Revised Common Lectionary (Semicontinuous)
ಪ್ರಾರ್ಥನೆ. ರಚನೆಗಾರ: ದಾವೀದ.
17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
2 ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
3 ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
4 ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
5 ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
6 ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
ಆದ್ದರಿಂದ ಈಗಲೂ ನನಗೆ ಕಿವಿಗೊಡು.
7 ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.
15 ನಾನು ನ್ಯಾಯಕ್ಕಾಗಿ ಪ್ರಾರ್ಥಿಸಿದ್ದರಿಂದ ನನಗೆ ನಿನ್ನ ಮುಖದ ದರ್ಶನವಾಗುವುದು.
ಎಚ್ಚೆತ್ತಾಗ ನಿನ್ನ ಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.
ಯೆಹೋವನೊಬ್ಬನೇ ನಮ್ಮನ್ನು ರಕ್ಷಿಸುವನು
8 ಯೆಹೋವನು ಹೀಗೆನ್ನುತ್ತಾನೆ, “ಇಸ್ರೇಲೇ, ನೀನು ನನ್ನ ಸೇವಕನಾಗಿರುವೆ.
ಯಾಕೋಬೇ, ನಾನು ನಿನ್ನನ್ನು ಆರಿಸಿಕೊಂಡೆನು.
ನೀನು ನನ್ನ ಸ್ನೇಹಿತನಾದ ಅಬ್ರಹಾಮನ ಕುಟುಂಬದವನಾಗಿರುವೆ.
9 ನೀನು ದೂರದೇಶದಲ್ಲಿದ್ದೆ.
ಆದರೆ ಕೈಚಾಚಿ ಆ ದೇಶದಿಂದ ನಿನ್ನನ್ನು ಕರೆದೆನು.
‘ನೀನು ನನ್ನ ಸೇವಕ’ ಎಂದು ಹೇಳಿದೆನು.
ನಾನು ನಿನ್ನನ್ನು ಆರಿಸಿಕೊಂಡೆನು.
ಆದರೆ ನಿನ್ನನ್ನು ತಳ್ಳಿಬಿಡಲಿಲ್ಲ.
10 ನಾನೇ ನಿನ್ನ ಸಂಗಡವಿದ್ದೇನೆ. ಆದ್ದರಿಂದ ಚಿಂತಿಸದಿರು.
ನಾನೇ ನಿನ್ನ ದೇವರು, ಆದ್ದರಿಂದ ಭಯಪಡಬೇಡ.
ನಿನ್ನನ್ನು ಬಲಪಡಿಸುವೆನು.
ನಿನಗೆ ಸಹಾಯ ಮಾಡುವೆನು.
ನನ್ನ ನೀತಿಯ ಬಲಗೈಯಿಂದ ನಿನಗೆ ಆಧಾರ ಕೊಡುವೆನು.
6 ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. 7 ಅಬ್ರಹಾಮನ ಸಂತತಿಗಳವರಲ್ಲಿ ಕೆಲವರು ಮಾತ್ರ ಅಬ್ರಹಾಮನ ನಿಜವಾದ ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ಇಸಾಕನು ಮಾತ್ರ ನಿಮಗೆ ನ್ಯಾಯಬದ್ಧವಾದ ಮಗನು”(A) ಎಂದು ಹೇಳಿದನು. 8 ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. 9 ದೇವರು ಅವನಿಗೆ, “ನೇಮಿತ ಕಾಲದಲ್ಲಿ ನಾನು ಹಿಂತಿರುಗಿಬರುವೆನು, ಆಗ ಸಾರಳಿಗೆ ಒಬ್ಬ ಮಗನಿರುವನು”(B) ಎಂಬ ವಾಗ್ದಾನ ಮಾಡಿದ್ದನು.
10 ಅದಷ್ಟೇ ಅಲ್ಲ, ರೆಬೆಕ್ಕಳಿಗೂ ಇಬ್ಬರು ಗಂಡುಮಕ್ಕಳಿದ್ದರು. ಅವರಿಬ್ಬರಿಗೂ ಒಬ್ಬನೇ ತಂದೆ. ಅವನೇ ನಮ್ಮ ಪಿತೃವಾದ ಇಸಾಕನು. 11-12 ಆದರೆ ಆ ಇಬ್ಬರು ಗಂಡುಮಕ್ಕಳು ಹುಟ್ಟುವ ಮೊದಲೇ, ದೇವರು ರೆಬೆಕ್ಕಳಿಗೆ, “ಹಿರಿಯವನು ಕಿರಿಯವನ ಸೇವೆ ಮಾಡುವನು”(C) ಎಂದು ಹೇಳಿದನು. ಆ ಬಾಲಕರು ಯಾವ ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಮಾಡುವ ಮೊದಲೇ ಇದಾಯಿತು. ದೇವರು ಆ ಬಾಲಕನನ್ನು ತನ್ನ ಸ್ವಂತ ಯೋಜನೆಗನುಸಾರವಾಗಿ ಆರಿಸಿಕೊಂಡಿದ್ದರಿಂದ ಆ ಬಾಲಕರು ಹುಟ್ಟುವದಕ್ಕಿಂತ ಮೊದಲೇ ಹೀಗೆ ಹೇಳಿದನು. ದೇವರು ಅವನನ್ನು ಆರಿಸಿಕೊಂಡಿದ್ದರಿಂದ ಅವನನ್ನೇ ಕರೆಯಬೇಕೆಂದಿದ್ದನು. ಆದರೆ ಅದು ಆ ಬಾಲಕರ ಯಾವುದೇ ಕಾರ್ಯಗಳ ಮೇಲೆ ಆಧಾರಗೊಂಡಿರಲಿಲ್ಲ. 13 ಅಂತೆಯೇ, “ನಾನು ಯಾಕೋಬನನ್ನು ಪ್ರೀತಿಸಿದೆನು, ಆದರೆ ಏಸಾವನನ್ನು ದ್ವೇಷಿಸಿದೆನು”(D) ಎಂದು ಪವಿತ್ರ ಗ್ರಂಥವು ಹೇಳುತ್ತದೆ.
Kannada Holy Bible: Easy-to-Read Version. All rights reserved. © 1997 Bible League International