Revised Common Lectionary (Semicontinuous)
ದೇವರ ಮನೆ—ಬೇತೇಲ್
10 ಯಾಕೋಬನು ಬೇರ್ಷೆಬವನ್ನು ಬಿಟ್ಟು ಹಾರಾನಿಗೆ ಹೋದನು. 11 ಯಾಕೋಬನು ಪ್ರಯಾಣ ಮಾಡುತ್ತಿರುವಾಗ ಸೂರ್ಯಾಸ್ತವಾಯಿತು. ಆದ್ದರಿಂದ ಯಾಕೋಬನು ಆ ರಾತ್ರಿ ಇಳಿದುಕೊಳ್ಳಲು ಒಂದು ಸ್ಥಳಕ್ಕೆ ಹೋದನು. ಯಾಕೋಬನು ಆ ಸ್ಥಳದಲ್ಲಿ ಒಂದು ಕಲ್ಲನ್ನು ಕಂಡು ಅದರ ಮೇಲೆ ತಲೆಯಿಟ್ಟು ಮಲಗಿಕೊಂಡನು. 12 ಯಾಕೋಬನಿಗೆ ಒಂದು ಕನಸಾಯಿತು. ಆ ಕನಸಿನಲ್ಲಿ ಒಂದು ಏಣಿ ನೆಲದ ಮೇಲೆ ನಿಂತಿತ್ತು, ಅದರ ತುದಿ ಆಕಾಶವನ್ನು ಮುಟ್ಟಿತ್ತು. ದೇವದೂತರು ಅದರಲ್ಲಿ ಮೇಲೆರುತ್ತಾ ಕೆಳಗಿಳಿಯುತ್ತಾ ಇರುವುದನ್ನು ಯಾಕೋಬನು ಕಂಡನು. 13 ಯೆಹೋವನು ಏಣಿಯ ತುದಿಯಲ್ಲಿ ನಿಂತಿರುವುದನ್ನು ಯಾಕೋಬನು ಕಂಡನು. ಯೆಹೋವನು ಅವನಿಗೆ, “ನಿನ್ನ ತಾತನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ ನಾನು. ನಾನು ಇಸಾಕನ ದೇವರು. ಈಗ ನೀನು ಮಲಗಿಕೊಂಡಿರುವ ದೇಶವನ್ನು ನಾನು ನಿನಗೆ ಕೊಡುವೆನು. ನಾನು ಈ ದೇಶವನ್ನು ನಿನಗೂ ನಿನ್ನ ಮಕ್ಕಳಿಗೂ ಕೊಡುವೆನು. 14 ಭೂಮಿಯ ಮೇಲೆ ಧೂಳಿನ ಕಣಗಳಿರುವಂತೆ ನಿನಗೆ ಅನೇಕಾನೇಕ ಸಂತತಿಗಳಿರುವರು. ಅವರು ಪೂರ್ವಪಶ್ಚಿಮಗಳಿಗೂ ಉತ್ತರದಕ್ಷಿಣಗಳಿಗೂ ಹರಡಿಕೊಳ್ಳುವರು. ನಿನ್ನ ಮೂಲಕವೂ ನಿನ್ನ ಸಂತತಿಯವರ ಮೂಲಕವೂ ಭೂಮಿಯ ಮೇಲಿರುವ ಎಲ್ಲಾ ಕುಲಗಳವರು ಆಶೀರ್ವಾದ ಹೊಂದುವರು.
15 “ನಾನು ನಿನ್ನ ಸಂಗಡವಿದ್ದು ನೀನು ಹೋಗುವ ಪ್ರತಿಯೊಂದು ಸ್ಥಳದಲ್ಲಿಯೂ ನಿನ್ನನ್ನು ಕಾಪಾಡುವೆನು; ನಿನ್ನನ್ನು ಈ ಸ್ಥಳಕ್ಕೆ ಮತ್ತೆ ಕರೆದುಕೊಂಡು ಬರುವೆನು. ನಾನು ವಾಗ್ದಾನ ಮಾಡಿದ್ದನ್ನು ನೆರವೇರಿಸುವ ತನಕ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಹೇಳಿದನು.
16 ಆಗ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ಖಂಡಿತವಾಗಿಯೂ ಈ ಸ್ಥಳದಲ್ಲಿ ದೇವರಿದ್ದಾನೆ, ಆದರೆ ಅದು ನನಗೆ ಗೊತ್ತಿರಲಿಲ್ಲ” ಎಂದು ಹೇಳಿದನು.
17 ಯಾಕೋಬನಿಗೆ ಭಯವಾಗಿತ್ತು. ಅವನು, “ಇದು ತುಂಬ ಮಹತ್ವವಾದ ಸ್ಥಳ. ಇದು ದೇವರ ಮನೆ. ಇದು ಸ್ವರ್ಗಕ್ಕೆ ಬಾಗಿಲು” ಎಂದು ಹೇಳಿದನು.
18 ಯಾಕೋಬನು ಮರುದಿನ ಮುಂಜಾನೆ ಬೇಗನೆ ಎದ್ದು, ತಾನು ಮಲಗಿಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಕಂಬವಾಗಿ ನೆಲದಲ್ಲಿ ನಿಲ್ಲಿಸಿದನು. ನಂತರ ಆ ಕಲ್ಲಿನ ಮೇಲೆ ಎಣ್ಣೆಯನ್ನು ಸುರಿದನು. ಹೀಗೆ ಅವನು ಆ ಕಲ್ಲನ್ನು ದೇವರ ನೆನಪಿಗಾಗಿ ಪ್ರತಿಷ್ಠಿಸಿದನು. 19 ಆ ಸ್ಥಳದ ಹೆಸರು ಲೂಜ್. ಆದರೆ ಯಾಕೋಬನು ಅದಕ್ಕೆ ಬೇತೇಲ್ ಎಂದು ಹೆಸರಿಟ್ಟನು.
ಸ್ತುತಿಗೀತೆ. ರಚನೆಗಾರ: ದಾವೀದ.
139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
ಸಂಪೂರ್ಣವಾಗಿ ತಿಳಿದುಕೊಂಡಿರುವೆ.
2 ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
3 ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
4 ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
5 ನೀನು ನನ್ನ ಸುತ್ತಲೂ ಆವರಿಸಿರುವೆ;
ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
6 ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
7 ನಾನು ನಿನ್ನ ಆತ್ಮದಿಂದ ತಪ್ಪಿಸಿಕೊಳ್ಳಲು ಎಲ್ಲಿಗೆ ಓಡಿಹೋಗಲಿ!
ನಿನ್ನ ಕಣ್ಣಿಗೆ ಮರೆಯಾಗಲು ಎಲ್ಲಿಗೆ ಹೋಗಲಿ?
8 ನಾನು ಪರಲೋಕಕ್ಕೆ ಏರಿಹೋದರೆ ಅಲ್ಲಿಯೂ ನೀನಿರುವೆ.
ಪಾತಾಳಕ್ಕೆ ಇಳಿದುಹೋದರೆ ಅಲ್ಲಿಯೂ ನೀನಿರುವೆ.
9 ಪೂರ್ವದಿಕ್ಕಿನಲ್ಲಿ ಸೂರ್ಯನು ಉದಯಿಸುವ ಸ್ಥಳಕ್ಕೆ ಹೋದರೆ ಅಲ್ಲಿಯೂ ನೀನಿರುವೆ
ಪಶ್ಚಿಮದಿಕ್ಕಿನಲ್ಲಿ ಸಮದ್ರದ ಕಟ್ಟಕಡೆಗೆ ಹೋದರೆ ಅಲ್ಲಿಯೂ ನೀನಿರುವೆ.
10 ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು.
ನಿನ್ನ ಬಲಗೈ ನನ್ನನ್ನು ಭದ್ರವಾಗಿ ಹಿಡಿದಿರುವುದು.
11 ನಾನು ನನ್ನನ್ನು ನಿನ್ನಿಂದ ಮರೆಮಾಡಿಕೊಳ್ಳಲು ಪ್ರಯತ್ನಿಸಿ,
“ಹಗಲು ಹೋಗಿ ಕತ್ತಲಾಯಿತು,
ಖಂಡಿತವಾಗಿ ಕಾರ್ಗತ್ತಲೆಯು ನನ್ನನ್ನು ಮರೆಮಾಡುವುದು” ಎಂದೆನ್ನಬಹುದು.
12 ಆದರೆ ಕಾರ್ಗತ್ತಲೆಯೂ ನಿನಗೆ ಕತ್ತಲೆಯಲ್ಲ.
ಕಾರ್ಗತ್ತಲೆಯು ನಿನಗೆ ಹಗಲಿನಂತೆ ಪ್ರಕಾಶಮಾನವಾಗಿರುವುದು.
23 ದೇವರೇ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ.
ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗ್ರಹಿಸಿಕೋ.
24 ನನ್ನಲ್ಲಿ ದುರಾಲೋಚನೆಗಳಿದ್ದರೆ ಕಂಡುಕೊ.
ನನ್ನನ್ನು ಸನಾತನ ಮಾರ್ಗದಲ್ಲಿ ನಡೆಸು.
12 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ನಾವು ನಮ್ಮ ಪಾಪಾಧೀನಸ್ವಭಾವದ ಆಳ್ವಿಕೆಗೆ ಒಳಗಾಗಿರಬಾರದು. ನಮ್ಮ ಪಾಪಸ್ವಭಾವದ ಬಯಕೆಗನುಸಾರವಾಗಿ ನಾವು ಜೀವಿಸಕೂಡದು. 13 ನಿಮ್ಮ ಪಾಪಸ್ವಭಾವವು ಬಯಸುವ ಕೆಟ್ಟಕಾರ್ಯಗಳನ್ನು ಮಾಡುವುದಕ್ಕಾಗಿ ನೀವು ನಿಮ್ಮ ಜೀವಿತವನ್ನು ಉಪಯೋಗಿಸಿದರೆ, ನೀವು ಆತ್ಮಿಕವಾಗಿ ಸಾಯುವಿರಿ. ಆದರೆ ನೀವು ನಿಮ್ಮ ದೇಹದ ಮೂಲಕವಾಗಿ ಮಾಡುವ ಕೆಟ್ಟಕಾರ್ಯಗಳನ್ನು ಪವಿತ್ರಾತ್ಮನ ಸಹಾಯದಿಂದ ನಿಲ್ಲಿಸಿದರೆ ಹೊಸ ಜೀವಿತವನ್ನು ಹೊಂದಿಕೊಳ್ಳುವಿರಿ.
14 ಯಾರು ತಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುತ್ತಾರೊ ಅವರೇ ದೇವರ ಮಕ್ಕಳಾಗಿದ್ದಾರೆ. 15 ನಾವು ಹೊಂದಿಕೊಂಡಿರುವ ಆತ್ಮನು ನಮ್ಮನ್ನು ಮತ್ತೆ ಗುಲಾಮರನ್ನಾಗಿ ಮಾಡುವವನಲ್ಲ ಮತ್ತು ನಮ್ಮಲ್ಲಿ ಭಯವನ್ನು ಹುಟ್ಟಿಸುವವನಲ್ಲ. ನಾವು ಹೊಂದಿರುವ ಪವಿತ್ರಾತ್ಮನು ನಮ್ಮನ್ನು ದೇವರ ಮಕ್ಕಳನ್ನಾಗಿ ಮಾಡುತ್ತಾನೆ. ಈ ಆತ್ಮನ ಮೂಲಕವಾಗಿ ನಾವು, “ಅಪ್ಪಾ ತಂದೆಯೇ” ಎಂದು ಹೇಳುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆಂದು ಪವಿತ್ರಾತ್ಮನು ತಾನೇ ನಮ್ಮ ಅಂತರಾತ್ಮದೊಂದಿಗೆ ಹೇಳುತ್ತಾನೆ. 17 ನಾವು ದೇವರ ಮಕ್ಕಳಾಗಿದ್ದರೆ, ಬಾಧ್ಯರಾಗಿದ್ದೇವೆ. ಹೌದು, ದೇವರಿಗೆ ಬಾಧ್ಯರಾಗಿದ್ದೇವೆ ಮತ್ತು ಕ್ರಿಸ್ತನೊಂದಿಗೆ ಬಾಧ್ಯರಾಗಿದ್ದೇವೆ. ಹೇಗೆಂದರೆ, ಕ್ರಿಸ್ತನ ಬಾಧೆಯಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.
ಭವಿಷ್ಯತ್ತಿನಲ್ಲಿ ನಮಗೆ ಮಹಿಮೆ ದೊರೆಯುವುದು
18 ಈಗ ನಾವು ಕಷ್ಟಸಂಕಟಗಳನ್ನು ಸಹಿಸಿಕೊಳ್ಳುತ್ತೇವೆ. ಆದರೆ ನಮಗೆ ಮುಂದೆ ಕೊಡಲ್ಪಡುವ ಮಹಿಮೆಗೆ ಈ ಕಷ್ಟಸಂಕಟಗಳನ್ನು ಹೋಲಿಸಿದರೆ ಇವು ಗಣನೆಗೆ ಬರುವುದಿಲ್ಲ. 19 ದೇವರು ತನ್ನ ಮಕ್ಕಳನ್ನು ಪ್ರತ್ಯಕ್ಷಪಡಿಸುವ ಕಾಲಕ್ಕಾಗಿ ದೇವರ ಸರ್ವಸೃಷ್ಟಿಯು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಅದು ಸಂಭವಿಸಲೆಂದು ಇಡೀ ಜಗತ್ತೇ ಹಂಬಲಿಸುತ್ತಿದೆ. 20 ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಹೀಗಾದದ್ದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ. ಆದರೂ ಅದಕ್ಕೆ ನಿರೀಕ್ಷೆಯಿತ್ತು. ಅದೇನೆಂದರೆ: 21 ಸರ್ವಸೃಷ್ಟಿಯು ನಾಶನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಸ್ವಾತಂತ್ರವನ್ನೂ ಮಹಿಮೆಯನ್ನೂ ಹೊಂದಿಕೊಳ್ಳುತ್ತದೆ ಎಂಬುದೇ.
22 ದೇವರು ಸೃಷ್ಟಿಮಾಡಿದ ಪ್ರತಿಯೊಂದೂ, ಪ್ರಸವವೇದನೆ ಪಡುತ್ತಿರುವ ಸ್ತ್ರೀಯಂತೆ ನೋವಿನಿಂದ ನರಳುತ್ತಾ ಇಂದಿನವರೆಗೂ ಕಾಯುತ್ತಿದೆ ಎಂಬುದು ನಮಗೆ ಗೊತ್ತಿದೆ. 23 ಜಗತ್ತು ಮಾತ್ರವೇ ಅಲ್ಲ, ನಾವು ಸಹ ನಮ್ಮೊಳಗೆ ನೋವಿನಿಂದ ನರಳುತ್ತಾ ಕಾಯುತ್ತಿದ್ದೇವೆ. ದೇವರ ವಾಗ್ದಾನದ ಮೊದಲನೆ ಭಾಗವಾಗಿರುವ ಪವಿತ್ರಾತ್ಮನನ್ನು ನಾವು ಹೊಂದಿಕೊಂಡಿದ್ದೇವೆ. ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ದೇವರು ಮಾಡುತ್ತಿರುವ ಕಾರ್ಯವು ಸಂಪೂರ್ಣಗೊಳ್ಳುವುದನ್ನೇ ಅಂದರೆ, ನಮ್ಮ ದೇಹಗಳಿಗಾಗುವ ಬಿಡುಗಡೆಯನ್ನೇ ನಾವು ಎದುರು ನೋಡುತ್ತಿದ್ದೇವೆ. 24 ನಾವು ರಕ್ಷಣೆ ಹೊಂದಿದ್ದೇವೆ ಮತ್ತು ನಮಗಿನ್ನೂ ಆ ನಿರೀಕ್ಷೆಯಿದೆ. ನಾವು ಯಾವುದಕ್ಕೋಸ್ಕರ ಕಾಯುತ್ತಿದ್ದೇವೊ ಅದನ್ನು ಕಾಣಬಲ್ಲವರಾಗಿದ್ದರೆ, ಅದು ನಿಜವಾದ ನಿರೀಕ್ಷೆಯಲ್ಲ. ಜನರು ತಾವು ಈಗಾಗಲೇ ಹೊಂದಿರುವ ಯಾವುದನ್ನೂ ನಿರೀಕ್ಷಿಸುವುದಿಲ್ಲ. 25 ಆದರೆ ನಾವಿನ್ನೂ ಹೊಂದಿಕೊಂಡಿಲ್ಲದೆ ಇರುವುದನ್ನು ನಿರೀಕ್ಷಿಸುತ್ತಾ ತಾಳ್ಮೆಯಿಂದ ಅದಕ್ಕಾಗಿ ಕಾಯುತ್ತಿದ್ದೇವೆ.
ಗೋಧಿ ಮತ್ತು ಹಣಜಿ ಸಾಮ್ಯ
24 ಬಳಿಕ ಯೇಸು ಅವರಿಗೆ ಇನ್ನೊಂದು ಸಾಮ್ಯದ ಮೂಲಕ ಬೋಧಿಸಿದನು. ಅದೇನೆಂದರೆ: “ಪರಲೋಕರಾಜ್ಯ ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ರೈತನಂತಿದೆ. 25 ಆ ರಾತ್ರಿ ಜನರೆಲ್ಲರೂ ನಿದ್ರಿಸುತ್ತಿದ್ದಾಗ ಅವನ ವೈರಿ ಬಂದು ಗೋಧಿಯ ನಡುವೆ ಹಣಜಿಯನ್ನು ಬಿತ್ತಿ ಹೊರಟುಹೋದನು. 26 ಬಳಿಕ ಗೋಧಿ ಬೆಳೆದು ತೆನೆಬಿಟ್ಟಿತು. ಅದರೊಡನೆ ಹಣಜಿ ಸಹ ಬೆಳೆಯಿತು. 27 ಆಗ ಆ ರೈತನ ಸೇವಕರು ಅವನ ಬಳಿಗೆ ಬಂದು, ‘ನಿನ್ನ ಹೊಲದಲ್ಲಿ ನೀನು ಒಳ್ಳೆಯ ಬೀಜ ಬಿತ್ತಿದೆ. ಹಣಜಿ ಎಲ್ಲಿಂದ ಬಂತು?’ ಎಂದು ಕೇಳಿದರು.
28 “ಆ ಮನುಷ್ಯನು, ‘ಒಬ್ಬ ವೈರಿ ಹಣಜಿಯನ್ನು ಬಿತ್ತಿದ್ದಾನೆ’ ಎಂದು ಉತ್ತರಕೊಟ್ಟನು.
“ಆ ಸೇವಕರು ‘ನಾವು ಹೋಗಿ ಹಣಜಿಗಳನ್ನು ಕೀಳಬೇಕೆ?’ ಎಂದು ಕೇಳಿದರು.
29 “ಆ ಮನುಷ್ಯನು, ‘ಬೇಡ, ಏಕೆಂದರೆ ನೀವು ಹಣಜಿಗಳನ್ನು ಕೀಳುವಾಗ ಗೋಧಿಯನ್ನು ಸಹ ಕೀಳಬಹುದು. 30 ಸುಗ್ಗಿಕಾಲದವರೆಗೆ ಹಣಜಿಯೂ ಗೋಧಿಯೂ ಒಟ್ಟಿಗೆ ಬೆಳೆಯಲಿ. ಸುಗ್ಗಿಕಾಲದ ಸಮಯದಲ್ಲಿ ನಾನು ಕೆಲಸದವರಿಗೆ, ಮೊದಲು ಹಣಜಿಗಳನ್ನು ಕೂಡಿಸಿ ಅದನ್ನು ಸುಡುವುದಕ್ಕಾಗಿ ಹೊರೆ ಕಟ್ಟಿ, ನಂತರ ಗೋಧಿಯನ್ನು ಕೂಡಿಸಿ ಅದನ್ನು ನನ್ನ ಕಣಜಕ್ಕೆ ತನ್ನಿರಿ ಎಂದು ಹೇಳುವೆನು’ ಎಂದು ಉತ್ತರಕೊಟ್ಟನು.”
ಕಠಿಣವಾದ ಸಾಮ್ಯಕ್ಕೆ ಯೇಸುವಿನ ವಿವರಣೆ
36 ನಂತರ ಯೇಸು ಜನರನ್ನು ಬಿಟ್ಟು ಮನೆಯೊಳಕ್ಕೆ ಹೋದನು. ಆತನ ಶಿಷ್ಯರು ಆತನ ಬಳಿಗೆ ಬಂದು, “ಹೊಲದಲ್ಲಿರುವ ಹಣಜಿಯನ್ನು ಕುರಿತಾದ ಸಾಮ್ಯದ ಅರ್ಥವನ್ನು ನಮಗೆ ವಿವರಿಸು” ಅಂದರು.
37 ಯೇಸು ಹೀಗೆ ಉತ್ತರಿಸಿದನು: “ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತುವವನೇ ಮನುಷ್ಯಕುಮಾರನು. 38 ಆ ಹೊಲ ಈ ಲೋಕವಾಗಿದೆ. ಒಳ್ಳೆಯ ಕಾಳುಗಳೇ ಪರಲೋಕರಾಜ್ಯಕ್ಕೆ ಸೇರಿದ ದೇವರ ಮಕ್ಕಳು. ಕೆಡುಕನಿಗೆ ಸಂಬಂಧಪಟ್ಟವರೇ ಹಣಜಿಗಳು. 39 ಹಣಜಿಯನ್ನು ಬಿತ್ತಿದ ವೈರಿಯೇ ಸೈತಾನ. ಸುಗ್ಗಿಕಾಲ ಅಂದರೆ ಲೋಕದ ಅಂತ್ಯಕಾಲ. ಕೂಡಿಸುವ ಕೆಲಸಗಾರರೇ ದೇವದೂತರು.
40 “ಹಣಜಿಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ಈ ಲೋಕದ ಅಂತ್ಯದಲ್ಲಿ ಆಗುವಂಥದ್ದು ಇದೇ. 41 ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಆತನ ದೂತರು ಪಾಪಕ್ಕೆ ಕಾರಣರಾದ ಮತ್ತು ಕೇಡುಮಾಡುವ ಜನರನ್ನೆಲ್ಲ ಕೂಡಿಸುವರು; ಅವರನ್ನು ಆತನ ರಾಜ್ಯದಿಂದ ಹೊರಗೆ ಹಾಕಿ 42 ಬೆಂಕಿಯ ಸ್ಥಳಕ್ಕೆ ಎಸೆದುಬಿಡುವರು. ಅಲ್ಲಿ ಅವರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು. 43 ಒಳ್ಳೆಯವರಾದರೋ ಸೂರ್ಯನಂತೆ ಪ್ರಕಾಶಿಸುತ್ತಾ ತಮ್ಮ ತಂದೆಯ ರಾಜ್ಯದಲ್ಲಿರುವರು. ನನಗೆ ಕಿವಿಗೊಡುವ ಜನರೇ, ಆಲಿಸಿರಿ!
Kannada Holy Bible: Easy-to-Read Version. All rights reserved. © 1997 Bible League International