಿತ್ರ ಗ್ರಂಥವು ಹೇಳುತ್ತದೆ. ನಾವು ಜನರಿಗೆ ನಂಬಿಕೆಯ ಕುರಿತಾಗಿ ಸಾರುವ ವಾಕ್ಯವೇ ಅದು. 9 “ಯೇಸುವೇ ಪ್ರಭು”ವೆಂದು ನಿನ್ನ ಬಾಯಿಯ ಮೂಲಕ ಹೇಳುವುದಾದರೆ ಮತ್ತು ಯೇಸುವನ್ನು ಸತ್ತವರೊಳಗಿಂದ ಜೀವಂತನಾಗಿ ಎಬ್ಬಿಸಿದವನು ದೇವರೇ ಎಂದು ನಿನ್ನ ಹೃದಯದಲ್ಲಿ ನಂಬುವುದಾದರೆ, ನೀನು ರಕ್ಷಣೆ ಹೊಂದುವೆ. 10 ಹೌದು, ನಾವು ನಮ್ಮ ಹೃದಯಗಳಲ್ಲಿ ನಂಬುವುದರ ಮೂಲಕ ನೀತಿವಂತರಾಗುತ್ತೇವೆ. “ನಂಬುತ್ತೇವೆ” ಎಂದು ಬಾಯಾರೆ ಹೇಳುವುದರ ಮೂಲಕ ರಕ್ಷಣೆ ಹೊಂದುತ್ತೇವೆ.
11 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ: “ಆತನಲ್ಲಿ ನಂಬಿಕೆಯಿಡುವ ಯಾವ ವ್ಯಕ್ತಿಯೂ ನಾಚಿಕೆಗೆ ಗುರಿಯಾಗುವುದೇ ಇಲ್ಲ.”(B) 12 ಏಕೆಂದರೆ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಒಬ್ಬನೇ ಪ್ರಭು. ತನ್ನಲ್ಲಿ ನಂಬಿಕೆಯಿಡುವ ಜನರೆಲ್ಲರಿಗೆ ಪ್ರಭುವು ಅನೇಕ ಆಶೀರ್ವಾದಗಳನ್ನು ಕೊಡುತ್ತಾನೆ. 13 ಹೌದು, ಪವಿತ್ರ ಗ್ರಂಥವು ಹೇಳುವಂತೆ, “ಪ್ರಭುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ರಕ್ಷಣೆ ಹೊಂದುವನು.”(C)
14 ಪ್ರಭುವಿನಲ್ಲಿ ನಂಬಿಕೆಯಿಲ್ಲದೆ ಆತನಲ್ಲಿ ಭರವಸೆವಿಡುವುದಾದರೂ ಹೇಗೆ? ಪ್ರಭುವಿನ ವಿಷಯವನ್ನು ಕೇಳದೆ ಆತನಲ್ಲಿ ನಂಬಿಕೆ ಇಡುವುದಾದರೂ ಹೇಗೆ? ಮತ್ತೊಬ್ಬನು ತಿಳಿಸದ ಹೊರತು ಪ್ರಭುವಿನ ಬಗ್ಗೆ ಕೇಳುವುದಾದರೂ ಹೇಗೆ? 15 ಬೋಧಕರನ್ನು ಕಳುಹಿಸದ ಹೊರತು ಜನರಿಗೆ ತಿಳಿಸುವುದಾದರೂ ಹೇಗೆ? ಆದ್ದರಿಂದಲೇ, “ಸುವಾರ್ತಿಕರ ಪಾದಗಳು ಸುಂದರವಾಗಿವೆ”(D) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
ಸರೋವರದ ಮೇಲೆ ಯೇಸುವಿನ ಕಾಲುನಡಿಗೆ
(ಮಾರ್ಕ 6:45-52; ಯೋಹಾನ 6:15-21)
22 ಬಳಿಕ ಯೇಸು ತನ್ನ ಶಿಷ್ಯರಿಗೆ, “ನಾನು ಈ ಜನರನ್ನು ಬೀಳ್ಕೊಟ್ಟು ಬರುತ್ತೇನೆ. ನೀವು ಈಗಲೇ ದೋಣಿ ಹತ್ತಿಕೊಂಡು ಸರೋವರದ ಆಚೆದಡಕ್ಕೆ ಹೋಗಿರಿ” ಎಂದು ಹೇಳಿ ಕಳುಹಿಸಿದನು. 23 ಆತನು ಜನರಿಗೆ ಶುಭವನ್ನು ಕೋರಿ ಕಳುಹಿಸಿದ ನಂತರ ಪ್ರಾರ್ಥನೆ ಮಾಡುವುದಕ್ಕಾಗಿ ತಾನೊಬ್ಬನೇ ಬೆಟ್ಟದ ಮೇಲಕ್ಕೆ ಹೋದನು. ಆಗಲೇ ರಾತ್ರಿಯಾಗಿತ್ತು. ಅಲ್ಲಿ ಆತನೊಬ್ಬನೇ ಇದ್ದನು. 24 ಅಷ್ಟರಲ್ಲಿ ದೋಣಿಯು ಸರೋವರದ ಮೇಲೆ ಬಹಳ ದೂರ ಹೋಗಿತ್ತು. ಎದುರುಗಾಳಿಯಿಂದ ಅಲೆಗಳ ಬಡಿತಕ್ಕೆ ಸಿಕ್ಕಿಹಾಕಿಕೊಂಡಿತ್ತು.
25 ಆ ರಾತ್ರಿಯ ಕಡೇ ಜಾವದ ಸಮಯದಲ್ಲಿ ಆತನ ಶಿಷ್ಯರು ದೋಣಿಯಲ್ಲೇ ಇದ್ದರು. ಆತನು ಸರೋವರದ ನೀರಿನ ಮೇಲೆ ನಡೆಯುತ್ತಾ ಅವರ ಬಳಿಗೆ ಬರತೊಡಗಿದನು. 26 ನೀರಿನ ಮೇಲೆ ನಡೆದುಕೊಂಡು ಬರುತ್ತಿದ್ದ ಆತನನ್ನು ಕಂಡ ಶಿಷ್ಯರು ಭೂತವೆಂದು ಭಾವಿಸಿ ಭಯದಿಂದ ಕೂಗಿಕೊಂಡರು.
27 ಕೂಡಲೇ ಯೇಸು, “ಚಿಂತಿಸಬೇಡಿ! ನಾನೇ! ಭಯಪಡಬೇಡಿ” ಎಂದು ಅವರೊಂದಿಗೆ ಮಾತಾಡಿದನು.
28 ಪೇತ್ರನು, “ಪ್ರಭುವೇ, ನಿಜವಾಗಿಯೂ ನೀನೇ ಆಗಿದ್ದರೆ, ನೀರಿನ ಮೇಲೆ ನಡೆದುಕೊಂಡು ನಿನ್ನ ಬಳಿಗೆ ಬರಲು ನನಗೆ ಆಜ್ಞಾಪಿಸು” ಎಂದನು.
29 ಯೇಸು, “ಪೇತ್ರನೇ, ಬಾ” ಅಂದನು.
ಕೂಡಲೆ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ನೀರಿನ ಮೇಲೆ ನಡೆದನು. 30 ಆದರೆ ಅವನು ಗಾಳಿಯನ್ನು ಮತ್ತು ಅಲೆಗಳನ್ನು ನೋಡಿ ಭಯಪಟ್ಟದ್ದರಿಂದ ನೀರಿನಲ್ಲಿ ಮುಳುಗತೊಡಗಿ, “ಪ್ರಭುವೇ, ನನ್ನನ್ನು ರಕ್ಷಿಸು” ಎಂದು ಕೂಗಿಕೊಂಡನು.
31 ಯೇಸು ತನ್ನ ಕೈ ಚಾಚಿ ಪೇತ್ರನನ್ನು ಹಿಡಿದುಕೊಂಡನು. ಯೇಸು, “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?” ಎಂದನು.
32 ಪೇತ್ರನು ಮತ್ತು ಯೇಸು ದೋಣಿ ಹತ್ತಿದ ಮೇಲೆ ಗಾಳಿ ಶಾಂತವಾಯಿತು. 33 ದೋಣಿಯಲ್ಲಿದ್ದ ಶಿಷ್ಯರು ಯೇಸುವನ್ನು ಆರಾಧಿಸಿ, “ನೀನು ನಿಜವಾಗಿಯೂ ದೇವರ ಮಗನು” ಎಂದು ಹೇಳಿದರು.
Kannada Holy Bible: Easy-to-Read Version. All rights reserved. © 1997 Bible League International