Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಆದಿಕಾಂಡ 29:15-28

ಯಾಕೋಬನಿಗಾದ ಮೋಸ

15 ಒಂದು ದಿನ ಲಾಬಾನನು ಯಾಕೋಬನಿಗೆ, “ನೀನು ಸಂಬಳ ತೆಗೆದುಕೊಳ್ಳದೆ ನನ್ನ ಬಳಿಯಲ್ಲಿ ಕೆಲಸ ಮಾಡುವುದು ಸರಿಯಲ್ಲ. ನೀನು ನನ್ನ ಸಂಬಂಧಿಕನೇ ಹೊರತು ಸೇವಕನಲ್ಲ. ನಾನು ನಿನಗೆ ಎಷ್ಟು ಸಂಬಳ ಕೊಡಲಿ?” ಎಂದು ಕೇಳಿದನು.

16 ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಹಿರಿಯವಳ ಹೆಸರು ಲೇಯಾ; ಕಿರಿಯವಳ ಹೆಸರು ರಾಹೇಲ್.

17 ರಾಹೇಲಳು ಸುಂದರವಾಗಿದ್ದಳು. ಲೇಯಳ ಕಣ್ಣುಗಳು ಸೌಮ್ಯವಾಗಿದ್ದವು.[a] 18 ಯಾಕೋಬನು ರಾಹೇಲಳನ್ನು ಪ್ರೀತಿಸಿದನು. ಯಾಕೋಬನು ಲಾಬಾನನಿಗೆ, “ನಿನ್ನ ಚಿಕ್ಕಮಗಳಾದ ರಾಹೇಲಳನ್ನು ನನಗೆ ಮದುವೆ ಮಾಡಿಕೊಡುವುದಾದರೆ ನಾನು ನಿನಗೆ ಏಳು ವರ್ಷ ಸೇವೆ ಮಾಡುವೆನು” ಎಂದು ಹೇಳಿದನು.

19 ಲಾಬಾನನು, “ಬೇರೊಬ್ಬನು ಆಕೆಯನ್ನು ಮದುವೆಯಾಗುವುದಕ್ಕಿಂತ ನೀನು ಮದುವೆಯಾಗುವುದೇ ಆಕೆಗೆ ಒಳ್ಳೆಯದು. ಆದ್ದರಿಂದ ನನ್ನೊಂದಿಗಿರು” ಎಂದು ಹೇಳಿದನು.

20 ಆದ್ದರಿಂದ ಯಾಕೋಬನು ಅವನೊಂದಿಗೆ ಇದ್ದುಕೊಂಡು ಏಳು ವರ್ಷಗಳವರೆಗೆ ಲಾಬಾನನ ಸೇವೆ ಮಾಡಿದನು. ಆದರೆ ಅವನು ರಾಹೇಲಳನ್ನು ತುಂಬಾ ಪ್ರೀತಿಸುತ್ತಿದ್ದುದರಿಂದ ಆ ಸಮಯವು ಅವನಿಗೆ ತುಂಬಾ ಕಡಿಮೆಯಂತೆ ಕಾಣಿಸಿತು.

21 ಏಳು ವರ್ಷಗಳಾದ ಮೇಲೆ ಯಾಕೋಬನು ಲಾಬಾನನಿಗೆ, “ನನಗೆ ರಾಹೇಲಳನ್ನು ಮದುವೆ ಮಾಡಿಕೊಡು. ನನ್ನ ಸೇವೆಯ ಕಾಲ ಮುಗಿದುಹೋಯಿತು” ಎಂದು ಹೇಳಿದನು.

22 ಆದ್ದರಿಂದ ಲಾಬಾನನು ಆ ಸ್ಥಳದಲ್ಲಿದ್ದ ಜನರಿಗೆಲ್ಲ ಒಂದು ಔತಣಕೂಟವನ್ನು ಏರ್ಪಡಿಸಿದನು. 23 ಆ ರಾತ್ರಿ ಲಾಬಾನನು ತನ್ನ ಮಗಳಾದ ಲೇಯಳನ್ನು ಯಾಕೋಬನ ಬಳಿಗೆ ಕಳುಹಿಸಿದನು. ಯಾಕೋಬನು ಆಕೆಯನ್ನು ಕೂಡಿದನು. 24 (ಲಾಬಾನನು ತನ್ನ ಸೇವಕಿಯಾದ ಜಿಲ್ಪಾಳನ್ನು ತನ್ನ ಮಗಳಿಗೆ ಸೇವಕಿಯನ್ನಾಗಿ ಕೊಟ್ಟನು.) 25 ಮುಂಜಾನೆ ಯಾಕೋಬನು ಎದ್ದು ನೋಡಿದಾಗ ಅವನೊಂದಿಗೆ ಲೇಯಾ ಇದ್ದಳು. ಯಾಕೋಬನು ಲಾಬಾನನಿಗೆ, “ನೀನು ನನಗೆ ಮೋಸ ಮಾಡಿದೆ. ನಾನು ರಾಹೇಲಳನ್ನು ಮದುವೆ ಮಾಡಿಕೊಳ್ಳುವುದಕ್ಕಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದೆ. ನೀನು ನನಗೇಕೆ ಮೋಸ ಮಾಡಿದೆ?” ಎಂದು ಕೇಳಿದನು.

26 ಲಾಬಾನನು, “ನಮ್ಮ ದೇಶದಲ್ಲಿ ದೊಡ್ಡ ಮಗಳು ಮದುವೆಯಾಗದ ಹೊರತು ಚಿಕ್ಕಮಗಳಿಗೆ ಮದುವೆ ಮಾಡುವುದಿಲ್ಲ. 27 ಆದರೆ ಆಕೆಯ ಮದುವೆಯ ವಾರವನ್ನು ಮುಂದುವರಿಸು. ನಾನು ನಿನಗೆ ರಾಹೇಲಳನ್ನು ಸಹ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ನನಗೆ ಇನ್ನೂ ಏಳು ವರ್ಷ ಸೇವೆ ಮಾಡಬೇಕು” ಎಂದು ಹೇಳಿದನು.

28 ಅಂತೆಯೇ ಯಾಕೋಬನು ಒಂದು ವಾರವನ್ನು ಕಳೆದನು. ಬಳಿಕ ಲಾಬಾನನು ತನ್ನ ಮಗಳಾದ ರಾಹೇಲಳನ್ನೂ ಅವನಿಗೆ ಹೆಂಡತಿಯನ್ನಾಗಿ ಕೊಟ್ಟನು.

ಕೀರ್ತನೆಗಳು 105:1-11

105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
    ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
    ಯೆಹೋವನ ಆರಾಧಕರೇ, ಸಂತೋಷಪಡಿರಿ.
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
    ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
    ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
ಯೆಹೋವನೇ ನಮ್ಮ ದೇವರು.
    ಆತನು ಇಡೀ ಪ್ರಪಂಚವನ್ನು ಆಳುವನು.[a]
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
    ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
    ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
    ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
    ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.

ಕೀರ್ತನೆಗಳು 105:45

45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
    ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.

ಯೆಹೋವನನ್ನು ಕೊಂಡಾಡಿರಿ.

ಕೀರ್ತನೆಗಳು 128

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

128 ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ
    ಆತನ ಚಿತ್ತಾನುಸಾರವಾಗಿ ಜೀವಿಸುವವರೆಲ್ಲರು ಧನ್ಯರಾಗಿದ್ದಾರೆ.

ನೀನು ದುಡಿದು ಸಂಪಾದಿಸಿದ್ದನ್ನು ನೀನೇ ಅನುಭವಿಸುವೆ.
    ನೀನು ಸಂತೋಷದಿಂದಿರುವೆ.
    ನಿನಗೆ ಒಳ್ಳೆಯದಾಗುವುದು.
ಮನೆಯಲ್ಲಿರುವ ನಿನ್ನ ಹೆಂಡತಿ ಫಲಭರಿತವಾದ ದ್ರಾಕ್ಷಿಬಳ್ಳಿಯಂತಿರುವಳು.
    ಊಟದ ಮೇಜಿನ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ನೀನು ನೆಟ್ಟ ಆಲಿವ್ ಮರಗಳಂತಿರುವರು.
ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಹೀಗೆಯೇ ಆಶೀರ್ವದಿಸುವನು.
ಯೆಹೋವನು ನಿನ್ನನ್ನು ಚೀಯೋನಿನಿಂದ ಆಶೀರ್ವದಿಸಲಿ.
    ನಿನ್ನ ಜೀವಮಾನವೆಲ್ಲಾ ನೀನು ಜೆರುಸಲೇಮಿನಲ್ಲಿ ಆಶೀರ್ವಾದಗಳನ್ನು ಅನುಭವಿಸುವಂತಾಗಲಿ.
ನೀನು ಜೀವದಿಂದಿದ್ದು ನಿನ್ನ ಮೊಮ್ಮಕ್ಕಳನ್ನು ಕಾಣುವಂತಾಗಲಿ.

ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.

ರೋಮ್ನಗರದವರಿಗೆ 8:26-39

26 ನಾವು ಬಲಹೀನರಾಗಿರುವುದರಿಂದ ನಮ್ಮ ಬಲಹೀನತೆಯಲ್ಲಿ ಪವಿತ್ರಾತ್ಮನು ನಮಗೆ ಸಹಾಯ ಮಾಡುತ್ತಾನೆ. ನಾವು ಹೇಗೆ ಪ್ರಾರ್ಥಿಸಬೇಕು ಮತ್ತು ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದು ನಮಗೆ ತಿಳಿಯದು. ಆದರೆ ಪವಿತ್ರಾತ್ಮನು ತಾನೇ ನಮಗೋಸ್ಕರ ದೇವರಲ್ಲಿ ವಿವರಿಸಲಾಗದ ಅಂತರ್ಭಾವದಿಂದ ಬೇಡಿಕೊಳ್ಳುತ್ತಾನೆ. 27 ಅಂತರಂಗವನ್ನು ನೋಡಬಲ್ಲ ದೇವರಿಗೆ ಪವಿತ್ರಾತ್ಮನ ಮನಸ್ಸಿನಲ್ಲಿರುವುದೆಲ್ಲಾ ಗೊತ್ತಿದೆ, ಏಕೆಂದರೆ ದೇವರ ಚಿತ್ತಕ್ಕನುಸಾರವಾಗಿಯೇ ಪವಿತ್ರಾತ್ಮನು ದೇವಜನರಿಗೋಸ್ಕರ ದೇವರಲ್ಲಿ ವಿಜ್ಞಾಪಿಸುತ್ತಾನೆ.

28 ದೇವರು ತನ್ನನ್ನು ಪ್ರೀತಿಸುವವರ ಒಳ್ಳೆಯದಕ್ಕಾಗಿ ಪ್ರತಿಯೊಂದು ಕಾರ್ಯವನ್ನೂ ಅನುಕೂಲ ಮಾಡುತ್ತಾನೆಂದು ನಮಗೆ ಗೊತ್ತಿದೆ. ಆ ಜನರನ್ನು ದೇವರೇ ಆರಿಸಿಕೊಂಡನು, ಏಕೆಂದರೆ ಅದು ಆತನ ಯೋಜನೆಯಾಗಿತ್ತು. 29 ದೇವರು ತಾನು ಜಗತ್ತನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಆ ಜನರನ್ನು ಬಲ್ಲವನಾಗಿದ್ದನು ಮತ್ತು ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂದು ನಿರ್ಧರಿಸಿದನು. ಹೀಗಿರಲಾಗಿ, ಅನೇಕ ಸಹೋದರ ಸಹೋದರಿಯರಲ್ಲಿ ಯೇಸುವೇ ಹಿರಿಯವನಾಗಿದ್ದಾನೆ. 30 ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂಬ ತನ್ನ ಯೋಜನೆಗನುಸಾರವಾಗಿ ದೇವರು ಅವರನ್ನು ಕರೆದು, ನೀತಿವಂತರನ್ನಾಗಿ ಮಾಡಿ, ಅವರಿಗೆ ತನ್ನ ಮಹಿಮೆಯನ್ನು ಕೊಟ್ಟನು.

ಕ್ರಿಸ್ತ ಯೇಸುವಿನಲ್ಲಿ ದೇವರ ಪ್ರೀತಿ

31 ಹೀಗಿರುವಲ್ಲಿ ಇದರ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮೊಂದಿಗೆ ಇರುವಾಗ, ನಮ್ಮನ್ನು ಯಾರೂ ಸೋಲಿಸಲಾರರು. 32 ದೇವರು ತನ್ನ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೊಸ್ಕರ ಕೊಟ್ಟನು. ಆದ್ದರಿಂದ ಈಗ, ದೇವರು ಯೇಸುವಿನೊಂದಿಗೆ ನಮಗೆ ಎಲ್ಲವನ್ನು ಖಂಡಿತವಾಗಿ ಕೊಡುತ್ತಾನೆ. 33 ದೇವರು ಆರಿಸಿಕೊಂಡಿರುವ ಜನರ ಮೇಲೆ ಯಾರು ದೋಷಾರೋಪಣೆ ಮಾಡಬಲ್ಲರು? ಯಾರೂ ಇಲ್ಲ! ಅವರನ್ನು ನೀತಿವಂತರನ್ನಾಗಿ ಮಾಡುವಾತನು ದೇವರೇ. 34 ದೇವಜನರು ದೋಷಿಗಳೆಂದು ಯಾರು ಹೇಳಬಲ್ಲರು? ಯಾರು ಇಲ್ಲ! ಕ್ರಿಸ್ತ ಯೇಸು ನಮಗೋಸ್ಕರ ಪ್ರಾಣಕೊಟ್ಟನು. ಅಷ್ಟೇ ಅಲ್ಲ, ಆತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಈಗ ಆತನು ದೇವರ ಬಲಗಡೆಯಲ್ಲಿದ್ದಾನೆ ಮತ್ತು ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಿದ್ದಾನೆ. 35 ಕ್ರಿಸ್ತನ ಪ್ರೀತಿಯಿಂದ ಯಾವುದು ನಮ್ಮನ್ನು ಬೇರ್ಪಡಿಸಬಲ್ಲದು? ಕಷ್ಟಸಂಕಟಗಳಾಗಲಿ ಇಕ್ಕಟ್ಟುಗಳಾಗಲಿ ಹಿಂಸೆಯಾಗಲಿ ಆಹಾರವಿಲ್ಲದಿರುವುದಾಗಲಿ ಬಟ್ಟೆಯಿಲ್ಲದಿರುವುದಾಗಲಿ ಅಪಾಯವಾಗಲಿ ಮರಣವಾಗಲಿ ನಮ್ಮನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸಬಲ್ಲವೇ? ಇಲ್ಲ! 36 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:

“ನಿನಗೋಸ್ಕರವಾಗಿ ನಾವು ಎಲ್ಲಾ ಸಮಯಗಳಲ್ಲಿ ಸಾವಿನ ದವಡೆಯಲ್ಲಿದ್ದೇವೆ.
    ಕೊಯ್ಯಲು ಕೊಂಡೊಯ್ಯುವ ಕುರಿಗಳಿಗಿಂತ ಕಡೆಗಣಿಸಲ್ಪಟ್ಟಿದ್ದೇವೆ.”(A)

37 ಆದರೆ ನಮಗೋಸ್ಕರ ತನ್ನ ಪ್ರೀತಿಯನ್ನು ತೋರಿಸಿದ ದೇವರ ಮೂಲಕವಾಗಿ ಈ ಎಲ್ಲಾ ಸಂಗತಿಗಳಲ್ಲಿ ನಮಗೆ ಪೂರ್ಣ ಜಯವಿದೆ. 38-39 ಹೌದು, ದೇವರ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲಾರದೆಂದು ನನಗೆ ನಿಶ್ಚಯವಾಗಿ ತಿಳಿದಿದೆ. ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಿನ ಸಂಗತಿಗಳಾಗಲಿ ಯಾವ ಶಕ್ತಿಗಳೇ ಆಗಲಿ ಮೇಲಿನ ಸಂಗತಿಗಳಾಗಲಿ ಕೆಳಗಿನ ಸಂಗತಿಗಳಾಗಲಿ ಅಥವಾ ಇಡೀ ಜಗತ್ತಿನಲ್ಲಿರುವ ಯಾವುದೇ ಸಂಗತಿಗಳಾಗಲಿ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ.

ಮತ್ತಾಯ 13:31-33

ಅನೇಕ ಸಾಮ್ಯಗಳ ಮೂಲಕ ಯೇಸುವಿನ ಉಪದೇಶ

(ಮಾರ್ಕ 4:30-34; ಲೂಕ 13:18-21)

31 ನಂತರ ಯೇಸು ಜನರಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯ ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ತನ್ನ ಹೊಲದಲ್ಲಿ ಬಿತ್ತಿದನು. 32 ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣ ಬೀಜವಾಗಿದೆ. ಆದರೆ ಅದು ಬೆಳೆದಾಗ ತೋಟದ ಗಿಡಗಳಿಗಿಂತಲೂ ದೊಡ್ಡದಾಗಿರುವುದು. ಅದು ಮರವಾದಾಗ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಮಾಡಿಕೊಳ್ಳುವಷ್ಟು ದೊಡ್ಡದಾಗಿರುತ್ತದೆ.”

33 ಬಳಿಕ ಯೇಸು ಜನರಿಗೆ ಇನ್ನೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯವು ಒಬ್ಬ ಸ್ತ್ರೀ ರೊಟ್ಟಿ ಮಾಡುವುದಕ್ಕೆ ಒಂದು ದೊಡ್ಡ ಬೋಗುಣಿಯ ಹಿಟ್ಟಿಗೆ ಬೆರೆಸಿದ ಹುಳಿಗೆ ಹೋಲಿಕೆಯಾಗಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲಾ ಉಬ್ಬಿಸಿತು.”

ಮತ್ತಾಯ 13:44-52

ನಿಧಿ ಮತ್ತು ಮುತ್ತಿನ ಸಾಮ್ಯಗಳು

44 “ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಂದು ದಿನ ಒಬ್ಬನು ಆ ನಿಧಿಯನ್ನು ಕಂಡು ಬಹಳ ಸಂತೋಷದಿಂದ ಅದನ್ನು ಹೊಲದಲ್ಲಿ ಅಡಗಿಸಿಟ್ಟನು. ಬಳಿಕ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.

45 “ಪರಲೋಕರಾಜ್ಯವು ಶ್ರೇಷ್ಠವಾದ ಮುತ್ತುಗಳನ್ನು ಹುಡುಕುವ ಒಬ್ಬ ವ್ಯಾಪಾರಿಯಂತಿದೆ. 46 ಒಂದು ದಿನ ಆ ವ್ಯಾಪಾರಿಗೆ ಬಹು ಅಮೂಲ್ಯವಾದ ಒಂದು ಮುತ್ತು ಸಿಕ್ಕಿತು. ಆಗ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಂಡನು.

ಮೀನಿನ ಬಲೆಯ ಕುರಿತಾದ ಸಾಮ್ಯ

47 “ಪರಲೋಕರಾಜ್ಯವು ಸರೋವರದೊಳಗೆ ಬೀಸಿದ ಬಲೆಯಂತಿದೆ. ಆ ಬಲೆಗೆ ಅನೇಕ ಜಾತಿಯ ಮೀನುಗಳು ಸಿಕ್ಕಿಕೊಂಡವು. 48 ಆಗ ಆ ಬಲೆಯು ತುಂಬಿಹೋಯಿತು. ಬೆಸ್ತರು ಆ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದು ಒಳ್ಳೆಯ ಮೀನುಗಳನ್ನೆಲ್ಲಾ ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿದರು. 49 ಈ ಪ್ರಪಂಚದ ಅಂತ್ಯದಲ್ಲಿ ಅದೇ ರೀತಿ ಆಗುವುದು. ದೇವದೂತರು ಬಂದು ಒಳ್ಳೆಯ ಜನರಿಂದ ಕೆಟ್ಟಜನರನ್ನು ಬೇರೆ ಮಾಡುವರು. 50 ದೇವದೂತರು ಕೆಟ್ಟಜನರನ್ನು ಬೆಂಕಿಯ ಸ್ಥಳದೊಳಕ್ಕೆ ಎಸೆಯುವರು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು.”

51 ಯೇಸು ತನ್ನ ಶಿಷ್ಯರಿಗೆ, “ನೀವು ಈ ವಿಷಯಗಳನ್ನೆಲ್ಲಾ ಅರ್ಥಮಾಡಿಕೊಂಡಿರೋ?” ಎಂದು ಕೇಳಿದನು.

ಅದಕ್ಕೆ ಶಿಷ್ಯರು, “ನಾವು ಅರ್ಥಮಾಡಿಕೊಂಡೆವು” ಎಂದು ಉತ್ತರಕೊಟ್ಟರು.

52 ಆಗ ಯೇಸು ತನ್ನ ಶಿಷ್ಯರಿಗೆ, “ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಬೋಧಿಸಿದಂಥ ಪ್ರತಿಯೊಬ್ಬ ಧರ್ಮೋಪದೇಶಕನು ಒಂದು ಮನೆಯ ಯಜಮಾನನಂತಿದ್ದಾನೆ. ಆ ಮನುಷ್ಯನು ಹೊಸ ವಸ್ತುಗಳನ್ನೂ ಹಳೆಯ ವಸ್ತುಗಳನ್ನೂ ಆ ಮನೆಯಲ್ಲಿ ಶೇಖರಿಸಿಕೊಂಡು ಅವುಗಳನ್ನು ಹೊರಗೆ ತರುವನು” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International